ಪ್ರೀತಿ-ಪ್ರೇಮ-ಪ್ರಣಯ!
ಹರಯದಲ್ಲಿ ಉಕ್ಕುವ ಅನ್ಯ ಲಿಂಗದೆಡೆಗಿನ ಮಮತೆಯು ಪ್ರೀತಿ ಎನಿಸಿಕೊಂಡಿದ್ದರೂ ಅದು ಬಹಳಷ್ಟು ಬಾರಿ ಕೇವಲ ಹೆಣ್ಣಿನ ಅಭಿಪ್ರಾಯಗಳಷ್ಟೇ. ಗಂಡು ಪ್ರೀತಿ ಪ್ರೇಮವನ್ನು ಕೇವಲ ಮೋಹವಾಗಿಯಷ್ಟೇ ಪರಿಗಣಿಸುತ್ತಾನೆ. ಸುಳ್ಳು ಎಂದೆಲ್ಲಾ ವಾದಿಸಿದರೂ ಅವರವರ ಆಂತರ್ಯದ ನಿಷ್ಠೆಗೆ ಬಿಟ್ಟದ್ದು. ಕಳೆದ ವರ್ಷವಷ್ಟೇ ಮದುವೆಯಾದ ನನ್ನ ಗೆಳತಿಯೊಬ್ಬಳು ಭೇಟಿ ಮಾಡಮಾಡಲೆಂದು ಬಂದಿದ್ದಳು. ಹೊಸ ಮದುವೆ ಬಹುಶಃ ಖುಷಿಯಾಗಿರಬಹುದೆಂದು ನಾನು ಊಹಿಸಿದ್ದೆ. ಬಂದಳೋ ಅಳಲಾರದೆ ನಗುತ್ತಿದ್ದಳು. ನನಗೋ ಏನು ಮಾಡಬೇಕೆಂದು ತಿಳಿಯಲಿಲ್ಲ,, ಅವಳ ಒಂದೊಂದು ಮಾತುಗಳು ಜೀವನದ ಒಂದೊಂದು ಪದರಗಳನ್ನು ಬಿಚ್ಚಿಟ್ಟಂತೆ ನನಗೆ ನಂಬಲಾರದ ಗುಟ್ಟುಗಳು!. ನೋಡಲು ಅಷ್ಟೇನು ಅಂದವಿಲ್ಲದ ಅವಳ ಗಂಡ, ಸುಂದರವಾದ ಹೆಂಡತಿಯನ್ನು ಮಾತನಾಡಿಸಲೂ ಮುಂದಾಗನಂತೆ. ಕೇಳಿದರೆ ಜಗಳ. ಹೊರಗೆಲ್ಲೋ ಸುತ್ತಾಡಿಕೊಂಡು ಸುಸ್ತು ಎಂದು ಎಲ್ಲೆಂದರಲ್ಲಿ ಹಾಲಿನಲ್ಲಿ ಮಲಗಿಬಿಡುತ್ತಾನಂತೆ. ರಾತ್ರಿ ಒಂದು ಗಂಟೆಯಾದರೂ ಒಳಗೆ ಬಾರದ ಗಂಡನನ್ನು ಕಾದು ಅದು ಯಾವಗಲೋ ಇವಳು ಮಲಗಿಬಿಟ್ಟಿರುತ್ತಾಳೆ. ಇಷ್ಟೆ ಅಲ್ಲದೆ ಕಂಡ ಕಂಡ ಹೆಣ್ಣುಗಳನ್ನೆಲ್ಲಾ ತನ್ನೆದುರೇ ಹೊಗಳಿ, 'ಪ್ರಪಂಚದಲ್ಲಿ ನಿನ್ನ ಬಿಟ್ಟು ಮಿಕ್ಕ ಎಲ್ಲರೂ ನನಗೆ ಒಳ್ಳೆಯವರೇ, ಇಷ್ಟವಾಗುವವರೆ',, ಎಂದು ಬೇರೆ ಮೂದಲಿಸುತ್ತಾನಂತೆ. ಸುಂದರವಾಗಿ ಸಿಂಗರಿಸಿಕೊಳ್ಳುವುದೂ ಇಷ್ಟವಿಲ್ಲವಂತೆ. ಮದುವೆಗೆ ಮುನ್ನ ನಮ್ಮೆಲ್ಲರಿಗಿಂತಲೂ ಸುಂದರವಾಗಿ ಕಾಣುತ್ತಿದ್ದ ಅವಳು ಈಗ ಅನಾರೋಗ್ಯದೊಂದಿಗೆ ನಿಶ್ಚೇತನಳಾಗಿ ಕಾಣುತ್ತಿದ್ದಾಳೆ. ಅವಳೀಗ ತನ್ನ ತವರು ಮನೆಯಲ್ಲಿ; ಗಂಡನು ವಿಚ್ಛೇದಕ್ಕಾಗಿ ಕೋರ್ಟಿನಲ್ಲಿ. ಹೊಂದಿಕೊಳ್ಳಲಾಗದಿರಲು ಅಥವಾ ಪ್ರಯತ್ನಿಸದಿರಲು ಕಾರಣವೇನು? ಅವನು ಹೇಳನು, ಇವಳು ನಂಬಳು. ಗಂಡನಿಗದು ಬೇಡದ ಮದುವೆ. ಹೆಸರಿಗೊಂದು ಮದುವೆ ಬೇಕಿತ್ತು ಅಷ್ಟೇ ಅವನ ಉದ್ದೇಶವೂ. ಇದನ್ನು ಯಾವ ಸಮಾಜ,, ಯಾವ ಕಾನೂನು ಅರಿತು ಆ ಹೆಣ್ಣಿಗೆ ತೀರ್ಪುಕೊಡುವುದು? ಎಲ್ಲಿದೆ ನ್ಯಾಯ?!!!
ಇಲ್ಲಿನ ಕೊರತೆಯೆಂದರೆ ಪ್ರೀತಿ-ವಿಶ್ವಾಸದ್ದು ಹಾಗೆಯೇ ಪ್ರಣಯವೂ.. ಮದುವೆಯಲ್ಲಿ ಬಹು ಮುಖ್ಯ ಪಾತ್ರವಹಿಸೋ ಪ್ರಣಯ-ಮೋಹವು ಅಲ್ಲಿ ಕೈಕೊಟ್ಟಿದೆ ಎಂದಷ್ಟೇ ತಿಳಿಯಬಹುದು..
ಜೀವಿಯೂ ಬಯಸುವುದು ನಿಜವಾಗಿಯೂ ಪ್ತೀತಿಯೇ,, ಎಷ್ಟೋ ಜನರು ಪ್ರೀತಿಗಾಗಿ ಮದುವೆಯಾಗಿ ಒಟ್ಟಿಗಿದ್ದಾರೆ ಮಕ್ಕಳಿಲ್ಲದೆ. ಪ್ರೀತಿಗಾಗಿ ಮದುವೆಯಾಗಿದ್ದಾರೆ ಸಂಗಾತಿಗಲ್ಲಿ ಆಯುಷ್ಯವಿಲ್ಲದಿದ್ದರೂ. ಬಹುಶಃ ಇಂತಹ ಮನೋಸ್ಥಿತಿಗಳು ಆ ಉಚ್ಚ ಮಟ್ಟದ ಜೀವಗಳಲ್ಲಿ ಮಾತ್ರವೆನ್ನಬಹುದೇನೋ!. ಪ್ರೀತಿಯನ್ನು ಹಂಬಲಿಸಿ ಕೊರಗುವ ಮನಸ್ಸುಗಳಿಗೆ ಪ್ರೀತಿಯು ಸಿಗುವುದೇ ಇಲ್ಲವೇನೋ ಎಂದೆನಿಸುವುದು ಬಹಳಷ್ಟು ಬಾರಿ. ಆ ಕಾರಣ ಅದರ ಹಂಬಲವನ್ನು ತೊರೆದು ಬದುಕವುದು ಸರಿಯೆನೋ. ನಮ್ಮನ್ನು ಗೌರವಿಸುವ ಸಮಾಜಕ್ಕೆ ಮಿಡಿವ ಹೃದಯವಾಗಿ ಮತ್ತೂ ಅಷ್ಟೇ ಗಟ್ಟಿಯಾಗಿ ನಿಲ್ಲಬೇಕು. ಪ್ರೀತಿಯೆಂಬುದು ನಮ್ಮ ದೌರಬಲ್ಯವಲ್ಲ. ಹಾಗೆಯೇ ಇತರರಿಗೂ ಅದು ನಮ್ಮ ದೌರ್ಬಲ್ಯವಾಗಿ ಕಾಣುವುದು ಕಾಡುವುದೂ ಬೇಡ. ನಾವು ನಮಗಿದು ಬೇಕಿದೆ ಎಂದಾಗಷ್ಟೇ ಕೊಡುವ ನೆಪಗಳು ಮತ್ತದರ ಹಿಂದೆಯೇ ಬರುವ ಅವರ ಸ್ವಾರ್ಥಗಳು ನಮ್ಮ ಜೀವನವನ್ನು ಮತ್ತೂ ದುಸ್ತರಗೊಳಿಸಿಬಿಡುತ್ತದೆ.
