Saturday, 30 August 2014

ಕವನ

ಆ ದೂರದ ತೀರವ ಸೇರುವ ಹವಣಿಕೆಯಲಿ
ಪಯಣಿಸಿರುವೆ ತೋಚಿದ ದಿಕ್ಕಿನಲಿ
ಸಿಕ್ಕರೆ ಸಿಗಲಿ ದಡವೊಂದು,
ಇಲ್ಲದೆ ಇರಲಿ ಕೊನೆಯೊಂದು

ನಡು ನೀರ ಈ ಪಯಣ ನಿರಂತರ
ನಿಂತು ನೀರೊಳು ಮುಳುಗಲಾರೆ,,
ತೇಲುತ ಸಾಗುತ ಉಳಿದರಷ್ಟೇ ಸಾಕು
ಉಸಿರಡಗಿ ತಳ ನೀರ ಸೇರದಂತೆ,,

29/08/2014


ದೇವನೊಬ್ಬ ನಾಮ ಹಲವು
ತತ್ವವೊಂದೆ ಧರ್ಮ ಹಲವು
ನೀತಿಯೊಂದೆ ಆಚರಣೆ ಹಲವು
ಹಲವು ರೀತಿಯ ನೀತಿಗಳ ನಡುವೆ
ಮನದ ಕ್ಷೋಬೆ ಅಳಿದು
ಬೆಳಕೇ ಬೆಳಕು ತುಂಬಿ ನಗಲಿ
ಜೀವನಗಳೆಲ್ಲಾ ಜೀವನ್ಮುಖಿ ತೇಜದಲಿ.

____________________

ದೇವ ಗಣ, ಭೂತ ಗಣ
ಅಧಿದೇವ ಶ್ರೀಗಣನಾಥ
ಮನ್ನಿಸೆಮ್ಮ ದೂರ್ತ ನಡೆಯ
ಕನಿಕರಿಸಿ ಹರಸು ದೇವ
ಭಕ್ತರು ನಾವೇ ನಿನ್ನ ಬಣದವರು!

29/08/2014
ಇಲ್ಲಿ ಎಲ್ಲಾ ನವಿಲುಗಳೇ 
ಗೊತ್ತೆನಗೇ;
ನಾನೂ ಕೆಂಬೂತವೇ 
ಆದರೂ ಸರಿಯೆ
ಪುಕ್ಕವ ತರಿದು 
ಕುಂಚವಾಗಿಸಿಹೆನು,,
ತುಸು ಗೀಚಿ 
ಮಗುವಾಗಿ ನಲಿದಾಡೋ 
ಹೊಸ ಹುಮ್ಮಸ್ಸಿನ ಬಯಕೆಯಲಿ,,,,


ಚಿತ್ರ ಕಲೆ; ದಿವ್ಯ ಆಂಜನಪ್ಪ

ದಿವ್ಯ ಆಂಜನಪ್ಪ
28/08/2014


"ಚಿತ್ರ"

ಚಿತ್ರ ಬಿಡಿಸಿದ್ದೆ
ನಿನ್ನ ದುಂಡಗೆ ಮಾಡಿ
ಅದೇನು ಓರೆಕೋರೆಗಳು
ನೆರಳು ಕಪ್ಪುಗಳು
ಕುದಿವ ಬಿಸಿಲು ಗೆರೆಗಳು.
ನನ್ನ ನಿಟ್ಟುಸಿರಿಗೆ
ಎಲ್ಲಿ ಬೆಂದುಬಿಡುವೆಯೋ
ಚಿತ್ರದೊಳು ನೀನೆಂದು
ನೀರಿಗೆಸೆದುಬಿಟ್ಟೆ,,
ಹಾಯಿ ದೋಣಿ ನೀ
ಹಾಯಾಗಿರಲೆಂದು,,

28/08/2014

________________

ನೀರಿನ
ಕೊಳಕ್ಕೆ
ಹೆಚ್ಚು ಹೆಚ್ಚು
ಕಲ್ಲುಗಳು
ಬಿದ್ದಂತೆ,
ಕೊನೆಗೊಂದು ದಿನ
ಕೊಳವು
ಕಲ್ಲೇ ಆಗುವುದು
ತನ್ನೆಲ್ಲಾ
ನೀರ ಬಸಿದುಕೊಂಡು,,!

27/08/2014

Thursday, 28 August 2014

ಕವನ

"ತಾವರೆ ಮತ್ತು ನೀರ ಹನಿ"


ಪ್ರೀತಿಯಲಿ ಅವ ತಾವರೆಯಾದ
ನನ್ನನ್ನೊಂದು ಮುತ್ತು ಮಾಡಿ
ನೋಡುವ ನೋಟಕೆ ಸಾಟಿಯೇ ಇಲ್ಲ
ನಮ್ಮಿಬ್ಬರ ಜೋಡಿ ನೋಡಿ,

ಎತ್ತ ವಾಲಿದರೂ ಸುಧಾರಿಸೊ ಅವನು,
ತುಳುಕುತ ಹೊಮ್ಮೊ ನೀರ ಹನಿ ನಾನು,
ಸೊಗಸೇ ಸೊಗಸು ಎನ್ನಲು ಜಗವು,
ಅಂಟಿಯೂ ಅಂಟದಂತೆ ನೀರ ಹನಿಯು
ಒಳಗೊಳಗೇ ಬಿಕ್ಕು ಅಳುವು,

ನೀರ ಹನಿಗೆಲ್ಲಿಯ ಕಣ್ಣೀರು,
ಮುಂದಾಗಿ ದುಂಡಗೆ ಮಿಂಚಿದೆ ಅಂದು,,
ನಾನೊಂದು ತಾವರೆಯ ಬಿಂದು,,
ಇಂದಿಗೂ ಹೊಳೆಯೊ ಹೂ ಮುತ್ತು
ಹೊನ್ನಂತ ಮನಸ ತಾವರೆಯ ಸೋಕಲು,,,, !

27/08/2014
ನೀರಿನ
ಕೊಳಕ್ಕೆ
ಹೆಚ್ಚು ಹೆಚ್ಚು
ಕಲ್ಲುಗಳು
ಬಿದ್ದಂತೆ,
ಕೊನೆಗೊಂದು ದಿನ
ಕೊಳವು
ಕಲ್ಲೇ ಆಗುವುದು
ತನ್ನೆಲ್ಲಾ
ನೀರ ಬಸಿದುಕೊಂಡು,,!

_____________________

ಎಲ್ಲರೂ ಕಸದಂತೆ ಗುಡಿಸಿ
ಮೂಲೆಗೆ ತಳ್ಳಲು
ಅಲ್ಲೇ ಬೇರು ಬಿಟ್ಟು ನಿಂತದ್ದು
ಕಸದಲ್ಲೊಂದು ಜೀವ ಕಳೆಯ
ಪಳೆಯುಳಿಕೆ ಕುರುಹು!!

