Saturday, 22 June 2013

ಹನಿಗವನ

ಜೀವಿಸಲು ಪ್ರಾರಂಭಿಸು

ಜನರು ಯಾಕೋ ಹೀಗೆ 
ಅನುಮಾನಿಸಿ ಅನುಮಾನಿಸಿ
ಗುಮಾನಿಯೊಳಗೇ ಜೀವಿಸುವರು.
ಎಂದು ಸತ್ಯದ ಬೆಳಕ ಕಂಡು
ವಿಶ್ವಾಸದ ನಗೆ ಬೀರುವರೋ
ಆ ದಿನವೇ ಅವರು ಜೀವಿಸಲು 
ಪ್ರಾರಂಭಿಸಿದರು; 
ಎನ್ನಬಹುದೇ???

-ದಿವ್ಯ ಆಂಜನಪ್ಪ
೨೧/೦೬/೨೦೧೩

ಚುಟುಕು

ಕಣ್ಹಿಂದಿನ ಕನಸು,
ನಿಟ್ಟುಸಿರ ಕಣ್ಣೀರ
ತೆರೆದಿಟ್ಟರೆ;
ಜನ ಕವನವೆಂದರು
ಅವ ಮಾತ್ರ
ಕಾಲ ಹರಣವೆಂದನು.... 


-ದಿವ್ಯ ಆಂಜನಪ್ಪ

Friday, 21 June 2013

ಹನಿಗವನ

ಜಾರಿದೆ ಮನ..........

ಹೊಮ್ಮಿದೆ ನಗೆ ಗೆಳೆಯಾ,
ಅಗೋ ನನ್ನಯ ಕನಸುಗಳಾಗಿವೆ.

ಹೊರಡಿದೆ ದನಿ ಗೆಳೆಯಾ
ಇಗೋ ನನ್ನಯ ಕವನವಾಗಿದೆ.

ಜಾರಿದೆ ಮನ ಗೆಳೆಯಾ
ತಗೋ ನನ್ನೊಳ ಉಸಿರಾಗಿದೆ.....


-ದಿವ್ಯ ಆಂಜನಪ್ಪ

Thursday, 20 June 2013

ಚುಟುಕು


"ಜೀವನ" ......

ನಿರಂತರ ಪಯಣ, 
ತರ ತರಹದ ಚಿಂತನ, 
ಅವಿರತ ಪ್ರಯತ್ನ, 
ಕಷ್ಟಗಳ ಹರಣ,
ಕನಸುಗಳ ಹೂರಣ,
ಇದುವೇ ಜೀವನ,
ಬದುಕಲು ಪ್ರೀತಿಯೊಂದೇ ಕಾರಣ.

-ದಿವ್ಯ ಆಂಜನಪ್ಪ

ಚುಟುಕು

ಪ್ರೀತಿಸುವ ಹೆಣ್ಮನದಿ
ಅವಮಾನಗಳ ನೊವೇ ತುಂಬಿರಲು
ಪ್ರಿಯ ಸೋಲಿಗೆ ಬೆಲೆಯಿಲ್ಲದೀ
ನಾಡಿನಲಿ ಮಾರಿಯೆಂದಾದಳು 


