Monday, 6 May 2013

ಚುಟುಕುಗಳು

   ಹರಿಬಿಟ್ಟೆ


ಬಚ್ಚಿಟ್ಟು, ಮುಚ್ಚಿಟ್ಟು


ಕುಳಿತಿದ್ದೆ ನಾ ಭಾವನೆಗಳ ಮೂಟೆಕಟ್ಟಿ,


ಬಿಚ್ಚಿಟ್ಟು, ಹರಿಬಿಟ್ಟೆ


ನಿನ್ನ ಕಂಡ ಕ್ಷಣದಿಂದ ಕನಸೊಂದನ ಕಟ್ಟಿ.


     ಜಗವು

ನಿನ್ನ ಜಗವು ಬಹು ದೊಡ್ಡದು

ನಾನೆಲ್ಲೋ ಅದರೊಳು ಕಾಣದಂತಿದ್ದು,

ನನ್ನ ಜಗವು ಬಹು ಚಿಕ್ಕದು

ನೀ ನನ್ನೊಳಗೇ ಇರುವಂತಿದ್ದು.


    ಪ್ರೀತಿ

ಮನಕ್ಕೆ ಸಿಗದದ್ದು,
ಸಿಕ್ಕಾಗ ದಕ್ಕದದ್ದು,
ಮರೆತಾಗ ನೆನೆದದ್ದು,
ಬಯಸಿದಾಗ ಪಲಾಯನವಾದದ್ದು,
ನಾ ಮುಂದೆ ನೆಡೆದಾಗ
ಹಿಂದೆ ಅತ್ತದ್ದು………

(ದಿವ್ಯ ಆಂಜನಪ್ಪ)

ಹನಿಗವನ

**ನಯನ ಚಂದ್ರ**

ನಯನಗಳ ಭಾವ ಸರೋವರದಲಿ
ಮೂಡಿ ಬಂದ ಚಂದಿರ ನೀನು,
ತೇಲಿ ತೇಲಿ ಮೂಡಿದೆ 
ಮನದೊಳು ನಿನ್ನ ಬಿಂಬ
ಕಾಡದಿರು ನೀ ವಿಚಲಿತನಾಗಿ,
ಕಾಡಿ ಕಂಬನಿಗಳಲಿ ಜಾರಿ ಹೋಗದೆ
ಸೆರೆಸಿಕ್ಕಿ ನನ್ನವನಾಗಿಬಿಡು ಕಣ್ ರೆಪ್ಪೆಗಳಲಿ.

(ದಿವ್ಯ ಆಂಜನಪ್ಪ)

ಹನಿಗವನ

  ಹುಣ್ಣಿಮೆಯ ರಾತ್ರಿ



ಸಿಗಬೇಕು ಗೆಳೆಯ,
ಹುಣ್ಣಿಮೆಯ ರಾತ್ರಿಯಲಿ,
ಬೆಳದಿಂಗಳ ಬೆಳಕಿನಲಿ,
ಕಣ್ಣು ಮುಚ್ಚಾಲೆ ಕನಸಿನಲಿ,,,
ಆ ಮಬ್ಬುಗತ್ತಲಲಿ,
ಸೌಂದರ್ಯ ಸವಿಯುವ, 
ನಿನ್ನ ಕಣ್ಣೋಟದ ಪ್ರಖರತೆಯಲಿ,
ಉನ್ಮತ್ತಳಾದಂತ ಅನುಭವ
ಕಳೆದಿರುಳ ಮಂಪರು ನಿದಿರೆಯಲಿ,,,

-ದಿವ್ಯ ಆಂಜನಪ್ಪ

ಹನಿಗವನ

**ಅವನು**

ಮಾತಾಡಿದಂತೆ ಮಾಡಿ
ಮೌನದ ಮನೆ ಹೊಕ್ಕಿಬಿಡುವನು,
ಏನಿದೆಯೋ ತಲ್ಲಣ ಅವನೊಳಗೆ
ಅದ್ಯಾವ ಲೆಕ್ಕಾಚಾರವೊ?
ಸಂವೇದನೆಗಳಲ್ಲೇ ತೇಲಿ ಹೋಗುವೆನು ನಾನು,
ಲಾಭ ನಷ್ಟಗಳಲ್ಲಿ ಮುಳುಗಿರುವನು ಅವನು,
ಹೇಗಿದೆ ನಮ್ಮ ಈ ಬಂಧನ?
ಬೇಸರವೇ ತರಿಸಿದೆ ಜೀವನ.,,,,,



