ಪ್ರಙ್ಞೆ ತಪ್ಪಿ ನಿದ್ರಿಸಿದವಳಿಗೆ
ನೀರೆರಚಿ ಎಚ್ಚರಿಸಿದಂತೀ ಮಳೆ
ಕಣ್ಣುಜ್ಜಿ ನೋಡಲೀ ಶಾಂತ ಜಗವ
ನೆನಪು ರಾಚಿದಂತೆ ಕಣ್ಮನ ಹುಡುಕಿದ್ದು ನಿನ್ನನ್ನೇ
ವಾಸ್ತವದಲ್ಲಿಲ್ಲದ ನಿನ್ನನ್ನೇ.....
10/04/2014
***
ಈಗಾಗಲೇ ವ್ಯರ್ಥವಾಗಿ
ಕಳೆದ ಹೊತ್ತುಗಳನ್ನು
ಪೋಣಿಸಿಕೊಳ್ಳುವಾಸೆ
ನಿನ್ನ ಮುತ್ತುಗಳಲಿ
ಎಂದು ಇದಿರುಗೊಳ್ಳುವೆ
ಓ ನನ್ನ ಚಂದಿರನೇ,
ಯಾರಿಲ್ಲ ಈ ಧರೆಯಲಿ
ನಿನ್ನಂತೆ ಎನ್ನ ಸೆಳೆದವ
ಅಂದಿಗೂ ಇಂದಿಗೂ
ನಡುವೆ ನಿರಂತರ,,,
***
(ಕಳೆದ ಭಾವದಳೊಮ್ಮೆ ಕರಗಿ)
ನನ್ನಿಂದ ನಿನಗೆ
ನಿನ್ನಿಂದ ನನಗೆ
ಬೇಡವೀ ಅನುಕಂಪ,
ಹಾಗೆಯೇ ಬೇಡ
ನಮ್ಮಿಬ್ಬರಿಗೂ
ನೋಡುವ ಜಗದ ಜನರದು,
ಸಾಧ್ಯವೇ ಈ ಬದುಕು
ಎಡವಿತೆಂದೊಮ್ಮೆ ಮರುಗದೆ
ಮತ್ತೊಂದು ಹೊಸ ಬಾಳು?!!
***
ಬೇಡುವಾಗ ಏನೇನೂ ಫಲಿಸದು
ಬಿಟ್ಟು ಮುನ್ನೆಡೆವಾಗ ಎಲ್ಲವು ಫಲಿಸಿ ನಿಲ್ಲುವುದು
ನನಗದರ ಒಲವೇ ಇಂಗಿ ಹೋಗಿರುವುದು
ಕಾಲನ ನಿಯಮವೆಲ್ಲಿ ತಪ್ಪಿತೊ ಕಾಣದು
***
ರಾಮನ ಕಾಣಲು ಮನಸಿಗೆ
ಹನುಮನ ಹಸ್ತ ಬೇಕಿದೆ;
ಅವನ ಒಲಿಸಿಕೊಳ್ಳಲು
ಮತ್ತೂ ನಾ ರಾಮನೇ ಜಪಿಸಬೇಕಿದೆ,,
ಜೈ ಶ್ರೀ ರಾಮ್, ಜೈ ಹನುಮಾನ್
***
ಭಕ್ತಿಯ ಆಚರಣೆಗಳಿಗಿಂತ
ನೀತಿಯ ಅನುಸರಣೆಗಳಲ್ಲಿ
ನೆಮ್ಮದಿ ಕಾಣುವ ಮನಸ್ಸು
ಸದಾ ಇದ್ದಲ್ಲೇ ಕೈಲಾಸವ ಕಾಣ್ವದು
***
ರಾಮನೆಂದರೂ ಕೃಷ್ಣನೆಂದರೂ
ಒಬ್ಬನೇ
ಆ ಯುಗಪುರುಷನೆನುವಾಗ
ರಾಮನಿಗೆ
ರಾಧೆಯಾಗುವ ಕನಸಿದೆ
ಸೀತೆಯೊಳು
ಕಲಿಯುಗದಿ,,,
08/04/2014
***
ಕದ್ದಿದಷ್ಟೇ ಕನಸು
ಬಿತ್ತಿದೆಲ್ಲಾ ಬದುಕು
ನೀ ಕಂಡಂತೆ
ನಾ ಕಂಡಂತೆ
ಜಗ ಕಣ್ಮುಂಚಿಕೊಂಡಂತೆಯೂ,,
07/04/2014
***
ಏದುಸಿರು ಬಿಡುವಂತೊಮ್ಮೆ
ನಿನ್ನ ಕಂಡಾಗ,
ಎನ್ನೆದೆಯಲೇನೋ
ಆವೇಗ,
ಕನಸೇ ಕಣ್ಮುಂದೆ
ನಿಂತಿರುವಾಗ
ಬಿಗಿದಪ್ಪಿದ ಕನಸುಗಳೆಲ್ಲಾ
ಕೆರಳಿದಂತೆ
ನಲಿದಾಡಿದೆ
ನನ್ನೆಲ್ಲಾ
ಹಿಡಿದಿಟ್ಟ ಭಾವಗಳು
ಒಮ್ಮೆಲೇ
ಚಿಮ್ಮಿದಂತೆ
ಹರಿದಾಡಿದಂತೆ
ಕೈಜಾರಿ ನಿನ ಬಯಸಿದಂತೆ,
ಕಲ್ಪಿತ ಕನಸು ಇದಿರಲಿ
ಸುಳಿದಾಡಿದಂತೆ
ಒಲವರಳಿಸೊ
ಸ್ಫೂರ್ತಿ ಸಿಕ್ಕಂತೆ,,,
***
ಅಭಿಮಾನದ ಕಣ್ಣುಗಳಲ್ಲಿ
ನೋಡಿದ್ದೆಲ್ಲವೂ ಸುಂದರವೇ,,
ಅದು ಅಭಿಮಾನದ ತಪ್ಪೇ,,,,
06/04/2014
***
ನನ್ನ
ಪ್ರೀತಿಗೆ
ನೀನಿಟ್ಟ
ಹೆಸರು
ವಿರಹ;
ಈಗದು
ಮುಗಿಯದ
ಬರಹ
01/04/2014
No comments:
Post a Comment