Saturday, 11 October 2014



ಪ್ರತೀ ಹಂತಗಳಲ್ಲೂ
ತಮ್ಮನ್ನು ತಾವು
ಸಾಬೀತುಪಡಿಸಿಕೊಳ್ಳುವುದು
ಮುಜುಗರಕ್ಕಿಂತ
ದುಃಸ್ಥಿತಿ ಎನ್ನಬಹುದು,,,!

%%%%%%%%

ನಿನ್ನ ಪ್ರೀತಿಯೋ
ಇಲ್ಲ
ನೀ ಬರೆಯೋ
ಅಕ್ಷರ ಪ್ರೀತಿಯೋ
ಒಟ್ಟಿನಲ್ಲೊಂದು ಪ್ರೀತಿ
ಇದೆ
ಈ ಜೀವಕೆ,!

%%%%%%%%%%%%%%

ನಿಲ್ದಾಣವೆನ್ನುವುದು ಹೆಸರಿಗಷ್ಟೇ
ಆ ನಿಲ್ದಾಣಕ್ಕೆ ನಾವೇ ನಡೆದು ಹೋಗಬೇಕು
ಬಸ್ ಹಿಡಿಯಲೇಬೇಕೆಂಬ ಉದ್ದೇಶವಿದ್ದರೆ,
ಹಾಗೆಯೇ ಈ ಹುಚ್ಚು ಪ್ರೀತಿ,,

%%%%%%%%%%

ಕೆಲ ಹೊತ್ತಿನ ಪ್ರೀತಿಗಾಗಿ
ದೇಹ ತ್ಯಜಿಸೊ ಮನಸ್ಸಿಗೆ
ನನ್ನದು ಸಹಗಮನವಾದರೂ
ಆತ್ಮತೃಪ್ತಿ ಇರುವುದೇನೋ!!

%%%%%%%%%

ಮರೀಚಿಕೆಗೂ ಪ್ರೀತಿಗೂ
ಅದೇನು ಸಾಮ್ಯತೆ?!...
ಪ್ರೀತಿಯ ಕೈಹಿಡಿದು
ನಡೆದ ದಾರಿಯೆಲ್ಲಾ
ಕಾಮದ ಮುಳ್ಳುಗಳು!
ಹೆಜ್ಜೆ ಇಡಲಾರದ ಸ್ಥಿತಿಗೆ
ಹಬ್ಬಿಕೊಂಡ ಬೇಲಿ,
ಮಾತು ಬರಬಾರದಿತ್ತು
ನಾಲಿಗೆ ಕಿತ್ತು ಹೋಗಿದೆ
ಅಂದವಿರಬಾರದಿತ್ತು
ಮನವು ಗೋಳಿಟ್ಟಿದೆ..

10/10/2014

%%%%%%%%%%%%%%%%

ಪ್ರೀತಿ ಎಂಬುದು ಹುಡುಕಾಟದಲ್ಲಿಯೇ ಇರಬೇಕೇನೋ
ಸಿಕ್ಕಿಬಿಟ್ಟರೆ ಮನಸ್ಸು ಸೋಮಾರಿಯಾಗೋ ಭಯವೇನೋ

%%%%%%%%%%%%%%%%%%%

ಮೌನವಾಗಿ ಒಂದಷ್ಟು ದೂರ ಕೈಹಿಡಿದು ನಡೆ
ಪ್ರೀತಿಯ ಪರಿಭಾಷೆ ಅರಿವಾಗುವುದು,,
ನನ್ನಯ ಕೈ ಬಿಸಿಯೂ ಮಾತಾಗುವುದು
ಕಿವಿಯಾಗುವ ನಿನ್ನದೆ ಬಡಿತವೂ
ಪದೆ ಪದೆ ನನ್ನ ಮನದ ಪ್ರತಿಧ್ವನಿಯೇ ಆಗುವುದು!

%%%%%%%%

ಮೂಕವಾಗಿಸೊ ಪ್ರೀತಿ
ಪದಗಳಲ್ಲಿ ನಿಲುಕದು
ಅಬ್ಬರವಾಗುವ ಮಾತು
ಸೆಳೆತದ ಉನ್ಮಾದ!

09/10/2014

ಕವನ

ಎಲ್ಲೆಲ್ಲೋ ಹುಡುಕಿದ್ದು ಹಿತ್ತಲಲ್ಲಿ ಕಂಡದ್ದು
ಪ್ರೀತಿ-ಶಾಂತಿ-ನೆಮ್ಮದಿ!


ಚೊಕ್ಕಟಕೊಂಡ ಮನಸ್ಸು ಕೊಟ್ಟಿದ್ದು
ನೋಡಿದೆಲ್ಲವೂ ಸುಂದರವೆನಿಸುವಷ್ಟು
ಆತ್ಮ ಶುದ್ಧಿ!


ಕಾಲ ಕೆಳಗೂ ಅವಿತಿರುವ ಭವ್ಯ ಖನಿಜ ತಿಳಿಸಿದ್ದು
ತಲೆ ಬಾಗಿ ದಕ್ಕಿಸಿಕೊಳ್ಳುವ ಸೌಜನ್ಯ-ಪರಿಶ್ರಮ!


ಎದುರಾಗೊ ಅವಮಾನಗಳು ಕಲಿಸಿದ್ದು
ನೆಟ್ಟಗೆ ನಿಲ್ಲುವ ಸ್ವಾಭಿಮಾನ!


ನಿಂದನೆ-ತಿರಸ್ಕಾರಗಳು ಕೊಡುಗೆ ಕೊಟ್ಟದ್ದು
ಮರೆವು ಮತ್ತು ಬಿಟ್ಟುಬಿಡುವ ಪ್ರವೃತ್ತಿ!!

09/10/2014

ಕವನ

ಈ ಹೊತ್ತಿಗೆ


ಉದಯ ರವಿ ಮರೆಯಲಿ ನಿಂತು

ಕಳೆದಿರುಳ ಎನ್ನ

ಕನಸ ಕದ್ದು ಕೇಳಿದ ಹಾಗೆ



ನೀನಿನ್ನೂ ರಶ್ಮಿ ಚೆಲ್ಲಿರುವೆ

ನೆರಳಲೇ ಕುಳಿತು ನಾ

ಪದ ಕಟ್ಟಿ ಹಾಡಿರುವೆ


ಕಪ್ಪೊಳಗೊಂದು ಪ್ರೇಮ ಕಿಡಿ

ಹೊತ್ತಿಕೊಳ್ಳುವುದೇ

ಬೆಳಗುವುದೇ ಕನಸು

ಈ ಹೊತ್ತಿಗೆ...?!



ಚಿತ್ರ ಕೃಪೆ; ಜಿ ರಾಮಚಂದ್ರ ಐತಾಳ ರವರು



09/10/2014

Friday, 10 October 2014

ಮನದ ಮಾತು

ಪ್ರೀತಿ-ಪ್ರೇಮ-ಪ್ರಣಯ!


ಹರಯದಲ್ಲಿ ಉಕ್ಕುವ ಅನ್ಯ ಲಿಂಗದೆಡೆಗಿನ ಮಮತೆಯು ಪ್ರೀತಿ ಎನಿಸಿಕೊಂಡಿದ್ದರೂ ಅದು ಬಹಳಷ್ಟು ಬಾರಿ ಕೇವಲ ಹೆಣ್ಣಿನ ಅಭಿಪ್ರಾಯಗಳಷ್ಟೇ. ಗಂಡು ಪ್ರೀತಿ ಪ್ರೇಮವನ್ನು ಕೇವಲ ಮೋಹವಾಗಿಯಷ್ಟೇ ಪರಿಗಣಿಸುತ್ತಾನೆ. ಸುಳ್ಳು ಎಂದೆಲ್ಲಾ ವಾದಿಸಿದರೂ ಅವರವರ ಆಂತರ್ಯದ ನಿಷ್ಠೆಗೆ ಬಿಟ್ಟದ್ದು. ಕಳೆದ ವರ್ಷವಷ್ಟೇ ಮದುವೆಯಾದ ನನ್ನ ಗೆಳತಿಯೊಬ್ಬಳು ಭೇಟಿ ಮಾಡಮಾಡಲೆಂದು ಬಂದಿದ್ದಳು. ಹೊಸ ಮದುವೆ ಬಹುಶಃ ಖುಷಿಯಾಗಿರಬಹುದೆಂದು ನಾನು ಊಹಿಸಿದ್ದೆ. ಬಂದಳೋ ಅಳಲಾರದೆ ನಗುತ್ತಿದ್ದಳು. ನನಗೋ ಏನು ಮಾಡಬೇಕೆಂದು ತಿಳಿಯಲಿಲ್ಲ,, ಅವಳ ಒಂದೊಂದು ಮಾತುಗಳು ಜೀವನದ ಒಂದೊಂದು ಪದರಗಳನ್ನು ಬಿಚ್ಚಿಟ್ಟಂತೆ ನನಗೆ ನಂಬಲಾರದ ಗುಟ್ಟುಗಳು!. ನೋಡಲು ಅಷ್ಟೇನು ಅಂದವಿಲ್ಲದ ಅವಳ ಗಂಡ, ಸುಂದರವಾದ ಹೆಂಡತಿಯನ್ನು ಮಾತನಾಡಿಸಲೂ ಮುಂದಾಗನಂತೆ. ಕೇಳಿದರೆ ಜಗಳ. ಹೊರಗೆಲ್ಲೋ ಸುತ್ತಾಡಿಕೊಂಡು ಸುಸ್ತು ಎಂದು ಎಲ್ಲೆಂದರಲ್ಲಿ ಹಾಲಿನಲ್ಲಿ ಮಲಗಿಬಿಡುತ್ತಾನಂತೆ. ರಾತ್ರಿ ಒಂದು ಗಂಟೆಯಾದರೂ ಒಳಗೆ ಬಾರದ ಗಂಡನನ್ನು ಕಾದು ಅದು ಯಾವಗಲೋ ಇವಳು ಮಲಗಿಬಿಟ್ಟಿರುತ್ತಾಳೆ. ಇಷ್ಟೆ ಅಲ್ಲದೆ ಕಂಡ ಕಂಡ ಹೆಣ್ಣುಗಳನ್ನೆಲ್ಲಾ ತನ್ನೆದುರೇ ಹೊಗಳಿ, 'ಪ್ರಪಂಚದಲ್ಲಿ ನಿನ್ನ ಬಿಟ್ಟು ಮಿಕ್ಕ ಎಲ್ಲರೂ ನನಗೆ ಒಳ್ಳೆಯವರೇ, ಇಷ್ಟವಾಗುವವರೆ',, ಎಂದು ಬೇರೆ ಮೂದಲಿಸುತ್ತಾನಂತೆ. ಸುಂದರವಾಗಿ ಸಿಂಗರಿಸಿಕೊಳ್ಳುವುದೂ ಇಷ್ಟವಿಲ್ಲವಂತೆ. ಮದುವೆಗೆ ಮುನ್ನ ನಮ್ಮೆಲ್ಲರಿಗಿಂತಲೂ ಸುಂದರವಾಗಿ ಕಾಣುತ್ತಿದ್ದ ಅವಳು ಈಗ ಅನಾರೋಗ್ಯದೊಂದಿಗೆ ನಿಶ್ಚೇತನಳಾಗಿ ಕಾಣುತ್ತಿದ್ದಾಳೆ. ಅವಳೀಗ ತನ್ನ ತವರು ಮನೆಯಲ್ಲಿ; ಗಂಡನು ವಿಚ್ಛೇದಕ್ಕಾಗಿ ಕೋರ್ಟಿನಲ್ಲಿ. ಹೊಂದಿಕೊಳ್ಳಲಾಗದಿರಲು ಅಥವಾ ಪ್ರಯತ್ನಿಸದಿರಲು ಕಾರಣವೇನು? ಅವನು ಹೇಳನು, ಇವಳು ನಂಬಳು. ಗಂಡನಿಗದು ಬೇಡದ ಮದುವೆ. ಹೆಸರಿಗೊಂದು ಮದುವೆ ಬೇಕಿತ್ತು ಅಷ್ಟೇ ಅವನ ಉದ್ದೇಶವೂ. ಇದನ್ನು ಯಾವ ಸಮಾಜ,, ಯಾವ ಕಾನೂನು ಅರಿತು ಆ ಹೆಣ್ಣಿಗೆ ತೀರ್ಪುಕೊಡುವುದು? ಎಲ್ಲಿದೆ ನ್ಯಾಯ?!!!

