"ಇಂದು ನೆನ್ನೆಗೆ ನಾಳೆಯಾದವನು"
ಮಿಣುಕು ಹುಳುಗಳು
ಮಿನುಗಿ ಕರೆದಾವೊ
ಅಗೋ, ಆಗೊಂದು ಈಗೊಂದು
ಕತ್ತಲಿನೂರಿನೊಳು
ಗುಡಿಸಲ ಅಂಚಿನೆದೆಯಲಿ
ಇಣುಕಿ ಇಣುಕಿ ನೋಡಿವೆ
ಪಿಳಿಪಿಳಿ ಕಣ್ಣುಗಳು
ಅದೇನೋ ಹೊಳಪು,
ಅದೇನೋ ಹುರುಪು
ಈ ಕಾಡಿನೂರಿನಲಿ
ಹೀಗೊಂದು ನಡುರಾತ್ರಿಯ
ಮಿಂಚಿನ ಬೆಳಕು ಕರೆದಿಹುದು
ಬಡವನ ನೆತ್ತಿಯ
ಕಣ್ಮಣಿಗಳ ಸೆಳೆಸೆಳೆದು
ಅಂಧಕಾರವ ಮೆಟ್ಟಿ ನಿಂತಿದೆ
ಅದೋ, ಆ ಮಣ್ಣಿನ ಹಣತೆ
ಪಕ್ಕದೂರಿನ ಬೀದಿ ಬೀದಿಯ
ಕೊನೆಯ ತಿರುವುಗಳಲಿ
ಸಾಲುಗಟ್ಟಿ ನಿಂತಿಹವು ಕೈಗಳು ಕೈಚಾಚಿ
ಪಟ್ಟಣವೆಂಬೊ ಸಂತೆಯಲಿ
ಜಾತಿಯ ಹಣೆಪಟ್ಟಿಗಳು ಕಾಲೆಳೆದು ಮೆರೆದಿದೆ
ಮೌಢ್ಯತೆಯ ಕೆಸರಿನಲಿ ಹುದುಗಿಸಿ ಇಳಿಸಿ, ಇಲ್ಲವಾಗಿಸಿ..
ಕರೆದಿದೆ ಹಣತೆ, ತೇಲಿದೆ ಕಣ್ಣು
ಕತ್ತಲೊಳು ಕೈ ತಡವಿ
ಮುಟ್ಟಿದೆಲ್ಲವೂ ಕಿಚ್ಚು, ಸುಟ್ಟವೋ ಬೆರಳುಗಳು
ಕಪ್ಪು ಚರ್ಮದ ಜನರನು ಕತ್ತಲೆಯು ಹೀರಿ..
ಬೆಂಕಿಯನೇ ನುಂಗಿ,
ಬೆಂಕಿಯನೇ ಉಗುಳಿ
ಮೂಡಿ ಬಂದ ಸೂರ್ಯ
ಈ ಕತ್ತಲ ಕಾಡಿಗೆ ಹಗಲಾಗಿ
ಮಿಂಚು ಹುಳುಗಳು-ದಾರಿ ದೀಪಗಳನೂ ಮೀರಿ
ಎಲ್ಲರೆದೆಯಲಿ ಅರಿವ ಬೆಳಕ ತಂದ
ಹಾದಿ ಬೀದಿಗೂ ಎದುರುಗೊಂಡು
ಹುಡುಕಿ ಬಂದ ನೀಡ ಬಂದ
ಕಾಡು-ನಾಡೆಂಬ
ಭೇದವೆಣಿಸದೆ ಸುತ್ತಿ
ದಣಿದು ಮಣಿದು ಬಂದ
ಪಂಜುಗಳ ಹಿಡಿದು
ಎಲ್ಲಾ ಎಲ್ಲೆಯ ಮೀರಿ ಬಂದ
ನಟ್ಟ ನಡುರಾತ್ರಿಗಳ ಲೆಕ್ಕಿಸದೆ
ದೀಪಕೆ ದಾರಿಯಾಗಿ ಬಂದ
ಮೋಕ್ಷದೆಡೆಗೆ ಹೊರಟು ನಿಂತು
ಪ್ರೀತಿಯೆಡೆಗೆ ನುಗ್ಗಿದ
ಜನಮನಕೆ ಸೌಹಾರ್ದತೆಯೇ ಆಗಿ
ತಾನೇ ಉರಿದು ಬೆಳಕಾಗುಳಿದ
ಙ್ಞಾನನಿವನು, ಅರಿವಿನ ಜ್ಯೋತಿಯು
ಉದಯವುಂಟು ಇಲ್ಲ ಅಸ್ತಮವು
ತೇಜಸ್ಸಿನೊಳು ಸೂರ್ಯನಿಗೆ ಅಣ್ಣನು ,
ತಂಪಿಗೆ ಚಂದ್ರನ ತಮ್ಮನು
ವಿದ್ಯೆಗೆ ಪ್ರೀತಿಯು
ಕ್ರಾಂತಿಯ ತಿಳಿನೀರ ಹರಿವು
ರಾತ್ರಿಯ ಗೆದ್ದು ಹಗಲನು ದಕ್ಕಿಸಿಕೊಂಡವನು
ಇವನು ಪ್ರೇರಣೆಯು, ಅರಿವಿನ ಬುತ್ತಿಯು
ಬಡವನೆದೆಯ ಕಂದನ ಕಣ್ಣೀರಿಗೆ
ಕಾಂತಿ ತುಂಬಿದವನು
ಸುಟ್ಟ ಬೆರಳುಗಳ ಕಪ್ಪು ಜನರಿಗೆ
ಬೆಳದಿಂಗಳ ತನುವು ನೀಡಿದವನು
ದೀಪದ ಬುಡದ ಕತ್ತಲ ಕದ್ದು
ದೀವಿಗೆಯ ಷರಾ ತಿದ್ದಿದವನು
ಅಳಿದರೂ ಮುಗಿಯದ
ಹಾಡ ಕಟ್ಟಿ ಹೋದವನು
'ಇಂದು ನೆನ್ನೆಗೆ ನಾಳೆಯಾದವನು'..
ಬುದ್ಧನಿವನು..
ಮಾನವೀಯತೆಯ ಕ್ಷೀರ ತುಂಬಿಕೊಂಡು
ಜಗಕೆ ತಾಯಿಯಾದವನು…
ದಿವ್ಯ ಆಂಜನಪ್ಪ
09/12/2015
No comments:
Post a Comment