-ದಿವ್ಯ ಆಂಜನಪ್ಪ
19/06/2013

Wednesday, 19 June 2013

ಲೇಖನ

ಕನಕದಾಸರು; ಒಂದು ಕಿರು ಪರಿಚಯ

ಕನ್ನಡ ಸಾಹಿತ್ಯ ಚರಿತ್ರೆಯ ಘಟ್ಟಗಳಲ್ಲಿ ಚಂಪೂ, ವಚನ, ರಗಳೆ, ಕೀರ್ತನೆ ಷಟ್ಪದಿಯಂಥಹ ಹಲವು ಛಂದೋ ರೂಪಗಳಿವೆ. ಕೀರ್ತನ ಸಾಹಿತ್ಯವೆಂದಾಕ್ಷಣ ದಾಸಸಾಹಿತ್ಯವೆಂದೇ ನಾವು ಹೆಸರಿಸುತ್ತೇವೆ. ದಾಸಸಾಹಿತ್ಯದ ಶ್ರೇಷ್ಟರೆಂದೇ ಹೆಸರಾದವರು ಕನಕದಾಸರು ಮತ್ತು ಪುರಂದರದಾಸರು. ಅವರಿಬ್ಬರೂ ದಾಸಸಾಹಿತ್ಯದ ಎರಡು ಕಣ್ಣುಗಳೆಂದೇ ಹಲವರು ವ್ಯಾಖ್ಯಾನಿಸಿದ್ದಾರೆ. ವಾದಿರಾಜರಿಂದ ಧೀಕ್ಷೆಯನ್ನು ಪಡೆದ ಕನಕದಾಸರು ಪುರಂದರದಾಸರ ಸಮಕಾಲೀನರಾಗಿದ್ದಾರೆ. ಕನಕದಾಸ ಜಯಂತಿಯ ಸಮಯದಲ್ಲಿ ಅವರನ್ನೊಮ್ಮೆ ನೆನೆಯುವ ಸಲುವಾಗಿ ಈ ಲೇಖನ.

ಕವಿ ಕನಕದಾಸರ ಮೂಲ ಹೆಸರು 'ತಿಮ್ಮಪ್ಪ', ತಂದೆ 'ಬೀರಪ್ಪ', ತಾಯಿ ';ಬಚ್ಚಮ್ಮ'. ೧೫೦೮ ರಲ್ಲಿ ಅಂದಿನ ಅವಿಭಜಿತ ಧಾರವಾಡ ಜಿಲ್ಲೆಯ ಒಂದು ಸಣ್ಣ ಊರಾದ 'ಬಾಡ' (ಈಗಿನ ಹಾವೇರಿ ಜಿಲ್ಲೆ) ಯಲ್ಲಿ ಜನಿಸಿದವರು. ಕನಕದಾಸರು ಜನಸಾಮಾನ್ಯರಾಗಿ, ಸೈನಿಕರಾಗಿ, ಸಾಮಂತನಾಗಿ, ದಾರ್ಶನಿಕರಾಗಿ, ಕವಿಯಾಗಿ ಜೀವನದ ವಾಸ್ತವಿಕೆತೆಯ ಹಲವು ಮಜಲುಗಳನ್ನು ಸವೆದು, ಅದರ ಅನುಭವಗಳನ್ನು ತಮ್ಮ ಕೀರ್ತನೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸಾದರಪಡಿಸಿದವರು. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ನಿಟ್ಟಿನಲ್ಲಿ ಅವರ ಸಾಹಿತ್ಯ ಕಾರ್ಯನಿರ್ವಹಿಸಿದೆ.