ಇಲ್ಲಿನ ಕೊರತೆಯೆಂದರೆ ಪ್ರೀತಿ-ವಿಶ್ವಾಸದ್ದು ಹಾಗೆಯೇ ಪ್ರಣಯವೂ.. ಮದುವೆಯಲ್ಲಿ ಬಹು ಮುಖ್ಯ ಪಾತ್ರವಹಿಸೋ ಪ್ರಣಯ-ಮೋಹವು ಅಲ್ಲಿ ಕೈಕೊಟ್ಟಿದೆ ಎಂದಷ್ಟೇ ತಿಳಿಯಬಹುದು..

ಜೀವಿಯೂ ಬಯಸುವುದು ನಿಜವಾಗಿಯೂ ಪ್ತೀತಿಯೇ,, ಎಷ್ಟೋ ಜನರು ಪ್ರೀತಿಗಾಗಿ ಮದುವೆಯಾಗಿ ಒಟ್ಟಿಗಿದ್ದಾರೆ ಮಕ್ಕಳಿಲ್ಲದೆ. ಪ್ರೀತಿಗಾಗಿ ಮದುವೆಯಾಗಿದ್ದಾರೆ ಸಂಗಾತಿಗಲ್ಲಿ ಆಯುಷ್ಯವಿಲ್ಲದಿದ್ದರೂ. ಬಹುಶಃ ಇಂತಹ ಮನೋಸ್ಥಿತಿಗಳು ಆ ಉಚ್ಚ ಮಟ್ಟದ ಜೀವಗಳಲ್ಲಿ ಮಾತ್ರವೆನ್ನಬಹುದೇನೋ!. ಪ್ರೀತಿಯನ್ನು ಹಂಬಲಿಸಿ ಕೊರಗುವ ಮನಸ್ಸುಗಳಿಗೆ ಪ್ರೀತಿಯು ಸಿಗುವುದೇ ಇಲ್ಲವೇನೋ ಎಂದೆನಿಸುವುದು ಬಹಳಷ್ಟು ಬಾರಿ. ಆ ಕಾರಣ ಅದರ ಹಂಬಲವನ್ನು ತೊರೆದು ಬದುಕವುದು ಸರಿಯೆನೋ. ನಮ್ಮನ್ನು ಗೌರವಿಸುವ ಸಮಾಜಕ್ಕೆ ಮಿಡಿವ ಹೃದಯವಾಗಿ ಮತ್ತೂ ಅಷ್ಟೇ ಗಟ್ಟಿಯಾಗಿ ನಿಲ್ಲಬೇಕು. ಪ್ರೀತಿಯೆಂಬುದು ನಮ್ಮ ದೌರಬಲ್ಯವಲ್ಲ. ಹಾಗೆಯೇ ಇತರರಿಗೂ ಅದು ನಮ್ಮ ದೌರ್ಬಲ್ಯವಾಗಿ ಕಾಣುವುದು ಕಾಡುವುದೂ ಬೇಡ. ನಾವು ನಮಗಿದು ಬೇಕಿದೆ ಎಂದಾಗಷ್ಟೇ ಕೊಡುವ ನೆಪಗಳು ಮತ್ತದರ ಹಿಂದೆಯೇ ಬರುವ ಅವರ ಸ್ವಾರ್ಥಗಳು ನಮ್ಮ ಜೀವನವನ್ನು ಮತ್ತೂ ದುಸ್ತರಗೊಳಿಸಿಬಿಡುತ್ತದೆ.

ಜೀವನಕ್ಕೆ ಪ್ರೀತಿ ಬೇಕಿದೆ ಅದಕ್ಕಾಗಿ ಸಮಾಜದಲ್ಲಿ ಹಾತೊರೆವ ಮಕ್ಕಳಿದ್ದಾರೆ. ಪ್ರೀತಿಯೆಂಬುದು ಬಹುರೂಪಿ ಎನ್ನುವದನ್ನು ಮತ್ತೆ ನೆನಪಿಸಬೇಕಿಲ್ಲವಲ್ಲ,,

ಪ್ರೀತಿಸಲು ಶೋಷಿತರಿದ್ದಾರೆ ಅಬಲೆಯರಿದ್ದಾರೆ..ಪ್ರೀತಿಸಿಕೊಳ್ಳಲು ವೃದ್ಧರಿದ್ದಾರೆ. ನಿರ್ಮಲವಾದ ಪ್ರೀತಿಯನ್ನಷ್ಟೇ ಬಯಸೊ ಜೀವಿಗಳು ಇನ್ನೂ ಇದ್ದಾರೆ ನಮ್ಮಂತೆಯೇ. ಸೇರಿಕೊಳ್ಳಲು ಮನಸ್ಸಿರಬೇಕು. ಗುರುತಿಸಲು ನಮ್ಮೊಳಗಣ್ಣು ತೆರೆದಿರಬೇಕಷ್ಟೆ. ಒಂಟಿತನಕ್ಕೆ ಕಾಮ-ಮೋಹವೇ ಮದ್ದಲ್ಲ. ಪ್ರೀತಿಸುವ ಮನಸ್ಸೊಂದೇ ನಿಜ ಸಂಗಾತಿ!!

''ಹರೆಯದ ಪ್ರೀತಿ, ತೊರೆಯುಕ್ಕೋ ರೀತಿ
ಹಸಿದವಗೆ ಹೊಟ್ಟೆಗೆ ಬಿದ್ದ ರೊಟ್ಟಿ!
ಪ್ರೀತಿಯಂದರೇ ಇದುವೇ ಏನು?!

ಹಾಗಿದ್ದರೆ...

''ಹಸಿವಿರಲಿ ನೋವಿರಲಿ
ಮನದಲೊಂದು ಸುಂದರ ನೆನಪಿರಲಿ
ಪ್ರೀತಿ ತುಂಬಿದ ಅವನ ಚೇತನಕೆ''...

ಜೀವನವು ತುಂಬಾ ಸುಂದರವಾಗಿದೆ. ನಮ್ಮೊಳ ಮನಸ್ಸು ನಿರ್ಮಲವಾಗಿದ್ದರಷ್ಟೆ. ನಿರ್ಮಲತೆಗೆ ಪ್ರೀತಿಯ ಗಂಧ ಸಾಕು, ಮೋಹದ ಮಧುವಿಲ್ಲದಿದ್ದರೂ...

ಕೊನೆಯದಾಗಿ ಹೇಳುವುದಾದರೆ ಪ್ರೀತಿ-ವಿಶ್ವಾಸವೆಂಬುದು ಶಾಶ್ವತ, ಉಳಿದಂತೆ ಎಲ್ಲವ ಮೀರಿ!.  
10/10/2014 

Thursday, 9 October 2014

ಕವನ

ಬಿಳಿಯ ಹಾಳೆಗಳು



ಅವನು ಬರೆಯುವವನಾದರೆ,

ಅವನ ಸೀಸದ ಕಡ್ಡಿಯ ಚಿತ್ರಕೆ

ನನ್ನದು ಬಳಪದ ಬಣ್ಣಗಳು

ಆದರೂ ಮೆಚ್ಚುವನು ನನ್ನ,



ನಾನೇ ಬರೆಯುವವಳಾದರೆ

ಬಿಳಿ ಗೋಡೆಯ ಮೇಲಿನ 

ನನ್ನ ಇದ್ದಿಲ ಚಿತ್ತಾರಕೆ

ಅವನು ಆಗಸದಗಲ ಹಬ್ಬೊ 

ಕಾಮನಬಿಲ್ಲು,



ಮೆಚ್ಚದಿರಲು ನಾ ಅವನ 

ಕಾರಣವಿಲ್ಲ,

ಇದು ನನ್ನೊಳ

ಆ ನಮ್ಮಿಬ್ಬರ ಬಣ್ಣಗಳು,

ಚಿತ್ರವಾಗಿ ಮೂಡಲು

ಕಾದಿವೆ ನಿನ್ನ.. !

ಈ ಬಿಳಿಯ ಹಾಳೆಗಳಲಿ..!



09/10/2014

ಚಿತ್ರ ಕವಿತೆ

ಮಳೆ ಮತ್ತು ಸಿಡಿಲು

ಮಳೆ ಮುಗಿಲು ಇಳೆ ಕೆದರಿ

ಮಿಂಚು ಗುಡುಗಿ, ತೊರೆಯುಕ್ಕಿ

ಅಲ್ಲೋಲ್ಲ ಕಲ್ಲೋಲವೀ ಸಮಯ

ಭಾವವೆಲ್ಲಾ ಚದುರಿ ಚಿತ್ತಾರ

ನಿಶೆಯ ನಶೆಯಲಿ ಕಾಣದೊಂದೂ ಬಣ್ಣ


ಅಂತರಂಗದ ಚದುರಂಗ

ಬರೀ ಕಪ್ಪು-ಬಿಳುಪು

ಬಣ್ಣ ತುಂಬಿಕೊಳ್ಳುವ ಕಣ್ಣಿಗೆ

ಕಪ್ಹಿಡಿದು ಬೆಳಕು ಕಾಣದಯ್ಯ!



-DA


08/10/2014






ನೀ ಬರುವ ಹೊತ್ತಾದರೂ
ಇಲ್ಲೇಕೋ ಇನ್ನೂ ಮೌನ
ಮೋಡ ಕವಿದ ನನ್ನೂರು
ಮಳೆಗಾಗಿ ನಿನ್ನ ನೆನಪು!

09/10/2014

Wednesday, 8 October 2014





ಪ್ರಶ್ನಿಸುವುದಾದರೆ ಪ್ರಶ್ನಿಸು
ನನ್ನೀ ಏಕಾಂತ;
ತಿಳಿಯುವುದು ಆಗ
ನಿನ್ನ ವಿರಹ!

&&&

ತುಸು ಸಮಯ ನೀಡು ನೀ ನನಗೆ
ಹುಣ್ಣಿಮೆ ಚಂದ್ರನ ಸಿಂಗರಿಸಿರುವೆ
ಜೊತೆಗಷ್ಟು ನನ್ನದೂ ಶೃಂಗಾರ ಬಾಕಿಯಿದೆ
ಒಟ್ಟಿಗೆ ಮೀಯೊಣ ಬೆಳದಿಂಗಳ ಹಾಲ್ಗಡಲಲಿ
ಸೂರ್ಯನ ಬಚ್ಚಿಟ್ಟು ಚಂದಿರನಲಿ!

&&&

ನಡೆವ ದಾರಿಗೆ ಎದುರಾದ ಮುಳ್ಳುಗಳನ್ನು
ನಯವಾಗಿ ಬಿಡಿಸಿ ಪಕ್ಕಕ್ಕೆ ಸರಿಸಿ ನಡೆದಿದ್ದೆ,,
ತಪ್ಪಾಯಿತು,,!
ಹಿಂದೊಮ್ಮೆ ತಿರುಗಿ ನೋಡಿದ ಕಾರಣ
ನೇರೆ ಎದೆಗೆ ಬಂದು ನಾಟಿದವು,,
ನೋವಿದ್ದೂ ಚೀರಲಾರೆ,,!


07/10/2014




''ಬೆಟ್ಟದ ದನಿ'',,

'ದೂರದ ಬೆಟ್ಟ ನುಣ್ಣಗೆ',
ಎಂದು ಅವರೆಲ್ಲಾ ನನ್ನ ನೋಡಿ ಹೇಳುವರು
ನಾನಿಂದು ಬೆಟ್ಟವಾಗಿ ಒರಟಾದದ್ದೇ ಅವರಿಂದ
ಅವರ ಮೊನಚು ಮಾತುಗಳಿಗೆ ಕತ್ತರಿಸಿದ ಕಿವಿಯಾಗಿ
ಗೋರ್ಕಲ್ಲ ರಾಶಿಯಾಗಿ, ಮೊಳೆ ಮುಳ್ಳುಗಳ ಆಗರವಾಗಿ
ನಾಲಿಗೆ ಇಲ್ಲದ ಬಾಯ್ಬಿಟ್ಟ ಬಿರುಕಾಗಿ, ಕಣ್ಣಿಲ್ಲದ ಶಿಲೆಯಾಗಿ
ಹೌದು ನಾ ಕಗ್ಗಲ್ಗಳ ಬೆಟ್ಟವೇ, ದೂರವಿರಿ ನೀವು ನುಣ್ಣಗೆ,,!

&&&

ಖುಷಿಗಳಿಗಿರುವಷ್ಟು ಕಾರಣಗಳು
ದುಃಖಕ್ಕೆ ಇಲ್ಲ ಬಿಡು ಗೆಳೆಯ,,
ಅನುಮಾನ, ಅವಮಾನ, ಬಿಗುಮಾನ
ಇಲ್ಲವೇ ಸುಮ್ಮನಷ್ಟು ಕಳೆದೆವು ಎನ್ನೋ ಭಾವ!
ಖುಷಿಗೋ,, ನಿಂತರೂ ಕೂತರೂ ನಡೆದು ಬಿದ್ದರೂ ಹಾಸ್ಯ ಕಾರಣ
ಒಳಗೊಂದು ಮನಸ್ಸು ಮಗುವಿನಂತಿರಲು
ಮುದ್ದು ಮುದ್ದಾಗಿ ತಪ್ಪು ಮಾಡಿ ನಕ್ಕುಬಿಡಲು!


&&&

ಸಧ್ಯ ಭಾವನೆಗಳಿಗೆ
ಮದುವೆ ಇಲ್ಲ;
ಹಾಗೆಯೇ ವಿಚ್ಛೇದನ,,! 

&&&

ಎನ್ನಂಗಳದೊಳು ನಾನಿಟ್ಟರೆ ರಂಗವಲ್ಲಿ
ಅವನೊಬ್ಬ ಕುಮಾರ ಇಡುತಾನೆ ಪ್ರೀತಿ ಬಳ್ಳಿ
ನನ್ನ ಮನೆಯ ಕಿಟಕಿಯಲಿ!!


06/10/2014

Monday, 6 October 2014

ಚಿತ್ರ


04/10/2014

ಚಿತ್ರ


01/10/2014


ಮನದ ಮಾತು

Life is beautiful  :-)



ಎಲ್ಲೋ ಲೀನವಾಗಿ ಹೋಗಬೇಕಿದ್ದ ನೀರ ಹನಿಯೊಂದು ಇನ್ನೂ ಗಾಳಿಯಲ್ಲಿಯೇ ತೇಲಾಡುತ್ತಿರುವ ಹಾಗೆ,, ನದಿಯ ಹರಿವ 

ಸೆಳವಿಗೆ ನಿಲುಕದೆ ದಡದಲ್ಲೆ ಉಳಿದ ಮಣ್ಣ ಕಣದ ಹಾಗೆ ಉಳಿದುಬಿಟ್ಟಿರುವಂತೆ ಅನಿಸುವುದು ನಾನು ಈ ಜೀವನಕೆ. ಹೌದು 

ನಾನಿನ್ನೂ ಈ ಜೀವನದ ಆಳಕ್ಕೆ ಇಳಿಯಲೇ ಇಲ್ಲ, ಇನ್ನೂ ಪ್ರಾರಂಭದಲ್ಲೇ ಇದ್ದೇನೆ ಎಂದು ಬಹಳಷ್ಟು ಬಾರಿ ನನಗನಿಸುವುದು. 

ಈಗೀಗ ಹೆಚ್ಚೇ ಎನ್ನಬಹುದು. ನನಗೇಕೋ ಗುರಿಗಳು ಇಲ್ಲ. ಸಾಧು ಸಂತರಂತೆ ನಡೆಯೋ ಹೊಸ ವ್ಯಾಮೋಹ!. ದೂಷಿಸಿದ 

ದೂರಿದ, ಕಷ್ಟ ಕೊಟ್ಟ ನೋವನಿಟ್ಟ ಎಲ್ಲರನ್ನೂ ಕ್ಷಮಿಸಿಬಿಡಲು ಮೊದಲು. ಖುಷಿಯೆನಿಸಿದರೂ ನನಗೇನು ಬೇಕು ಎಂಬುವುದೇ 

ಒಮ್ಮೊಮ್ಮೆ ತಿಳಿಯಲೊಲ್ಲದು. ಎಲ್ಲಿ ವೈಯಾಗ್ಯ ಮೂಡಿಬಿಡುವುದೋ ಎಂಬ ಆತಂಕವೂ ಸಹ. ಆದರೂ ಆಗಾಗ ನಾ ಕಲ್ಪಿಸೊ 

ಕವನಗಳು ನನ್ನೊಳ ಶೃಂಗಾರವನ್ನು ಪ್ರದರ್ಶಿಸಿ ನಾಚಿಸುತ್ತವೆ. ಹೀಗೆ ನಾನು ಎಂಬ ನಾನು ಎಷ್ಟೇಲ್ಲಾ ಗೊಂದಲಗಳ ನಡುವೆ 

ಇನ್ನೂ ತೊರೆಯುಕ್ಕೊ ಜೀವನಕೆ ಹೊಂದಿಕೊಳ್ಳಲು ಸೆಣೆಸಾಡುತ್ತಲೇ ಇದ್ದೇನೆ. ಆಸೆಗಳು ಎಂಬ ಮಾಯಾಲೋಕ ಒಮ್ಮೆ 

ಬಾನೆತ್ತರಕ್ಕೆ ಹಾರಲುಬಿಟ್ಟರೆ, ಕೈಸುಟ್ಟ ಅನುಭವಗಳು ಕನಸುಗಳನ್ನು ರಪ್ಪನೆ ನೆಲಕಚ್ಚಿಸಿಬಿಡುತ್ತದೆ. ಕಣ್ಣೀರಿಗೆ ನಾನೀಗ 

ಹೆದರದ ಬಂಟ!!. ಕಣ್ಣೀರು; ನೋಡುವ ಮನವ ಕರಗಿಸಬಹುದಷ್ಟೇ,, ನಮ್ಮ ಸಾಂತ್ವನವಲ್ಲ, ನಮ್ಮ ಪರಿಹಾರವೂ ಅಲ್ಲ,,!. 

ಮೊದಲಾಗಿ ಕನಿಕರಕ್ಕೆ ಬೆಚ್ಚಿಬೀಳೋ ನಾನು ಎಂದಿಗೂ ಜಂಭದ ಹುಡುಗಿಯೇ,, 

ಕಣ್ಣ ಮುಂದಿನ ಅಸ್ಪಷ್ಟ ದಿಕ್ಕುಗಳು, ಅರೆ ಬರೆ ಅನುಭವಗಳು, ಕೈಹಿಡಿದು ನಡೆಸೋ ಹಿರಿತನದ ಕೊರತೆ, ಅನಿಸಿದ್ದು ಸರಿಯೋ 

ತಪ್ಪೋ ಎಂದಷ್ಟೇ ಆ ಕಾಲದ ನನ್ನ ತರ್ಕ,, ಓದಿ ಕಲಿತ, ಗುರು-ಹಿರಿಯರು ಹೇಳಿದ ಮಾತುಗಳಷ್ಟೇ ಒಮ್ಮೊಮ್ಮೆ ನನ್ನ 

ಅನಿವಾರ್ಯ ದಾರಿಗಳು,,! ತಪ್ಪೆನ್ನಲು ನನ್ನಲ್ಲಿ ಆ ಹಂತದ ಅನುಭವಗಳಿಲ್ಲ,, !! ಹೀಗೂ ಇರಬಹುದೇ ಒಂದು ಮನಸ್ಸು 

ಎಂಬಂತೆ ನಾನು ನನ್ನ ನೋಡಿಯೇ ನನಗೊಂದು ಸೋಜಿಗ! 


ಸುಮ್ಮನೆ ಅಲೆಯುತ್ತಿದ್ದೆ ಮನಸ್ಸು ನೊಂದರೆ ಆಗ ಕಾಣದ ದಾರಿಗಳಲ್ಲಿ. ಒಂದಷ್ಟು ನಿರಾಳವನಿಸುವವರೆಗೂ ಕಾಲ ನಡಿಗೆ. 

