Saturday, 25 October 2014

ಕವನ

ಶಿಥಿಲ ಶಿಲೆಗಳು....



ಬಂಧಿಸಿಕೊಂಡಷ್ಟು ಭಾವಗಳು
ಹರಿದುಬಿಡಲು ತವಕಿಸುತ್ತವೆ
ಕುರುಡಾಗಿ ಎಲ್ಲೆಂದರಲ್ಲಿ ನುಗ್ಗುವಂತೆ
ಒಳ ಒತ್ತಡವಿರುವಂತೆ!

ಹರಿದುಬಿಡುವ ಭಾವಗಳಿಗೆ

ಹಗುರಾಗುವ ಅವಸರಗಳು
ಕೊರೆದ ನೆಲಗಳ
ಪರಿವೆಯೇ ಇಲ್ಲದಂತೆ!

ಹರಿದು ಕೊಟ್ಟ ಮಣ್ಣ ನೆಲಗಳಿಗೆ

ಕಳೆದುಕೊಂಡ ಭಾವ
ಜೊತೆ ಸಾಗಲಾರದ ಜಿಗುಪ್ಸೆ
ಕಣ್ಣೀರಿಲ್ಲದ ಕಣ್ಣಂತೆ!

ಮನಸೇ ಇಲ್ಲದ ಧಾರೆಗಳಿಗೆ

ಮನಸುಕೊಟ್ಟು ಪಡೆವ ವೇದನೆ
ಕೊರೆತ ಸಹಿಸಿ ಕತ್ತಲ ಕೂಪಕ್ಕಿಳಿವ
ಮೌನ ರೋದನದಂತೆ!

ಭದ್ರವಾಗಿ ಆಳಕ್ಕಿಳಿವ ಭಗ್ನ ಮನಸುಗಳಿಗೆ

ನೆಲದ ಮೇಲೆ ಇದ್ದ ನಿಶಾನೆಯೇ ಇಲ್ಲ
ಕೊರೆತವೆಲ್ಲಾ ಅಳಿಸಿಕೊಂಡು ಉಳಿವ
ಭೂಗರ್ಭದ ಕಲ್ಲು ಚಪ್ಪಡಿಗಳಂತೆ

ಎಂದೋ ಯಾವುದೋ ಮನಸುಗಳಿಗೆ

ಇನ್ನಿಲ್ಲದ ಶ್ರಮದ ಫಲವಾಗಿ
ಸಿಗಿದು ಪಡೆವ ಪುರಾತನ
ಶಿಥಿಲ ಶಿಲೆಗಳಂತೆ ಮತ್ತವು
ಅಮೂಲ್ಯವಂತೆ!

25/10/2014

No comments:

Post a Comment