ಕಣ್ಣಿಗೆ ಬಿದ್ದು ಬಿದ್ದೂ
ಕಣ್ಣು ಕೆಂಪಗಾಯಿತು
ಮನಸು ವಿಕಲವಾಗಿ
ನಾಲಿಗೆ ಹರಿತವಾಯಿತು!
##################################
ಒಳ್ಳೆಯತನ ಎಂಬುವುದು ಹೆಚ್ಚು ಮಾತನಾಡದು
ತನ್ನತನವ ಸಾಬೀತುಪಡಿಸಿಕೊಳ್ಳಲು ಹೆಣಗಬಾರದು
ಮೂಕಿಯಾಗಿದ್ದ ಬಹಳಷ್ಟು ಸಂದರ್ಭ ನಾ ದ್ವೇಷಿಸಲ್ಪಟ್ಟಿದ್ದೆ
ಮಾತು ಬಾರದ ಕಾರಣ ನಿಂದನೆಗೊಳಗಾಗಿದ್ದೆ
ಇಂದು ನನಗೆ ಮಾತು ಬರುವುದು, ವಾದವೂ ನಡೆವುದು
ಆದರೂ ಒಳ್ಳೆಯತನವೆನಿಸಿಕೊಳ್ಳಲಿಲ್ಲ ಅಹಂ ಎನಿಸಿಬಿಟ್ಟಿತು
ತನ್ನ ತಾ ಸಾಧಿಸಿಕೊಳ್ಳೋ ಹಟ, ಸುಳ್ಳಲ್ಲದ ನಾನು ನಿಜವಾಗುಳಿವ ಛಲ
ಅವರಿಗದು ಬೇಡದ ವಿವರ, ಅವರಿಗೂ ಇಂತಹುದೇ ಹುಚ್ಚು
ನಾನು ಸೋತು ಮತ್ತೆ ಸೋತೆ, ಗೆಲ್ಲುವವರು ಗೆಲ್ಲುತಲೇ ನಿಂದರು ಬೆನ್ನ ಹಿಂದೆ,
################################
ಇನ್ನೇನು ದಡ ಸಿಕ್ಕಿತು
ಎನ್ನುವಷ್ಟರಲ್ಲಿ
ಅಲ್ಲಿಯೇ ಸಿಕ್ಕಿಕೊಂಡೆ
ಸುಳಿಯೊಳಗೆ
ಕಾಡಿದ್ದ ಕಾದಿದ್ದ ಹುಡುಗ
ಬೆಚ್ಚಿ ನಿಂತಿದ್ದ
ದಡದ ಗೋಡೆಯಂತೆ,
ನಾ
ಎರಚಿ ಹೋದ ನೀರಿಗೆ
ಕ್ಷಣಕಾಲದ ಚಿತ್ತಾರಕೆ!
###############################
ನಿಮ್ಮ ಹೊಸ ನೋವಿಗೆ
ನಾನು ಕಾರಣಳಲ್ಲ
ಹಾಗೆಯೇ
ನನ್ನ ಹಳೆಯ ನೋವಿಗೆ
ಹೊಸ ನಗುವಿಗೆ
ನೀವು!
#################################
ಎಷ್ಟು ಅದುಮಿಟ್ಟರೂ ಗತದ ಮಣ್ಣ್ಯಾಕೊ ಸಡಿಲ,
ಎದ್ದು ಬಂದು ಎದುರು ನಿಲ್ಲುತ್ತವೆ ಒಡೆದ ನನ್ನ ಬಿಂಬಗಳು!
ಕನ್ನಡಿ ಮಾತ್ರವೇ ನನ್ನದು
ಆಗಾಗಷ್ಟು ಸ್ಪಷ್ಟ
ಕಣ್ಗಳು ಎಂದಿನಂತೆ ಮಂಜೆ!
29/10/2014
################
ಭೀಕರ ಕತ್ತಲೊಳಗೆ
ಮೋಹದ ಮಂದ ದೀಪವ ಹಿಡಿದು ನಡೆವುದು
ಎಷ್ಟು ಕಷ್ಟವೋ!
ಅವನೊಬ್ಬ ನಡೆದಿರುವನು,
ಕತ್ತಲ 'ಮತ್ತಿನ' ಆರಾಧಕ!
ಅವನ ಕಂಡಾಗಲೆಲ್ಲಾ ಸೋಜಿಗವೇ!
ಸೇಡಿನ ಜಿದ್ದಿಗೆ ಬಿದ್ದು, ಛಲದ ಮುಖವಾಡವಿಟ್ಟು
ಅಂತೂ ನಡೆದಿದ್ದಾನೆ
ಅವನೊಡ ಕತ್ತಲೆಯೂ..
28/10/2014
No comments:
Post a Comment