ಈಗ 

ಸಮಯದ ಅಭಾವದ ಕಾರಣ ಮನಸ್ಸು ಮಾತ್ರ ಅಲೆಯುತ್ತದೆ. ಕಂಡು ತಿಳಿಯದ ವಿಚಾರಗಳ ಸುತ್ತ. ದಿನವೂ ಎರೆಡೆರಡು 

ಗಂಟೆಗಳ ನನ್ನ ಕರ್ತವ್ಯದ ಪ್ರಯಾಣವು ಆರೋಗ್ಯದ ಮೇಲೆ ಪ್ರಭಾವ ಬೀರಿದ್ದರೂ ಮನಸ್ಸಿಗೆ ನಾ ಕೊಡುವ ಒಂದು 

ಸಮಯವಾಗಿದೆ. ಬಸ್ಸಿನಲ್ಲಿ ಒಂದು ಕಿಟಕಿಯ ಪಕ್ಕದ ಸೀಟು ಸಿಕ್ಕರಷ್ಟೆ ಸ್ವರ್ಗ ಸಿಕ್ಕ ಅನುಭವ!. ಹಾಡುಗಳನ್ನು ಕೇಳುವ 

ಅಭ್ಯಾಸ,, ಜೊತೆಗೆ ದಿನದಲ್ಲಿ ನಾ ಸಮಯವಿಲ್ಲವೆಂದು ಬದಿಗೊತ್ತಿದ್ದ ಚಿಂತನೆಗಳಿಗೆಲ್ಲಾ ಒಂದು ವೇದಿಕೆ. ನಾನು ನನ್ನ ನಾಟಕ 

ರಂಗಭೂಮಿಯೊಳಗೆ. ಗತಿಸಿದ ಸುಖ-ದುಃಖಗಳು ಅದೊರೊಳ ನನ್ನಯ ಸರಿ-ತಪ್ಪುಗಳ ಅವಲೋಕನ, ಸಮಸ್ಯೆಗಳ 

ಪರಿಹಾರ, ಕಾಡೋ ಸಾಲುಗಳು, ನನ್ನೆಡೆಗಿನ ಅವರುಗಳು ಎಂಬ 'ಅವರ' ಮಾತುಗಳು, ನನ್ನ ಪರಿಧಿಯೊಳು ನನ್ನ ನಿಲುವು 

ಮತ್ತು ಅದರ ಸರಿ ತಪ್ಪುಗಳು,, ಹೀಗೆಯೇ,, ನನ್ನ ಬಸ್ ಪ್ರಯಾಣ ನನಗೊಂದು ವರದಾನ. ಹಾಗೆಯೇ ಕಲ್ಪಿಸೊ ಮನಕಷ್ಟು 

ಸನ್ನಿವೇಶ ಸಂಭಾಷಣೆಯ ಕಸರತ್ತು,, ಇದು ತುಂಬಾ ಖುಷಿ ಕೊಡುತ್ತದೆ. ಕೆಲ ಸಮಯದ ನನ್ನ ಕಲ್ಪನೆಗಳಿಗೆ ನನಗೇ 

ಸಿಕ್ಕಾಪಟ್ಟೆ ನಗು ಬಂದು ''ಅಯ್ಯೋ ಇದು ಬಸ್ಸು!!!'' ಎಂದು ನೆನಪಾಗಿ ಸುಮ್ಮಾನಾಗುವುದಿದೆ. ಆಗೆಲ್ಲಾ ,, ''Life is 

beautiful" ಎನ್ನೊ ಉದ್ಗಾರ ನನ್ನೊಳಗೆ. ಜೀವನವೆಂದರೆ ಏನೇನೋ ಆಗಿಬಿಡುವುದಲ್ಲ; ಜೀವನವೆಂದರೆ ನಾವು 

ನಾವಾಗಿರುವುದು. ಕಪಟವಿಲ್ಲದೆ, ವಂಚನೆಯಿಲ್ಲದೆ!. ಒಂದಷ್ಟು ನಗುವ ಕಂಡು, ನಮ್ಮೊಡನಿರುವ ಮನಕಷ್ಟು ನಗುವ 

ತುಂಬಿಬಿಡುವುದೇ ಜೀವನ! ,, ಎಂದೆಲ್ಲಾ ಬಡಬಡಾಯಿಸಿಕೊಂಡು ಬಸ್ಗಳನ್ನು ಬದಲಿಸಿಕೊಂಡು ಮನೆಗೆ ಬಂದುಬಿಡುವ 

ಮನಸ್ಸು,, ಕಲ್ಪನೆಗಳಿಂದ ವಾಸ್ತವಕ್ಕೆ ಬಂದಿಳಿಯುತ್ತದೆ.



ಬದುಕು ಎನೆಲ್ಲಾ ಕಲಿಸುತ್ತದೆ! ಎಂಬುದೊಂದು ಸದಾ ಕಾಡೋ ಒಂದು ಸೋಜಿಗ. ಮೌನವನ್ನು, ಮಾತನ್ನು, ಮರೆವನ್ನು, 

ಪ್ರೀತಿಯನ್ನು, ತಪ್ಪನ್ನು, ಗೆಲುವನ್ನು, ಹೀಗೆ,, ಆಗಾಗ ಹೀಗೊಂದು ವಿಚಾರ; ಹುಟ್ಟಿದ ಎಲ್ಲಾ ಜೀವಿಗಳೂ ಜೀವಿಸುತ್ತವೆ, ಕೆಲವು 

ಮಾತ್ರ ಬದುಕುತ್ತವೆ. ಕೆಲವು ಅಳಿದ ಮೇಲೂ ಉಳಿದುಕೊಂಡಿರುತ್ತವೆ. ಈ ಮೂರು ಹಂತಗಳಲ್ಲಿ ''ನಾನು ಎಲ್ಲಿ?'' ಎಂದು 

ನನ್ನೇ ನಾ ಕಾಡಿಕೊಳ್ಳುವುದಿದೆ. ಮೊದಮೊದಲು ಜೀವಿಸಿದರೆ ಸಾಕು ಎನ್ನುವುದಾದರೆ ನಾ ಹೇಳುವುದು,, ''ಆತ್ಮಹತ್ಯೆಯ 

ಮೊರೆ ಹೋಗೋ ಮನಸ್ಸುಗಳಿಗೆ. ಇನ್ನು ಜೀವಿಸಿದ್ದೆ ಆದಲ್ಲಿ ನಾಲ್ಕು ಜನ ಒಪ್ಪೋ ಹಾಗೆ,, ಇಲ್ಲ ತನಗೆ ತಾನು ಸರಿ ಎನಿಸೋ 

ಹಾಗೆ,, ಜನರೊಟ್ಟಿಗೆ ಪ್ರೀತಿ-ವಿಶ್ವಾಸಗಳೊಂದಿಗೆ ಬದುಕುವುದು. ಈ ಎರಡೂ ಹಂತಗಳು ವಿಕೃತಿಗಳಿಂದ ಹೊರತುಪಟ್ಟಿದ್ದೇ 

ಆದಲ್ಲಿ ಜೀವಿಯು ಅಳಿದು ಉಳಿದುಕೊಳ್ಳಬಹುದು. ಎಂಬುದು ನಾನೆ ಕಂಡುಕೊಂಡ ನನ್ನ ಹೊಸ ಚಿಂತನೆಗಳು.



Life is all about hugs and kisses!!


ಇದು ಬಹಳಷ್ಟು ಬಾರಿ ನಾ ಹೇಳಿಕೊಳ್ಳೋ ಒಂದು ಸೂಕ್ತಿ,, ವಾಸ್ತವದಲ್ಲಿ, ''ಲವ್ ಇಸ್ ಆಲ್ ಎಬೌಟ್ ಹಗ್ಸ್ ಅಂಡ್ ಕಿಸ್ಸೆಸ್'' 

ಎಂಬ ಮಾತಿದೆ. ಹಿಂದೆ ನನಗೊಬ್ಬ ಆರ್ಟಿಸ್ಟ್ ಆಂಕಲ್ (  ) ಪ್ರಪೋಸ್ ಮಾಡುವ ಸಮಯದಲ್ಲಿ ಹೇಳಿದ್ದರು,, ನನಗೆ ಇಂಗ್ಲೀಷ್ 

ಅಷ್ಟು ಚೆನ್ನಾಗಿ ಬರುವುದಿಲ್ಲ ಎಂದಿದ್ದೆ. ಇನ್ನೇನ್ ಮಾಡೋದು ಹೇಗಾದ್ರೂ ಕಳೆಚಿಕೊಳ್ಳಬೇಕಿತ್ತಲ್ಲ,,  ಸರಿ ನನ್ನ ನಮಸ್ಸನ್ನು 

ಅರಿತಂತೆ ಹಾರೈಸಿ 'ಒಳ್ಳೆ ಹುಡುಗ ಸಿಗಲಿ ನಿಮಗೆ' ಎಂದು ಹೇಳಿದ್ದರು. ಅವರು ಹೇಳಿದ'' Love is all about hugs and 

kisses'' ಎಂಬ ಮಾತು ಒಂದು ಆಶ್ಚರ್ಯವಂತೆ ಆಗ ಅನಿಸಿದ್ದರೂ ನಂತರದ ದಿನಗಳಲ್ಲಿ ನಾನದನ್ನು ''ಲೈಫ್'' ಅಂತ 

ಮಾಡಿಕೊಂಡೆ. ''Life is all about hugs and kisses!!!!''. ಜೀವನವೆಂಬುದು ಅಪ್ಪಿಕೊಳ್ಳುವುದು ಮತ್ತು 

ಮುತ್ತಿಡುವುದು.. ಎಂದು ಕನ್ನಡದಲ್ಲಿ ಹೇಳುವುದಾದರೆ.. ಇದಕ್ಕೆ ನನ್ನ ಅರ್ಥ ಹೀಗಿದೆ; ಜೀವನದಲ್ಲಿ ಬರುವ ಸೋಲು-

ಗೆಲುವುಗಳನ್ನು ಪ್ರೀತಿಯಿಂದಲೇ ಅಪ್ಪಿಕೊಳ್ಳುವುದು.. ಹೆದರಿ ಓದುವುದು ಬೇಡ. ಹಾಗೆಯೇ ಆಸೆ- ಆಕಾಂಕ್ಷೆಗಳನ್ನು ಕೈಚಾಚಿ 

ಪಡೆದು ಮುತ್ತಿಟ್ಟುಕೊಳ್ಳುವುದು. ಎಂದರೆ ಆಕಾಂಕ್ಷೆಗಳನ್ನು ಆ ಮಟ್ಟಕ್ಕೆ ನಾವು ಪ್ರೀತಿಸುವುದು. ನಾವು ನೋಡುವ ಹಾಗೆ, 

ರಾಷ್ಟ್ರೀಯ- ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಪಟುಗಳು ತಮ್ಮ ಪುರಸ್ಕಾರವನ್ನು ಮುತ್ತಿಟ್ಟುಕೊಳ್ಳುವಂತೆ 



ನಾವು ನಮ್ಮ ಬದುಕಿನ ಸೋಲನ್ನು ಒಪ್ಪಿ, ಅಪ್ಪಿಕೊಂಡ ಮೇಲೂ ಆಕಾಂಕ್ಷೆಗಳನ್ನೂ ಮುತ್ತಬೇಕು!.

ಬದುಕು ಏನೆಲ್ಲಾ ಕಲಿಸುತ್ತದೆ?!,, ಜಿಗಿಯುವುದು,, ಬೀಳುವುದು, ಏಳುವುದು,, ಮತ್ತೂ ಜಿಗಿಯುವುದು,, 

ಇಷ್ಟೇಲ್ಲಾ ಚಿಂತನೆಗಳಲ್ಲಿ ನನಗೆ ''ನಾನು ಎಲ್ಲೋ ಉಳಿದ ಮಣ್ಣ ಕಣ ಈ ಜೀವನ ಯಾತ್ರೆಯಲಿ'' ಎಂದು ತುಂಬಾ 

ಕಾಡುತ್ತದೆ,,,,,, 

೦೬/೧೦/೨೦೧೪


ಮಾಟ ಮಾಡಿಸಿ, ಸಂಮೋಹನಗೊಳಿಸಿ
ಒಲಿಸಿಕೊಂಡೆಯೋ ನೀ ನನ್ನ,
ಹಗಲು ರಾತ್ರಿ, ಎಚ್ಚರ ನಿದಿರೆಯಲೂ
ಕಣ್ಣ ಮುಂದೆ ನಿನ್ನದೇ ಚಿತ್ರ,
ನಂಬದಿರೆ ಹೋಗು, ಅಂಜನ ಹಾಕಿಸಿ ನೋಡು!
(ಮೂಢನಂಬಿಕೆ ಆರೋಗ್ಯಕ್ಕೆ ಹಾನಿಕಾರಕ  )

04/10/2014

&&&

ಅವನಿಲ್ಲದ ಹೊತ್ತೇ
ಅವನೆಡೆಗೆ ಮತ್ತೂ ಮಿಡಿವಂತೆ 
ಅವನಿದ್ದರೆ ಹತ್ತಿರ
ದೂರಿ ದೂರ ತಳ್ಳೋ
ಏನೋ ವೈಯ್ಯಾರ
ನಿಜವೇನೆಂದೂ ನಾನಿನ್ನೂ ತಿಳಿಯೆ
ಭಾವಕೆ ಬೇಕಿರುವುದು ಪ್ರೇಮವೋ ವಿರಹವೋ!