ಅವರ ಕೀರ್ತನೆಗಳಲ್ಲಿ ಕಾಣುವ "ಕಾಗಿನೆಲೆಯಾದಿಕೇಶವ",ಎಂಬುದು ಅವರ ಅಂಕಿತನಾಮವಾಗಿದ್ದು, ಕಾಗಿನೆಲೆಯಲ್ಲಿನ "ಆದಿಕೇಶವ" ಅವರ ಮನೆತನದ ಆರಾಧ್ಯ ದೈವವಾಗಿದೆ. ಅವರು ರಚಿಸಿದ ಕೃತಿಗಳು; 'ನಳಚರಿತ್ರೆ', 'ಹರಿಭಕ್ತಿಸಾರ', 'ರಾಮಧಾನ್ಯ ಚರಿತ', 'ಮೋಹನ ತರಂಗಿಣಿ', 'ಕೀರ್ತನ ಮತ್ತು ಮುಂಡಿಗೆಗಳು'. ನಳಚರಿತ್ರೆಯಲ್ಲಿ, ನಳ-ದಮಯಂತಿಯರ ಪ್ರೀತಿ-ಪ್ರೇಮ, ವಿರಹ-ವೈರಾಗ್ಯಗಳನ್ನೊಳಗೂಂಡ ಕತೆಯನ್ನು ನಾವು ಕಾಣುತ್ತೇವೆ. ಸ್ತೀ ಜೀವನದ ಉತ್ತುಂಗತೆಯನ್ನು ಸಾರುವುದೇ ಇಲ್ಲಿನ ಉದ್ದೇಶವಾಗಿದೆ. ಭಕ್ತಿ ವೈರಾಗ್ಯಗಳ ಸಾರವೇ 'ಹರಿಭಕ್ತಿಸಾರ' ಕಾವ್ಯವಾಗಿದೆ. ಸಂಸಾರ, ಅರಿಷಡ್ವರ್ಗಗಳಿಂದ ದೂರನಾದ ವ್ಯಕ್ತಿ ಶ್ರೀಹರಿಯ ಸಾನಿಧ್ಯವನ್ನು ಪಡೆಯಬಲ್ಲನೆಂಬ ನಿಲುವಿದೆ. ಮುಕ್ತಿಗೆ ಇದೊಂದೇ ಮಾರ್ಗವೆಂದು ತಿಳಿಸಿದ್ದಾರೆ. 'ರಾಮಧಾನ್ಯ ಚರಿತ'ದಲ್ಲಿ, ಲಂಕಾಪತಿ ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ರಾಮನು ಅಯೋಧ್ಯೆಗೆ ಮರಳುತ್ತಿದ್ದ ಸಂದರ್ಭದಲ್ಲಿ, ಏರ್ಪಡಿಸಲಾದ ಭೋಜನ ಔತಣದಲ್ಲಿ ನಡೆದ "ರಾಗಿ" ಮತ್ತು "ಭತ್ತ"ದ ವಾಗ್ವಾದದ ಚಿತ್ರಣವಿದೆ. ಭತ್ತ-ರಾಗಿಯ ಜಗಳದ ತೀರ್ಮಾನಕ್ಕೆ ಶ್ರೀರಾಮನು ಆರು ತಿಂಗಳ ಕಾಲ ಗಡುವು ವಿಧಿಸಿ, ರಾಗಿ ಭತ್ತವನ್ನು ಬಂಧನದಲ್ಲಿ ಇರಿಸಲಾಗುತ್ತದೆ. ಆಶ್ಚರ್ಯವೆಂದರೆ, ಆರು ತಿಂಗಳ ಅವಧಿಯಲ್ಲಿ ಭತ್ತ ಸೊರಗಿ ಟೊಂಕ ಮುರಿದು ಬಿಟ್ಟರೆ, ರಾಗಿ ಹಾಗೆಯೇ ಗಟ್ಟಿಯಾಗಿ ನಿಂತಿರುತ್ತದೆ. ಅಯೋಧ್ಯೆಯ ಜನ ರಾಗಿಯ ಪರವಾಗಿ ನ್ಯಾಯ ನೀಡುತ್ತಾರೆ. ಜಾತಿಭೇದ-ವರ್ಣಭೇದಕ್ಕೆ ತಮ್ಮ ಕೃತಿಯ ಮುಖೇನ ದಾಸರು ಸಮಾಜಕ್ಕೆ ಉತ್ತರವನ್ನು ನೀಡಿದ್ದಾರೆ. "ಮೋಹನ ತರಂಗಿಣಿ"ಯಲ್ಲಿನ ಕಥಾವಸ್ತು, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಆಡಳಿತ, ಆಸ್ತಾನಕ್ಕೆ ಸಂಬಂದಿಸಿದ ವಿವರಗಳೇ ಹೆಚ್ಚಾಗಿವೆ. ಒಟ್ಟಾರೆಯಾಗಿ ಕೃಷ್ಣನೇ ಎತ್ತರದ ಪುರುಷನಾಗಿ ನಿಲ್ಲುತ್ತಾನೆ. ಈ ಎಲ್ಲಾ ಕೃತಿಗಳ ವಿಶ್ಲೇಷಣೆಯನ್ನಷ್ಟೇ ಓದಿದ್ದು, ಅದರ ಸಂಕ್ಷಿಪ್ತರೂಪವನ್ನು ಇಲ್ಲಿ ಪ್ರಸ್ತುತಪಡಿಸಿರುತ್ತೇನೆ.