-ದಿವ್ಯ ಆಂಜನಪ್ಪ

ಕವನ

ಚಂದಿರ


ಎಲ್ಲೆಲ್ಲಿ ಹೋದರೂ
ಅಲ್ಲಲ್ಲಿ ಬರುವ
ದೂರದಲ್ಲೇ ಇರುವ
ನನ್ನ ನೋಡಿ ನಗುವ

ದುಂಡು ಮುಖದ ಚೆಲುವ
ನನಗಾಗಿಯೇ ಕಾವಲಿರುವ  

ಬೇಡವೆಂದರೂ ಹಿಂಬಾಲಿಸಿ ಬರುವ
ನಾ ಎಲ್ಲಿ ನಿಂತರಲ್ಲಿ ನಿಲುವ

ರಾತ್ರಿ ಸಿಗುವೆನೆಂದರೂ ಬಿಡವ
ಮುಸ್ಸಂಜೆಯಲ್ಲಿಯೇ ಕಾಡುವ 

ಎನ್ನ ಮನವ ಕದ್ದವ
ಬಾನ ಚಂದಿರ, ನನ್ನ ಮಾಧವ


-ದಿವ್ಯ ಆಂಜನಪ್ಪ

Friday, 3 May 2013

ಕವನ

                "ಚೇತನ"

ಸುಮ್ಮಸುಮ್ಮನೆ ಕೋಪಗೊಳ್ಳುವ ಗೆಳೆಯನೆ,
ಅದರ ಪರಿಣಾಮದ ಅರಿವು ನಿನಗಿದೆಯೇ?
ನಿನ್ನ ಕೋಪ-ತಾಪಗಳ ಪ್ರಖರತೆಯು,
ಭಾವದುಂಬಿ ಮಳೆಗರೆವ  ಮನದ ಬಾಂದಳದ
ಮೋಡಗಳನ್ನೇ ಆವಿಯಾಗಿಸಿದೆ;
ಶೂನ್ಯಸ್ಥಿತಿಯ ಮನಕ್ಕೆ ಶುಷ್ಕತೆಯು ಒದಗಿ
ಬರುಡಾಗುವ ಮುನ್ನ;
ನೀ ಬದಲಾಗಿ, ಮೋಡವಾಗಿ
ಮಳೆಯಾಗಿ, ನಗುವಾಗಿ, ಒಲವಾಗಿ
ಹರಿದುಬಿಡು ನನ್ನೋಳ "ಚೇತನ"ವೇ ನೀನಾಗಿ.

-ದಿವ್ಯ ಆಂಜನಪ್ಪ

ಚುಟುಕುಗಳು

೧*ಪ್ರೀತಿ*

ಪ್ರೀತಿಯೊಂದು ಮಾಯೆ
ಬೇಕೆನಿಸಿದಾಗ ಸಿಗದೆ,
ಬೇಡವೆಂದಾಗ ಬಿಡದೆ,
ಸೆಳೆದೇ ತೀರುತ್ತದೆ.

೨*ಬೇಸರ*

'ಬೇಸರ ಬೇಸರ'ವೆಂದು
ಬೇಸರಿಸಿ ಕಳೆದ 'ಬೇಸರವ'
ಮತ್ತೆ ಅರಸದಿರು ನನ್ನರಸಿ
ಈ 'ಸರಸ'ದ 'ಅವಸರ'ದೊಳ್.

೩*ಜೊತೆ*

ಜೊತೆಯಲಿ ಇದ್ದ,
ಜೊತೆಯಲಿ ಇಲ್ಲದ,
ಜೊತೆಯಲಿ ಇದ್ದೂ ಇಲ್ಲದಂತಿದ್ದ,
ಜೊತೆಯಾಗಲಿದ್ದ,
ಎಲ್ಲಾ ಜನರು,
ನನ್ನ ಚಿತೆಗೆ ಬೆಂಕಿಯಿಡಲು
ಈಗ ಜೊತೆಯಾಗಿದ್ದಾರೆ.


