Monday, 5 January 2015

ಕವನ

ಹೆಜ್ಜೆ ಗೆಜ್ಜೆಗಳ ಪರಿವಿಲ್ಲದೆ
ನಲಿದಿದ್ದೆ
ಪುಳಕದೊಳು ಕುಣಿದ
ನವಿಲಂತೆ
ಕೆದರಿ ಉದುರಿ ಹೋದ ಗರಿಗಳ
ಯಾರೋ ಹೆಕ್ಕಿ ತಂದಂತೆ
ನಾ ಸಾಗಿದ ದಾರಿ ಕಂಡು ಹಿಡಿದ
ಆ ಮನಕೆ ನಾ ಬೆಚ್ಚಿ ನಾಚಿದಂತೆ

ಈ ಕ್ಷಣಗಳ
ಸಂತಸದ ಮಜಲುಗಳ
ಬಿಚ್ಚಿಡಲಾರದ
ಬಿಂಕ
ಕಳೆದು ಹೋದ ಹೊತ್ತು
ಕೂಡಿ ಕಳೆಯಲಾರದ
ಒಡೆದ ಮುತ್ತು

ಮನಸಿದೆ ; ಮಸಣವೂ
ನಡುದಾರಿಯ ಉಸಿರೂ
ಮುಚ್ಚಿಟ್ಟ ಕನಸೊಳು
ಯಾರೋ ಇಣುಕಿ ನೋಡಿದಂತೆ
ಒಂದೇ ಮುಜುಗರ!

03/01/2015




ದುಃಖವನ್ನು ಹಂಚಿದಷ್ಟು
ಮತ್ತೂ ದುಃಖಿತಳಾದೆ
ಹುಸಿ ನಗೆಯ ಸಹವಾಸ 
ಒಪ್ಪದಾದೆ
ಹಸಿ ಇರಲಿ, ಬಿಸಿ ಇರಲಿ
ನಿಜದಿ ನಕ್ಕಾಗ ನಾನನ್ನೇ ಮರೆತೆ
ಪ್ರೀತಿಯ ಕಣ್ಮುಂದೆ! 

02/01/2015

^^^^^

ಹೊಸತನಗಳಿಗೆ 
ತೆರೆದುಕೊಳ್ಳದ
ಹೊರತು
ಹಳತುಗಳಲಿ 
ನೆನಪುಗಳು
ನಿಲ್ಲದು!

01/01/2015

ಕವನ

ನಾನು ಲೇಖನ ಚಿನ್ಹೆಗಳನ್ನು
ಗೌರವಿಸುತ್ತೇನೆ!
ಉದ್ಗಾರದಿ ಓಡಿ 
ಅಲ್ಲೆಲ್ಲೊ ಅರೆ ಹೊತ್ತು ನಿಂತು
ಮತ್ತೆ ಮುನ್ನಡೆಯುತ್ತೇನೆ

ಅದೂ ಇದೂ ಎಲ್ಲವೂ ಆಗಿ
ಕುಂಟುತ್ತಾ ಸಾಗುತ್ತೇನೆ
ಮತ್ತು ಕೊನೆಗೊಂಡು ನಿಲ್ಲುತ್ತೇನೆ

ಒಮ್ಮೆ ಪ್ರಶ್ನಾರ್ಥಕವಾಗಿ ನಿಂತು
ಮರು ಘಳಿಗೆ
ಛಂಗನೇ ಚಕಿತಳಾಗಿ 
ಚಿಮ್ಮುತ್ತೇನೆ

ನಾನು ನಿಮ್ಮವಳು
ಲೇಖನ ಚಿನ್ಹೆಗಳಂತೆ 
ನಿಮ್ಮ ಭಾವವಾಗುವವಳು
ನಿಮ್ಮ 'ನಯನಗಳು'.. 

30/12/2014

ಕವನ

''ಗೊತ್ತಿಲ್ಲೆನಗೆ ಬುದ್ಧ!''

ಅವರು ಕೇಳಿದರು ಎನ್ನೆಡೆಗೆ ಬಾಗಿ;
ಬುದ್ಧ ಗೊತ್ತೇ?!
ಅರಳಿದ ಕಣ್ಗಳೊಡನೆ ನನ್ನೊಳಗು
ಇಲ್ಲ, ಓದಿದ್ದ ನೆನಪೆನ್ನುತ್ತಿತ್ತು
ಗೊತ್ತಿಲ್ಲೆನಗೆ ಆ ಬುದ್ಧ
ಪರಿಚಯವಿಷ್ಟೇ 'ಮುಗ್ಧ ಯುವಕ',
ತಂದೆಯಾಗಿ ರಾಹುಲನೆಂಬ ಕನಸ ತೊರೆದು;
ಯಶೋಧರೆಯ ನಿರೀಕ್ಷೆಗಳ ಗೆದ್ದ ಗೌತಮ
ಹೌದೆನಗೆ ಗೊತ್ತಿಲ್ಲ ಆ 'ಬುದ್ಧ'
ಗೊತ್ತಿಲ್ಲವೋ ಬುದ್ಧ
ಎನ್ನಪ್ಪ ಹೇಳಲಿಲ್ಲ ಎನಗೆ
ಅವ ತೋರಿದ ಇಣುಕು, 
'ಅಂಬೇಡ್ಕರನೆಂಬ ಧೀರ ಮೇಟಿ'ಯ ಹೆದ್ದಾರಿ 
ಬುದ್ಧನ ಸುಳಿವಿಲ್ಲವೋ ಈ ಮನಕೆ
ಆ ದಿನವೊಂದು ಇನ್ನೂ ನೆಪ್ಪು
ಕಂಡರಿತ ಹಳ್ಳಿಯ ದಾರಿ; ಬಸ್ಸೊಳ ಸೂಟುಧಾರಿ ನನ್ನಪ್ಪ
ಎದುರು ಕೂತ ಮುದಕನೊಬ್ಬ ಉನ್ಮಾದದಿ ಉಲಿದಿದ್ದ,
ಕಂಡಿರೇ ನೀವು ಅಂಬೇಡ್ಕರನಂತೆ....
..................................
ಅಪ್ಪನೊಳ ನೂರು ಪುಳಕಗಳು
ಅದರೊಳ ತೆರೆದುಕೊಂಡ ಅವನಪ್ಪ, ದೊಡ್ಡಪ್ಪನ 
ಚೀರಿದ ನೋವುಗಳು; ಚಿವುಟಿದ ತೊಡೆಗಳ ವೇದನೆಗಳು
ಸಾವಿರ ಹೆಪ್ಪುಗಟ್ಟಿದ ಕೂಗುಗಳು!
ಹೌದು ನನ್ನೂರಿನ ಅಜ್ಜನಿಗೂ ಬುದ್ಧ ಗೊತ್ತಿಲ್ಲ
ಅಂಬೇಡ್ಕರನೆಂಬೊ ಸ್ತಂಭವ ಬಿಟ್ಟು!
ನಡುವಲಿ ಎಚ್ಚೆಂತ್ತಂತೆ
ಎನಪ್ಪ ಹೇಳಿದನೊಂದು ದಿನ
'ಅಂಬೇಡ್ಕರ ದಾರಿ ಕಂಡ ಬುದ್ಧನ ಹೆಜ್ಜೆಗಳ'
ಅದ ಕೇಳಿದ ಕ್ಷಣಗಳಿಂದ ಹೆಜ್ಜೆ ಗುರುತಿಗಾಗಿ 
ದಾರಿಯಲ್ಲುಳಿದೆ;
ಗೊತ್ತಿಲ್ಲ ನನಗಿನ್ನೂ ಬುದ್ಧ ಸಿಕ್ಕಿಲ್ಲ
-ದಿವ್ಯ ಆಂಜನಪ್ಪ
೨೫/೧೨/೨೦೧೪
ಗತ!