&&&

ಕಲ್ಪನೆಯಲ್ಲೇ ನಿನ್ನ ಕಂಡು ಭೇಟಿಯಾಗಿ ಪ್ರೇಮಿಸಿ
ಕಲ್ಪನೆಗಳೇ ಹಬ್ಬವಾಗಿ ಹಗಲುಗನಸು ನೀನಾಗಿ
ಎರಡು ದಿನದ ಈ ಬದುಕು, ಸುಮ್ಮನಷ್ಟು ಕಲಬೆರಕೆ ಪ್ರತಿಷ್ಠೆಗಳು
ಎಲ್ಲಾ ಬಿಟ್ಟು ಇದ್ದುಬಿಡುವೆ ನಿನ್ನೊಂದಿಗೆ ಕೈಹಿಡಿದು
ಬಿಟ್ಟುಕೊಡುವೆಯಾ ನಿನ್ನ ಕಣ್ಣಗಲ ಕನಸುಗಳ
ತುಂಬಿಬಿಡುವ ಕಾತುರ ಎನ್ನೊಳಗೆ
ಹೇಳಿಬಿಡು ನೀನಿಂದು
ಗೆಳೆಯನಂತಾ
ಓ ನನ್ನ ಕನಸೇ!


03/10/2014

ಕವನ

ನನ್ನ ಹೆಂಡತಿ,, 


ಹೆಂಡತಿ ತಲೆಗೆ ಹರಳೆಣ್ಣೆಯನ್ನು ಉಜ್ಜುತ್ತಿದ್ದಾಳೆ,,
ಮದುವೆಯ ಹೊಸ ದಿನಗಳ ನೆನಪು
ಆಗೆಲ್ಲಾ ಅವಳು ನಾಚಿ ನೀರಾಗಿ ನನಗೆ ನೀರೆರೆಯುತ್ತಿದ್ದಳು
ನನಗೋ ಗಂಡನೆಂಬ ಅಹಂ, ''ಬಿಸಿ ನೀರು ಹಾಕೇ'', ''ತಣ್ಣೀರು ಸಾಕೇ"
''ಸೀಗೆ ಬೇಡವೇ, ಬೆನ್ನು ಸರಿಯಾಗಿ ಉಜ್ಜು'',
,,,,, ಅವುಗಳೆಲ್ಲವೀಗ ನನ್ನ ಸುಂದರ ಗತ,,
ಈಗ ನಾ ತುಂಬಾ ಜಾಣ,,
ಹದವಾದ ನೀರಿಡುವೆ, ಹರಳಣ್ಣೆಯನೂ ತಲೆಗಿಡುವೆ,,
ಕಣ್ಣಿಗೆ ಸೀಗೆ ಬೀಳಬಾರದೆಂದು ಶಾಂಪೂ ತಂದಿರುವೆ,,
ಇಷ್ಟೇಲ್ಲಾ ನನ್ನ ಆಸ್ತೆಗೆ ಇಂದು ಮರುಗಿ
ಆ ದಿನಗಳ ನೆನಪು ತಂದಿದ್ದಾಳೆ,,
ತಲೆಗೆ ಹರಳೆಣ್ಣೆ ಉಜ್ಜುತ್ತಿದ್ದಾಳೆ,,
ಅದೇನೋ ಅಸ್ಪಷ್ಟ ಗೊಣಗಾಟದಲಿ,, ನನ್ನ ಹೆಂಡತಿ,,

02/10/2014




ಹುಟ್ಟು ನಗು ಮುಖದರಸಿ ಅವಳು
ಅತ್ತಾಳಾದರೂ ಕಣ್ಣೀರ ಕಾಣೆ ಅವಳೆದೆಯೊಳು
ಸುತ್ತಲ ಗಾಳಿ ಎಲ್ಲಿ ಕರಗುವುದೋ ಎಂಬಂತೆ
ಸದಾ ಸುಖಿ ಈ ಚಂದ್ರಮುಖಿ
ಕಣ್ ಕವಡೆ ಮಿಟುಕದ ಅದಮ್ಯ ಚೇತನ ಸಿರಿ
ನಗುತಾ ನಗಿಸುತಲಿರುವ ಅವಳು ಎನ್ನೆದೆಯ ''ಕಾವ್ಯ''

&&&

ನಲಿವಿದ್ದಾಗಲೂ ನೋವ ಮರೆಯದ ಮನ!

&&&

ಬರೆದು ಅಳಿಸಿದ್ದೇ ಹೆಚ್ಚು
ಮನಸ್ಸು ಬರಿದಾಗಿ!
02/10/2014

&&&

ವಿದಾಯವ ನಾನೆಂದೂ ಹೇಳಲೇ ಇಲ್ಲ
ನೀನೆ ರಭಸದಿ ನಡೆದಿರುವೆ
ಅಡಿಯಿಡಲಾರದ ನನ್ನನು
ಏನೆಂದು ಒಂದು ಮಾತೂ ಕೇಳದೆ,
ಮೌನದಿ ಬಿಕ್ಕಿದೆ ಮನವು,,
ಮುನ್ನ ದಾರಿ ಕಾಣದೆ,,,
ಒಂಟಿ ಹೆಜ್ಜೆಗಳನ್ನೂರುತ,,
ಕನಸುಗಳ ಕೋಟೆಯೊಡೆಯುತ,,

&&&

ಬೆನ್ನು ಹಾಕಿ ಹೋದವನ
ಬೆನ್ನ ಮೇಲೆ 
ನನ್ನ ಸಾವಿರ ಕವಿತೆಗಳು
ಅವನೆಂದೂ ಓದಲಾರ!

&&&

ಮನಸ್ಸು ಮಾತನಾಡದ 
ಈ ಹೊತ್ತು
ಚಂದ್ರನಲ್ಲಿ ನಿದಿರೆಗೆ,
ಕನಸು ಖಾಲಿ ಖಾಲಿ
ನನಗೋ ಈ ಪದಗಳ ಖಯಾಲಿ! 
 01/10/2014

&&&

ಪಡೆಯದೇ ಕಳೆದುಕೊಳ್ಳುವುದು
ಒಂದು ಹೇಳಲಾರದ ಸಂಕಟ!

30/09/2014

Tuesday, 30 September 2014

ಮಳೆಗಾಲದಲಿ ಮಳೆಹನಿಗೂ
ಕವಿತೆಗಳಿಗೂ ಸ್ಪರ್ಧೆಯಂತೆ!
ಕವಿಯೊಬ್ಬ ಮೌನವಾದರೆ
ಕೋಗಿಲೆಗೆ ದನಿಯಿಲ್ಲವಂತೆ!
ಕಲೆಗಾರ ಕವಿ ಕೊರೆದರೆ ಕೋಗಿಲೆಯ ಹೃದಯ
ಕಂಠ ಶುದ್ಧ, ದನಿ ಮಧುರ!
ಕವಿತೆಗಳು ಪ್ರೇಮ ಕೊಂಡಿಗಳು
ಕವಿಗೂ ಕಿವಿಗೂ ನಡುವಿನ ಕೋಗಿಲೆಗೂ!!
DA

%%%%%%%%%%%%%

ಒಂದೇ ಸಮನೇ ಸುರಿದು
ಮರೆಯಾದ ಮಳೆಯಂತೆ
ಅವನ ಪ್ರೇಮ!
ನೆನಪಿರುವುದು ಸದಾ
ನೆನೆದ ಕಾರಣಕೆ,,

30/09/2014


ಕೋಪವು ಬಹಳ ನನಗೆ
ಅದಕೆ ಎಲ್ಲವೂ ಒಮ್ಮೆಲೆ ದೂರ!
ದೂರಲಾರೆ ಯಾರನೂ,
ಎನ್ನನೇ ಬಿಂಬಿಸಿಕೊಂಡೆನು ಗಡುಸೆಂದು!
ಪಡೆಯಲಾರೆ, ಬೇಡಲಾರೆ ಕೆಟ್ಟ ಸ್ವಾಭಿಮಾನ ನನ್ನದು!
ನಿಮ್ಮ ಭಾಷೆಯ ಅಹಂ!

%%%%%%%%%%%%%%%%%

ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆ
ಯಾರೋ ಹೇಳಿದ ಮಾತ ಕೇಳಿ
ಸಜ್ಜಾದ ಗಾಳದಲಿ ಮೀನು ಹಿಡಿಯ ಹೊರಟೆ,
ಮೀನನ್ನೇನೋ ಹಿಡಿದೆ, ಆದರೆ ಅದರ ಹೆಜ್ಜೆಯನ್ನಲ್ಲ
ಹೆಣ್ಣನ್ನೇನೋ ಒಲಿಸಿಕೊಂಡೆ ಆದರೆ ಅವಳ ಮನೋಭಿಲಾಶೆಯನ್ನಲ್ಲ!
ನಾನೊಬ್ಬ ಮೀನುಗಾರ, ಮೀನ ಹಿಡಿದು ತರುವೆ!!

%%%%%%%%%%%%

ಪ್ರೀತಿ ಕಾಡಿದಷ್ಟು
ಶೃಂಗಾರ ಕಾಡಲೇ ಇಲ್ಲ
ಆಗಾಗ ಕೆಣಕಬಹುದಷ್ಟೇ
ಹೆಣ್ಣು ಸೋಲುವಳು ಪ್ರೀತಿಗೆ
ಕುರುಡು ಕಾಮನೆಗಳಿಗಲ್ಲ,
ಇದೇ ನನ್ನ ಉತ್ತರ
ರಸ ಸಮಯವ ಸಾಧಿಸಲು
ಹೆಣಗುವ ತಂಗಾಳಿಗೆ, ಚಂದ್ರಮನಿಗೆ,
ವಿರಹದುರಿಯ ಸೂರ್ಯನಿಗೆ!,,

30/09/2014


ಕವಿತೆಗಳು ಮನಸ್ಸನ್ನು ತೆರೆದಿಟ್ಟರೆ
ಮನಸ್ಸು ವಾಸ್ತವದಲ್ಲೇ ಹುದುಗಿದೆ
ಒಮ್ಮೆ ನಗು ಒಮ್ಮೆ ಅಳು
ಅದುವೇ ಜೀವನ, ನಿತ್ಯವೂ ರಸ ಕಾವ್ಯ !!

