Tuesday, 5 January 2016

ಸತ್ಯಗಳೇ ಇಷ್ಟ
ಕಹಿಯೇ ಆದರೂ

ಎಷ್ಟೋ ಜನರು
ಸಕ್ಕರೆಯನ್ನೇ ಅರಗಿಸಿಕೊಳ್ಳಲಾರದೆ
ಕಹಿಯನ್ನೇ ಸಿಹಿಯೆಂದು 
ಸವಿಯುತ್ತಿರುತ್ತಾರೆ
ಆರೋಗ್ಯಕ್ಕೆ ಒಳ್ಳೆಯದೆಂದು..

ಹಾಗಿದ್ದಾಗ ನನ್ನದೇನು..?
ಈಗಿನಿಂದಲೇ ಹಾಗಲ ಕಹಿ
ರೂಢಿಯಾದರೆ..?!

05/01/2016
ಅತೀ ಪ್ರೀತಿಯಿಂದ
ಕೊಟ್ಟಷ್ಟು ಮುತ್ತುಗಳಿಗೆ
ಕಾರಣಗಳು ಹುಟ್ಟಿದಾಗ
ಒಲುಮೆಯ ಕಂದನತ್ತು ಸೊರಗಿದ
ಕಂಗಾಲಾದ ಮುತ್ತಿನೊಡತಿ
ತೊಟ್ಟಿಲ ತೂಗುವುದ ನಿಲ್ಲಿಸಿ
ಕಾರಣಗಳ ಹುಟ್ಟಿನ ಕಾರಣಗಳ ಜಾಡ ಹಿಡಿದು
ಎಲ್ಲಿಗೋ ಹೊರಟಳು..
ಮಗುವಿನ ಅಳುವಿಗೆ ಕಿವಿ ಕೈ ಇಲ್ಲ...


********


ದಿಕ್ಕಿಲ್ಲದೆ ಸಾಗುವ ಮಾರ್ಗ
ದಿಕ್ಕಿಲ್ಲದೆ ಸಾಯುವ ಕನಸು
ಮುಟ್ಟೀತೇನೋ ಮುಟ್ಟಿಲ್ಲದೂರುಗಳ
ತಟ್ಟೀತ್ತೇನೋ ದಿಕ್ಕಿಲ್ಲದ ದ್ವೀಪಗಳ..

*******

ಕಾತರಿಸುವವರ ಕೈಗೆ ಸಿಗದೆ
ತಪ್ಪಿಸಿಕೊಂಡ ಚಿಟ್ಟೆಯೇ
ಗೆಲುವೆಂದುಕೊಂಡ ನಿನ್ನ ಸೋಲು
ಹೂವೇ ಚಿಮ್ಮಿತು ನಿನ್ನ ಕಾಲು ಕಿತ್ತು
ರೆಕ್ಕೆಯಲಿದ್ದಷ್ಟು ಹೊತ್ತು ತ್ರಾಣ
ನಿನ್ನ ಹಾರಾಟ ಆಯಸ್ಸು 
ಮಾಸದ ಸೌಂದರ್ಯವಿಟ್ಟುಕ್ಕೊಂಡು 
ಸುಂದರವಾಗಿ ಸಂಗಾತಿಯಿಲ್ಲದೆ ಸಾಯುವ
ನಿನ್ನ ಒಂಟಿತನಕೆ ಸೆಡವು ಎನ್ನಲೇ ಗತ್ತೋ ಇಲ್ಲ ಮುಗ್ಧತೆಯೋ... 
ಅಂತು ನಿನ್ನ ನಂಬಿಕೆಗೆ ಸಾವಾಯ್ತು... 
ನಿಷ್ಟೆಗಳಿಗೆ ನಷ್ಟದ ಹೂರಣವಾಗಿ...

