ಸದ್ದಿಲ್ಲದೆ ಹರಿವ
ಅಂತರಗಂಗೆಯಾಗಲು
ಬಯಸುವುದು ಮನವು
ಆದರೆ..
ಸದಾ...
ಗಡಿ ದಾಟಿ
ಸಿಡಿದೆದ್ದು ಧುಮುಕೊ
ಧಾರೆಯಾಗುವ ಬದುಕು
ಎಂದಿಗೂ ನನಗೆ ಸೋಜಿಗ!
ಭಾವಗಳ ಮೂಟೆ….
ಭಾವಗಳ ಮೂಟೆ
ಕಾಪಿಟ್ಟು ಕಟ್ಟಿಟ್ಟು
ಹಬೆಯಾಗಿದೆ ಹೃದಯ!
ಹಾಡಿ ನಲಿದ ಒಲವು
ಎಂದೊ ಬೂದಿಯಾಗಿ
ನಿಂತು ಬೇರೂರುವ ಛಲಕೆ
ಮನಸ್ಸು ಕಲ್ಲು!
ಕಟ್ಟಿಟ್ಟ ಕನಸು
ಗಂಟಿಕ್ಕಿದ ಗೀತೆ
ಹನಿದು ಹನಿದು
ತೊರೆಯಂತೆ!
ಹರಿದು ಹಗುರಾಗುವ
ತಾಣವಿಲ್ಲ; ಬರಿದೆ ಬೊಗಳೆ
ನುರಿದು ಹಸನಾಗುವ
ನೂಲು ಅಲ್ಲವೇ ಅಲ್ಲ; ಕಗ್ಗಂಟು!
ಮತ್ತೊಮ್ಮೆ ಹೀಗೆಯೆ
ಪ್ರಾರಂಭಿಸಲಿ ಹೊಸತು
ಹಳೆಯ ನಂಬಿಕೆಯ ಹೊಸಲಲಿ
ಕಾಮನಬಿಲ್ಲ ರಂಗು ರಂಗೊಲಿ!
–ದಿವ್ಯ ಆಂಜನಪ್ಪ