%%%%%%%%%%%%%%%%%

ಚಂದ್ರಮಾ,
ನಿನ್ನ ಆಗಮನದ ಸಮಯವ ಬದಲಿಸಿಕೋ
ನೀ ಬರುವ ಹೊತ್ತಿಗೆ
ಉಂಡು ಮಲಗೋ ನಾನೂ ಇನ್ನೂ ದೂರ!
ತುಸು ಬೇಗ ಬಂದುಬಿಡು ಸಂಜೆಗೆ,,
ಒಟ್ಟಿಗೆ ಊಟ ಮಾಡೋಣ,, ಕತೆ ಕೇಳೋಣ
ನೀ ಹಾಡಿಗೆ ನಾ ನಿದಿರೆಗೆ ಹೊಂದಿಕೊಳ್ಳೋಣ!!

%%%%%%%%%%%%%

ಈ ಕವಿತೆಗಳಲ್ಲೇ ನಾ ಕಳೆದು ಹೋಗೋ ಭಯವಿದೆ!,
ಬಯಸಿದ್ದೆಲ್ಲವೂ ಸಿಕ್ಕಿಬಿಡೋ ಖುಷಿ,,
ವಾಸ್ತವೆಲ್ಲಾ ಊದಿ ಬಿಟ್ಟ ಬೂದಿ!
ಈ ಕವಿತೆಗಳಲ್ಲೇ ಕಳೆದು ಹೋಗೋ ಭಯವಿದೆ
ಆದರೂ ಜೊತೆಗೊಬ್ಬ ಗೆಳೆಯನ ಕವನ
ಕಳೆದು ಹೋದ ನನ್ನ ಹುಡುಕಿಕೊಡುವುದೆಂದೇ
ಸುಳ್ಳೇ ನನ್ನ ಆಶಯ!!

29/09/2014

ಕವನ

ಪ್ರೀತಿ,,,,,


ಪ್ರೀತಿ, ಏನೆಲ್ಲಾ ಮಾಡುತ್ತದೆ?!
ಸುಳ್ಳೇ ಆದರೂ
ಕನಸುಗಳ ಹುಟ್ಟಿಸುತ್ತದೆ,,
ಹಿತವಾದ ಭ್ರಮೆಗಳಲಿ,, !!
ದೆಗೆಯಲೂ ತಂಗಾಳಿಯ ಅನುಭವ
ಅಮಾವಾಸ್ಯೆಯಲ್ಲೂ ಚಂದ್ರೋದಯದ ಉನ್ಮಾದ
ಶೀತಲ ಭಾವವೂ ಹೊತ್ತಿ ಉರಿವ ದೇದೀಪ್ಯಮಾನ
ತಾನಿಂತ ನೆಲೆವೇ ತೇಲೊ ಸ್ವರ್ಗ
ಈ ಕನಸುಗಳಿಗೆ ಹೇಗೆ ಗೊತ್ತೊ ಪ್ರೇಮ ಪರಿಪಾಠ
ಹುಚ್ಚು ಕಾಮನೆಗಳಲಿ ಹರಿದು ಭೋರ್ಗರೆತ
ಸುಂದರ-ಸುಮಧುರುಗಳೆಲ್ಲವೂ ಸುತ್ತಲ ನಿರ್ವಾತ
ಧ್ಯಾನಸ್ಥಿತಿಯಿಂದೆದ್ದ ಮಾನಸ ರುದ್ರ
ಪ್ರೀತಿ ಏನೆಲ್ಲಾ ಮಾಡುತ್ತದೆ
ಪಾಮರನೂ ಲಯದಲಿ ಹಾಡುವಂತೆ
ವಿರಹಿಗಳೂ ಪ್ರಣಯಿಗಳಾಗುವಂತೆ
ಮೋಡ ಮಳೆಗರೆವಂತೆ,
ಕಾಮನಬಿಲ್ಲು ಜಗದಗಲ ಹಬ್ಬುವಂತೆ
ಜೀವನ ಭಗ್ನಶಿಲೆಗಳೂ
ವಿಭಿನ್ನ ಕಲಾಕೃತಿಗಳಾಗಿ ನಿಲ್ಲುವಂತೆ
ನನ್ನಂತೆ,, ಈ ಜಗದಂತೆ,
ಒಳಿತನ್ನಷ್ಟೇ ಪ್ರೀತಿಸುವ
ಸಕಲ ಚೇತನಗಳಂತೆ

29/09/2014
ಎನ್ನ ಕುರಿತು ಕವನ ಬರೆಯೆಂದ
ಪೋರರೆಲ್ಲಾ ಸೋತು ಹೋದರು
ತಲೆಯಾಡಿಸಿ ಕೂತ ನನ್ನೆದುರು,
ಹೀಗೊಂದು ಸುಳಿ ಗಾಳಿ ಗೆಳೆಯ
ಕವಿತೆ ಕಟ್ಟಿ ಕಟ್ಟಿಸುತ್ತಿದ್ದಾನೆ
ಗಾಳಿಯಿದ್ದಷ್ಟು ಕಾಲ ನಾನೂ ಹಾಡುವೆ
ಹಾಡಿಸೊ ಜಾಣತನ ಅವನದಷ್ಟೇ,,

29/09/2014

^^^^^^^^^^^^^^^^^^^^^^^^^^^^

ಪ್ರೀತಿಸುವೆ ನಿನ್ನ ನಾ ಎನಲು
ಅಡ್ಡವಾದದ್ದಾದರೂ ಎನ್ನ ಅಹಂ ಎನ್ನದಿರು
ಏನು ಮಾಡಲಿ, ನಾನೂ ಅಂತೆಯೇ ಭಗ್ನಗೊಂಡ ಕನಸಿನವಳು
ಭಯವಿರುವುದಾದರೂ ಎದುರಾಗೋ ತಿರಸ್ಕಾರಗಳದ್ದು,,,
,,,,,, ನಿನಗೂ ಹಾಗೆಯೇ?!

28/09/2014

^^^^^^^^^^^^^^^^^^^^^

ಮನಸಿಗಿಳಿಯಲು
ಹುಲುಸು ಸಮಯವ
ಕಾಯಲೇ ಬೇಡ ನೀ
ಮರಿ ಜಿಂಕೆ ಜಿಗಿವಂತೆ
ಜಗಿದು ಸೇರಿಕೊ
ಕಸಿವಿಸಿಯ ಬಿಸಿಯುಸಿರ
ಈ ಎದೆಯೊಳಗೆ
ಕಣ್ಣೆವೆಗಳಪ್ಪವ ಮುನ್ನ
ನಶೆಯ ಕಣ್ಣೊಳಗೆ
ನನ್ನಯ ಕನಸೊಳಗೆ

27/09/2014

Sunday, 28 September 2014

ಚಿತ್ರಗಳು


28/09/2014



^^^^^^^^^^^^^^^^^^^^^^^^^

ನನ್ನ ಪ್ರತೀ ಹುಮ್ಮಸ್ಸಿಗೂ
ವ್ಯಂಗ್ಯವಾಡುವ ಅವಳು
ಕಾರಣ ಹೇಳದೆ ದೂರಾಗಿದ್ದು
ಒಂದು ದಿವ್ಯ ವಿದಾಯ;
ಈ ನನ್ನ ಪ್ರತೀ ಹುಂಬತನಕ್ಕೂ
ಗರಿಕೆದರಿ ಬಣ್ಣ ತುಂಬಿಸೊ ಇವಳು
ಹತ್ತಿರಾದಾಗಿನಿಂದ ಹೊಸ ಸುಪ್ರಭಾತ!

^^^^^^^^^^^^^^^^^^^^^

ಕಾಲದೊಳೆಲ್ಲೋ ಕಳೆದು
ಮತ್ತೆಲ್ಲೊ ಸಿಲುಕಿಕೊಂಡೆವು
ಎನ್ನುವುದೆಲ್ಲವೂ ಸುಳ್ಳೇ
ನಾವಿದ್ದ ತಾಣದಲ್ಲೇ ನಾವಿದ್ದೇವೆ,
ಮುಂದಣ ಹಜಾರವಷ್ಟೇ
ಮಾರ್ಪಟ್ಟಿದೆ
ಆಸೆಗಳು ನಮ್ಮ ಕಲ್ಪನೆಗಳನು
ಓಡಿಸಿದಂತೆ,,
ಎಂತಹ ದುರಂತ?!
ನಿಲ್ದಾಣದಲ್ಲೇ ನಿಂತು ಮುಂದಲೂರಿನ
ಕನಸು ಕಂಡಂತೆ...

27/09/2014
^

ಕಾಲದೊಳೆಲ್ಲೋ ಕಳೆದು
ಮತ್ತೆಲ್ಲೊ ಸಿಲುಕಿಕೊಂಡೆವು
ಎನ್ನುವುದೆಲ್ಲವೂ ಸುಳ್ಳೇ
ನಾವಿದ್ದ ತಾಣದಲ್ಲೇ ನಾವಿದ್ದೇವೆ,
ಮುಂದಣ ಹಜಾರವಷ್ಟೇ
ಮಾರ್ಪಟ್ಟಿದೆ
ಆಸೆಗಳು ನಮ್ಮ ಕಲ್ಪನೆಗಳನು
ಓಡಿಸಿದಂತೆ,,
ಎಂತಹ ದುರಂತ?!
ನಿಲ್ದಾಣದಲ್ಲೇ ನಿಂತು ಮುಂದಲೂರಿನ
ಕನಸು ಕಂಡಂತೆ...

28/09/2014

ಚಿತ್ರಗಳು


26/09/2014


ಚಿತ್ರಗಳು


24/09/2014



ಒಂದೇ ಸಮನೆ ಮಳೆಯಲಿ
ತೊಯ್ದ ಇಳೆ
ಅಲ್ಲೆಲ್ಲೋ
ಹಕ್ಕಿಗಳ ಚೀವ್ ಚೀವ್
ನಿಂತ ಮಳೆಗೆ ಗುಡುಗು ಹಿಮ್ಮೇಳ
ಕಾವಿಟ್ಟ ಹಬೆ
ರಸ ನಿಮಿಷವೀ ಘಳಿಗೆ
ಸ್ವರ್ಗಕ್ಕೇ ಕಿಚ್ಚು ಹೊತ್ತಿಸೊ
ಕಾವ್ಯ ಹುಟ್ಟೊ ಸಮಯ,,,,,,
ಕೆಹು ಕೆಹು......
ಛೇ,,,
ಈ ಹಾಳಾದ ಕೆಮ್ಮು
ಧರಗಿಳಿಸಿ ಬಿಸಿ ನೀರ ಕುಡಿಸಿದೆ...

24/09/2014
^^^^^^^^^^^^^^^^^^^

ಕೆಮ್ಮಿರಲಿ ಜ್ವರವಿರಲಿ
ಜೊತೆಯಲಿ ನೀನೆಂಬ
ನಾಮವಿರಲಿ ಸಾಕೆನಗೆ;
ಜ್ವರದಲೂ ಕನವರಿಸುವೆ ನಿನ್ನೊಲವ,
ಕೆಮ್ಮಿನಲೂ ಕಲ್ಪಿಸಿರುವೆ
ಕೈಹಿಡಿದು ರಮಿಸುವ ನಿನ್ನ,,
ನೀನು ಎನ್ನುವ ಕಲ್ಪನೆಯೇ ಚೆಂದ
ನೀನು,,,
ನೀನು,,,
ಎನ್ನ ಕಣ್ಣೋಳ ಮೀನು!