ಮುಂಡಿಗೆಗಳು:
ಗೂಡಾರ್ಥ ಮುಂಡಿಗೆಗಳಿಗೆ ಇವರು ಪ್ರಸಿದ್ದರಾಗಿದ್ದಾರೆ. ಪುರಾಣ ಸಂಗತಿಗಳು, ಧಾರ್ಮಿಕ ವಿಚಾರಗಳು, ಸಾಧಕರಿಗೆ ಬೇಕಾದ ಮಾರ್ಗದರ್ಶನ ಸೂತ್ರಗಳನ್ನು ಈ ಮುಂಡಿಗೆಗಳು ಒಳಗೊಂಡಿರುತ್ತದೆ. ಅಂತಹದೊಂದು ಮುಂಡಿಗೆ ಹೀಗಿದೆ:
"ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ".
ಅರ್ಥ: ಅಂಧಕನೆಂದರೆ ಧೃತರಾಷ್ಟ್ರ, ಅಂಧಕನನುಜ ಪಾಂಡುರಾಜ, ಇವನ ಕಂದ ಧರ್ಮರಾಯ, ಈತನ ತಂದೆ ಯಮಧರ್ಮ. ಈತನನ್ನು ಕೊಂದವನು ಈಶ್ವರ. ಈಶ್ವರನ ಶಿರದಲಿ ನಿಂದವನು ಚಂದ್ರ.
ಹೀಗೆ ಗೂಡಾರ್ಥಗಳಿಂದ ಕೂಡಿದ ಮುಂಡಿಗೆಗಳು ಪೌರಾಣಿಕವೂ, ಆಧ್ಯಾತ್ಮದ ಹಿನ್ನೆಲೆಯವೂ, ಸ್ವಾರಸ್ಯಕರವೂ ಆಗಿರುತ್ತದೆ.

ಕೀರ್ತನೆಗಳು:
ಕನಕದಾಸರ ಅನೇಕ ಕೀರ್ತನೆಗಳಲ್ಲಿ ಸುಪ್ರಸಿದ್ಧವಾದ ಕೀರ್ತನೆ "ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ"ಯನ್ನು ನಾವೇಲ್ಲಾ ಕೇಳಿಯೇ ಇರುತ್ತೇವೆ. ಮಾನವನ ಯಾಂತ್ರಿಕ ಜೀವನದಲ್ಲಿ ಆತ ತನ್ನ ಹೊಟ್ಟೆಗಾಗಿಯೇ ತಾನು ಜೀವಿಸುತ್ತಿರುವ ಪ್ರಸಂಗವನ್ನು ಕಂಡ ಕವಿ, ಹೀಗೆ ತಮ್ಮ ಕೀರ್ತನೆಯಲ್ಲಿ ಹಾಡಿ ತಿಳಿಸಿದ್ದಾರೆ. ಹಲವಾರು ವೃತ್ತಿಗಳ ಬೆನ್ನು ಹತ್ತಿದ ಮಾನವ ಇಂದು ಹಣಗಳಿಕೆಯನ್ನೇ ಕೇಂದ್ರ ಗುರಿಯನ್ನಾಗಿಸಿಕೊಂಡಿದ್ದಾನೆ. ಇಂಥಹ ಮನೋಭಾವ ಅವನನ್ನು ಅನೇಕ ರೀತಿಯ ಜಟಿಲತೆ, ತಾಕಲಾಟಗಳಿಗೆ ಈಡು ಮಾಡುತ್ತಿದೆ. ಮನುಷ್ಯ ಹೊಟ್ಟೆ-ಬಟ್ಟೆಯ ಚಿಂತೆಯನ್ನು ಬಿಟ್ಟು ದೈವಭಕ್ತಿಯನ್ನು ಹೊಂದಿ, ಆತ್ಮಸಂತೋಷವನ್ನು ಪಡೆಯಬೇಕೆಂಬುದು ಕನಕದಾಸರ ಆಶಯವಾಗಿದೆ. ಅವರ ಆಶಯದ ದಾಸಪದ ಹೀಗಿದೆ:

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||ಪಲ್ಲವಿ||

ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೧

ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೨

ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೩

ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೪

ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರಳುಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೫

ಕೊಟ್ಟಣವನ್ನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು
ಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೬

ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೭

ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೮

ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೯

ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ ೧೦

ಪರಾಮರ್ಶನ ಗ್ರಂಥಗಳು: ೧)ಸಾಹಿತ್ಯ ಚಂದನ, ಪಿಯುಸಿ ಪಠ್ಯಪುಸ್ತಕ
೨)ಪಠ್ಯಕ್ರಮ ಕೆಎಸ್ಒಯು
ಧನ್ಯವಾದಗಳು

-ದಿವ್ಯ ಆಂಜನಪ್ಪ
02/12/2012

Sunday, 16 June 2013

ಚುಟುಕು


ಬರ ಬಂದರೂ
ಗರ ಬಡಿದರೂ
ವರವೇ ಶಾಪವಾದರೂ
ನನ್ನೊಳ ನನ್ನನ್ನು
ನಾನೆಂದಿಗೂ 
ಕುಂದಿಸಲಾರೆ.

