ದೋಣಿ
ದಡ ಮುಟ್ಟದ
ದೋಣಿಯೊಂದು
ತಿರುಗಿಮುರುಗಿ
ಗಾಳಿ ತೂರಿದಲ್ಲಿಗೆ
ನುಗ್ಗಿದೆ
ಅದು ಹಿಂದೆಕ್ಕೊ
ಮುಂದಕ್ಕೋ?
ವ್ಯತ್ಯಾಸವಿಲ್ಲ
ಅಷ್ಟು ಹೊತ್ತು
ನಿಗದಿಯಾದಂತೆ
ತೇಲುತ ನಿಂತಿದೆ
ಆ ವಲಯದಲ್ಲಿ...
ಮುಳುಗದ ದೋಣಿ
ತೇಲಿ ತೇಲಿ ಹಗುರಾಗಿದೆ
ಮೀನುಗಳ ಹೊತ್ತು
ತರದ ದೋಣಿಯ
ನಿರೀಕ್ಷೆ ಇಲ್ಲ ದಡಕ್ಕೆ
ನೀರಿಗೆ ಮೀನಾಗಿ
ಮೀನಿಗೆ ಬಲೆಯಾಗಿ
ದೋಣಿ ತೇಲಿದೆ ನೀಲಿಯಾಗಿ
ನೀರ ಮೇಲೆ ನಿಂತಷ್ಟು ಹೊತ್ತು
ನಂಟು ನೀರಿಗೂ ದೋಣಿಗೂ...
ಗಾಳಿಯ ರಭಸಕ್ಕೊ
ಮೀನು ತುಂಬಿದ ಭಾರಕ್ಕೊ
ವಾಲಿ ದಿಕ್ಕು ತಿರುಗಿ
ಈ ತೀರಕೋ ಆ ತೀರಕ್ಕೋ
ಕಳೆದು ಹೋಗೋ ದೋಣಿ
ಹಿಂದೆ ದಡದಲ್ಲೇ ತಾಳ್ಮೆ ಹೊದ್ದು ನಿಂತಿತ್ತು....
No comments:
Post a Comment