23/09/2014

^^^^^^^^^^^^^^^^^^^^^^^^^^^^

ಗೆಳೆಯನಾಗದ ಗೆಳೆಯ,,
ಅವನೊಮ್ಮೆ ನಿಟ್ಟುಸಿರನಿಡಲು
ಒಳಗೊಳಗೇ ಬೇಯ್ವ ಹೃದಯ
ಬದುಕ್ಕಿದ್ದಾದರೂ ಏಕೊ
ಆಯುಷ್ಯವಿದೆ ಎಂಬ ಕಾರಣಕೊ
ನಿರ್ಲಿಪ್ತವಾದ ಭಾವಗಳ ಕೊಲ್ಲಲೊ
ಕೊನೆಗೂ ಜೀವಿಸಿ ಸಾಧಿಸುವುದಾದರೂ ಏನನೊ
ಗೆಳೆಯನಾಗದ ಗೆಳೆಯನ ನೆನಪುಗಳಿಗೆ ಸಾಕ್ಷಿಯಾಗಲೋ,,,,,

^^^^^^^^^^^^^^^^^^^

ಮಳೆಯ ಹೊಡೆತಕೆ
ಕನಸು ಸಡಿಲ, ಎಚ್ಚೆತ್ತ ನಿದಿರೆ
ಇದಕೆ ಯಾರೂ ಹೊರತಲ್ಲ
ಮನಸು ತುಂಬಿದವರು
ತುಂಬಿಕೊಳ್ಳೊ ಕಾತುರದವರು

23/09/2014

^^^^^^^^^^^^^^^^^

ಬೆರೆಯದೆ
ಬೆಸೆದುಕೊಳ್ಳುವುದಾದರೂ ಹೇಗೆ
ಹೇಳೇ ಪ್ರೀತಿ?!

22/09/2014

ಚಿತ್ರಗಳು


21/09/2014

ಚಿತ್ರಗಳು


14/09/2014

ಚಿತ್ರಗಳು



07/09/2014

ಕವನ

ಎನ್ನ ನಂಬಿ,,,



ಎನ್ನ ನಂಬಿ''
ಎನ್ನುವುದು ಎಷ್ಟು ಕಷ್ಟವೋ!!
ಅವರಿವರು ಕೆಸರು ಕದ್ದಾರು,
ಎನ್ನ ಗದ್ದೆಯಲ್ಲೀಗ ಪೈರಿಲ್ಲ
ಅವರೆಲ್ಲಾ ದನಗಳ ಬಿಟ್ಟಾರು
ಪೈರಿಲ್ಲದ ಗದ್ದೆಯೆಲ್ಲಾ ದನದ ಹೆಜ್ಜೆ,
ಎನ್ನ ನಂಬಿ,,
ಕಾಲುವೆಯ ನೀರು ತಿರುಗಿಸ್ಯಾರು
ಅವರಿವರ ಹೊಲ-ಗದ್ದೆಗಳಿಗೆ,
ಎನ್ನ ಶ್ರಮಕ್ಕೆಲ್ಲಾ ಅವರ ಹೊಲ ಹಸನು
ನಂಬಿ ನನ್ನ,
ನಾ ಬೆಳೆದ ಫಲ ಎನಗಿಲ್ಲ,,
ಕದ್ದರು ಒಯ್ದರು ಬೆಳೆದಂತೆ ಅವರೇ,,
ಈಗೀಗ ನಾ ಬೆಳೆಬಾರದೆಂದು ರಾತ್ರೋ ರಾತ್ರಿ
ಕದ್ದಾರೋ ಆ ಸೂರ್ಯನ,
ನಾ ಹೇಗೆ ಬೆಳೆಯಲಿ ಎನ್ನ ಗದ್ದೆಯಲಿ ಏನನ್ನಾದರೂ
ನಂಬಿ ಎನ್ನ,
ಎನ್ನುವುದು ಎಷ್ಟು ಕಷ್ಟವೋ
ಅವನ ಸೂರ್ಯನ್ನನ್ನೇ ಅವರಿವರು ಕದ್ದರು
ಕತ್ತಲ ತುಂಬಿಸಿಹರಂತೆ
ಅವನ ಗದ್ದೆಯೊಳು ಬಿತ್ತಿ ಬೆಳೆಬೆಳೆವನೆಂದು
ಅವನ ಹೆಸರು ಹಾಳು ಮಾಡಿಹರು
ನಂಬಿ ಬಿಡೋಣ ಬಿಡಿ ನಾವು ನೀವು!!
ನಂಬಿ ಎನ್ನ,
ಎನ್ನುವುದು ಎಷ್ಟು ಕಷ್ಟವೋ?!!

21/09/2014
ನವಿಲು ಕುಣಿವುದು ಅದರಂತೆ
ನಮ್ಮ ನಿಮ್ಮ ಅಭಿಮಾನದಾಶಯವಿಲ್ಲದೆ
ಹಾಗೆಯೇ ಒಬ್ಬ ಸಜ್ಜನ ನಡೆವನು ಅವನಂತೆ
ತನ್ನ ಬಣ್ಣಿಸದೇ, ಅವರಿವರ ಜರಿಯದೇ

^^^^^^^^^^^^^^^^^^^^^^^^^^^^^

ಮನುಷ್ಯ ತನಗೆ ಬೆನ್ನೇ ಇಲ್ಲದಂತೆ
ಮುನ್ನೆಡೆದ ಹಿಂದಾಕಿದ ದಾರಿಗಳ ದೂರಿ
ತಾನು ಮಾಡಿದ್ದೇ ಸರಿಯೆಂದು ಘೋಷಿಸಿಕೊಂಡ
ತನ್ನ ಬೆನ್ನಿಗೆ ಕಣ್ಣೇ ಇಲ್ಲದಂತೆ,
ತನ್ನೇದುರಿನ ರೂಪವನ್ನೇ ಬಿಗಿದಪ್ಪಿದ
ಕನ್ನಡಿಯೊಳ ಮೋಹವನ್ನೇ ಮರೆಮಾಚಿ
ಕಟು ಸತ್ಯಗಳ ಕೊಲೆಗೈದ
ಸಾಕ್ಷಿಯಾಗೊ ತನ್ನ ಕಣ್ಣುಗಳೇ ಇಲ್ಲದಂತೆ!!

21/09/201

^^^^^^^^^^^^^^^^^^^^^

ಕೆಲವೊಮ್ಮೆ 'ಕಳೆದೇ ಬಿಟ್ಟೆವು'
ಎಂದೆನಿಸುವಾಗ
ಮತ್ತೊಮ್ಮೆ ಸಿಕ್ಕದ್ದೇ ಆದಲ್ಲಿ
ಅದುವೇ ಸ್ನೇಹ ವಿಶ್ವಾಸಗಳು
ಪ್ರಾಮಾಣಿಕ ಮನಗಳದು!

15/09/2014

Monday, 22 September 2014



ಬಿಟ್ಟು ನಡೆಯುವರೆಲ್ಲಾ ನಡೆದುಬಿಡಲಿ,
ಜೊತೆಯಿದ್ದು ಕಸಿವಿಸಿಕೊಳ್ಳುವುದು ಬೇಡ!

**********************

ಓಡಿದಷ್ಟೂ ಹಿಂಬಾಲಿಸೊ
ಸೋಲುಗಳು;
ಗೆಲುವುಗಳಿಗೇ
ನಾವು
ಅನಿವಾರ್ಯವಾಗಿಸಿಬಿಡುವವು!

***********************

ಗುಂಪಿನಿಂದ ಓಡಿದ್ದು
ಇನ್ನು ಸಾಕು,,
ಗುಂಪಿಗೊಂದು ಒಳ ಕೊಂಡಿಯಾದರೂ
ಆಗೋ ಆಲೋಚನೆಯಿದೆ,,
ಮನಸಿಗಷ್ಟು ಕಸರತ್ತು, ...
ಚಿಂತನೆ
ಅರಳೊ ಹೊಂಬಣ್ಣಗಳ ತುಂಬಿಕೊಳ್ಳ
ಹೊಸ ಹೊಸ ಕಾಮನೆಗಳು ಮೇಳೈಸಿ
ಮೆರೆದಿದೆ ಮತ್ತೆ ಮತ್ತೆ ಮನವು
ಹೊರಳಿ ಬೆಳಕಿನೆಡೆಗೆ,,,


13/09/2014

*********************************

ಬಾಳೊಂದು ಭಾವಗೀತೆ, ಭರವಸೆಯೆ ಪಲ್ಲವಿ,,,, :-)

************************

ಎನ್ನ ಕನ್ನಡಿ
ಎನಗೇ
ಸೊಗಸೆನಿಸಿದಾಗ
ಜಗದ ಮಸುಕೆಲ್ಲಾ
ಸಹ್ಯ!

10/09/2014
*******************************

ಪ್ರಜ್ವಲಿಸೊ ಬೆಂಕಿ ಒಳಗೊಳಗೇ ಸುಟ್ಟಿದ್ದು
ಅರಿವಾಗುವುದು ಬೆಳಕು ನಂದಿದ ನಂತರವೇ,,!!

07/09/2014
**********************

ಮೆಚ್ಚಲು
ಮನಸ್ಸಿರಬೇಕು
ಕಣ್ಣೆದುರಿಗಿನ
ಸೊಗಸಿಗಿಂತ!!
ಮೊಸರೊಳ ಕಲ್ಲಾಗ...
ಇದ್ದರೂ ಮಾಯ!!!


06/09/2014

Saturday, 6 September 2014

ಗುರು,,


ಅಕ್ಷರಕೂ ಶಿಕ್ಷಕನಿಗೂ
ಅದೇನು ನಂಟೊ
ಒಂದಕ್ಷರವ ಕಲಿಸಿ
ಎರಡನೇಯದನ್ನು ನೀನೇ
ತಿದ್ದೆಂದ ಜೀವನವೂ
ಮಹಾ ಗುರುವೇ ಸರಿ,,

05/09/2014


'ವಿಚಿತ್ರ'ವೆಂದರೂ ಸರಿಯೆ
'ವಿಚಿತ್ರ'ದೊಳೊಂದು 'ಚಿತ್ರ'ವಿಹುದು
ಮುಂದೊಮ್ಮೆ ಚಿತ್ರವೆನಿಕೊಳ್ಳಲೂಬಹುದು
ವಿಚಿತ್ರವೂ ಹಲವು ತರತರ ಗೆರೆಗಳ ಹಾವಳಿಗೆ
ಬಣ್ಣಗಳು ತುಂಬಿ ಕಳೆಯುವ
ಲೆಕ್ಕಾಚಾರಗಳಿಗೆ,,

************************

ಅವರ ಗೆಲುವ ಸಹಿಸಲಾಗದವರು
ದೂರಿ ದೂರ ಸರಿಯುವರು
ಉದಯಿಸೊ ಸೂರ್ಯನೆದುರು
ರವರವ ಬೆಳಕ ದೊಡೆತಕೆ
ಕಣ್ಣು ತೆರೆಯದ ಅಸಹಾಯಕತೆಗೆ
ಬಿಸಿಲನೇ ದೂರಿ ಕಣ್ಣ ಮುಚ್ಚುವರು
ಕೈ ನೆರಳ ಆಸರೆ ಬಯಸಿ!