-ದಿವ್ಯ ಆಂಜನಪ್ಪ :-)
05/2013

ಚುಟುಕು

ಜೀವನ

ಮತ್ತದೇ ಮೌನ
ಚಿಂತೆಗಳ ಧ್ಯಾನ
ಅಙ್ಞಾತ ಯಾನ
ಎಲ್ಲಿಗೋ ಹೇಗೋ;
ನಿರಂತರ ಹರಿವ ಜೀವನ 


-ದಿವ್ಯ ಆಂಜನಪ್ಪ
15/06/2013

Saturday, 15 June 2013

ಚುಟುಕು

ಹಾಗೇ ಸುಮ್ಮನೆ 

ಕೆಲವೊಂದನ್ನು ಪಡೆಯಲು ಶ್ರಮವು ಬೇಕು,
ಕೆಲವನ್ನು ಪಡೆಯಲು ತಾಳ್ಮೆ ಬೇಕು,
ಮತ್ತೆ ಕೆಲವಕ್ಕೆ ಕಾಯಬೇಕು
ಪ್ರೀತಿ ಎಂಬುದು ಒಲಿಯಬೇಕು

ಕವನ


*ನೀ ನನ್ನ ತೋಳಲಿ, ನಾ ನಿನ್ನ ತೋಳಲಿ*

ನೀ ಸುಮ್ಮನಿರಲು, ನಾ ಏನ ಹೇಳಲಿ?
ಕಡಲ ತೆರೆಗಳು ಒತ್ತೋತ್ತಲಾಗಿ ಬರಲು,
ನಿಂತ ನೆಲವು ನಡುನಡುಗಿ ಬಿಡಲು,
ಬೆಂಕಿ ಚೆಂಡು ಧರೆಗಪ್ಪಳಿಸುತ್ತಿರಲು,
ಶಾಂತಮೂರ್ತಿಯಾಗಿ ನೀ ನಿಂತಿರಲು,
ನಾ ಏನ ಹೇಳಲಿ ನೀ ಸುಮ್ಮನಿರಲು.

ಹೇಳದಿರು ಏನನ್ನೂ, ನನ್ನೋಳ ದನಿಯೇ!,
ನನ್ನೀ ಹೃದಯದ ಕಣ್ಮಣಿಯೇ,
ಭಯವೇಕೆ ಓ ಚಂಚಲೇ?
ನೀ ಇರಲು ನನ್ನೋಳಹೊರಗೂ,
ಕಡಲೇನು? ಧರೆಯೇನು?
ಬಾನೇನು ಬೆದರಿಸೀತು??

ಕಡಲೊಡಲ ಮುತ್ತಾಗಿ ಇಳಿಯೋಣ,
ಭೂಗರ್ಭದ ಮಣ್ಣ ಕಣಗಳಾಗಿ ಬೆರೆಯೋಣ,
ಉರಿವ ಬೆಂಕಿ ಜ್ವಾಲೆಯಾಗಿ ಪ್ರಜ್ವಲಿಸೋಣ,
ನೀ ನನ್ನ ತೋಳಲಿ, ನಾ ನಿನ್ನ ತೋಳಲಿ
ಅದೃಷ್ಯರಾಗಿ ಹೋಗೋಣ,
ಒಂದೇ ಆತ್ಮರಾದ ನಾವಿನ್ನು ಪ್ರಕೃತಿಯಲಿ ಲೀನವಾಗಿ ಹೋಗೋಣ.