ಆ ಕಣ್ಣ ಕೊಳಗಳಲಿ
ಮುಳುಗೇಳಬೇಕೆಂದಿದ್ದೆ
ಧುಮುಕೋ ರಭಸಕ್ಕೆ
ಕಾಲು ಜಾರಿ ಬಿದ್ದೆ
ಕೊಳದ ತಳಕ್ಕೇನೋ ಇಳಿದೆ
ಮೈ ಪರಚಿದ ಗಾಯಗಳೊಡನೆ!
ಕಣ್ಣ ಬಿಂಬಕ್ಕೆ ಗುರಿಯಾಗಿ 
ಪ್ರತಿಬಿಂಬ ಕೊಳಕಾಗಿದೆ!
ಆ ಗತದ ಕೊಳಗಳಲ್ಲೀಗ ನೀರೇ ಇಲ್ಲ!

31/12/2014

***

ಸರಕಿತ್ತು 
ಭರವಸೆಯೂ
ಆದರೂ ತೊಳಲಾಟ
ನಾದುವ 
ಹದಕೆ!

***

ಎಲ್ಲೋ ಕಳೆದು ಹೋದವರ
ಯಾರೋ ಹುಡುಕಿ ತರಲಾಗದು,
ಅವರವರೇ ಎದ್ದು ಬರಬೇಕು
ಅವರವರ ಗೋರಿಗಳಿಂದ!!
30/12/2014

***

ನೆನಪುಗಳ 
ಕೂಡಿಟ್ಟುಕೊಳ್ಳುವ ಅಭ್ಯಾಸ 
ನನಗಿಲ್ಲ
ಹಾಗಾಗಿ ಬರೆದಿಡುತ್ತೇನೆ
ತೆರೆದು ನೋಡಬೇಕಷ್ಟೇ 
ನೆನಪೊಳು ನೆನೆಯಲು
ಬೇಡದಿದ್ದರೆ 
ಮುಚ್ಚಿಟ್ಟು ಅಕ್ಷರವಾಗಿ ಪುಟದೊಳು

29/12/2014

ಮನದ ಮಾತು

ಸಂಗಾತಿ

ನಮ್ಮ ಲೈಫ್ ಅನ್ನೋದು ಮೇನ್ ಶೀಟ್ ಇದ್ದ ಹಾಗೆ. ಅದೊಂದರಲ್ಲೇ ಪಾಸ್ ಆಗ್ಬೋದು. ಅಡಿಶನಲ್ ಶೀಟ್ಸ್ ಅನ್ನೋದು ಈ 'ಸಂಗಾತಿ' ಇದ್ದ ಹಾಗೆ. ಅಗತ್ಯ ಬರಬಹುದು ಅನಿವಾರ್ಯವಲ್ಲವಲ್ಲ.. 
ಅಡಿಶನಲ್ ಶೀಟ್ಸ್ ಏನಿದ್ದರೂ ನಮ್ಮ ಹೆಚ್ಚಿನ ಪ್ರತಿಭೆಯನ್ನು ತೋರಿಸೋಕೆ, ನನ್ನ ಪ್ರಕಾರ.
ಕೊಟ್ಟಷ್ಟರಲ್ಲೇ ಬರೆದು ಮುಗಿಸಬಹುದು ಆದರೂ ನಾವೆಲ್ಲಾ ಕೊರೆದು ಪೇಪರ್ ತುಂಬಿಸ್ತೀವಿ. ಒವರ್ ಸ್ಮಾರ್ಟ್ನೆಸ್!
ನಮ್ಮ ಈ ಓವರ್- ಅತಿಶಯೋಕ್ತಿ ಎನ್ನುವ ಪ್ರತಿಭೆಯನ್ನು ಹತ್ತಿರದಿಂದ ನೋಡಿ ಮೆಚ್ಚಿಕೊಳ್ಳಲು ಅಡಿಶನಲ್ ಶೀಟ್ ಬೇಕು ಅಷ್ಟೇ ಅನಿಸುತ್ತದೆ.. 
ಆದ್ರೂ ಅಡಿಶನಲ್ ಶೀಟ್ ತಗೋಳ್ದೆ ಎಗ್ಸಾಮ್ ಬರೆದು ಬಂದವನ ಮುಖ ಏಕೋ ಹರಳೆಣ್ಣೆ ಕುಡಿದ ಹಾಗಿರುತ್ತದೆ...
ಮತ್ತು ಅಡೀಶನಲ್ಸ್ ಇಲ್ಲದೆ ಪಾಸಾದ ಎಷ್ಟೋ ಮೇನ್ ಶೀಟ್ಸ್ ನಮ್ಮ ನಡುವೆಯೇ ಹಾದು ಹೋಗಿವೆ... 
ಇವೆಲ್ಲದರ ನಡುವೆ ನನಗೇಕೋ 'ಪಾಸ್(pass)' ಆಗೋದು ಮುಖ್ಯ ಅನಿಸುತ್ತೆ.. 
ದ್ರಾಕ್ಷಿ ಹುಳಿ ಗಿಳಿ ಅನ್ನೊದೆಲ್ಲಾ ಸುಳ್ಳು! 

29/12/2014




ಮನಸ್ಸು ಮೊದಲೇ ಮುದುಡಿತ್ತು
ಅದಕೂ ಬೇಲಿ ತಾಕಿದೆ!
ಸೋರಿದ್ದು ಭಾವವೋ
ಚೀರಿದ್ದು ಹೂವೋ; ಹರಿದಿದೆ ಪಕಳೆ!
ಮಾರು ಮೊಳದ ಕನಸಿಗೆ
ಹೂವೊಂದು ಕಡಿಮೆ!
ಹರಿದ ಹೂವು
ಹಾರದ ಹೊರಗೆ!

28/12/2014

Saturday, 27 December 2014

ಪ್ರತೀ ಬಾರಿಯೂ 
ಪ್ರೀತಿ ನೀ 
ತೊಟ್ಟು ಕಳಿಚಿದ ಹೂ ಬೀಳುವಂತೆ
ದೂರವಾಗುವೆಯಲ್ಲೇ
ಹೀಗೆ ನಿಧಾನದಿ...
ಏಕೆ?!
ನೀ ಕಾಣದೆ
ಗಾಳಿಯಲೇ ಕೈ ಉಳಿದು ಬಿಟ್ಟಿದೆ...