27/08/2014
____________________

ಸಕ್ಕರೆಗೊಂಬೆಗೆ
ಇರುವೆಯ ಭಯವೇ?!
ಇದ್ದರಷ್ಟೇ ಕ್ಷಣಾರ್ಧದಲಿ
ಕರಗಿಸೋ
ಸುರಿವ ಮಳೆಯದು,,

______________________

ಲೇಖನಿಯ ತುದಿಗೆ ತಾಗಿದ ಜೀವ
ಬಹುಶಃ ಎಲ್ಲೋ ಎಂದೋ
ಮನಸ ನಾಟಿರಲೂಬಹುದು..

26/08/2014

ಕವನ

ಕೆಲ ಜೀವನಗಳು...

ಒಂದು ಕಡೆಯಿಂದ
ಜೀವನದ ಎಲ್ಲಾ ಲಯವೂ
ಏರುಪೇರಾಗಲು
ಉತ್ಸಾಹವು ಬತ್ತಿ
ಎಲ್ಲೋ ಕಳೆದು ಹೋಗುವ
ಚೈತನ್ಯ
ಮತ್ತೆ ಸಂಪಾದಿಸಲಾಗದೇನೋ,,
ಸಂಪಾದಿಸಿದರೂ
ಉರುಳೋ ಭರವಸೆಗಳು
ಎಂತಹ ಬಂಡೆಯನ್ನೂ
ಉರುಳಿಸಿಬಿಡುವುದೇನೋ,,,
ಮತ್ತೆ ಮತ್ತೆ ಕುಂದೊ ಚಂದ್ರ
ಎಂದಿಗೂ ಪೂರ್ಣನಾಗದ
ಭೀಕರ ಭಾವ
ಒಮ್ಮೊಮ್ಮೆ ಕೆಲ ಜೀವನಗಳು,,,

26/08/2014


ಗೌಪ್ಯತೆ ಕಳೆದುಕೊಂಡ ಮೇಲೆ
ವಜ್ರಕೂ ಗಾಜು ಚೂರಿನ ಬೆಲೆ!!
 
_______________________

ಭಾಷೆಯು 
ಅರ್ಥವಾದರೂ 
ಇಲ್ಲದಿದ್ದರೂ
ಸರಿಯೇ,
ಭಾವ 
ಅಪಾರ್ಥವಾಗಬಾರದಿತ್ತು,,
ತೋಚಿದಂತೆ 

ಓದಿಕೊಂಡು!!

________________________

''ಹೆಜ್ಜೆ,,,,''

ಪಂದ್ಯ ಸೋತ ಮೇಲೂ 
ಒಂದಷ್ಟು ದಾರಿ 
ಮುಂದಡಿ ಇಡಲೇಬೇಕು 
ನಿಧಾನಗತಿಯ ಅನುದ್ವಿಗ್ನ ಹೆಜ್ಜೆಗಳಾದರೂ,,
________________________

ನನಗೊದಗಿದ ವಿರಹವೋ
ನಾನೇ ಅಪ್ಪಿಕೊಂಡ ವಿರಹವೋ
ಪ್ರಶ್ನಿಸಲು ನೀವ್ಯಾರು
ಕುಹುಕವಾಡದಿರಿ ಅರಿಯದೆ ಭೇದವ
ಯಾರ ಇದಿರೂ ನಾ ನಿಂತಿಲ್ಲ,
ಕಂಡಲ್ಲೆಲ್ಲ ಸಲುಗೆಗಿಳಿವ ಗೀಳು ನನಗಿಲ್ಲ,,
ಹೌದು ನಾ ಕಠೋರವೇ,
ಅಂದಿಗೂ ಇಂದಿಗೂ
ಮುಂದಿನ ದಿನಗಳಿಗೂ,,,
ಕಠೋರತೆಯೇ ಅಸ್ತ್ರ ಎನಗೆ,,

ನಿಮ್ಮೆದುರು,,

________________

ಪ್ರತೀ ಕ್ಷಣವನೂ 
ಸಂಭ್ರಮಿಸಬೇಕು
ಎನ್ನುವ ನಾನು,
ನಿನ್ನ ವಿರಹಕೂ ಹೊರತಲ್ಲ!
ತಡವಾದರೂ ಚಿಂತಿಸಬೇಡ
ನೀ ಎಂದಿಗಾದರೂ 
ಬಂದಬಿಟ್ಟರೂ
ನಾ ನಗುತ್ತಲೇ ಸ್ವಾಗತಿಸುವೆ 
ಓ,, ಪ್ರೀತಿಯೇ...!!!

25/08/2014

_______________________

ನಿಜ ಪ್ರೀತಿ ಅರಿವಿಗೆ ಬರುವುದು
ನಿಶ್ಶಕ್ತಿಯಿಂದ ನಿಲ್ಲಲಾಗದೆ
ಆಸರೆಯೊಂದು ಕೈ ತಡವಿದಾಗ,
ತಾಜಾ ಸ್ನೊ ಪೌಡರ್ನಲ್ಲಿದ್ದಾಗ
ತಂಗಾಳಿಯ ಕನಸು ತೂರೋ
ಹಾಯ್ ಹಲೋ ಲವ್ ಯೂಗಳಿಂದಲ್ಲ,,

24/08/2014

________________

ಸುಮ್ಮನೆ ಸುಳ್ಳು
ಏಕೆ ಹೇಳಲಿ?!,
ನಾ ನಿನಗೆ ಕಾಯುತ್ತಿಲ್ಲ,
ಬದಲಿಗೆ
ನೀ ಸಿಗುತ್ತಿಲ್ಲವಷ್ಟೇ!

24/08/2014

___________________

ಇನ್ನಷ್ಟು ವರುಷಗಳು
ನೀ ನನ್ನ ನೋಡಬೇಕಿತ್ತು,
ಸ್ನೇಹದಲಿ ಮೋಹದಲಿ ಹೇಗಿರುವಳೊ,
ಅಕ್ಕಳಾಗಿ ತಂಗಿಯಾಗಿ,
ಅಮ್ಮಳಾಗಿ ಅಜ್ಜಿಯಾಗಿ,,
ಕೊನೆಗೊಮ್ಮೆ ನಿರ್ಧರಿಸಿಬಿಡು
ಜೊತೆಯಾಗೊ ಹದವಿದೆಯೇ ಎಂದು!
ಬೇಸರವೇನಿಲ್ಲ ನಿನ್ನ ಕುತೂಹಲವ ಸ್ವಾಗತಿಸುವೆ,
ತಡವೇನಲ್ಲಬಿಡು ಮುಂದಿನ ಜನ್ಮಕೆ,,

24/08/2014

____________

ಮಣ್ಣ ಕಣ್ಣಿಗಷ್ಟೇ
ಅಳಿವು
ಕಣ್ಣ ಬೆಳಕಿಗಲ್ಲ!,,

22/08/2014

ಕವನ

ಚೆಂದ,,


ಅವಳು ಚೆಂದವಿದ್ದಳು
ನನ್ನೊಳಗೆ ಪ್ರೀತಿ ಮೊರೆತ
ಈಗವಳ ಚೆಂದ ಏಕೋ
ಚೆಂದವೇ ಅನಿಸುತ್ತಿಲ್ಲ
ನನಗೆ ಪ್ರೀತಿಯು ಕೊರೆತ,,