೪*ನಕ್ಕರೆ ಬಿದ್ದಳೆಂದು ತಿಳಿದವನ ಪಾಡು*

ಕಿಸಕ್ಕನೆ ನಕ್ಕಳೆಂದು
ದಬಕ್ಕನೆ ತಬ್ಬಿದೆ
ಪಟಾರನೆ ಹೊಡೆಯಲು
ಕಿಟಾರನೆ ಅರಚಿದೆ

೫*ಮರೆವು*

ಅಂದು ನನ್ನ ಮರೆಯೆಂದು 
ಮರೆಯಾದವ,
ಇಂದು ನನ್ನ ನೆರೆಯಲ್ಲಿ
ಮತ್ತೆ ಕಾಣದಿರು,
ಎಂದೋ ಮರೆತವನಂತೆ ನಟಿಸುತ.

೬*ಬೇಸರ*

ನನ್ನೆಡೆಗೆ ಯಾರಿಗೂ
ಪ್ರೀತಿಯಿಲ್ಲದಿದ್ದರೂ
ನಾ ಬೇಸರಿಸಲಾರೆ,
ನನ್ನೆಡೆಗೆ ಪ್ರೀತಿ ಹೊಂದಿದವರು
ತಟಸ್ಥರಾದಾಗ
ನಾ ಬೇಸರಿಸದೆ ಇರಲಾರೆ


 ೭*ಆಸೆ*

ಮಾತಿನಲ್ಲಿರದ ಭಾವ
ನಿನ್ನ ಮೌನದಲ್ಲಿದೆ,
ಸಾಮಿಪ್ಯದಲ್ಲಿರದ ಸೆಳೆತ
ಈ ವಿರಹದಲ್ಲಿದೆ,
ಹೊನ್ನಿನಲ್ಲಿರದ ಹೊಳಪು
ನಿನ್ನ ಕಣ್ಣಿನಲ್ಲಿದೆ,
ನನ್ನೋಳಿಲ್ಲದ ಕನಸು
ನಿನ್ನ ಆಸೆಯಲ್ಲಿದೆ...



-ದಿವ್ಯ ಆಂಜನಪ್ಪ

Thursday, 2 May 2013

ಲೇಖನ:


"ಮಾತೃ ದೇವೋ ಭವ"

 *********************

‘ತಾಯಿಯ ಮಡಿಲು'


ಬೇಡುವೆನು ವರವನ್ನು

ಕೊಡು ತಾಯಿ ಜನ್ಮವನು

ಕಡೆತನಕ ಮರೆಯೊಲ್ಲ ಜೋಗಿ…

ಕಡೆತನಕ ಮರೆಯೊಲ್ಲ ಜೋಗಿ.......

…ಎನ್ನುವ 'ಜೋಗಿ ಚಿತ್ರದ ಗೀತೆಯನ್ನು ನಾವೆಲ್ಲಾ ಟೀವಿ, ರೇಡಿಯೋಗಳಲ್ಲಿ ಕೇಳಿರುತ್ತೇವೆ. ಇದು ೨೦೦೫ ರಲ್ಲಿ ತೆರೆಕಂಡ 'ಶಿವರಾಜ್ ಕುಮಾರ್' ನಾಯಕ ನಟನ ಸೂಪರ್ ಹಿಟ್ ಚಲನ ಚಿತ್ರ.  ಈ ಚಿತ್ರ ಬಿಡುಗಡೆಯದಾಗ ಹೆಚ್ಚು ಸಿನೆಮಾ ಮಂದಿರಕ್ಕೆ ಹೋಗದವಳಾದ ನಾನು ಸಹ ಈ ಹಾಡಿಗೆ ಮನಸೋತು ಚಿತ್ರ ನೋಡಲು ಹೋಗಿದ್ದೆ.  ಚಿತ್ರ ತುಂಬಾ ಚೆನ್ನಾಗಿತ್ತು. ತಾಯಿ ಪ್ರೀತಿ ಪ್ರಧಾನವಾದ ಚಿತ್ರ, ಎಂತಹವರನ್ನು ಬರಸೆಳೆಯುವ ಪ್ರೀತಿಮೂರ್ತಿ "ತಾಯಿ". ಅಂತಹ ತಾಯಿಯನ್ನು ಜೀವನದಲ್ಲಿ ಪಡೆದು ಉಳಿಸಿಕೊಂಡವರೇ ನಿಜವಾದ ಅದೃಷ್ಟವಂತರು ಎಂದು ಭಾವಿಸುವವಳು ನಾನು.