******************

ಆಸೆಗಳ ಮೀರುತ
ವೈರಾಗ್ಯ ಹತ್ತಿರಾಗಿ
ಬದುಕು ಮುಗಿವ ಮುನ್ನ
ಬದುಕಿಬಿಡುವ ಆಸೆಯು
ಭಗ್ನಗೊಂಡ ತಪ
ಮರುಭೂಮಿಯಿಂದ ಹೊರಟ
ಒಂದು ಪರಿಮಳ!

04/09/2014

ಕವನ

ಕನಸ ಬಲೆ,,,


ಕನಸ ಬಲೆಯ ಹೆಣೆಯುತ್ತಿದ್ದೆ
ಬಂಧಿಯಾಗುವ ಭಯವಾಗಿ
ನಡುವೆಯೇ ಕಣ್ಮರೆಯಾದ
ಈ ನಡುವೆ ಕನಸಿನ ಮಹಲು ನನ್ನದು
ರೂಪುಗೊಳ್ಳುತ್ತಿದೆ ಸುಂದರ
ಸಿಂಹಾಸನವೊಂದು ಖಾಲಿ
ಅದು ಅವನಿಗಾಗಿ ಕಾತರಿಸಲು,,
ಅವನಿಗಿನ್ನೂ ಭಯವಂತೆ
ಕಾರಣ
ಅವ ಬರುವ ಮುನ್ನ, ಬಂದ ನಂತರವೂ
ನನ್ನದೇ ಹೃದಯ ರಾಜ್ಯಭಾರ
ಅವನನೂ ಸೇರಿಸಿ... ;-)

04/09/2014

ಕವನ

ಆ ಮನ,,,


ಆ ಮನಕೆ
ಜೀವನದ ಸೌಂದರ್ಯವನ್ನು
ನಂಬಿಸುತ್ತಿದ್ದಳು
ಕರಿ ನೆರಳು,
ಕಳೆದ ಭಾವ
ಹೊಸಕಿದ ಕನಸಿನ ಪರಿವೆ
ಅವಳಿಗೂ ಇದ್ದ ಕಾಲ,

ಬೆಳಕು ಉರಿಯುತ್ತಿರಲು
ಕಣ್ಣಿಗೆ ಕಾಣದ ಗಾಳಿ
ಬೇಕಿದ್ದ ನೆಪವಿದೆ,,
ಬದುಕಲು ಒಳ ಒತ್ತಡವಿರಬೇಕು
ಪ್ರೀತಿಯಲಿ ತೇಲೊ ಹುಮ್ಮಸ್ಸಿರಬೇಕು
ಹುಟ್ಟು ಹಾಕಿ ದುಃಖಗಳನು
ಹಿಂದಾಕುತಾ ಮುಂದೆ ಸಾಗಬೇಕು..
ಆ ತೀರವ ಸೇರಲೆಂದು,, ಇಲ್ಲವೇ
ಮುಳುಗದೇ ಸಾಗಲೆಂದು,,
ಕರಿ ನೆರಳ ಹೀಗೊಂದು ನಿರೂಪಣೆ,,

02/09/2014


ನೀನೆಷ್ಟು ಬಚ್ಚಿಟ್ಟುಕೊಂಡರೇನು
ಮರದ ಮರೆಯಲಿ,
ನೀ ಹಿಂದಿರುಗಿ ನೋಡಿಯೇ ಇಲ್ಲ
ನಿನ್ನ ಬೆನ್ನಿಗೆ ನಾನೂ ಬಚ್ಚಿಟ್ಟುಕೊಂಡಿರುವೆ!

ಅವರ್ಯಾರು ನೋಡಿಲ್ಲ,,

***********************

"ಅವನು ಮತ್ತು ಕನಸು"

ನನ್ನ ಕನಸುಗಳನು ಪೋಣಿಸಿಕೊಳ್ಳಲು ಅವನಿಲ್ಲ,
ಆದರೂ ನನ್ನ ಕನಸುಗಳಿಗೆ ಕೊನೆಯೇ ಇಲ್ಲ
ಅವನೇ ಬಂದು ಪೋಣಿಸಿ ಎಣಿಸಿ ಮಾಲೆಯಾಗುವನು
ಎಂಬುದೇ ನನ್ನ ದೊಡ್ಡ ಕನಸು
ಕನಸುಗಳಿಗೀಗ ಬರವಿಲ್ಲ
ಎಲ್ಲಾ ಕನಸುಗಳಲೂ ಅವನೇ ಇರುವನಲ್ಲ
ಇದು ಮಾತ್ರ ಕನಸಲ್ಲ!

****************

ಪ್ರೀತಿಯಲಿ ಮುನಿದವರು
ಗಮನ ಸೆಳೆಯಲು ಜರಿದವರೇ
ಒಮ್ಮೊಮ್ಮೆ ಬಹುವಾಗಿ
ಇಷ್ಟವಾಗಿಬಿಡುವರು,,!

02/09/2014

***************

ನಡು ರಾತ್ರಿ ಕನಸಲಿ
ಹಸಿರು ತಂದವನೇ
ಕತ್ತಲೆಯ ಕಪ್ಪೊಳು
ನಿನ್ನ ನಿಶಾನೆಯ
ಗುರುತು ಹಚ್ಚಲಾಗಲಿಲ್ಲ
ಜತನದಿ ಹಗಲಾಗಿ ಬಾ
ನಾ ಹಗಲುಗನಸಿನವಳು!

01/09/2014

ಕವನ

ಕ್ಷಮೆ,,,,,


ಕ್ಷಮಿಸಿಬಿಡಬೇಕು ಅವರೆಲ್ಲರನೂ
ಚೂರಿ ಹಾಕದೆ ಕತ್ತು ಹಿಸುಕದೆ
ಜೀವವಿದ್ದೂ ಇಲ್ಲವಾಗಿಸಿ
ಒಳಗೊಳಗೇ ಒಸರೋ ರಕ್ತಕೆ
ಮದ್ದು ಮಾಡಿಕೊಳ್ಳಲಾಗದೆ 
ಕಂಬಗಳಂತೆ ನಮ್ಮ ನಿಲ್ಲಿಸಿದ 
ಆ ಅಷ್ಟೂ ಜನರನ್ನು,,
ಕ್ಷಮಿಸಿಬಿಡಬೇಕು,,

ಹೌದು ಕ್ಷಮಿಸಿಬಿಡಬೇಕು
ನಮ್ಮೊಳಗಿನ ಮೃದುತ್ವ ಕಳೆದು
ಕಲ್ಲೊಂದು ಜೀವ ತಳೆದು
ದಿನ ಬೆಳಗಾಗುತ್ತಲೆ
ಕಣ್ಣೀರ ಇಂಗಿಸಿ ನಿಂತ
ನಮ್ಮದೇ ಮುಖವು 
ಭಾವಗಳ ಗೆರೆಗಳಳಿಸಿ
ನಗುವನ್ನೊಂದು ಚಿನ್ಹೆ ಮಾಡಲು
ಕಲಿಸಿದ ಆ ಎಲ್ಲಾ ಜನರನೂ
ಕ್ಷಮಿಸಿಬಿಡಬೇಕು,,,

ಕ್ಷಮಿಸಿಬಿಡಬೇಕು
ಹೆಜ್ಜೆ ಹೆಜ್ಜೆಗೂ ಕಾಲೆಳೆದ
ಇದ್ದ ಇರದ ಸುಳ್ಳ ಸೃಷ್ಠಿ ಮಾಡಿ
ಹೊರಗೆಳೆದ ನಮ್ಮ ವಿನೂತನ ಶಕ್ತಿಗಾಗಿ
ನಮ್ಮ ನಾವೇ ಹೆಮ್ಮೆಯ ಸವಾಲುಗಾರರಾಗಿ
ಕಾಣೊ ಅವಕಾಶಗಳ ನೀಡಿದ ಜನರನು
ಕ್ಷಮಿಸಿ ಹಾರೈಸಿ ಬಿಟ್ಟುಬಿಡಬೇಕು,,
ಬೇಕೆಂದರೂ ಸುಳಿವು ಸಿಗದಂತೆ
ಪ್ರೀತಿಯನು ದ್ವೇಷಿಸಿದ ಅವರಿಂದ
ದೂರ ದೂರ ನೆಡೆದು,,,

01/09/2014


ಜೀವನದ ದುರಂತಗಳನ್ನೆಲ್ಲಾ ಬಿಚ್ಚಿಡಬೇಕಿರಲಿಲ್ಲ
ಸೋಗಸೇನಿಲ್ಲ ನಿನ್ನಲಿ ಎನ್ನುವೆಯೇನೋ
ಎಂದಷ್ಟೇ ಹರಿದುಬಿಟ್ಟೆ ಅಂದು ಪದಗಳಲಿ

***********************

ಚಿಕ್ಕ ಮಗುವು ಕೈಯೊಳಿಂದ
ನವಿಲು ಗರಿಯ
ಕಿತ್ತುಕೊಂಡು ಓಡುವಂತೆ
ನೀ ನನ್ನಿಂದ ಮಾತುಗಳ
ಸೆಳೆದುಕೊಂಡು ಹೋದೆ,
ಮರಳಿಸುವುದಾದರೂ ಎಂದು?
ಹೇಳಿ ಹೋಗಬಾರದಿತ್ತೆ?!,,,,

**************************

ಚಿಗುರೋ ಹೃದಯಕೆ
ಏನೇನೋ ಆಸೆಗಳು ಕನಸುಗಳು,
ಪ್ರೀತಿ ಪ್ರೇಮ ಕನವರಿಕೆಗಳು,
ಅನಿರೀಕ್ಷಿತ ಹೊಡೆತಕೆ
ಜೀವನ ರಾಗ ಏರುಪೇರು,,
ದುಃಖ ಉಮ್ಮಳಿಸಲು
ಕಣ್ಣೀರ ಸುರಿಸಲಾರದ ಮೂಕ,,
ಕಣ್ಣಿರಿಗೆ ಮುತ್ತೋ ಧೂಳುಗಳ ಕಾರಣ
ಬತ್ತಿಸಿಕೊಳ್ಳೊ ಕೊಳಗಳ ಮಾಲೀಕರು!!
ಜೀವನವೊಂದು ನಾಟಕ,,
ನಗುವೊಂದು ಸಾಧನವದದ್ದು ವಿಪರ್ಯಾಸ,,

31/08/2014

************************************

ಬೆನ್ನ ಹಿಂದೆ ನಿಂತು ಎಷ್ಟು ಆಟವಾಡುವೆಯೋ ಕೃಷ್ಣ
ನವಿಲು ಗರಿಗಳೆಲ್ಲಾ ಚೆಲ್ಲಾಪಿಲ್ಲಿ ನೋಡು
ಮಡಿಕೆ ಬೆಣ್ಣೆಯೂ, ದೇವಕಿಗೆ ಮೊದಲೇ ತಿಳಿದಿತ್ತೋ ಏನೋ
ನಿನ್ನ ತುಂಟತನ ಅದಕೆ ನನಗೆ ವಹಿಸಿದಳು ನಿನ್ನ,,

*****************

ಇಲ್ಲ ಇಲ್ಲವೆಂದೇ ಕಳೆದೆ
ನಿನ್ನ ಇರುವಿಕೆಯ ಲೆಕ್ಕಿಸದೆ,
ಹೃದಯವಿರುವುರಾದರೂ ಹೇಗೆ
ಮಿಡಿಯುತ ನೀ ನಿಲ್ಲದೆ,,

30/08/2014