31/12/2015

ಪದ್ಯ

ಒಗಟು

ಒಗಟೊಂದನು ಕಟ್ಟಿ ಹೇಳಬೇಕೆಂದಿತ್ತು
ಗಟ್ಟಿ ಕಾಳುಗಳಿರಲಿಲ್ಲ
ಆಯ್ದು ಹೊತ್ತ ಹೊತ್ತುಗಳಲ್ಲಿ
ಒಗಟಾದ ಘಳಿಗೆಗಳೇ ಎಲ್ಲಾ
ಬಿಡಿಸಿಕೊಂಡು ಒಗಟು
ಹೊಂದಿಕೊಳ್ಳಬೇಕಿತ್ತು ಮನಸ್ಸು
ನಾ ಒಗ್ಗಲಿಲ್ಲ
ಮನಕ್ಕೆಲ್ಲಾ ಒಗಟೇ ಆಯ್ತಲ್ಲ

ಬೀಜವೊಂದ ಕಂಡು
ಭವಿಷ್ಯ ಹೇಳಬೇಕಿತ್ತು
ಮರದ ಆಕಾರ, ಗಾತ್ರ, ಆಯಸ್ಸು
ಮತ್ತು ಒನಪು-ವೈಯ್ಯಾರ
ನಾ ಕಾಲ ಙ್ಜಾನಿಯಲ್ಲ
ಎಲ್ಲಾ ತಿಳಿದೇ ನಡೆಯಲಿಲ್ಲ

ಎದೆ ತಟ್ಟಿತೊಂದು ಸಸಿಯ
ಆಸ್ತೆವಹಿಸಿ ಅಂಗಳಕ್ಕಿಟ್ಟೆ
ಬಳ್ಳಿಯಾಯ್ತು ಬದುಕೂ
ಹಬ್ಬಿದಂತೆ ತೆಕ್ಕೆ ಕೊಟ್ಟೆ
ಹರಡಿ ಹಿಡಿದು ಅಸ್ತಿಗೆ ಅಂಟಿದೆ

ಹಬ್ಬುವಾಗ ತಿರುವಿದಾಗ
ಉಳುಕು ಚಳಕು
ದೂರ ದೂಡಿ ಕಾಡುವಾಗ
ಮೂಳೆ ಮುರಿದ ನೋವು
ಬಾಯ್ಬಿಟ್ಟು ಚೀರಿಬಿಟ್ಟರೆ 
ಕೇಳುವುದು ಈ ಪ್ರಶ್ನೆಯ
ಬೀಜ ಭವಿಷ್ಯವಿತ್ತೇ ಮೊದಲೆ
ಇಲ್ಲದಿದ್ದರೆ ನಿನ್ನದದು ಮರುಳೇ ಮರುಳೇ..

.............
............. 
ಒಗಟು ಕಟ್ಟಬೇಕಿತ್ತು
ಒಗಟ ಬಿಡಿಸಬೇಕಿತ್ತು
ಎಷ್ಟು ಕಟ್ಟುವೆಯೋ ಎಷ್ಟು ಬಿಡಿಸುವೆಯೋ
ಹಬ್ಬಿದ ಮರಬಳ್ಳಿ ಸಾಲು ಸಾಲು ಗೂಡು ಕಟ್ಟಿದೆ
ಈ ಒಗಟುಗಳೋ 
ಚೀರಿ ಕೇಳುತ್ತಲಿವೆ
ಒಗಟ ಬಿಡಿಸದೆ ನಾನೂ ಅಲ್ಲೇ ನಿಂತೆ ಸಾಲಿಗೆ....