-ದಿವ್ಯ ಆಂಜನಪ್ಪ

Friday, 14 June 2013

ಕವನ


*ಹೀಗೊಂದು ಕೊರಗು*

ತುಂಬಾ ಪ್ರೀತಿ ಇಟ್ಕೊಂಡು
ಒದ್ದಾಡ್ತೀನಿ ನಾನು
ಅದನ್ನ ಅರ್ಥ ಮಾಡ್ಕೊಳ್ದೆ
ರೇಗಾಡ್ತಾನೆ ಅವ್ನು

ಅವನ ಪ್ರೀತಿ ಬಯಸಿ
ಕೊರಗಿ ಮೂಕಿಯಾದೆ ನಾನು
ಅದರ ಪರಿವೇ ಇಲ್ಲದೆ
ನನ್ನ ಮರೆತಿರ್ತಾನೆ ಅವ್ನು

ಅವನಿಗೆ ನಾನೇ ಗೆಳತಿ
ನನಗೆ ಅವನೇ ಗೆಳೆಯಾ
ಇದು ಅವನ್ಗೆ ನೆನಪಾಗೋದು
ಯಾವಾಗ???

ಕಾಲ ಸರಿದು, ಪ್ರೀತಿ ಬತ್ತಿ
ಬಂಧ ವಿಮುಕ್ತವಾದಾಗ,,,,,,,!

(ದಿವ್ಯ ಆಂಜನಪ್ಪ)

ಚುಟುಕು

*ಕಾರಿನ ಹಿಂದೆ*

ನೀ ಬಂದೆ,
ಬಳಿ ನಿಂದೆ,
ನಾನಂದೆ,
ಬಂದೆಯಾ ಇಂದೆ?
ನೀ ಹ್ಹೂಗುಟ್ಟುವ ಮುಂದೆ,
ಬಂದ 'ಅನಂತು ಹಂದೆ',
ಇವರೇ ನನ್ನವರು ಅಂದೆ,
ಬಾಯ್ಬಿಡಲಾರದೆ ನೊಂದೆ,
ದಿಗ್ಬ್ರಮೆಯಾಗಿ ನಿಂದೆ,
ನೀ ಹೋದ ಕಾರಿನ ಹಿಂದೆ. :-)

ಚುಟುಕು

ಸಿಹಿ-ಕಹಿ ಕನಸು 

ಕಹಿ ಕನಸ ನೆನೆಸದೆ
ಕಹಿ ಬದುಕಲಿ ಬೆಂದೆ.
ಸಿಹಿ ಕನಸಾಗಿ ನೀ ಬಂದೆ,
ಎಚ್ಚೆತ್ತು ಕನಸೆಂದು ನೊಂದೆ,,,,



-ದಿವ್ಯ ಆಂಜನಪ್ಪ
13/06/2013

Tuesday, 11 June 2013

ಕವನ

ಭಾವ ಭರ

ಬೇಸರಿಸದಿರು ನನ್ನಿನಿಯಾ,
ನಿಂತು ನೀ ಬೇಡಿದರೂ,
ಒಲಿಯಳು ಇವಳೆಂದೂ
ಮನಸೋಲಳೆಂದು,,,,

ಕೇಳು ನನ್ನ ಶಶಾಂಕ,
ನಿನ್ನೆಡೆಗಿದೆ ಅಗಾಧ ಪ್ರೇಮವು,
ಇನ್ನೂ ಮೀರಿದೆ, "ಅಪರಿಮಿತ ಮೋಹವು".
ಎನ್ನೆದೆಯ ಭಾವ ಗಂಗೆಯ;
ಹರಿಬಿಡಲೆನಗೊಂದೇ ಭಯವು.
ನೀ ತಾಳಬಲ್ಲೆಯಾ?
ನನ್ನೀ ಪ್ರೀತಿಯ ಭರವ 

-ದಿವ್ಯ ಆಂಜನಪ್ಪ

Tuesday, 4 June 2013

ಕವನ

ಹೀಗೇಕೆ?

ಗೆಳೆಯಾ,
ನೀ ದೂರವಿದ್ದರೂ
ನನ್ನಲ್ಲೇ ಇದ್ದಂತೆ,

ನೀ ಮುನಿದರೂ
ನನಗೇ ಒಲಿದಂತೆ,

ಮೌನಿಯೇ ನೀನಾದರೂ
ನನ್ನೊಡನೆ ನಿರಂತರ ಸಂಭಾಷಿಸಿದಂತೆ,

ಎಂದೆನಿಸಿದರೂ
ಮತ್ತೊಂದಿದೆ,,,

ನಡುರಾತ್ರಿ ನೀನಲ್ಲಿ ಕನವರಿಸಿದಂತೆಯೂ
ನನಗಿಲ್ಲಿ ಎಚ್ಚರವಾಗಿಬಿಡುವುದಲ್ಲಾ ???
ಹೀಗೇಕೆ? 