27/12/2014

****

"ಕಲ್ಪನೆ"
ಮುದವಾಗಿ ಹರಿವ ನೀರಿನ ಮೇಲೆ
ಗೆರೆ ಮೂಡಿಸಿ ಸಂಭ್ರಮಿಸಲು
ನಿನ್ನ ತೋರು ಬೆರಳನು ಹಿಡಿದೆ
ಹೂಗಳಂತೆ ಹೊಮ್ಮುತಾ 
ರೇಖೆಗಳು
ಪುಳಕಗಳು ನಮ್ಮೊಳ
ಅದ್ಯಾವ ಲೆಕ್ಕಾಚಾರ ತಪ್ಪಿಸಿ
ಬಂಧಿಸಿದೆ ನೀ 
ಐದೂ ಬೆರಳುಗಳ
ಹತ್ತು ಬೆರಳುಗಳಂತೆ!

26/12/2014

****

ಬಾಣಕ್ಕೆ ಎದೆಯೊಡ್ಡಿ ಚೀರಿಕೊಂಡ ಮಾತ್ರಕ್ಕೆ
ಗುರಿಯೇ ಅವರಾಗಿರಲಾರರು
ಹಿಂದಣ ಒರಟು ಹಲಸೂ ಆಗಿರಬಹುದು!
ತಿರುಗಿ ನೋಡಬೇಕಿತ್ತು; ಅರಿತು ಎದುರುಗೊಳ್ಳಬೇಕಿತ್ತು!

****

ಸಂತೆಯಲ್ಲಿದ್ದರೂ 
ಏಕಾಂಗಿ ಎನಿಸಲು
ಬಹುಶಃ ಅದು ನೀನಿಲ್ಲದ
ಖಾಲಿತನವೊ ಎಂದು
ಮತ್ತೆ ಭ್ರಮೆಯಾಗಿದೆ..

25/12/2014

Wednesday, 24 December 2014

ಕವನ

ಜಾತಿ ಗ್ರಹ-ನಕ್ಷತ್ರ



ಆಹಾರಗಳ ಹಿಂದೆ ಜಾತಿಯನ್ನು ಹುಡುತಲಿದ್ದರು
ಈಗ ಅಕ್ಷರಗಳ ಹಿಂದೆಯೂ
ಜಾತಿಯನೇ ಜಪಿಸೋ ಮನಗಳು
ಎಲ್ಲಿ ಹೋದರೂ 
ಜಾತಿಗೇ ಅಂಟಿಕೊಳ್ಳುವವು!

ಕೊನೆಗಾಲಕೂ ನೀರ ನೀಡಲು ಬಂದ
ಜೀವಕೆ ಜಾತಿಕಟ್ಟಿ
ದೂಡಿ ನೀರಿಲ್ಲದೆ
ಜೀವ ಬಿಡುವಂತಾಗದಿರಲಿ;
ಆಶಯಗಳಿವೆ ಅವಕಾಶಗಳ ಕೊಟ್ಟು!

ಜಾತಿಗಳಿಂದೇ ಉಸಿರಾಡಿ
ಜಾತಿಗಳಿಂದೇ ನೀರು ಕುಡಿದು
ಸುಡುವ ಸೂರ್ಯನಿಗೊಂದು ಜಾತಿಯಿಟ್ಟು
ಭೂತಾಯಿಗೂ ಕೊಟ್ಟು ಜಿಗಿದುಬಿಡಲಿ ಹೊರಗೆ
ಜಾತಿ ಗ್ರಹ-ನಕ್ಷತ್ರಗಳನ್ನು ಹುಡುಕಿಕೊಂಡು!

25/12/2014

ಕವನ

ಬೆಳಗು


ಬೆಳಗಿನ ಭರವಸೆಯೇ 
ಬದುಕು
ಮತ್ತೆ ಮತ್ತೆ ಹೊತ್ತು ತರುವ 
ಕನಸಿನ ತೇರು
ಪ್ರೀತಿ ಕಾಮನೆಗಳ ಹುಟ್ಟು ಹಾಕಿದ 
ಬೇರು
ಇದು ಬೆಳಗು!
ಬರಿ ಹೆದ್ದಾರಿಗಳಿಗಲ್ಲ
ಕೊರಕಲು ಕಣಿವೆಯ ಒಳಗೂ
ಹಬೆಯ ಪ್ರಭೆ ಹರಡುವ ಒಲವು!

ಸ್ನೇಹಿತರೇ, ಬೆಳಗಿನ ಶುಭಾಶಯಗಳು, ಶುಭದಿನ! 


25012/2014



ದುಃಖವನ್ನು ಯಾರೂ ಪ್ರೀತಿಸುವುದಿಲ್ಲ
ಹಾಗಾಗಿ ನಾನು ದುಃಖಿಸುವುದಿಲ್ಲ!

***


ಎದೆಯಿಲ್ಲದವರು ಬಡಿತವನ್ನರಿಯುವರೇ
ದಿಟ್ಟತನವಿಲ್ಲದವರು ಜೊತೆಗಿದ್ದು ನಡೆವರೇ
ಭಯಪಡಿಸೇನು ವಿವರಿಸಿ ಮಿಡಿತವ
ಇದ್ದಂತಿರಲಿ ಹಾಯಾಗಿ ಈ ದಾರಿಹೋಕರು!

25/12/2014


ದೂರದಲ್ಲಿದ್ದವರೆಲ್ಲಾ ಹತ್ತಿರಾಗಿ ಕಂಡರು
ದೂರದಲ್ಲಿದ್ದ ಸಾವು ತುಸು ಹತ್ತಿರವೆನಿಸಿದಾಗ,
ಕಿಸೆಯೊಳ ಅಷ್ಟೂ ಕನಸುಗಳು ಗಳಗಳನೆ ಅತ್ತಂತೆ
ತಿದ್ದಿಕೊಳ್ಳುವ ಅಷ್ಟೂ ತಪ್ಪುಗಳು ನೆನಪಾದಂತೆ
ಮತ್ತೆ ಬದುಕಿಬಿಟ್ಟರೆ ಸಾಕು ಯಾರ ಸುದ್ದಿಗೂ ಹೋಗದೆ
ಯಾರಿಗೂ ಹೊರೆಯಾಗದೆ ಇದ್ದುಬಿಡುವಂತೆ
ಆಲಾಪನೆಗಳು ಒಂದೇ ಸಮನೆ
ಎಚ್ಚರಿದ್ದಾಗ ಅನಿಸದ ಭಾವ 
ಕಳೆದುಕೊಳ್ಳುವಾಗ ಉಕ್ಕುವ ಮೋಹ!
ಸಾವಿದು ಸಾಯಿಸದು
ಬದುಕಿದ್ದ ಭಾವಗಳ ನೆನಪಿಸುವುದು....