ಜೀವನಕ್ಕೆ ಪ್ರೀತಿ ಬೇಕಿದೆ ಅದಕ್ಕಾಗಿ ಸಮಾಜದಲ್ಲಿ ಹಾತೊರೆವ ಮಕ್ಕಳಿದ್ದಾರೆ. ಪ್ರೀತಿಯೆಂಬುದು ಬಹುರೂಪಿ ಎನ್ನುವದನ್ನು ಮತ್ತೆ ನೆನಪಿಸಬೇಕಿಲ್ಲವಲ್ಲ,,
ಪ್ರೀತಿಸಲು ಶೋಷಿತರಿದ್ದಾರೆ ಅಬಲೆಯರಿದ್ದಾರೆ..ಪ್ರೀತಿಸಿಕೊಳ್ಳಲು ವೃದ್ಧರಿದ್ದಾರೆ. ನಿರ್ಮಲವಾದ ಪ್ರೀತಿಯನ್ನಷ್ಟೇ ಬಯಸೊ ಜೀವಿಗಳು ಇನ್ನೂ ಇದ್ದಾರೆ ನಮ್ಮಂತೆಯೇ. ಸೇರಿಕೊಳ್ಳಲು ಮನಸ್ಸಿರಬೇಕು. ಗುರುತಿಸಲು ನಮ್ಮೊಳಗಣ್ಣು ತೆರೆದಿರಬೇಕಷ್ಟೆ. ಒಂಟಿತನಕ್ಕೆ ಕಾಮ-ಮೋಹವೇ ಮದ್ದಲ್ಲ. ಪ್ರೀತಿಸುವ ಮನಸ್ಸೊಂದೇ ನಿಜ ಸಂಗಾತಿ!!
''ಹರೆಯದ ಪ್ರೀತಿ, ತೊರೆಯುಕ್ಕೋ ರೀತಿ
ಹಸಿದವಗೆ ಹೊಟ್ಟೆಗೆ ಬಿದ್ದ ರೊಟ್ಟಿ!
ಪ್ರೀತಿಯಂದರೇ ಇದುವೇ ಏನು?!
ಹಾಗಿದ್ದರೆ...
''ಹಸಿವಿರಲಿ ನೋವಿರಲಿ
ಮನದಲೊಂದು ಸುಂದರ ನೆನಪಿರಲಿ
ಪ್ರೀತಿ ತುಂಬಿದ ಅವನ ಚೇತನಕೆ''...
ಜೀವನವು ತುಂಬಾ ಸುಂದರವಾಗಿದೆ. ನಮ್ಮೊಳ ಮನಸ್ಸು ನಿರ್ಮಲವಾಗಿದ್ದರಷ್ಟೆ. ನಿರ್ಮಲತೆಗೆ ಪ್ರೀತಿಯ ಗಂಧ ಸಾಕು, ಮೋಹದ ಮಧುವಿಲ್ಲದಿದ್ದರೂ...
ಕೊನೆಯದಾಗಿ ಹೇಳುವುದಾದರೆ ಪ್ರೀತಿ-ವಿಶ್ವಾಸವೆಂಬುದು ಶಾಶ್ವತ, ಉಳಿದಂತೆ ಎಲ್ಲವ ಮೀರಿ!.
10/10/2014