ಮನಸ ಕಾಣಲಾರದ
ಈ ಕಣ್ಗಳು
ಆ ಸುಂದರಿ ಎಂಬ
ಹೂವ ಹೊಸಕಿ ಹಾಕಿದ್ದೆ
ಮೋಹದ ಕುರುಡಲಿ,,

ಈಗವಳು ನಗುವಳು ನನ್ನೊಳಗೆ
ಆ ಅದೇ ದಣಿದ ಎಣ್ಣೆ ಮುಖದಲಿ
ಸಂಜೆಗೆಂಪ ಸೂರ್ಯನಂತೆ
ಬಾಳ ಈ ಇಳಿ ಸಂಜೆಯಲಿ
ಹೀಗೆ ನೆನಪಾಗಿ
ಒಲವಾಗಿಳಿವಳು ಪುಳಕದಲಿ,,,

(ವೃದ್ಧನಾಗೊಮ್ಮೆ.... :-) )

21/08/2014




ನಮ್ಮನ್ನು ಕಂಡರಾಗದ ಅವರೇ
ನಮ್ಮ ಕಾಳಜಿವಹಿಸುವರು
ಬಹಳೆ,
ಒಳ್ಳೆತನವೆಂದೇ ಭಾವಿಸಿ
ಬರಸೆಳೆದರೂ
ಅವರ ಅತೀ ಪ್ರೀತಿ
ತಲೆ ಕೆಡಿಸದೇ ಇರದು,
ನನಗೆ ದ್ಷೇಷವಿಲ್ಲ,
ಆದರೆ ನಮ್ಮ ದ್ವೇಷಿಸೋ ಅವರು
ನಮ್ಮನ್ನು ಬಿಟ್ಟು ಬದುಕಲಾರರು,,
ಪ್ರೀತಿಯಲಿ ಸಿಲುಕಿಸಿ ಹಿಂಸಿಸುವರು
ಹೀಗೂ ಆಗುವುದು
ಪ್ರೀತಿಯ ಮರೆಯ ಅಸೂಯೆ,,,!!

21/08/2014

________________________

ಕೆಂಬೂತಗಳ ಹಾವಳಿ ಹೆಚ್ಚಾಗಿ
ನವಿಲಿಗೆ ಮತ್ತೂ ಭಾರವಂತೆ ಗರಿಗಳು
ನವಿಲಿಗೆ ಅನಿವಾರ್ಯವಾದ ತಟಸ್ಥ್ಯ!

17/08/2014

_____________________

ಕೈಗೆ ಸಿಗದ ಕಾಮನಬಿಲ್ಲಿಗೆ
ಆಸೆಪಟ್ಟು ಕೊರಗುವ ಬದಲು
ಕೈಗೆಟುಕೊ ಬಣ್ಣದ ಗಾಳಿಪಟ ಹಿಡಿದು
ಆಗಸಕೆ ಹಾರಿಸಿ ನೋಡುವ ಚಂದ
ಒಪ್ಪಬಹುದೇನೋ; ಸೂತ್ರವೂ ಕೈಲಿರಲು
ಮಾಯವಾಗೋ ಗೊಂದಲವಿಲ್ಲ,,
ಆದರೂ ಸೂತ್ರ ಗಟ್ಟಿ ಇರಬೇಕಷ್ಟೆ
ತುಂಡಾಗಿಸೋ ಹುನ್ನಾರಗಳೆದುರು...

15/08/2014

____________________

ನಾವು ಹುಚ್ಚರಾಗುತ್ತಿದ್ದೇವೆ
ಎನಿಸುವಾಗ, ಸುತ್ತಲ ಜಗತ್ತು
ಸಿಕ್ಕಾಪಟ್ಟೆ ಸುಸ್ಥಿತಿಯಾಗಿ ಕಾಣುವುದು!

13/08/2014

Thursday, 14 August 2014

ಕವನ

ಕಲೆ,,,, :-)


ಯಾರೂ ಇಲ್ಲವೆನ್ನುವ ಈ ಹೊತ್ತು
ಹೊರೆಗೆ ಧೋ ಎಂದು ಸುರಿವ ಮಳೆ
ಎನ್ನ ಎನ್ನೊಂದಿಗೇ ಬೆಸೆಯೋ ಹುನ್ನಾರ

ಮರೆತು ಸೋಲು, ಕಲಿತು ಗೆಲವು
ಮನದಂಗಳವ ಗುಡಿಸಿ ತಣಿಸಿ
ಹದವಾದ ಹಬೆ,,!

ನೀನಿದ್ದರೂ ಇಲ್ಲದಿದ್ದರೂ
ಸದಾ ರಂಗೋಲೆಯ ಕಲೆ,
ಈ ಚಂಚಲೆ,,!!

14/08/2014
ರಾಧೆ ಚಿರವಿರಹಿಯಾದಳು
ಕೃಷ್ಣನ ಗೆಲುವ ಮೆರೆಸಲು!

___________________________________


ಸತ್ಯಗಳು ಅವರವರ ಮೂಗಿನ ನೇರಕ್ಕೇ ಇರುವುದಲ್ಲಾ
ಆ ಸತ್ಯವು ಈ ಮೂಗಿಗೂ,
ಈ ಸತ್ಯವು ಆ ಮೂಗಿಗೂ ಪರಸ್ಪರ ವಿರುದ್ಧವೇ,,
ಆದರೂ ಅವುಗಳೂ ಸತ್ಯಗಳೇ,,
ಇದು ಹಾಸ್ಯವೋ ವಿಡಂಬನೆಯೋ ಅಲ್ಲ
ಇದೂ ಒಂದು ಸತ್ಯ,,
ನನ್ನ ಈ ಮೂಗಿನ ನೇರದ್ದು,,,

12/08/2014

Monday, 11 August 2014

ಕವನ

ಜ್ವಾಲೆ,,!


ನೀ ಎನ್ನ ಹಿಡಿದಿದ್ದರೆ ಅಂಗೈಯ್ಯಲಿ
ದೀಪವಾಗುತ್ತಿದ್ದೆನೋ ಭರವಸೆಗೆ

ಜ್ವಾಲೆ ಚದುರಿ ಮಿಂಚು ಹುಳುವಾದೆ
ಹಾದಿ ಬದಿಯ ಗಿಡಗೆಂಟೆಗಳಲಿ

ಎಲ್ಲರಿಗೂ ಮನರಂಜನೆಯೇ ನಾನೀಗ
ಸಾರ್ಥಕ ನೆಲೆ ಕಾಣದ ನಿಟ್ಟುಸಿರು,

ನಿಂದೆಸೆನು ನಾ ನಿನ್ನನು
ನೊಂದಿಪೆನು ನಾ; ಜ್ವಾಲೆಯು
ಚದುರಿದ ಕಾರಣಕೆ,, !