***

ಖುಷಿಗಳಿಗಷ್ಟು ಅವಸರಗಳು 
ಬೇಕಿತ್ತು;
ಸರಸರನೇ ಹುಟ್ಟಿದ ನೆನ್ನೆಯ
ನಿನ್ನ ಕನಸಿತ್ತು! 

***


ಅಲ್ಲೆಲ್ಲೋ ನಿಂತು ಕೊಸರಾಡುವ
ಜನರ ನೋಡಿ 
ನನಗೆ ಎಲ್ಲಿಲ್ಲದ ಭಯ ಆವರಿಸಿ
ಓಡುತ್ತೇನೆ ಮತ್ತೂ ಓಡುತ್ತೇನೆ,
ಎಷ್ಟು ಎಡತಾಕಿದ ಕಲ್ಲುಗಳೋ
ಎದೆಗೇ ಬಂದಪ್ಪಳಿಸುವ ಕಾತುರ
ಆಗದ ಸ್ಥಿತಿಗೆ ಅಲ್ಲಲ್ಲೇ ಅದರಷ್ಟಕೇ ಸಿಡಿದು ನಿಂತವು!
ನಾನು ಕಾರಣವಲ್ಲ; ಅವುಗಳ ಗುಣಕೆ!

***

ತಲುಪದ ದಾರಿಯೇ ಹಿಡಿದರು
ನಮ್ಮೊಂದಿಗೆ ನಾವು ಉಳಿಯುವ
ಮಿಕ್ಕಂತೆ ಅವರಿವರು ಸೇರಿಕೊಂಡಾರು
ನಮ್ಮ ವೇಗ- ಆವೇಗಕ್ಕಾಗಿ ಮರುಳು! 

25/12/2014

ಕವನ

ಸುಮ್ಮನಿದ್ದು ಹೊರಡೋಣ ಬಿಡು


ಸುಮ್ಮನಿದ್ದು ಹೊರಡೋಣ ಬಿಡು
ನೀನು ಮಾತನಾಡಬೇಡ; ನಾನೂ,,

ಇಲ್ಲೆಲ್ಲೋ ಹೊರಳಿಕೊಂಡು
ದಾರಿ ಗುಡ್ಡ ಹತ್ತಿಕೊಂಡು
ನಡೆದುಬಿಡೋಣ ಬಿಡು
ನೀನು ಮಾತನಾಬೇಡ; ನಾನೂ,,

ಇದ್ದ ಕಾಲವೆಲ್ಲ ಹೀಗೆ ಕೊರಗಿ
ಕಳೆದ ಕಾಲದೊಳು ಹುಡುಕುತ ಅಡಗಿ
ಕನಸ ಕೂಸುಗಳ ತೊರೆದು
ಇದ್ದು ಬಿಡೋಣ ಬಿಡು ಸಿಗದಂತೆ

ಎದುರಾದರೂ ಮಬ್ಬುಗತ್ತಲು
ನಿನ್ನ ನಾನು; ನನ್ನ ನೀನು ಕಾಣದಂತೆ
ಉಳಿದುಬಿಡೋಣ ಬಿಡು ಹೀಗೆಯೇ
ನನ್ನ ಕಲ್ಪನೆಗಳಾದರೂ ಉಸಿರಾಡಲಿ!

23/12/2014



ಬದುಕು ಅರ್ಥ ಕಳೆದುಕೊಂಡ ಮೇಲೆ
ಶಬ್ಧಗಳು ಅರ್ಥ ಪಡೆದವು!
ಜೀವನ ಸಾಗಿದೆ; ಅದರೊಟ್ಟಿಗೆ
ಮೌನ, ಕಲ್ಪನೆಗಳ ಕಸರತ್ತು!

23/12/2014

Monday, 22 December 2014

ಕವನ

ಬಿಂದಿಗೆಯಾಗಿ...


ಬೇಸರಕೆ ಆಟಿಕೆಯಂತೆ ಕಂದನಿಗೆ
ಹಾಗೆಯೇ 'ನೀನು' ಎನ್ನುವ ಒಂದು ಕಲ್ಪನೆ!
ಆಡುವೆಯಷ್ಟೆ ಖುಷಿಗಾಗಿ
ಕೆಲಕಾಲ ಕಳೆದು ಹೋಗುವ
ಹೀಗೆಯೇ ಮಗುವಾಗಿ
ಬಾವಿಯಲ್ಲಿ ಬಿದ್ದ ಚಂದ್ರ
ಎಳೆದು ಎತ್ತಿ ಏರಿಸಿದ ಮುಗ್ಧ ಮಗುವಾಗಿ!
''ನೀನು'' ಎನ್ನುವ ಹಗ್ಗವ ಹಿಡಿದು; ಚಂದದ ಚಂದ್ರಕೆ
ಆಗಾಗ ಬಾಯಿಯೊಳು ಜಿಗಿವ ಬಿಂದಿಗೆಯಾಗಿ!


22/12/2014
ನನ್ನ ಪದಗಳಿಗೆ 
ಅವರ ಬೆರಗು ಇವರ ಕೊರಗು
ಹಿಡಿಸಲಿಲ್ಲ ನನ್ನ ಪದಗಳು;
ಮಾತುಗಳಂತೆ ಬಿಟ್ಟುಬಿಡುವ 
ಈ ಪದಗಳನ್ನು ಎಂದುಕೊಂಡೆ;
ಇರಲಿ ಬಿಡು ಈ ಪದಗಳಾದರೂ 
ನನ್ನ ಹಿಡಿದಿಟ್ಟಿವೆ
ಶಕ್ತಿ-ಯುಕ್ತಿ ಇದ್ದ 
ಆ ಮನಗಳಿಂದಾಗದ್ದು!

****


ಎಲ್ಲಿ ಅಡಗಿದ್ದೋ ನೀ
ಮಾಯೆಯ ಮಡಿಲಿಂದಿಲ್ಲಿಗೆ 
ಬಂದು
ಜೊತೆ ನಡೆದಂತೆ ನವಿರು 
ನನ್ನೊಡಲು
ನಿಜ ಹೇಳು ಬಂದೆಯೋ ನೀನು.. !

****

ಮನದ ಮಾತಿಗೆ
'ಮೌನ' ಜಡಿದ ಬೀಗ;
ಕೈ ಕೀಲಿ ಕಳೆದಿದೆ
ನಕ್ಕುಬಿಡುವೆಯಾ?!