.ಹುಟ್ಟಿದ ಮಗುವಿನ ಲಾಲನೆ, ಪೋಷನೆಯನ್ನು ಮಾಡುವುದರಲ್ಲಿ ತಾಯಿಯು ತನ್ನ ಎಲ್ಲಾ ನೋವನ್ನು ಮರೆಯುತ್ತಾಳೆ. ನಿಸ್ವಾರ್ಥ ತಾಯಿ ಪ್ರೀತಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅತೀ ಅವಶ್ಯಕ. ಹುಟ್ಟಿದ ಪ್ರತೀ ಮಗುವು ಭೂಮಿಯ ಮೇಲೆ ಕಾಲೂರಿ ನಿಲ್ಲಬೇಕಾದರೆ ಹೆತ್ತ ತಾಯಿಯ ಪರಿಶ್ರಮ ಅಷ್ಟಿಷ್ಟಲ್ಲ. ಮಗುವಿಗೆ ತಾಯಿಯೇ ಮೊದಲ 'ಗುರು'. ಮಾನವರಾಗಿ ಹುಟ್ಟಿದ ಮೇಲೆ ಮಾತು, ಸಂವಹನ ಅವಶ್ಯಕವಾಗಿದೆ. ಮಗುವಿಗೆ ಮೊದಲ ಮಾತನ್ನು ತಾಯಿಯೇ ನೀಡುರುತ್ತಾಳೆ. ಸದಾಕಾಲ ಮಗುವಿನೊಂದಿಗೆ ಸಮಯವನ್ನು ಕಳೆಯುವ ತಾಯಿ, ಮಾತು ಬಾರದ ಮಗುವಿನೊಂದಿಗೆ ಸಂಭಾಷಿಸುತ್ತಿರುತ್ತಾಳೆ. ಆಲಿಸುವುದರ ಮೂಲಕ ಮಗುವು ಶಬ್ದಗಳನ್ನು ಗ್ರಹಿಸುತ್ತಿರುತ್ತದೆ. ಒಂದು ವರ್ಷ ವಯಸ್ಸಿನ ನಂತರ ಮಗುವು ಪುನರ್ರುಚ್ಚರಿಸುವ ಪ್ರಯತ್ನದಿಂದ ಮಾತನ್ನಾಡುವುದನ್ನು ಕಲಿಯುತ್ತದೆ. ತಾಯಿಯು ಯಾವ ಭಾಷೆಯಲ್ಲಿ ಮಗುವಿನೊಂದಿಗೆ ಸಂಭಾಷಿಸುತ್ತಾಳೊ ಮಗುವು ಆ ಭಾಷೆಯನ್ನು ಕಲಿಯುಲು ಆರಂಭಿಸುತ್ತದೆ. ಇದನ್ನೇ "ಮಾತೃ ಭಾಷೆ" ಎನ್ನುವುದು. ಆದ್ದರಿಂದಲೇ ನಮಗೆ ಮಾತೃ ಭಾಷೆಯ ಮೇಲೆ ಎಲ್ಲಿಲ್ಲದ ಪ್ರೀತಿ ಹಾಗೂ ಭಾಷೆಯನ್ನು  ಹಚ್ಚಿಕೂಂಡುಬಿಡುತ್ತೇವೆ.ತನ್ನ ತಾಯಿ ಕಲಿಸಿದ "ಭಾಷೆ", "ತಾಯ್ನಾಡಿನ ಭಾಷೆ" ಒಮ್ಮೆಲೆ ತಾಯಿಯ ಮೇಲಿನ ವ್ಯಾಮೋಹವನ್ನು ಪಡೆದುಕೊಂಡಬಿಡುತ್ತದೆ.