11/08/2014

ಮನದ ಮಾತು

ಯಾರೊಬ್ಬರ ಮನಸ್ಸು ಅಷ್ಟು ಸುಲಭವಲ್ಲ ಅರ್ಥ ಮಾಡಿಕೊಳ್ಳಲು. ಮುಖವನ್ನು ನೋಡಿ ಮಣೆ ಹಾಕಬಾರದು (ನನ್ನನ್ನೂ ಸೇರಿಸಿಯೇ :-)  ), ಆದರೆ ಅಷ್ಟೆ ಸುಲಭಕ್ಕೆ ಅವರನ್ನು ಹೀಗೆಯೇ ಎಂದೂ ಸಹ ನಿರ್ಧರಿಸಲೂ ಆಗದು.

ನಿರ್ಭಾವುಕತೆಗೆ ನಿರಪೇಕ್ಷೆಯೇ ಸರಿಯಾದ ಉತ್ತರವೇ ಹೊರತು ತಿರಸ್ಕಾರವಲ್ಲ,,!

ಪ್ರತೀ ತಪ್ಪಿಗೂ ಅದರ ನೆರಳಂತೆ ಕಲಿಕೆಯಿದೆ, ಹಾಗೆಯೇ ಪ್ರತೀ ಜಡ್ಡುತನಕ್ಕೂ ಅದರದೇ ಆದ ನೋವುಗಳಿವೆ. ನೋವನ್ನರಿತು ನಡೆಯಲು ನಾವ್ಯಾರೂ ಬ್ರಹ್ಮರಲ್ಲ; ಮಾನವರು. ಆ ಕಾರಣಕ್ಕಾದರೂ ಮಾನವೀಯತೆಯಿರಲಿ. ತಿಳಿಯದೇ ನುಡಿವ, ತಿಳಿದು ಕೊಂಕಾಡುವ ಮನೋಸ್ಥಿತಿಯನ್ನು ಇನ್ನಾದರೂ ತೂರಿಬಿಡೋಣ. ಪ್ರತೀ ಜೀವಕೂ ಅದರದೇ ಆದ ತಪ್ಪು -ಜಡ್ಡುತನಗಳಿವೆ. ನಂತರ ಕಲಿಕೆಯ ಆಸರೆ ಮತ್ತು ಅದರ ನೋವಿಗೆ ಸ್ಪಂದಿಸೋ ಅದರದೇ ನೋವುಗಳಿವೆ, ಮತ್ತೂ ತಾನೇ ಕಂಡುಕೊಳ್ಳೋ ಸಾಂತ್ವನಗಳೂ. :-)

ಬೆರೆತು ಬಾಳೋ ಉದ್ದೇಶವೇ ಆಗಿದ್ದರೆ ನಮ್ಮಲ್ಲಿ ಸಹಿಸೋ ಗುಣ ಇನ್ನಷ್ಟು ಹೆಚ್ಚಲಿ. ಪ್ರೀತಿಸೋ ಹೃದಯಕೆ ಇನ್ನಷ್ಟು ಪ್ರೀತಿಯೇ ಸಿಗಲಿ.

ಶುಭದಿನ ಫ್ರೆಂಡ್ಸ್,,,, :-)

10/08/2014

ಕವನ

ಗುದ್ದಾಟ,,,,,, 


ಅದ್ಭುತಗಳೆಲ್ಲಾ
ನಿನ್ನ ವಿರಹದಲೇ
ಅಡಗಿದೆಯಲ್ಲ
ಓ ಚೋರ!

ನೀನಿದ್ದ ಹೊತ್ತು
ಆಡುವ ಮಾತೆಲ್ಲಾ
ಒಂದೇ ಸಮನೆ
ಮಳೆ ಬಂದಂತೆ

ಗೊತ್ತಿದ್ದು ಸುಮ್ಮನೆ ಹರಟೆ
ಜೊತೆ ಕಳೆವ ಕಾಲವಷ್ಟೆ ಮುಖ್ಯ!
ಏನೇನೋ ನಿನ್ನ ಲೆಕ್ಕಚಾರ,
ಗಾಬರಿಯಾದರೂ ಖುಷಿಯಿತ್ತು
ನಿನ್ನ ಹೊಸದೀ ರೀತಿಗೆ,

ನೀ ನೆನಪಾಗದ ಹೊತ್ತಿಲ್ಲ
ನನ್ನೊಂದಿಗೆ ನಾನಿರಲು,
ಬೇಸರವಿಲ್ಲ ನೀನಿಲ್ಲವೆಂದು

ಈ ಅಲ್ಪ
ವಿರಾಮದಲಿ
ಅರಿತೆ ನಾ
ಒಂದಷ್ಟು ನಿನ್ನನು!

ಇದು ಕವಿತೆ
ಅಲ್ಲವೇ ಅಲ್ಲ ಗೆಳೆಯ
ಗಾಳಿಯೊಡನೆ
ನನ್ನದೂ ಒಂದು ಗುದ್ದಾಟ!

09/08/2014

ಎಲ್ಲರ ಗಮನವೆಲ್ಲಾ ಬೇಕಿರಲಿಲ್ಲ ನನಗೆ
ಬೇಕಿದ್ದ ನೀನು ನಿನ್ನ ಲಕ್ಷ್ಯ
ಕತ್ತಲ ಮರೆಗೆ
ಬೆಳಕಿಲ್ಲದ ಮಾತ್ರಕೆ ನೀನೂ ಇಲ್ಲ
ಎನ್ನಲಾರೆ ದೊರೆಯೆ
ಕಣ್ಣು ಮುಚ್ಚಿ ಕನಸು ಕಂಡವಳು ನಾನು!
_______________________

ತನ್ನ ತೋರುವ ಕನ್ನಡಿ
ತುಸು ಓರೆ ಎನಿಸಿ
ಬೇಸರ ಮೂಡಿದರೆ
ಚಿಂತೆಯಿಲ್ಲ,
ಎಷ್ಟೋ ಸಿರಿ ಕನ್ನಡಿಗಳಿವೆ
ತಿರುಗಿಸಿ ನೋಡಿದರಾಯ್ತು
ಚೆಂದದ ಬಿಂಬಗಳು,
ನೋಟದೊಂದಿಗೆ ನಮ್ಮ ಒಳಬಿಂಬವಾದರೂ
ಹೆಮ್ಮೆಯ ಆರಾಧಕನಾಗಬಹುದು!
ಸೌಂದರ್ಯಗಳೂ ನಮ್ಮೊಳಗನ್ನೇ ಮೆಚ್ಚುವಂತೆ!!