28/12/2015




ಈ ಮೌನ
ಪ್ರಯೋಗದ ಮುನ್ನದ 
ಬಾಂಬಿನಂತೆ
ಎಲ್ಲಿ ಹೇಗೆ ಸಿಡಿವುದೋ
ಕಾತುರ..
ಅಷ್ಟೇ ಆತಂಕ
ಗದ್ದಲ ಹೆದರಿಸಿದರೆ
ಮೌನಕ್ಕೆ ತತ್ತರಿಸುವೆ
.......
ತಲ್ಲಣಿಸಿ
ಇಲ್ಲದ ಮಾತುಗಳನ್ನೆಳೆದು
ತಬ್ಬುವೆ
ಸಂತೆಯೊಳಗೆ
ನೆಮ್ಮದಿಯಿಂದ
ನಿದ್ದೆಗೆ ಜಾರುವೆ


********


ಇಂತದ್ದೆ ಗುರಿ
ಎಂದಿದ್ದು ಬಿಟ್ಟರೆ
ಅದು ದಕ್ಕಿಯೂಬಿಟ್ಟರೆ
ಯಾರೂ ಸಾವಿಗೆ ಅಂಜುತ್ತಿರಲಿಲ್ಲ
ಎಲ್ಲರಿಗೂ ಸ್ವರ್ಗದಂತಹ ಸಾವು 
ಭೂಲೋಕದಲ್ಲೇ....

26/12/2015

ಪದ್ಯ

"ಇಂದು ನೆನ್ನೆಗೆ ನಾಳೆಯಾದವನು"

ಮಿಣುಕು ಹುಳುಗಳು
ಮಿನುಗಿ ಕರೆದಾವೊ
ಅಗೋ, ಆಗೊಂದು ಈಗೊಂದು
ಕತ್ತಲಿನೂರಿನೊಳು

ಗುಡಿಸಲ ಅಂಚಿನೆದೆಯಲಿ
ಇಣುಕಿ ಇಣುಕಿ ನೋಡಿವೆ
ಪಿಳಿಪಿಳಿ ಕಣ್ಣುಗಳು

ಅದೇನೋ ಹೊಳಪು, 
ಅದೇನೋ ಹುರುಪು
ಈ ಕಾಡಿನೂರಿನಲಿ 
ಹೀಗೊಂದು ನಡುರಾತ್ರಿಯ 
ಮಿಂಚಿನ ಬೆಳಕು ಕರೆದಿಹುದು 
ಬಡವನ ನೆತ್ತಿಯ 
ಕಣ್ಮಣಿಗಳ ಸೆಳೆಸೆಳೆದು

ಅಂಧಕಾರವ ಮೆಟ್ಟಿ ನಿಂತಿದೆ
ಅದೋ, ಆ ಮಣ್ಣಿನ ಹಣತೆ
ಪಕ್ಕದೂರಿನ ಬೀದಿ ಬೀದಿಯ 
ಕೊನೆಯ ತಿರುವುಗಳಲಿ

ಸಾಲುಗಟ್ಟಿ ನಿಂತಿಹವು ಕೈಗಳು ಕೈಚಾಚಿ
ಪಟ್ಟಣವೆಂಬೊ ಸಂತೆಯಲಿ
ಜಾತಿಯ ಹಣೆಪಟ್ಟಿಗಳು ಕಾಲೆಳೆದು ಮೆರೆದಿದೆ
ಮೌಢ್ಯತೆಯ ಕೆಸರಿನಲಿ ಹುದುಗಿಸಿ ಇಳಿಸಿ, ಇಲ್ಲವಾಗಿಸಿ..

ಕರೆದಿದೆ ಹಣತೆ, ತೇಲಿದೆ ಕಣ್ಣು
ಕತ್ತಲೊಳು ಕೈ ತಡವಿ
ಮುಟ್ಟಿದೆಲ್ಲವೂ ಕಿಚ್ಚು, ಸುಟ್ಟವೋ ಬೆರಳುಗಳು
ಕಪ್ಪು ಚರ್ಮದ ಜನರನು ಕತ್ತಲೆಯು ಹೀರಿ..

