Sunday, 4 October 2020

ಪದ್ಯ: ಆಶಯ

ಹೊಸದಾಗಿ ಏನೋ ಶುರು ಮಾಡಬಹುದು
ಎನಿಸಿದಾಗ ತುಸು ಸಾಂತ್ವಾನ 
ಸಿಕ್ಕಂತಾಗುತ್ತದೆ. 
ಆದರೆ ಹೊಸದಾಗಿ
ಎಲ್ಲವನ್ನೂ ಮತ್ತೆ ಮತ್ತೆ ಶುರು
ಮಾಡುವಂತಿಲ್ಲವಲ್ಲ...?
ಅದಕ್ಕೆ 'ಶುರು ಮಾಡೋಣ' 
ಅಂತಷ್ಟೇ ಅಂದುಕೊಳ್ಳುತ್ತೇನೆ
ಆದರೆ ಯಾವುದೂ ಶುರುವಾಗುವುದೇ ಇಲ್ಲ

 ಹಳೆಯ ಚಿತ್ರಗಳೊಮ್ಮೆ
ತೆರೆದು ನೋಡುತ್ತೇನೆ
ಕೆಲವು ರಂಚಿತ ಬಹಳಷ್ಟು ವಿಷಾದ
ಈಗಿನ ಚಿತ್ರಕ್ಕೆ ಬಂದರೆ
ಬಹಳಷ್ಟು ಬಣ್ಣ ತುಂಬುವ ಅವಕಾಶ

ತುಂಬಿದಷ್ಟು ಎಲ್ಲೋ ಹೇಗೋ ಸೋರಿ ಹೋಗುತ್ತಿರುವ 
ಕಪಟತನಕ್ಕೆ ಎಲ್ಲಿಲ್ಲದ ದುಗುಡ! 
ಇಷ್ಟಕ್ಕೆ ಹೇಗೆ ನಿಲ್ಲಲಿ..? 
ಹಟಕ್ಕೆ ಬಿದ್ದು ಚಿತ್ರ ಬರೆಯುವ ಪುಸ್ತಕ ಕೊಂಡಿರುವೆ
ಜೀವನ ಕೊಟ್ಟ ಕುಂಚವ ಹಿಡಿದು
ಸೋರಿದಲ್ಲೆಲ್ಲಾ ಮತ್ತೆ ಬಣ್ಣ ತುಂಬುತ್ತಲಿರುವೆ

ಸೊಗಸೆನಿಸದಿದ್ದರೂ  ಕೆಲಸಗಳಾಗಿವೆ..😊... 

ಮತ್ತೆ ಶುರು ಮಾಡುತ್ತೇನೆ
ಬಣ್ಣ ಬಳಿಯುವ ಕೆಲಸವ
ಸೊಗಸಿಗಲ್ಲ... 
ಕೂತು ಸೋಮಾರಿಯಾಗಬಾರದಲ್ಲ
ಈ ಹಳೆಯ ಮನಸ್ಸು!

03/10/2020

Friday, 5 June 2020

ಪದ್ಯ: ಮಳೆ

ಹ್ಞೂ...
ಮತ್ತೆ ಮಳೆಯ ಗಾಳಿ
ಈ ಸಂಜೆಗೆ,
ಎಲ್ಲೊ ಕಳೆದು ಹೋದ
ಹನಿಗಳನ್ನು ಬೊಗಸೆಯಲ್ಲಿ
ಸೆರೆ ಹಿಡಿವ ಆಸೆ..
ಹೇಳು ಕರಗುವೆಯಾ?

ಕಲ್ಲು ಮೋಡವೇ
ಅದು ಹೇಗೆ ಉದರಿಬಿಡುವೆ
ತಂಗಾಳಿ ಸೋಕಿದೊಡನೆ?!
ಒಂದಿನಿತು ನಿಲ್ಲಬಾರದೆ
ಈ ಎಲೆ ಅಲುಗಾಡದ ಊರಿನಲಿ
ನಿನ್ನ ಸೆರೆ ಹಿಡಿವ ಆಸೆ
ಹೇಳು ಬಂದು ನಿಲ್ಲುವೆಯಾ?

ಹ್ಞೂ, ಮತ್ತೆ ಮಳೆಯ ವಾಸನೆ
ಈ ಸಂಜೆಗೆ
ಎಲ್ಲೋ ಕಳೆದು ಹೋದ
ನನ್ನನೇ ನಾ ಕೈಹಿಡಿಯಬೇಕಿದೆ
ಒಂದೆರೆಡು ಮಳೆಹನಿಗಳ ತಂಪನೆಗೆ
ಎಚ್ಚರಿಸಿಕೊಳ್ಳಬೇಕಿದೆ
ಈ ಸಂಜೆಗೆ ಇದುವೇ ನನ್ನಾಸೆ
ಹೇಳು ಮಳೆಯೇ
ಮಡಿಲಾಗುವೆಯಾ?!

‌june 5, 2018