08/08/2014
__________________

ಕೆಲವು ಮನಗಳು
ತಮ್ಮ ಇರುವಿಕೆಯ
ಅರಿವು ನೀಡಲು
ಸೆಣಸಾಡುವವು
ಅತ್ತು, ನಕ್ಕು, ಕಾಳಜಿ ತೋರಿ
ಕೊನೆಗೆ ಎದುರು ಬಿದ್ದು
ಬೇಕಾದುದು ತಮ್ಮೆಡೆಗಿನ
ಅವರ ಲಕ್ಷ್ಯವೇ ಹೊರತು
ಕನಿಕರವೂ ಅಲ್ಲ, ಪ್ರತಿಷ್ಠೆಯೂ ಅಲ್ಲ
ಜಗಳವೂ ಅಲ್ಲ, ಆದರೂ
ಸುಮ್ಮನಿರರು ಇವರು ಮೌನಿಗಳು
ಸುಮ್ಮನೆ ಗಲಭೆ ಎಬ್ಬಿಸುವರು ಮನಗಳಲಿ,,,

07/08/2014

Sunday, 10 August 2014

ನನ್ನ ತಮ್ಮ; ರಾಖಿ ಹಬ್ಬ!

ಈ ದಿನ ಫೇಸ್ ಬುಕ್ನಲ್ಲಿ ಎಲ್ಲರೂ ತಮ್ ತಮ್ಮ ಅಣ್ಣತಮ್ಮಂದಿರ ಫೋಟೋಗಳನ್ನು ಹಾಕ್ತಾ ಇದ್ದಾರೆ, ನನಗೆ ಈಗ ಸುಮ್ನಿರೋಕ್ ಆಗ್ತಾ ಇಲ್ಲ,, 

ನನಗಿರುವ ಏಕೈಕ ತಮ್ಮನ ಫೋಟೋ (ಫೇಸ್ ಬುಕ್ಕಿನ ತಮ್ಮಂದಿರನ್ನು ಹೊರತುಪಡಿಸಿ  ) ಇಂದು ಹಾಕೋ ಮನಸ್ಸಾಗಿದೆ... 

ಇಷ್ಟು ದಿನಗಳು ನಾನು ಏನೊ ಒಂದಷ್ಟು ಬರೆದೋ, ಇಲ್ಲವೋ ಬೆರೆತೋ ನಿಮ್ಮನೆಲ್ಲಾ ಗಳಿಸಿದ್ದೇನೆ. ಇಷ್ಟು ದಾರಿಯನ್ನು ಸಾಗಿ ಬರಲು ಮೊದಲ ಹೆಜ್ಜೆ ಎಂದಿರುತ್ತದೆ ಅಲ್ಲವೇ? ಹಾಗೆಯೇ ಮೊದಲ ಹೆಜ್ಜೆಯಿಡಲು ಈ ನನ್ನ ತಮ್ಮನು ನನಗೆ ಸಹಕಾರಿಯಾಗಿದ್ದನು. ನಾನು, ಕಂಪ್ಯೂಟರ್ ಗಂಧ-ಗಾಳಿ ಗೊತ್ತಿಲ್ಲದವಳು. ಸುಮ್ಮನೆ ಕೇಳಿದೆ ಎಂದು ಫೇಸ್ ಬುಕ್ ಅಕೌಂಟನ್ನು ತೆರೆದು ಕೊಟ್ಟು, ಹೇಗೆ ನಿರ್ವಹಿಸಬೇಕು ಎಂದು ಹೇಳಿಕೊಟ್ಟವನು ಇವನೇ, ಈಗ ಫೇಸ್ ಬುಕ್ ವಿಚಾರದಲ್ಲಿ ಅವನನ್ನೇ ಮೀರಿಸುತ್ತೇನೆ, ಅದು ಬೇರೆ ವಿಚಾರ ಬಿಡಿ 

ಇಲ್ಲಿ ನೋಡುತ್ತಾ ನೋಡುತ್ತಾ ನಾನೂ ಬರೆಯಲು, ಸ್ವಂತದೊಂದು ಲಾಪ್ ಟಾಪ್ ತೆಗೆದುಕೊಳ್ಳೋ ಆಸೆಯಾಯಿತು. ಅದಕ್ಕೂ ಮಾರ್ಗದರ್ಶಕನು ಇವನೇ,, ತಂದ ಲಾಪ್ಟಾಪ್ನಿಂದ ಏನೂ ಕೆಲಸ ಮಾಡಲಾಗದೆ ಸುಮ್ಮನಿದ್ದೆ. ಕನ್ನಡವಷ್ಟೇ ನನಗೆ ಬೇಕಾದ್ದು,, ನನಗಾಗ ನುಡಿ, ಪದ ಇದ್ಯಾವುದರ ಪರಿಚಯವಿರಲಿಲ್ಲ, (ನುಡಿ ಈಗಲೂ ಕಲಿತಿಲ್ಲ). ಕನ್ನಡ ಟೈಪಿಂಗ್ ತಿಳಿಯದ ನಾನು ಸರಳವಾಗಿ ಕನ್ನಡವನ್ನು ಟೈಪ್ ಮಾಡಲು ಸಹಾಯವಾಗುವಂತೆ ಪೇಪರ್ನಲ್ಲಿ ಬಂದ ಮಾಹಿತಿ ಸಂಗ್ರಹಿಸಿ "ಪದ''ವನ್ನು ನನ್ನ ಲಾಪ್ಟಾಪಿಗೆ ಇನ್ಸ್ಟಾಲ್ ಮಾಡಿಕೊಟ್ಟ,, ನಾನು ಬರೆಯುವಂತೆ ಅನುಕೂಲವನ್ನು ಮಾಡಿಕೊಟ್ಟನು. ಅದೂ ನಾನೇನೂ ಕೇಳದೆ,,,  ನಾನೇನೂ ಹೇಳದೆ ನನ್ನ ಮನಸ್ಸನ್ನು ಹೀಗೆ ಅರ್ಥಮಾಡಿಕೊಂಡು ಬೇಕಿದ್ದನ್ನು ಮುಂದಿರಿಸಿದ್ದ ನನ್ನ ತಮ್ಮ,,!  ತುಂಬಾ ಖುಷಿಯಾಗಿತ್ತು ಅಂದು,,,, ಇಂದಿಗೂ,,,,,  

ಚಿಕ್ಕವನಿದ್ದಾಗಷ್ಟೇ ಇವನಿಗೆ ರಾಖಿಯನ್ನು ತಂದು ಕಟ್ಟುತ್ತಿದ್ದೆ. ಇವನು ಹುಟ್ಟೋ ಮೊದಲು ನನ್ನ ದೊಡ್ಡ ಅಕ್ಕಂದಿರಿಗೇ ಕಟ್ಟಿ ದುಡ್ಡು ವಸೂಲಿ ಮಾಡುತ್ತಿದ್ದೆ..  
ಪ್ರತೀ ವರ್ಷ ರಾಖಿ ಹಬ್ಬದಂದು ಇವನಿಗೆ ಮತ್ತೂ ಇವನಿಗಿಂತ ಚಿಕ್ಕವಳು ನನ್ನ ತಂಗಿಗೂ ರಾಖಿ ಕಟ್ಟಿ ಖುಷಿಪಡುತ್ತಿದ್ದೆ. ಹಾಗೆಯೇ ನನ್ನ ಬಾಲ್ಯ ಸ್ನೇಹಿತನೊಬ್ಬ 'ಸಾಧಿಕ್'ನಿಗೂ ಕಟ್ಟುವುದು ನನ್ನ ಬಾಲ್ಯದ ಸಂತಸಗಳು.. 