22/12/2014

Sunday, 21 December 2014

ಕವನ

ಕನ್ನಡಿ



ಬರೆಯುತ್ತಲಿದ್ದೆ ಬರೆಯುತ್ತಲಿದ್ದೆ
ಗೀಚಿದಂತೆ ವೇಗವಾಗಿ
ನಾ ಹಿಡಿದದ್ದು ಕನ್ನಡಿಯೆಂದು
ನೆನಪಾಗಿ; ಹಾ....
ಬೆಚ್ಚಿ ಗಾಬರಿ ಬಿದ್ದೆ
ಕನ್ನಡಿಯು ಹಾಳಾಯ್ತು;
ಜೊತೆಗದು ಎಲ್ಲರ ನೋಟಕೂ ದಕ್ಕಿತ್ತೆಂದು
ಮತ್ತೂ ಖಿನ್ನಳಾದೆ!
ನನ್ನ ಕನ್ನಡಿಯ ಈಗ ನಾನೇ ನೋಡದಾದೆ
ಊಹೆಗೂ ಮೀರಿದ ಛೇದಗಳಿದ್ದ ಕಲ್ಪನೆ
ನಾನು ನೋಡಲೇ ಇಲ್ಲ ಆ ನನ್ನ ಕನ್ನಡಿಯ
ಯಾರೋ ಕೂಗಿದಂತಾಯ್ತು;
''ಲೇ ಏನೇ ಚೆನ್ನಾಗಾಗ್ಬಿಟ್ಟಿದ್ದೀಯಾ?!!''
ಅಬ್ಬಾ, ಹೌದೇ?!! ನೋಡಿದೆ
ನನ್ನೆದುರು ನನ್ನ ಕನ್ನಡಿ ನಗುತ್ತಿತ್ತು
ಹಲವು ಮಸುಕಗಳ ತೊರೆದು!

21/12/2014

Saturday, 20 December 2014

ಕಣ್ಮುಚ್ಚಿ ಅಂದಾಜಲಿ ಆಶ್ರಯಿಸಿ ನಡೆಯುವುದ ಬಿಟ್ಟು
ಕಣ್ಬಿಟ್ಟು ಅಲ್ಲಲ್ಲಿ ಇಳಿದು ಎಲ್ಲೆಲ್ಲೋ ಹತ್ತಿ
ಉರುಳಿ ಬಿದ್ದರೂ ನೆಗೆದು ಎದ್ದು
ನೆನಪಾಗುವುದು ಒಂದು ನನ್ನ ಕನಸು!

***

ಮರೆಮಾಚಿಟ್ಟುಕೊಳ್ಳಬೇಕೆಂದಿದ್ದೆ
ಎಲ್ಲಾ ನಿಂತವೀಗ ಬಯಲಲಿ
ಇನ್ನೇಕೆ ಅವಿತುಕೊಳ್ಳಲಿ
ಬೇಕಿದ್ದವರು ಅವಿತುಕೊಳ್ಳಲಿ
ಅಲ್ಲಲ್ಲಿ ನಾನಿದ್ದ ಕಾರಣಕೆ! 

20/12/2014

ಕವನ

"ಗಂಗೆ ಉಕ್ಕುವಳು"


ಗಂಗೆ ಉಕ್ಕುವವರೆಗೂ ಜಪಿಸಿದ
ರಭಸದ ಅವಸರಕೆ ತತ್ತರಿಸಿ
ಜಟೆಗಾಗಿ ಶಿವನ ಕರೆದ ಗೋಗರೆದ
ಭಗೀರಥ;
ಬಂದಳಷ್ಟೇ ಗಂಗೆ, ಇಳಿದಳಷ್ಟೆ ಭಾವಕೆ
ಹೊರಡುವ ಮಾತಿಲ್ಲ, ನಿಲ್ಲುವ ತವಕವೂ
ಹುಟ್ಟಿ ಹುಟ್ಟಿ ಹರಿವಳಷ್ಟೇ
ಹೃದಯ ಕಮಲದೊಳಿಂದ
ರೌದ್ರನಾದರೂ ಸೌಮ್ಯನಾಗಿ
ತನ್ನ ಶಿರಕೆ ಆಹ್ವಾನಿಸಿ
ತುಂಬಿ ಮೊಗೆದು ಗೆದ್ದ ಮನದಲಿ ನಿಂದು!

21/12/2014

Friday, 19 December 2014

ಲೇಖನ

ಕನಸು



'ಕನಸು', ಕೇಳಲೆಷ್ಟು ಸುಮಧುರ!. ಕನಸೆಂಬುದು ಯಾರಿಗಿಲ್ಲ? ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸು ಹುಟ್ಟುತ್ತಾ ಕಾಡುತ್ತಲೇ ಇರುವುದು. ಕನಸು ಕಾಣದ ಮನಸ್ಸು ಸಾಧ್ಯವೇ? ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಿದ್ದರೆ ಬದುಕಲಿ ಸೊಗಸೇ ಇರುತ್ತಿರಲಿಲ್ಲ. ಬದುಕು ಎಂದಾಗ ಅದರೊಳಗಿನ ಸೋಲು ಗೆಲುವುಗಳು ನಮ್ಮೆದುರು ಬಂದು ನಿಲ್ಲುತ್ತವೆ. ಈ ಸೋಲು ಗೆಲುವುಗಳು ಎಂಬ ಅಂಶಗಳು ಹುಟ್ಟಿಕೊಳ್ಳಲೂ ಮತ್ತೂ ಈ ಕನಸುಗಳೇ ಕಾರಣ. ಆದರೂ ಎಲ್ಲರೂ ಕನಸಿನ ದಾಸರೇ. ''ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ; ಕನಸೇ ಇಲ್ಲದ ದಾರಿಯಲಿ ಹೇಗೆ ನಡೆಯಲಮ್ಮ'' ಎನ್ನುವ ರವಿಚಂದ್ರನ್ರವರ ''ಕನಸುಗಾರ'' ಚಿತ್ರದ ಗೀತೆಯ ಈ ಒಂದು ಸಾಲು ನನ್ನನು ಸದಾ ಕಾಡುತ್ತದೆ. 'ಸೋತೆ ಇನ್ನಾಗದು' ಎನ್ನುವ ಪ್ರತೀ ಹಂತದಲ್ಲೂ ಅದೆಲ್ಲಿರುವುದೋ ಈ ಗಾನ ಬಂದು ಮನಕ್ಕೆ ರಾಚುತ್ತದೆ. ಎಚ್ಚೆತ್ತಂತೆ ಮತ್ತೆ ಮತ್ತೆ ನನ್ನೊಳ ಚೇತರಿಕೆ ಮತ್ತೆ ಕನಸ ಕುಸುರಿ ಪ್ರಾರಂಭ.