ಬೆಂಕಿಯನೇ ನುಂಗಿ, 
ಬೆಂಕಿಯನೇ ಉಗುಳಿ
ಮೂಡಿ ಬಂದ ಸೂರ್ಯ 
ಈ ಕತ್ತಲ ಕಾಡಿಗೆ ಹಗಲಾಗಿ

ಮಿಂಚು ಹುಳುಗಳು-ದಾರಿ ದೀಪಗಳನೂ ಮೀರಿ
ಎಲ್ಲರೆದೆಯಲಿ ಅರಿವ ಬೆಳಕ ತಂದ
ಹಾದಿ ಬೀದಿಗೂ ಎದುರುಗೊಂಡು
ಹುಡುಕಿ ಬಂದ ನೀಡ ಬಂದ

ಕಾಡು-ನಾಡೆಂಬ
ಭೇದವೆಣಿಸದೆ ಸುತ್ತಿ
ದಣಿದು ಮಣಿದು ಬಂದ
ಪಂಜುಗಳ ಹಿಡಿದು 
ಎಲ್ಲಾ ಎಲ್ಲೆಯ ಮೀರಿ ಬಂದ
ನಟ್ಟ ನಡುರಾತ್ರಿಗಳ ಲೆಕ್ಕಿಸದೆ
ದೀಪಕೆ ದಾರಿಯಾಗಿ ಬಂದ

ಮೋಕ್ಷದೆಡೆಗೆ ಹೊರಟು ನಿಂತು
ಪ್ರೀತಿಯೆಡೆಗೆ ನುಗ್ಗಿದ
ಜನಮನಕೆ ಸೌಹಾರ್ದತೆಯೇ ಆಗಿ 
ತಾನೇ ಉರಿದು ಬೆಳಕಾಗುಳಿದ

ಙ್ಞಾನನಿವನು, ಅರಿವಿನ ಜ್ಯೋತಿಯು
ಉದಯವುಂಟು ಇಲ್ಲ ಅಸ್ತಮವು
ತೇಜಸ್ಸಿನೊಳು ಸೂರ್ಯನಿಗೆ ಅಣ್ಣನು , 
ತಂಪಿಗೆ ಚಂದ್ರನ ತಮ್ಮನು

ವಿದ್ಯೆಗೆ ಪ್ರೀತಿಯು 
ಕ್ರಾಂತಿಯ ತಿಳಿನೀರ ಹರಿವು
ರಾತ್ರಿಯ ಗೆದ್ದು ಹಗಲನು ದಕ್ಕಿಸಿಕೊಂಡವನು
ಇವನು ಪ್ರೇರಣೆಯು, ಅರಿವಿನ ಬುತ್ತಿಯು

ಬಡವನೆದೆಯ ಕಂದನ ಕಣ್ಣೀರಿಗೆ
ಕಾಂತಿ ತುಂಬಿದವನು
ಸುಟ್ಟ ಬೆರಳುಗಳ ಕಪ್ಪು ಜನರಿಗೆ
ಬೆಳದಿಂಗಳ ತನುವು ನೀಡಿದವನು
ದೀಪದ ಬುಡದ ಕತ್ತಲ ಕದ್ದು
ದೀವಿಗೆಯ ಷರಾ ತಿದ್ದಿದವನು

ಅಳಿದರೂ ಮುಗಿಯದ 
ಹಾಡ ಕಟ್ಟಿ ಹೋದವನು
'ಇಂದು ನೆನ್ನೆಗೆ ನಾಳೆಯಾದವನು'..
ಬುದ್ಧನಿವನು..
ಮಾನವೀಯತೆಯ ಕ್ಷೀರ ತುಂಬಿಕೊಂಡು
ಜಗಕೆ ತಾಯಿಯಾದವನು…

ದಿವ್ಯ ಆಂಜನಪ್ಪ
09/12/2015

ಪದ್ಯ

ನೇವರಿಸಿಕೊ ನಿನ್ನೆದೆಯ..