ಈ ಭಾವಚಿತ್ರವು ಎರಡು ಮೂರು ವರ್ಷದ ಹಿಂದಿನದ್ದು,, ಚೂರ್ ಮುದ್ಮುದ್ದಾಗಿದ್ದಾನೆ,, ಈಗಿನದ್ದು ಹಾಕಲು ದೃಷ್ಟಿಗಳ ಭಯ! 
''ಕೃಷ್ಣ''ನೆಂದು ಚಿಕ್ಕದಾಗಿ ಕರೆಯುತ್ತೇವೆ. ಪೂರ್ಣ ಹೆಸರು ತುಸು ಉದ್ದವೇ ನನ್ನ ತಮ್ಮನದು,, !! 

ದೊಡ್ಡವರಾದಂತೆ ವಿಚಾರಗಳೂ ತಿರುವುಗಳು ಯೋಚನಾಲಹರಿಗಳೂ ಹೊಸತನವನ್ನು ತಂದುಕೊಳ್ಳುತ್ತಾ ಹೋಯಿತು.. ಈಗ ಈ ಆಚರಣೆಗಳನ್ನು ಆಶಯಗಳಾಗಿ ಬದಲಿಸಿದ್ದೇನೆ. 
ಇಂದು ನನ್ನ ತಂಗಿ ಅಣ್ಣನಿಗೆ ರಾಖಿ ಕಟ್ಟಿದ್ದಾಳೆ, ಎಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುವೆ ಎಂದು ಹೇಳುತ್ತಿರುವ ತಮ್ಮನಿಗೆ ಈ ವರ್ಷ ಅವನ ಆಕಾಂಕ್ಷೆಯ ಕೆಲಸವೇ ಸಿಗಲೆಂದು ಹರಸಿದೆನು... :-)

10/08/2014

Thursday, 7 August 2014

ಕವನ

ಚಿತ್ರ,,,,,


ನಾ ದೂರಬಲ್ಲೆ ನಿನ್ನನು
ದ್ವೇಷಿಸಲಾರೆನೊ
ವಾದಿಸಲಾರೆ ನಿನ್ನೊಂದಿಗೆ
ಕೇಳಬಲ್ಲೆ ನಿನ್ನದಷ್ಟೆ,

ಕಾಡಬಲ್ಲೆ ಹಟ ಮಾಡಿ
ನಿನಗಿಂತ ಹೆಚ್ಚು
ನನ್ನನ್ನೇ ಕಾಡಿಕೊಂಡು

ನನಗೆ ಮಾತು ಹೆಚ್ಚು,
ಆತುರವೂ,,
ನಿನಗೆ ಮೌನ ಪ್ರಿಯ
ಪ್ರತಿಯಾಗಿ ನನ್ನ ಕಾಡಲು

ಹೀಗೆಲ್ಲೊ ಹೊರಟ ನಿನ್ನನು
ಇನ್ನೂ ಕಂಡಿರುವೆ ಜೊತೆಯಲಿ
ಕಳೆದ ಮಾತುಗಳಲಿ
ಕಾಳಜಿಯ ಕುರುಹುಗಳಲಿ
ಛೇಡಿಸಿ ನಕ್ಕ ಕ್ಷಣಗಳಲಿ,,
ನಿನ್ನ ಚಿತ್ರದೊಳ
ನನ್ನ ಚಿತ್ರದಲಿ!

07/08/2014

ಕೆಲವು ಮನಗಳು
ತಮ್ಮ ಇರುವಿಕೆಯ
ಅರಿವು ನೀಡಲು
ಸೆಣಸಾಡುವುದು
ಅತ್ತು, ನಕ್ಕು, ಕಾಳಜಿ ತೋರಿ
ಕೊನೆಗೆ ಎದುರು ಬಿದ್ದು
ಬೇಕಾದುದು ತಮ್ಮೆಡೆಗಿನ
ಅವರ ಲಕ್ಷ್ಯವೇ ಹೊರತು
ಕನಿಕರವೂ ಅಲ್ಲ, ಪ್ರತಿಷ್ಠೆಯೂ ಅಲ್ಲ
ಜಗಳವೂ ಅಲ್ಲ, ಆದರೂ
ಸುಮ್ಮನಿರರು ಇವರು ಮೌನಿಗಳು
ಸುಮ್ಮನೆ ಗಲಬೆ ಎಬ್ಬಿಸುವರು ಮನಗಳಲಿ,,,

______________

ಅವನಿಲ್ಲದ ಈ ಹೊತ್ತು
ಬರೀ ಕತ್ತಲೆ,
ಸುಮ್ಮನೆ ಚಂದ್ರ ಲಾಂದ್ರಗಳ
ಬಿಂಬಿಸಿದೆ
ಕೆಣಕಿದರೆ ಹುಟ್ಟಿ ಬರುವನೇ
ಎಂಬ ಭ್ರಾಂತಿಗೆ!

07/08/2014

Wednesday, 6 August 2014

ಕವನ

ನನ್ನೊಳ ಬೆಳಕು



ನೀ ಮೆಚ್ಚುವಂತೆ ನಡೆಯೋ
ತಂತ್ರ ನಾ ಕಾಣೆ,
ಹಚ್ಚಿಕೊಂಡಿದ್ದರೆ ನಿನ್ನ ಹೃದಯ
ಎಂದೋ ಹೇಗೋ ಮೆಚ್ಚಿರಲೂಬಹುದು
ನಾನದ ನೆಚ್ಚಿಕೊಂಡಿಲ್ಲವೋ ತಂದೆ,
ಮನ್ನಿಸೆನ್ನ ಮೀರಿದ ಮಾತುಗಳ
ಕನಿಕರಿಸು ಙ್ಞಾನದ ಕಂದೀಲನು
ಇನ್ನೆಷ್ಟು ದಿನವೋ ಈ ಅಂಧಕಾರ
ನಾನಲ್ಲವೋ ಇದು, ನೀನೇ ನನ್ನೊಳ ಬೆಳಕು
ಕುಂದರಿರು ದೂರದಿರು,
ಅನುದಿನವೂ ನಿನ್ನನೇ ದ್ಯಾನಿಪೆತು
ನಂಬು ನೀನೊಮ್ಮೆ ನನ್ನ ಹರನೇ,,,!

06/08/2014
ನನ್ನ ಸಾಲುಗಳು,,,



ಹಿಂದಿರುಗಲಾರದ ಅಹಂ ಬೆಳದ
ಈ ದಿನಗಳಲ್ಲಿ,
ಹೆಜ್ಜೆ ಗುರುತ ಅಗೆದು ತೋರಿಸೊ
ಒಂದು ಹಂತ,

ನಾನೇನಾ ಆ ಸಾಲುಗಳು 
ಎನಿಸುವಷ್ಟು ಮರೆವು,
ಹೀಗೆಲ್ಲಾ ಕನಸೇ? ಕನವರಿಕೆಯೇ?!