 "ತಾಯಿ" ಎಂದರೆ ಒಂದು ಬೆಂಬಲವಿದ್ದಂತೆ, ಜಗತ್ತಿನಲ್ಲಿನ ಅತೀ ಸಧೃಡ ಬೆಂಬಲವಾಗಿದೆ. ನಮ್ಮೊಂದಿಗೆ ಯಾರೇ ಇರಲೀ, ಇಲ್ಲದಿರಲೀ, ತಾಯಿಯ ಮಮತೆಯೊಂದೇ ನಮಗೆ ಬದುಕಲು ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಜೀವನದಲ್ಲಿನ ಸೋಲು ಗೆಲುವನ್ನು ಸಮಾನವಾಗಿ ಕಾಣಲು ಈ ಆತ್ಮವಿಶ್ವಾಸವು ಸಹಕಾರಿಯಾಗಿರುತ್ತದೆ. ತಾಯಿಯೊಂದಿಗಿರುವವರಿಗೆ ನನ್ನ ಈ ಮಾತುಗಳು ಅಷ್ಟು ರುಚಿಸದಿರಬಹುದು. ಆದರೆ ತಾಯಿ ಪಾತ್ರವನ್ನು ಕಳೆದುಕೊಂಡ ವ್ಯಕ್ತಿ ಬಹುಶಃ ಹೌದೆನ್ನಬಹುದು. ಜೀವನದಲ್ಲಿನ ಯಾವುದೇ ರೀತಿಯ ಸೋಲಾದರೂ ತನ್ನ ತಾಯಿ ಮಡಿಲನ್ನು ಸೇರಿ, ಸುಮ್ಮನೆ ಮಲಗಿಬಿಟ್ಟರೂ, ಕಣ್ಣೀರ ಹನಿಗಳಲ್ಲಿ ಸೋಲೆಂಬ ನೋವು ಹರಿದು ಹೊರನಡೆದುಬಿಡುತ್ತದೆ. ತಾಯಿಯ ಕೈಗಳು ನಮ್ಮ ತಲೆಯನ್ನು ನೇವರಿಸಲು, ರಮಿಸಲು ನಾವು ಪುನಃಶ್ಚೇತನಗೊಳ್ಳಲಾರಂಭಿಸುತ್ತೇವೆ. ಮತ್ತೆ ಯಾವುದೇ ರೀತಿಯ ಸವಾಲಿಗೂ ಮೈಯೊಡ್ಡಲು ಸಿದ್ದರಾಗಿ ನಿಲ್ಲುತ್ತೇವೆ. ಅದುವೇ ತಾಯಿ ಎಂಬ ಪ್ರೀತಿ ಮತ್ತು ಬೆಂಬಲ.ಅದೇ ರೀತಿ ತಾಯಿಯಿಲ್ಲದೇ ಬೆಳೆದ ವ್ಯಕ್ಠಿಗಳಲ್ಲಿ ನಾವು ಅನೇಕ ರೀತಿಯ ಸಮಸ್ಯೆಗಳನ್ನು ಕಾಣುತ್ತೇವೆ. ಎಲ್ಲರೆದುರು ಸಾಮಾನ್ಯರಾಗೆ ಕಾಣುವ ಅವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಯಾರೊಂದಿಗೂ ಹೆಚ್ಚು ಬೆರೆಯದಿರುವುದಕ್ಕೆ ಈ ದೌರ್ಬಲ್ಯವೇ ಕಾರಣವಾಗಿರುತ್ತದೆ. ಯಾರು ಹೇಗೋ? ಹೇಗೆ ಮಾತನಾಡಬೇಕು? ಮಾತನಾಡಿದರೆ ಏನು ತಪ್ಪಾಗುವುದೋ?ಎಂಬ ಪ್ರಶ್ನೆಗಳು ಮತ್ತು ಆತಂಕಗಳಲ್ಲಿಯೇ ಅವರು ಕಳೆದುಹೋಗಿರುತ್ತಾರೆ. ಇತರರೊಂದಿಗೆ ಬೆರೆಯುವ ಹೆಚ್ಚು ಪ್ರಸಂಗಗಳಿಂದ ದೂರವೇ ಉಳಿಯಲು ಆಶಿಸುತ್ತಾರೆ. ಇದರ ಪರಿಣಾಮವು ಅವರ ವೈಯಕ್ತಿಕ ಕೆಲಸ ಕಾರ್ಯಗಳ ಮೇಲೂ ಉಂಟಾಗಿ 'ಸೋಮಾರಿಗಳು', 'ಅಹಂಕಾರಿಗಳು' ಎಂಬ ಬಿರುದುಗಳಿಗೆ ಪಾತ್ರರಾಗಿಬಿಡುತ್ತಾರೆ. ಹೊರಗಿನ ಜನರಿಗೆ ಇಂತಹ ವ್ಯಕ್ತಿಗಳು ಅಹಂ ಉಳ್ಳವರು ಎಂದೇ ಭಾವಿಸಲ್ಪಡುತ್ತಾರೆ. ಒಮ್ಮೆ ಅಂತಹವರೊಂದಿಗೆ ಆತ್ಮೀಯವಾಗಿ ವ್ಯವಹರಿಸಿ ನೋಡಿ, ಅವರಲ್ಲಿನ ಮುಗ್ದ ಮನಸ್ಸು ನಮ್ಮರಿವಿಗೆ ಬರುವುದು. ಹಾಗೇಯೆ ಅವರಲ್ಲಿನ ಪ್ರತಿಭೆಗಳು. ಮೃದು ಮನವು ಪಕ್ವವಾಗಲು ಅನುಭವಗಳೊಂದಿಗೆ ತಾಯಿ ಪ್ರೀತಿ ಎಂಬ "ಭರವಸೆ"ಯೂ ಅಗತ್ಯವೆಂದು  ನನಗನಿಸುತ್ತದೆ.