ಕನಸೇ ಹಾಗೆ; ಪ್ರಚೊದಿಸುತ್ತದೆ, ಬರಸೆಳೆಯುತ್ತದೆ ನೀಯತ್ತಿಗೆ ತಕ್ಕಂತೆ ಫಲವನ್ನೂ ಹತ್ತಿರಾಗಿಸುತ್ತದೆ. ಆದರೂ ಕನಸು ಕಾಡಿದಷ್ಟು ಮತ್ತಿನ್ಯಾವುದು ಮನುಷ್ಯನ ಮನಸ್ಸನ್ನು ಕಲಕಿಲ್ಲವೆನ್ನಬಹುದು. ಸಾಮಾನ್ಯವಾಗಿ ನಮಗೆ ಬೀಳೋ ಕನಸಿಗೂ ನಾವು 'ಕನಸು' ಎನ್ನುವ ಕನಸಿಗೂ ವ್ಯತ್ಯಾಸವುಂಟು. ದಿನನಿತ್ಯದ ಜೀವನದಲ್ಲಿ ನಮ್ಮ ನೋವು, ನಲಿವು, ಒಲವು ಹೀಗೆ ಯಾವುದನ್ನು ತೀರಾ ಮನಸ್ಸಿಗೆ ಹಚ್ಚಿಕೊಳ್ಳುತ್ತೇವೋ ಅವುಗಳೇ ರಾತ್ರಿಯ ಕನಸುಗಳಾಗಿ ಬರುವುದು.
ಮೊನ್ನೆಯಷ್ಟೇ ಬಿದ್ದ ಕನಸಿದು. ಕನಸಿನ ಕಾರಣಗಳನ್ನೂ ಊಹಿಸಿಬಿಟ್ಟಿದ್ದೆ ನಾನಾಗ. ಒಂದು ರಾತ್ರಿಯ ಕನಸಲ್ಲಿ ನಾನೊಂದು ಮಹಡಿಯ ಮೇಲೇರುತ್ತಿರುವೆ, ಮಹಡಿಯ ತೆರೆಸ್ಸನ್ನು ತಲುಪೋ ಸಮಯ, ಮಹಡಿಯ ಕೊನೆ ಮೆಟ್ಟಿಲು ಬಹಳ ಎತ್ತರವಾಗಿದೆ, ಸಾಮಾನ್ಯ ಅಳತೆಗಿಂತ ಹೆಚ್ಚು. ಸರಿ ಅಲ್ಲಿ ಒಂದಡಿಯಷ್ಟೇ ಜಾಗವಿತ್ತು ಕಾಲಿಡಲು. ಆದರೆ ಅಲ್ಲಿ ಅಷ್ಟಗಲವೂ ಒಂದು ನೀಲಿ ವಸ್ತ್ರ, ಅದರ ಮೇಲೆಲ್ಲಾ ಅರಿಶಿನ-ಕುಂಕುಮ, ನಿಂಬೆ ಹಣ್ಣು ಇತ್ಯಾದಿ ಏನೇನೋ. ಒಟ್ಟಿನಲ್ಲಿ 'ಮಾಟ' ಎನ್ನುವಂತೆ ಎಲ್ಲಾ ಅಂಶಗಳಿದ್ದವು. ಹಾಗಿದ್ದಾಗ ಅಲ್ಲಿ ಕಾಲಿಡಲು ಹಿಂಜರಿಕೆ. ಮೇಲೇರಬೇಕಾದ ಅನಿವಾರ್ಯ. ಕನಸಿನಲ್ಲೂ ನಾನು ಅಳುತ್ತಿದ್ದಂತೆ ಅನಿಸುತ್ತಿತ್ತು. ಯಾರೋ ಹೀಗೆಲ್ಲಾ ಮಾಡಿದ್ದಾರೆ ಮೂಢರು ಎಂದೊ, ನನಗಾಗದವರೂ ಇದ್ದಾರೆಯೇ ಎಂದೊ, ಇಷ್ಟ ಕಷ್ಟವಾಗುತ್ತಿದೆ ಎಂದೊ ನೋಯ್ಯುತ್ತಿದ್ದೇನೆ. ಮತ್ತೊಂದು ಆಶ್ಚರ್ಯವೆಂದರೆ ನನ್ನ ಹೊಟ್ಟೆಯಲ್ಲಿ ಮಗುವಿದ್ದಂತೆ ನಾನು ಅಷ್ಟು ಎತ್ತರಕ್ಕೆ ಏರಲಾಗದಂತಹ ಪರಿಸ್ಥಿತಿ. ಹಿಂದಿನಿಂದ ಒಬ್ಬರು ನನ್ನನು ಹತ್ತಿಸಲು ಹಿಡಿದಿದ್ದರು. ಮೇಲೊಬ್ಬ ಹೆಂಗಸು ಕೈ ಕೊಟ್ಟು ಸಹಕರಿಸುತ್ತಿದ್ದರು. ಆದರೂ ನನಗೆ ತೀರ ಸಂಕಟ!. ಸಿಕ್ಕಾಪಟ್ಟೆ ಭಯವಾಗಿ ಕಣ್ಣು ಬಿಟ್ಟು ಕನಸು ಎಂದು ಗೊತ್ತಾದ ಮೇಲೂ ಭಯಂಕರ ಹಿಂಸೆಪಟ್ಟಿದ್ದೆ ಆ ಇರುಳು.

ಬೆಳಗೆ ಎದ್ದಾಗಲೂ ಅದೇ ವೇದನೆ. ಯಾಕೆ ಹೀಗಾಯ್ತು ಅಂತೆಲ್ಲಾ ಚಿಂತನೆ. ಮೊದಲೆ ಈ ಟೀ,ವಿ ಚಾನೆಲ್ಗಳಲ್ಲಿ ಹೇಳೋ ಮಾತು ಕಿವಿಗೆ ಬಿದ್ದಿದ್ದು.. ಯಾರಾದರೂ ಮಾಟ ಮಾಡಿಸಿದ್ದರೆ ಅದು ನಮಗೆ ಸೂಚನೆ ನೀಡಲು ಕನಸುಗಳಲ್ಲಿ ಬರುತ್ತವೆಂದು. ಓ… ಇನ್ನೂ ಕಷ್ಟವಾಯ್ತು ಈ ಕನಸಿನ ವಿಶ್ಲೇಷಣೆ. ಸರಿ ಹಾಳಾಗಿ ಹೋಗಲಿ ಎಂದು ಸುಮ್ಮನಾಗಿ ಕೆಲಸಕ್ಕೆ ಹೊರಟೆ. ಮತ್ತೆ ಸಂಜೆ ಬಂದಾಗ ಅದೇ ಚಿಂತನೆ. ಆಗ ಹೊಳೆಯಿತು ನೋಡಿ; ದಿನವೂ ನೋಡೋ ಸಿರಿಯಲ್ನಲ್ಲಿ ಗರ್ಭಿಣಿ ಸ್ರ್ತೀಯೊಬ್ಬಳಿಗೆ ಕಾಡುವ ತರತರಹದ ರೀತಿಗಳನ್ನು ಕಣ್ಣುಬಿಟ್ಟುಕೊಂಡು ನೋಡಿ ನೋಡಿ ಕನಸಲಿ ನಾನೇ ಆ ಭಾವವನ್ನು ಭಾವಿಸಿದೆ ಎಂದು ತಿಳಿಯಿತು. ಇನ್ನು ಮಾಯಾ ಮಂತ್ರಗಳು; ಹಿಂದಿನ ದಿನವಷ್ಟೇ ನನ್ನಕ್ಕ ಮಾಟದ ಒಂದು ಕಥೆ ಹೇಳಿದ್ದಳು. ನನಗೂ ''ಹುಷಾರೂ'' ಎಂದೂ ಹೇಳಿದ್ದಳು. ಓಹ್! ಒಳ್ಳೆ ಕತೆಯಾಯ್ತು ನನ್ನದು ಅಂದುಕೊಂಡೆ. ಕತೆಗಳನ್ನು ನೋಡಿ, ಕೇಳಿಯೇ ಈ ಮಟ್ಟಕ್ಕೆ ತನ್ಮಳಾಗಿ ಹೋದರೆ ಹೇಗೆ? ಎಂದು ವಿನೋದವೆನಿಸಿದರೂ ತುಸು ಹೆಮ್ಮೆಯೇ ಅನಿಸಿತು. ಸಾಹಿತ್ಯಾತ್ಮಕವಾಗಿ ಈ ರೀತಿಯ ತನ್ಮಯತೆ ಒಂದು ಉತ್ತಮಾಂಶವೆನಿಸಿತು. :-)