ನಿನಗೆ ಗೊತ್ತು
ನಾನು ರಾಜಿಯಾಗಲು 
ಕಾಯುತ್ತಿರುತ್ತೇನೆಂದು

ಗೊತ್ತಿದೆ ನಿನಗೆ
ನಾನು ಮೈಬಿಚ್ಚಿ ನನ್ನನ್ನಾವರಿಸಿಕೊಳ್ಳಲು 
ಕಾತುರಳೆಂದು

ಗೊತ್ತಿದೆ ನಿನಗೆ
ನಾನು ನಿನ್ನಲಿ ಕರಗಿ ಕಳೆದು ಹೋಗಲು
ಜಾರುತ್ತಿರುತ್ತೇನೆಂದು

ಆದರೂ ನೀ
ಕಾಯಿಸಿ ಬೇಯಿಸಿ ಕಳೆಯದೆ
ಕೈಲಿ ಹಿಡಿದು ಕಾಡುತ್ತೀಯ

ಕೈಯೆತ್ತಿ ನಿನ್ನ ಅಂಗೈಯಿಂದೊಮ್ಮೆ 
ನೇವರಿಸಿಕೋ ನಿನ್ನದೆಯ
ನಾನು ನಿನ್ನೊಳು
ಜಾರಬೇಕಿದೆ ಕಳೆದು ಹೋಗಬೇಕಿದೆ
ರಾಜಿಯಾಗಿ ಹೊಳೆಯಬೇಕಿದೆ

13/12/2015

ಪದ್ಯ


ಪದ್ಯ


ಅವಳ ಬೆಂಕಿಯ ದೇಹದ ಹಬೆಯೂ
ನನ್ನ ತಾಗಬಾರದೆಂದು ಹೊರಟು ದೂರ ಬಂದಿದ್ದೆ
ದ್ವೇಷವಿರಲಿಲ್ಲ ನನಗೆ

ಅವಳು ಅಂಗಲಾಚುವಾಗಲೂ ಕರಗದ ನಾನು
ನಾನಾಗಿರದೆ ಕುದಿಕೊಂಡು ಮುನಿದಿದ್ದೆ
ಅವಳನು ರಮಿಸದೆ ಮತ್ತೂ ಕಂಗೆಡೆಸಿ ಕೆಂಡವಾಗಿದ್ದೆ

ದ್ವೇಷಿಸದಿರೆಂದು ಕೂಗಿ ಬಂದಳು
ನಾನು ದ್ವೇಷಿಸುತ್ತಿರಲಿಲ್ಲ..
ಮೌನವಹಿಸಿದ್ದೆ.. 

ಅವಳಿಗೆ ಉತ್ತರವನೂ ಹೇಳಲಾಗದೆ 
ಮತ್ತಿನ್ನೆಲ್ಲೋ ಕರಗಿದಂತೆ ಉಳಿದೆ
ಅಸಲಿಗೆ ಕರಗಿರಲಿಲ್ಲಿ

ಕಳೆದೇ ಹೋಗಿದ್ದೆ 
ನಾನವಳಿಂದ ಓಡುವ ಓಟದ ದಾರಿಯಲ್ಲೆಲ್ಲೊ
ನನ್ನ ಮುಟ್ಟುವ ಅವಳ ದಾರಿಗಳನೆಲ್ಲಾ ಮುಚ್ಚುತ್ತಾ

ನಾನೆಷ್ಟು ದೂರವೆಂದರೆ
ಅವಳು ಪಕ್ಕದಲ್ಲೇ ಸುಳಿದರೂ
ನನ್ನ ಕಣ್ಣು ಕರೆದರೂ
ಅವಳದು ನಿರ್ಭಾವುಕ ನೋಟ

ಅವಳ ಈ ಕ್ಷಮಿಸೋ ಕಣ್ಗಳು
ನನ್ನನು ಸಾವಿರ ಬಾರಿ ಇರಿಯುತ್ತಿತ್ತು ತಣ್ಣಗೆ..
ನಾನು ಹಬೆಗೆ ಕಲ್ಲಾಗಿದ್ದೆ

09/12/2015