ದೇವನು ಎಲ್ಲಾ ಸ್ಥಳಗಳಲ್ಲೂ ಇರಲು ಸಾಧ್ಯವಿಲ್ಲವೆಂದು ತಾಯಿಯ ರೂಪದಲ್ಲಿ ಅವನಿರುತ್ತಾನೆ ಎಂಬ ಮಾತಿದೆ. ಅದರಂತೆ ಮನುಷ್ಯನ ಜೀವನದಲ್ಲಿ ದೇವತೆಯಾಗಿ ತಾಯಿಯಿರುತ್ತಾಳೆ. ತಾಯಿಗೂ ಮಗುವಿಗೂ ಕನಿಷ್ಟ ೨೦ ವರ್ಷಗಳ ಅಂತರವಿರುತ್ತದೆ. ಆದಕಾರಣ ವ್ಯಕ್ತಿಯು ತನ್ನ ಜೀವನದಲ್ಲಿ ತಾಯಿಯ ನಂತರ ತನ್ನ ಹೆಂಡತಿಯ ರೂಪದಲ್ಲಿ ತಾಯಿಯ ಪ್ರೀತಿಯನ್ನು ಸವಿಯುತ್ತಾನೆ. ಗಂಡು ಜಾತಿಗೆ ಇದೊಂದು ವರದಾನವೇ ಸರಿ. ಯೌವ್ವನದಲ್ಲಿ ಗಂಡ-ಹೆಂಡಿರಾದವರು ಕಾಲಕಳೆದಂತೆ ವೃದ್ದರಾಗುವಾಗ, ವಯಸ್ಸಾದ ತನ್ನ ಹೆಂಡತಿಯು, ಯೌವ್ವನದಲ್ಲಿ ಕಂಡ ತನ್ನ ತಾಯಿಯೇ ಆಗಿ ಕಾಣುತ್ತಾಳೆ. ದೀರ್ಘ ಕಾಲದ ದಾಂಪತ್ಯದಿಂದ ಸಂಬಂಧದಲ್ಲಿ ಸಾಮರಸ್ಯವನ್ನು ಸಾಧಿಸಿದ ದಂಪತಿಗಳಲ್ಲಿ ಇಂತಹ ಅದ್ಬುತ ಪವಾಡವನ್ನು ನಾವು ಕಾಣಬಹುದು. ಈ ಕಾರಣದಿಂದಲೇ ವೃದ್ದರಾಗುತ್ತಾ ಬಂದಂತೆ ಕೆಲವರು ತಮ್ಮ ಹೆಂಡತಿಯನ್ನು ಮೊದಲಿಗಿಂತಲು ಹೆಚ್ಚು ಪ್ರೀತಿಸಲು ಪ್ರಾರಂಭಿಸುತ್ತಾರೆ. ಗಂಡನಿಗೆ ಹೆಂಡತಿಯೇ ತಾಯಿಯಾಗಿರುತ್ತಾಳೆ. ಅಂತಹ ಮಾತೃ ಹೃದಯ ಹೆಣ್ಣಿನದು. ಹೆಣ್ಣಿನಲ್ಲಿ ಸದಾ ಕಾಲ ಮಾತೃ ಹೃದಯವೊಂದು ಮಿಡಿಯುತ್ತಿರುತ್ತದೆ.ತನಗಿಂತ ಹಿರಿಯರಾಗಲೀ; ಕಿರಿಯರಾಗಲೀ, ಅವಳನ್ನು ಮಾತೃ ಸ್ವರೂಪಿಯಾಗಿ ಕಂಡರೆಂದರೆ ಅವರಿಗಾಗಿ ಆಕೆ ಮಾತೃವೇ ಆಗಿಬಿಡುವಳು. ಅಂತಹ  ಹೃದಯ ವೈಶಾಲ್ಯತೆ ಹೆಣ್ಣಿನಲ್ಲಿದೆ. ಹೆಣ್ಣಿನ ಜೀವನದಲ್ಲಿನ ಅತೀ ಸುಖಕರ ಸಂಗತಿಯೆಂದರೆ ತಾಯಿಯಾಗುವುದು ಎಂದೇ ಅವಳು ಭಾವಿಸುತ್ತಾಳೆ. ಮಾತೃ ಹೃದಯೀ ಹೆಣ್ಣಿನಲ್ಲಿ ಸದಾ ಕಾಲ ಮಾತೃತ್ವದ ಹಂಬಲವೊಂದಿರುತ್ತದೆ. ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ನಾವಿದ್ದನ್ನು ನೋಡಿರುತ್ತೇವೆ. ಕೆಲವೊಮ್ಮೆ ಅನುಭವಿಸಿರುತ್ತೇವೆ. ಮಾತೃ ಪ್ರೇಮದಿಂದ ಯಾರೆಡೆಗೋ ಮಗ, ಮಗಳು. ಮಕ್ಕಳು ಎಂದು ಮಿಡಿದಾಗ ಮರುಕ್ಷಣ ಸಣ್ಣ ನಾಚಿಕೆಯೊಂದು ನಮ್ಮನ್ನು ನಾಚಿಸಿರುತ್ತದೆ. ಮತ್ತೆ ವಾಸ್ತವಕ್ಕೆ ಮರುಳಬೇಕಾಗುತ್ತದೆ.. ಇವುಗಳೆಲ್ಲಾ ಹೆಣ್ಣಿನಲ್ಲಿನ ಸಹಜ ಗುಣಗಳು ಎಂದೇ ನಾನು ಭಾವಿಸುತ್ತೇನೆ.