 ​ 
​ 
ಹಾಗೆಯೇ ನಾವು ಹೆಚ್ಚು ಬಯಸುವ ಹೊಸತನಗಳೂ ಸಹ ಹೀಗೆ ಕನಸುಗಳಾಗುತ್ತವೆ. ಬಹಳ ಅಪರೂಪವೆಂಬಂತೆ ಮಾತ್ರ ಅಸಂಬದ್ಧ ಕನಸುಗಳು ಬೀಳುತ್ತವೆ. ಅವುಗಳನ್ನೂ ಸೂಕ್ಷವಾಗಿ ವಿಶ್ಲೇಷಿಸಿದ್ದೇ ಆದಲ್ಲಿ ಅವುಗಳನ್ನೂ ಅರಿತುಕೊಳ್ಳಬಹುದು. ಇವಿಷ್ಟು ಒಂದು ರೀತಿಯ ಕನಸುಗಳು. ಈ ಕನಸುಗಳಿಗೆ ಸಮಯದ ಆಧಾರದ ಮೇಲೆ ನಿಜವಾಗುವುದೋ ಇಲ್ಲವೋ ಎಂದೂ ಕೂಡ ಅನಿಸಿಕೆಗಳಿವೆ. ಅವು ನಿಜವೋ ಸುಳ್ಳೋ ಅವರವರ ತರ್ಕಗಳು. ನನಗಂತೂ ಸುಳ್ಳು. ಆದರೆ ನಾವೇ ಕಾಣೋ ಕನಸುಗಳು ಬಹುಶಃ ನಿಜವಾಗಲೂ ಆಗಬಹುದು ಅದು ಮತ್ತೊಂದು ರೀತಿಯ ಕನಸುಗಳು. ಇವು ನಮ್ಮ ಕನಸುಗಳು; ಹಗಲುಗನಸುಗಳು.

ಹಗಲುಗನಸೆಂದು ಉತ್ಪ್ರೇಕ್ಷೆ ಮಾಡುವುದು ಬೇಡ. ಇವು ನಮ್ಮ ಸಾಧನೆಯ ಪ್ರಚೋದಕಗಳು, ಹುಮ್ಮಸ್ಸುಗಳು. ಕನಸುಗಳು ದೊಡ್ಡದಿರಲಿ ಚಿಕ್ಕದಿರಲಿ ನಾವು ಅದರೊಟ್ಟಿಗೆ ಅನುಭವಿಸುವ ಸಂತೋಷವು ಮುಖ್ಯ. ಹೀಗೆ ಭಿಕ್ಷುಕನೊಬ್ಬ ಅರಸನಾದ ಕನಸು, ಅಗಸನೊಬ್ಬ ಸಾಮಂತನಾದ ಕನಸುಗಳು ಉದಾಹರಣೆಗಳನ್ನು ನಾವು ಕತೆಗಳಲ್ಲಿ ಕೇಳಿರುತ್ತೇನೆ. ಇವೆಲ್ಲಾ ಚಿಕ್ಕಮಕ್ಕಳ ಕತೆಗಳು. ಈ ರೀತಿಯ ಕತೆಗಳು ನಮಗೆ ಕನಸುಗಳ ಕಲ್ಪನೆಯನ್ನು ನೀಡುತ್ತದೆ. ಆದಕಾರಣ ಸಣ್ಣ ವಯಸ್ಸಿನಲ್ಲಿ ನಾವು ಹೆಚ್ಚು ಹೆಚ್ಚು ಮಕ್ಕಳಿಗೆ ಕತೆಗಳನ್ನು ಹೇಳುತ್ತೇವೆ. ಕಲ್ಪನೆ-ವಸ್ತು ಪರಿಕಲ್ಪನೆಗಳನ್ನು ಮೂಡಿಸುವಲ್ಲಿ ಕತೆಗಳು ಮಹತ್ವದ ಪಾತ್ರ ವಹಿಸುತ್ತವೆ. ಜಾನಪದ ಕತೆಗಳಲ್ಲಂತೂ ಕತೆಗಳೊಳಗಿನ ಕನಸುಗಳು; ಕನಸುಗಳೊಳ ಕತೆಗಳು ಬಲು ರೋಚಕವಾಗಿರುತ್ತವೆ. ಸರಿಯಾಗಿ ಗ್ರಹಿಸಿದ್ದರೆ ಮಾತ್ರ ಕತೆ ಪೂರ್ಣವಾಗಿ ಅರ್ಥವಾಗುವುದು. ಇಲ್ಲದ್ದಿದ್ದರೆ ಇಲ್ಲ. ಅಂತಹ ಕತೆಗಳನ್ನು ನಾವು ಪದವಿ ಪಠ್ಯವಸ್ತುವಾಗಿ ಪಡೆಯುತ್ತೇವೆ. ಈ ಕತೆಗಳಿಗೂ ಕಲ್ಪನೆಗಳಿಗೂ ಕನಸುಗಳಿಗೂ ಎಲ್ಲೊ ಒಂದು ಆಂತರಿಕ ಸಂಭಂದವಿದೆ ಎಂದೆನಿಸುತ್ತದೆ. ಕೇಳುವ ಕತೆಗಳು ಕಲ್ಪನೆಗಳಲ್ಲಿ ಇನ್ನಷ್ಟು ರೆಕ್ಕೆಪುಕ್ಕ ಹೊಂದಿ ಕನಸುಗಳಲ್ಲಿ ಬೇರೆಯೇ ಹಕ್ಕಿಯಾಗಿ ಹಾರಾಡುತ್ತವೆ. ಹೌದಲ್ಲವೇ?! :-)