ಹೀಗೂ ಒಬ್ಬ ಚಂದಿರ ಮಾಧವನಾಗಿದ್ದ,
ರಾಧೆಗೂ ರಮಿಸೋ ಸ್ನೇಹವಾಗಿದ್ದ,
ಎಲ್ಲಿಯೋ ರಾಮ, ಮತ್ತೆಲ್ಲೋ ಮರೆಯ ರಾವಣ,

ಕಣ್ಣೀರ ಕಾರಣವಾಗಿದ್ದೂ, 
ನೋವ ಮರೆವ ಸಾಧನಕೂ ಮಾರ್ಗವಾದ
ನನ್ನವೇ ಸಾಲುಗಳು ನನ್ನಲೇ ಹಲವು ಪ್ರಶ್ನೆಗಳು,
ನಾನು ಬದಲಾದರೂ ಬದಲಾಗದ ಆ ಸಾಲುಗಳು,
ನೋವಿನೊಂದಿಗೆ ನನಗಿಲ್ಲದ ನಿಷ್ಠೆ,
ಸಾಲುಗಳಿಗೆ ಸೋಲಿಲ್ಲದ ಪ್ರತಿಷ್ಠೆ!

ನಾ ಸೋತೆನಾದರೂ, ಸಾಲುಗಳವು
ಎಂದಿಗೂ ಗೆದ್ದಿವೆ, ಗೆಲ್ಲಿಸುತ್ತಲಿವೆ,
ರಾಧೆಗೋ ರಾವಣನಿಗೋ
ಸೋಲು-ಗೆಲವುಗಳ ಹಂಚುತ!

06/08/2014


ಕಾಲಕ್ಕೆ ಸೆಡ್ಡು ಹೊಡೆದಂತೆ
ಬರದೆ ಹೋದೆ ನೀನು,
ಬಹುಶಃ ನೀ ಬಂದ ಕಾಲಕ್ಕೆ
ನಿಲ್ದಾಣವಿಲ್ಲ ಇಲ್ಲಿ,
ಎಲ್ಲವೂ ಗೋರಿಗಳೇ,,
ನಿಲ್ಲುವುದಾದರೂ ನಿಲ್ಲು
ಗೋರಿಯಿಂದೇಳದಿಲ್ಲಿ
ಯಾವ ಭಾವವೂ
ಸಮಯವ ಗೆದ್ದು,,,

_______________________

ನಂಬಿಕೆ ಗಳಿಸಿದವರು
ಗಾಳಿಯಲ್ಲಿ ತೇಲಿಹೋದರು
ನಂಬಿ ಎನ್ನಿದಿರೇ ನೋಡುವವರು
ಎನ್ನ ಗಾಳಿಯೆಂದು ಜರಿದರು,
ಉಸಿರಿಟ್ಟ ಗಾಳಿ, ಜೀವ ತೆಗೆಯುದೇ?!
ಗಾಳಿಯೇ ನಾ ನಿನ್ನೇ ನಂಬಿಹೆನು
ಹೊತ್ತು ತಂದುಬಿಡು
ನೀ ಇಲ್ಲಿಂದ ಹೋತ್ತು ಹೋದವರ,,!
ಕಣ್ಣಿಗಷ್ಟು ನಿದ್ದೆ, ಮನಕಷ್ಟು ಶಾಂತಿ
ಎದುರಿಗಿದ್ದವರನಷ್ಟು
ನಗಿಸಿಬಿಡೋ ಹುಮ್ಮಸ್ಸು,,!

05/08/2014


ಬೆಟ್ಟದಂತೆ ನಿಂತಾಗ
ಎಲ್ಲರೂ ಬೆನ್ನಹಿಂದೆ
ಬಿಳಲಾಗಿ ಇಳಿದಾಗ
ಎಲ್ಲರ ಅಡಿಗಳ ಕೆಳಗೆ

06/08/2014

__________________

ನೀ ಬಿಟ್ಟು ಹೋದ
ಹೆಜ್ಜೆಗಳಿಗೇ ಈ ಹೊಳಪು!,
ನೀ ಜೊತೆಗಿದ್ದು ಕೈಹಿಡಿದು
ನಡೆದಿದ್ದರೆ,, ಆಹಾ!
ಅದೇನು ತಳಕು, ಬಳಕು, ಒನಪು
ಇದ್ದಿರಬಹುದೋ ಗೆಳೆಯ,
ಬೇಡವೆಂದೇ ನಡೆದೆಯೇನೋ
ನಿನ್ನದೇ ದೃಷ್ಟಿ ತಾಗಿ
ಈ ಸೋಲದ ಪ್ರೀತಿಗೆ,,!

_____________________

ತಿರುಗಿ ಬಿದ್ರೆ ನಾ ಭಯಂಕರ
ಎಂದು ಹೇಳುವರು ಬಹಳ
ತಿರುಗಿ ಬಿದ್ರೆ ಭಯಂಕರ
ಎಂದೆನಿಸುವವರು ವಿರಳ!

______________________

ಹುಡುಕಾಟದಲ್ಲೂ ಸೊಗಸಿದೆ
ಎಂದೋ ಸುಮ್ಮನೆ ಅಂದೆ
ಈಗ ಜೂಟಾಟ ಬಿಟ್ಟು ಕಣ್ಣಾಮುಚ್ಚಾಲೆ
ಆಟವಾಗಿದೆ ಪ್ರೀತಿ ನಿನ್ನದು,,,

04/08/2014

ಕವನ

ಸ್ನೇಹ,,,,


ತರಾವರಿ ಹಕ್ಕಿಗಳು
ನಾವು
ಹಾರುವುದಷ್ಟೇ
ನಮ್ಮ ಗುರಿ

ಗೂಡು ಕಟ್ಟಿ,
ಆಹಾರ ಹೆಕ್ಕಿ,
ಗುಟುಕು ಕೊಟ್ಟು
ನಿಲ್ಲುವಾಗ

ಬೃಹತ್ ಜೀವನ ಮರದ
ರೆಂಬೆಗಳಲಿ ಇಣುಕಿ
ನೋಡಿದ್ದೂ ಇದೆ
ಪಕ್ಕದ ರೆಂಬೆ ಹಕ್ಕಿ ಗೂಡು

ಒಮ್ಮೆ ಕಲೆತು ಒಮ್ಮೆ ಕಲಿತು
ಒಮ್ಮೆ ಬೀಗಿ ಒಮ್ಮೆ ಅಹಂ ತೇಗಿ
ಅತ್ತು ಕರೆದು, ತೊರೆದು ಬಯಸಿ
ಮತ್ತೆ ಮತ್ತೆ ಸೇರಿ ಸಂಭ್ರಮಿಸಿ

ನಮ್ಮ ಚಿಲಿಪಿಲಿ ನಾದಕೆ
ನಿಮ್ಮ ನಲಿವು,,
ನಿಮ್ಮ ಸಾಂತ್ವನಕೆ
ನಮ್ಮ ಗೆಲುವು,,
ಇದುವೇ ಸ್ನೇಹ ಇದುವೇ ಪ್ರೀತಿ
ಇದುವೇ ಜೀವನ,,,
ತರಾವರಿ ರೀತಿ,,,