.'ಹೆತ್ತವರಿಗೆ ಹೆಗ್ಗಣ ಮುದ್ದು', ಎನ್ನುವಂತೆ 'ತಾಯಿ'ಯು ನಮ್ಮ ಓರೆ-ಕೋರೆಗಳನ್ನು ತನ್ನವೆಂದು ಪ್ರೀತಿಸುತ್ತಾಳೆ. ಪ್ರಪಂಚದೆದುರು ನಿಲ್ಲುವಾಗ ನಮ್ಮ ಓರೆ-ಕೋರೆಗಳು ನಮ್ಮ ಕೀಳೆರಿಮೆಗಳಾಗಿ ಭಾದಿಸದಂತೆ ತಾಯಿ ಪ್ರೀತಿ ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಯಾವಾಗ ಈ ಪ್ರೀತಿಯ ಕೊರತೆಯುಂಟಾಗುತ್ತದೆಯೋ ಅಂದು ಸಕಲ ಸುಗುಣಗಳನ್ನು ಹೊಂದಿದ್ದರೂ, ಮನದ ಮೂಲೆಯಲ್ಲೊಂದು 'ಅಳುಕು' ಅಡಗಿ ಕುಳಿತುಬಿಡುತ್ತದೆ. ಈ ಕಾರಣದಿಂದ ವ್ಯಕ್ತಿ ದುರ್ಬಲನಾಗುತ್ತಾ ಹೋಗುತ್ತಾನೆ. ಆದ್ದರಿಂದಲೇ ಹೇಳುವುದು, ಪ್ರತೀ ಯಶಸ್ವೀ ಗಂಡಿನ ಹಿಂದೆ ಒಬ್ಬಳು ಮಾತೃ ಸ್ವರೂಪಿ ಹೆಣ್ಣಿರುವಳೆಂದು. ನೀವು ಪ್ರಶ್ನಿಸಬಹುದು "ಎಲ್ಲಾ ಹೆಣ್ಣುಗಳು ಮಾತೃ ಸ್ವರೂಪಿಯೇ ಆಗಿರುತ್ತಾರೆಯೇ? ಹೆಂಡತಿ, ಮಗಳು, ಗೆಳತಿ- ಇವರು ಯಾಕಾಗಬಾರದು?" ಎಂದು. ಹೌದು ಅವರೂ ಆಗಿರಲು ಸಾಧ್ಯವಿದೆ. ಅವರು ನಿಮ್ಮೆಡೆಗೆ ಮಾತೃತ್ವವನ್ನು ಹೊಂದಿದ್ದೇ ಆದರೆ ಖಂಡಿತ ಸಾಧ್ಯ. ಗೆಳೆಯರೊಬ್ಬರ ಲೇಖನದಲ್ಲಿ ಓದಿದ್ದೆ, "ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ, ಅವರನ್ನು ಅರ್ಥ ಮಾಡಿಕೊಳ್ಳಲು ಹೋಗಲೇಬಾರದು" ಎಂದು. ಇಲ್ಲಿಯವರೆಗೂ ಈ ಲೇಖನ ಓದಿದ ನಿಮಗೆ ಹಾಗೇಯೇ ಅನ್ನಿಸುತ್ತದೆಯೇ? ಚಿಂತಿಸಿ.