ಹೀಗೆಲ್ಲಾ ನಾವು ನಮ್ಮ ಬಾಲ್ಯವನ್ನು ಕಳೆಯುವಾಗ ನಮ್ಮೊಳಗೆ ಹಲವು ಬಗೆಯ ಆಸೆಗಳು ಹುಟ್ಟಿಕೊಳ್ಳುತ್ತವೆ. ಮುಂದೆ ನಾನು ಚೆನ್ನಾಗಿ ಓದಬೇಕು, ಓದಿ ಡಾಕ್ಟರ್, ಎಂಜಿನಿಯರ್, ಟೀಚರ್, ಇಲ್ಲ ಸಿನೆಮಾ ನಟ, ರೈತ ಇತ್ಯಾದಿಯಾಗಿ ಆಗಬೇಕು ಎಂದೆಲ್ಲಾ ಅಂದುಕೊಳ್ಳುತ್ತೇವೆ. ಬೆಳೆಯುತ್ತಾ ಹೋದಂತೆ ಆಸೆಗಳು ಕನಸುಗಳಾಗುತ್ತವೆ. ಅಂದುಕೊಂಡ ಆಸೆಗಳ ಸಾಕಾರಗಳಿಗೆ ನಾವು ನಮ್ಮದೇ ಆದ ರೂಪುರೇಶೆಗಳನ್ನು ಕೂಡಿಸುತ್ತಾ ಹೋಗುತ್ತೇವೆ. ಇವುಗಳೇ ನಮ್ಮ ಕನಸುಗಳು. ಕೆಲವರಿಗೆ ಬಾನೆತ್ತರದಲಿ ಹಾರಾಡೋ ಕನಸು. ಕೆಲವರಿಗೆ ಇದ್ದಲ್ಲಿಯೇ ಸ್ವರ್ಗ ಕಾಣೋ ಬಯಕೆ(ಕನಸು), ಮತ್ತೆ ಕೆಲವರಿಗೆ ಇರುವುದನ್ನು ಇಲ್ಲದವರಿಗೆ ನೀಡಿ ಆತ್ಮತೃಪ್ತಿಯ ಕನಸು.. :-)

ಈ ಕನಸುಗಳಲ್ಲಿ ಶ್ರೇಷ್ಠ-ನೀಚವೆನ್ನುವ ಬೇಧವಿಲ್ಲ,, ಹೇಗೆ ಜನರಲ್ಲಿನ ಮನೋಭಾವವು ಭಿನ್ನವೋ ಹಾಗೆಯೇ ಅವರ ಕನಸುಗಳು ಅವರವರಿಗೆ ಶ್ರೇಷ್ಠವೇ ಸರಿ. ಆದರೆ ಈ ಕನಸುಗಳ ಸಾಕಾರಕ್ಕಾಗಿ ಮತ್ತೊಬ್ಬರ ಕನಸ್ಸನ್ನು ಕೀಳುವುದು ಸಲ್ಲದು. ಹಾಗೆಯೇ ಕನಸು ಕಾಣುವುದು ತಪ್ಪಲ್ಲ.

ಈ ಕನಸುಗಳು, ಎಷ್ಟೋ ಬಾರಿ ಈ ಬದುಕು ದುಸ್ತರವೆನಿಸಿದರೂ ಮತ್ತೂ ನಮ್ಮನ್ನು ಬದುಕುವಂತೆ ಮಾಡುತ್ತದೆ. ಭಗ್ನ ಕನಸುಗಳು ತಂದ ನೋವನ್ನು ಮರೆಯಲೂ ಮತ್ತೂ ಕನಸುಗಳೇ ಆಸರೆ. ಏನೇ ಹೇಳಿ ರವಿಚಂದ್ರನ್ರವರ ಕನಸಿನ ಪರಿಕಲ್ಪನೆ ಯಾಕೋ ತುಂಬಾ ಇಷ್ಟವಾಗುತ್ತದೆ. ಬದುಕಿನೆಡೆಗೆ ಸೆಳೆಯೋ ಆ ಎಲ್ಲಾ ಅಂಶಗಳೂ ನನಗೆ ಶ್ರೇಷ್ಠವೇ ಎನಿಸುತ್ತವೆ. ಹೀಗೆ ಒಮ್ಮೆ ಬಸ್ಸಿನಲ್ಲಿ ಒಬ್ಬ ಅಂಗವಿಕಲ ಹುಡುಗಿಯೊಬ್ಬಳು ಕುಂಟುತ್ತಾ ಬಸ್ ಹತ್ತಿ ಬಂದಳು, ನನ್ನೆದುರೇ ಬಂದು ಕುಳಿತಳು, ಹಾಗಾಗಿ ನಾನು ಗಮನಿಸುವಂತಾಯಿತು. ಪಾಪವೆಂದು ನೋಡುತ್ತಿದ್ದೆ. ಆದರೆ ಆಕೆಯು ತೊಟ್ಟ ಬಟ್ಟೆ ಎಷ್ಟು ಅಚ್ಚುಕಟ್ಟು!,, ಹೊಸ ತರಹದ ದುಪ್ಪಟ್ಟ! ಅಂದವಾಗಿ ಸಿಂಗರಿಸಿಕೊಂಡಿದ್ದಳು. ನೋಡಿ ಒಂತರ ಖುಷಿಯಾಗೋಯ್ತು. ಸಣ್ಣ-ಪುಟ್ಟ ತೊಂದರೆಗಳಿಗೆಲ್ಲಾ ಆಕಾಶವೇ ತಲೆ ಮೇಲೆ ಬಿದ್ದಂತೆ ತಲೆ ಕೆದರಿಕೊಂಡು ಓಡಾಡೊ ಜನರ ಮುಂದೆ ಆ ಹುಡುಗಿ ಸಿಕ್ಕಾಪಟ್ಟೆ ಆತ್ಮವಿಶ್ವಾಸದವಳು ಎಂದೆನಿಸಿತು. ಆ ಶೃಂಗಾರದ ಅಚ್ಚುಕಟ್ಟುತನ ಜೀವನದೆಡೆಗಿನ ಅವಳ ಜೀವನೋತ್ಸಾಹವೆನಿಸಿತು. ನಾನು ಕಲಿತೆ ಕೂಡ ಈ ಸಂದರ್ಭದಲ್ಲಿ,, :-)

ಹೀಗೆ ಆಸೆಗಳು, ಕನಸುಗಳು ನಮ್ಮೊಳಗೆ ಮತ್ತೆ ಮತ್ತೆ ಹುಟ್ಟಬೇಕು ಜೀವನದ ಹಾದಿ ಸೊಗಸೆನಿಸಿಕೊಳ್ಳಲು. ಏನೇ ಬರಲಿ ಕನಸೊಂದಿರಲಿ! :-) ಎನ್ನುವಂತೆ ನಾವು ಕನಸುಗಳ ಆರಾಧಕರಾಗಬೇಕು. ನಿರ್ವಿಕಾರ, ನಿಸ್ವಾರ್ಥ ಕನಸುಗಳ ಮಾಲೀಕರಾಗಬೇಕು. ಮನಸ್ಸಿನಂತೆ ಕನಸುಗಳು, ಕನಸುಗಳು ಸುಂದರ; ಸುಂದರ ಕನಸುಗಳೇ ಮನುಷ್ಯನ ನಿಜ ಸೌಂದರ್ಯ. :-)


ಧನ್ಯವಾದಗಳು,
ದಿವ್ಯ ಆಂಜನಪ್ಪ
೨೩/೧೦/೨೦೧೪