Happy Friendship day

ಚಿತ್ರ ಕೃಪೆ; ಅಂತರ್ಜಾಲ


03/08/2014

Saturday, 2 August 2014

ಕವನ

ಕಣ್ಬಾಣ,,,

ಅವಳ ಕವನದ ಕಣ್ಬಾಣಕೆ
ಅವರಾಗಿಯೇ ಎದುರಾಗಿ
ಎದೆಯೊಡ್ಡಿದ ತರುಣರು
ಅವಳಿಗೇಕೋ
ಎದುರಾಳಿಗಳಾಗಿ ಕಂಡರು,,

ಅವಳಿನ್ನೂ ಯುದ್ಧವ ಕೈಬಿಟ್ಟಿಲ್ಲ,
ಇವರೂ ಛಲವ ಕೈಬಿಟ್ಟಿಲ್ಲ,,
ಇದರ ನಡುವೆ ಅವನೂ ಬಂದೂ
ಎಲ್ಲಿಯೋ ಹೋದ,,

ಹುಡುಕಲೂ ಈಗ ತಾಳ್ಮೆಯಿಲ್ಲ,
ಸಿಕ್ಕರೂ ಈಗ ಕಾಲವಿಲ್ಲ,,
ಆದರೂ ಕವನಕ್ಕೇನು ಕಣ್ಣಿನ ಅಭಾವಲಿಲ್ಲ!!

02/08/2014

ಕವನ

"ನೀನು"

ನನ್ನೆಲ್ಲಾ ಆಲಾಪಗಳಿಗೆ
'ನೀನು' ಎನ್ನುವುದಷ್ಟೇ 'ಅಂಕಿತ',
ಬದಲಿ ಹೆಸರ ನೀಡಲಾರೆ
ಅವರಿವರದು;

ನೀನೋ ನನಗೆಂದೂ
ಸಿಗದಿದ್ದರೂ ಸರಿಯೆ,
ಸಂಧಿಸಿ ನಿರಾಶೆ ಮಾಡದಿರು,
'ಅಮೋಘ'ವೆಂಬ ಎನ್ನೆದೆಯ
ನಿನ್ನ 'ಪ್ರತಿಬಿಂಬ' ಮಂಕಾಗುವಂತೆ,

'ನೀನು' ನನಗೊಂದು ದೂರದ 'ದೀಪ'
ನಿನ್ನ ಸಂಙ್ಞೆಯಷ್ಟೇ ಸಾಕು
ಈ ಹಾದಿಗೆ,,, ಈ ಜನ್ಮಕೆ,,,

01/08/2014
ಮುನಿಸು ಸಾಧಿಸೊ
ಪ್ರೇಮವೂ ಹಿತವೇ,
ಮುನಿಸ ಸಂಭಾಳಿಸೋ
ಸ್ನೇಹವೂ ಇನಿತು ಹೆಚ್ಚೇ ಇನಿ,,

02/08/2014

____________________

ಎನ್ನನೇ ಪ್ರೀತಿಸಬೇಕೆಂದು
ತಪಸ್ಸು ಕುಳಿತಂತಿದೆ
ನಿನ್ನ ಮೌನ,,!!

01/08/2014

ಕವನ

ಈ ಸ್ನೇಹ,,,,

ನೋಡುತಾ ನೋಡುತಾ
ನಾ ನಿನ್ನೇ ನೋಡುತಾ
ನಿನ್ನ ಬೆರಗು ಮಾತನಾಲಿಸುತ,
ನಕ್ಕ ನಿನ್ನ ಹಾಗೆ ನಾನೂ ನಗುತ
ಹೇಗೋ ಇಷ್ಟವಾದೆ ನೀನಂದು,

ಇಂದು ಕಾಣದೇ ಕಾಡುತ
ಮೌನವ ತಾಳುತ
ಗತವಾಗಬಯಸಿಹೆ ಏನು?!
ಆಗದೊ ಗೆಳೆಯ,
ಈ ಸ್ನೇಹ ಸುಲಭವಲ್ಲವೊ
ತಿಳಿದಂತೆ ಒಡೆಯಲು
ವಿನಾ ಕಾರಣ ದೂರ ಸರಿಯಲು!

ಪ್ರೀತಿಗಾದರೂ
ಹಮ್ಮು-ಬಿಮ್ಮಿರಬಹುದು
ಮೋಹ ತೊರೆದ ಬಂಧವಿದು
ಪರಸ್ಪರ ಸಂತಸ ನೆಮ್ಮದಿಗಳಷ್ಟೇ
ಕಾಳಜಿಯಿದೆ ಪ್ರೀತಿಯಿದ್ದರೂ
ಈ ಬೆಸುಗೆಯಲಿ,,
ನಮ್ಮೀ ಮೈತ್ರಿಯಲಿ!!

31/07/2014


ಈ ಒಡೆದ ಮನಸು
ನಿನ್ನೊಳಗೂ ಉಳಿದಂತೆ
ಕಣ್ಣೀರಾದ ಹೊತ್ತು
ನೀನಿನ್ನೂ ನನಗೆ ಹತ್ತಿರ!

31/07/2014

__________________

ಮನಸ್ಸು ಓಡದಿದ್ದಾಗ
ನಾನೇ ಓಡುತ್ತೇನೆ
ಉಷ್ಣವೇರಿಯಾದರೂ
ಮಂಡೆ ಬಿಸಿಯಾಗಿ
ಹೃದಯ ಕರಗಬಹುದೆಂದು
ಇನ್ನೆಷ್ಟು ಕಾಲ ಹೀಗೆ ಹೆಪ್ಪಾಗಲಿ
ನಿನ್ನ ವಿರಹದಲಿ,,,

30/07/2014

________________________

ಕೋಪಕ್ಕೂ ಕಾರಣ ಪ್ರೀತಿಯೇ
ನಿನ್ನ ಅತಿಯಾಗಿ ಹಚ್ಚಿಕೊಂಡ ಕಾರಣಕ್ಕೆ
ನಿನ್ನ ಮೇಲೆ ನನಗೆ ಅಷ್ಟೇ ಕೋಪ
ನೀ ನನ್ನೆದುರು ಇನ್ನೂ ಬಾರದಿರೆ,
ನಾನೆಲ್ಲೇ ನಡೆದು ಹೋದರೂ
ಹಿಂಬಾಲಿಸೋ ನಿನ್ನ ಮಾತುಗಳ ಮೇಲೆ
ಕನಸಿಗೂ ತೂರಿ ಕೆಣಕೊ ನಿನ್ನ ಮೌನಕೆ
ಹೌದು ಕೋಪವೇ ನನ್ನ ಹುಟ್ಟು ಗುಣ
ಬಹುಶಃ ನಾ ತುಂಬಾ ಪ್ರೀತಿಸುವವಳೇನೋ,,,!!

29/07/2014