ತಾಯಿಯು ಕಲಿಸಿದ ಭಾಷೆ ಮಾತೃಭಾಷೆ ಎಂದು ಈಗಾಗಲೇ ಪ್ರಸ್ತಾಪಿಸಲಾಗಿದೆ. ತಾಯಿಯಂತೆ ಪ್ರೀತಿಸಿ, ಮುದ್ದಿಸಿ, ನಗಿಸಿ, ಕೆಣಕಿಸುವ ಅನೇಕ ಪುಸ್ತಕಗಳು ಕನ್ನಡ ತಾಯಿಯ ಕೈಗಳಿದ್ದಂತೆ. ತಾಯಿಯ ಮೇಲಿನ ವ್ಯಾಮೋಹವು ಸಹಜವಾಗಿಯೇ ಮಾತೃಭಾಷೆಯ ಮೇಲಿರುತ್ತದೆ ಎಂದು ಭಾವಿಸುತ್ತೇನೆ. ಪುಸ್ತಕ ರೂಪಿ ತಾಯಿಯ ಕೈಗಳು ಇಂದು ನಮ್ಮನ್ನು ಮುದ್ದಿಸಿವೆ, ಕೆಣಕಿದೆ, ಪ್ರೀತಿಸಿದೆ, ನಗಿಸಿ ನಮ್ಮೇಲ್ಲಾ ನೋವುಗಳನ್ನು ಮರೆಯಿಸಿ ಕ್ರಮೇಣ ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ. ಎಲ್ಲರನ್ನೂ ಪ್ರೀತಿಸುವ ಕನ್ನಡಮಾತೆಯು ಇಂದಿಗೂ ಪರಭಾಷಾ ಮಕ್ಕಳನ್ನು ತನ್ನ ಮಡಿಲಿನಲ್ಲಿ ಪೋಷಿಸುತ್ತಿದ್ದಾಳೆ. ಕನ್ನಡ ತಾಯಿಯ ಮಡಿಲಿನಲಿ ಎಷ್ಟು ಹೊತ್ತು ಕಳೆದರೂ ಸುಖವೇ ಸರಿ. ಕನ್ನಡಾಂಬೆಯ ಕೈಗಳು ನಮ್ಮ ತಲೆಯನ್ನು ತಡವುತ್ತಿರುವವರೆಗೂ ನಾವು ಸೋಲಿಗಂಜದ ಪುತ್ರ-ಪುತ್ರೀಯರು. ಈ ತಾಯಿಯು ನಮ್ಮನ್ನು ಎಂದೆಂದಿಗೂ ತೊರೆಯಳು, ನಮ್ಮ ಕೊನೆಯುಸಿರಿರುವವರೆಗೂ ನಮ್ಮನ್ನು ಹರಸುವಳು. ಈ ತಾಯಿಯ ಕೀರ್ತಿಯನ್ನು ಕಾಪಾಡುವ ಮತ್ತು ಬೆಳಗಿಸುವ ಕರ್ತವ್ಯ ಬದುಕಿರುವಾಗ ನಮ್ಮದಲ್ಲವೇ? ಇದುವರೆಗೂ ನನ್ನಂತರಾಳದ ದನಿಗೆ ಕಿವಿಕೊಟ್ಟ ನಿಮಗೆ ಧನ್ಯವಾದಗಳು ಸ್ನೇಹಿತರೇ.

ಈ ಲೇಖನವನ್ನು ತಮ್ಮ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ ಪಂಜು ಪತ್ರಿಕೆಯ ಸಂಪಾದಕರು ಮತ್ತು ಬಳಗಕ್ಕೆ ನನ್ನ ಅನಂತ ವಂದನೆಗಳು.
-ದಿವ್ಯ ಆಂಜನಪ್ಪ
http://www.panjumagazine.com/?p=62