-ದಿವ್ಯ ಆಂಜನಪ್ಪ

04/06/2013

ಕವನ

ವಾಸ್ತವ

ಕಣ್ಗಳು ಸೆಳೆದವು ಮನಗಳು ಮಿಡಿದವು
ಕನಸುಗಳರಳಿದವು,,,
ಆದರೆ ಪ್ರೀತಿಸಲು ಹೆದರಿದವು;
ಕಾರಣ; ಒಂದಾದ ಮನಗಳ 
ಜಾತಿಗಳು ವ್ಯತ್ಯಾಸವಾದವು.

ಅವ ಜಾತಿಯಲಿ ಮೇಲಾಗಿ
ಊರಿನೊಡೆಯನ ಮಗನು.

ಅವಳು ಮನಸಿನಲಿ ಮೇಲಾಗಿ
ಪೇಟೆಯ ಸುಶಿಕ್ಷಿತನ ಮಗಳು.

ಒಬ್ಬರಿಗಿಂತ ಒಬ್ಬರು
ಅವರಿಬ್ಬರು, ಎನ್ನುವಾಗ
ಧುತ್ತನೆರಗಿದ ಜಾತಿ ತಕ್ಕಡಿಯಲಿ
ಮೇಲು-ಕೀಳಾದರು.

ತಾರತಮ್ಯಕ್ಕೆ ಮನಗಳು ಸಡಿಲವಾಗಿ
ಏರುಪೇರಾದವು.
ಬಯಸಿ ಅವನು, ಬಯಸದೇ ಅವಳು
ಪರಸ್ಪರ ದೂರಾದರು.


-ದಿವ್ಯ ಆಂಜನಪ್ಪ

(ಪ್ರೀತಿ-ಜಾತಿ-ಭೀತಿ ,
ತೀರ ಹತ್ತಿರದಿಂದ ಕಂಡದ್ದು,
ಮನಸ್ಸನ್ನು ಕಾಡಿ ಅಕ್ಷರಗಳಾದದ್ದು.)

02/06/2013

Saturday, 1 June 2013

ಚುಟುಕು


ನೀನಿರಲು
ನನ್ನ ನಾ ಮರೆವೆ,
ನಾ ಸೋಲಲು
ಹೆಣ್ಣೆಂದು ಜರಿವೆ,
ಒಲವೇ
ನಿನಗಿದು 
ಸರಿಯೇ?,,,, 

-ದಿವ್ಯ ಆಂಜನಪ್ಪ
25/05/2013

ಚುಟುಕು


**ಕಾರಣ**



ಪ್ರೀತಿಯಲ್ಲಿ ಪ್ರಣಯ
ಮೊಗ್ಗರಲಿ ಹೂವಾಗಲು
ಪ್ರೀತಿಯಿಲ್ಲದ ಪ್ರಣಯ
ಮುದುಡಿದ ಹೂವಾಗಲು
ಮುಂದುವರೆದ ವಿಷಯ
ಹೂವೇ ಹಾವಾಗಲು



-ದಿವ್ಯ ಆಂಜನಪ್ಪ:-)
25/05/2013

ಚುಟುಕು

ಉಸಿರು

ಮನಸು
ಕನಸು 
ಹೊತ್ತು
ಹೋದವನಿಗೆ
ಈ ಉಸಿರು 
ಭಾರವಾಯಿತೆ?!

-ದಿವ್ಯ ಆಂಜನಪ್ಪ
22/05/2013

Friday, 31 May 2013

ಚುಟುಕು

*ಚಳಿ*

ಚಳಿಯಲಿ ಬಳಿನಿಂದು,
ಬೇಯಿಸದಿರು ಚೆಲುವೆ,,,,
ತಾಳೆನು ಈ ಕೊರೆಚಳಿಯ,
ಬಳಿನಿಂದು ಬೇಯಿಸದೆ,
ಸುಟ್ಟೇಬಿಡು ನಲ್ಲೆ,
ನಿನ್ನ ಬಿಗಿದಪ್ಪುಗೆಯಲಿ
ನನ್ನೀ ವಿರಹವ.

(ದಿವ್ಯ ಆಂಜನಪ್ಪ)