Tuesday, 15 October 2013

ಗಂಟಲೊತ್ತಿ ಬಂದ ದುಃಖವ
ಅಲ್ಲೇ ಇಂಗಿಸಿದ್ದೇನೆ
ನಿನ್ನನ್ನಲ್ಲ;
ಕಂಬನಿಗಳನ್ನು ದೂಷಿಸಿದ್ದೇನೆ
ತುಳುಕಿದಕೆ


************

ಕೂಗೇ ಮುಟ್ಟದು 
ಅವನಿಗೆ
ಇನ್ನು ದನಿ?!
ನನ್ನೊಳಗೇ ಸುತ್ತುವ
ಮಾರ್ದನಿ


***********

ಅವನೊಂದು ಚುಕ್ಕಿ,
ಆರಂಭ;
ಎತ್ತ ತಿರುಗುವುದೋ
ವಕ್ರವೋ ಸರಳವೋ
ವೃತ್ತವೋ
ಸದಾ ಧ್ಯಾನಿಸುವಂತೆ
ಎನ್ನ ಚಿತ್ತದ ಕೇಂದ್ರ ಬಿಂದು


************

ಕೂತವನೆದ್ದ
ಏನೂ ವ್ಯತ್ಯಾಸವಿಲ್ಲ;
ಬಿದ್ದವನೆದ್ದ
ಆ...! ಎನ್ನುವರೆಲ್ಲಾ


14/10/2013

Monday, 14 October 2013

ಹೌದು ಆಗುವವು ಒಮ್ಮೊಮ್ಮೆ ತೊಂದರೆಗಳು,
ಕಂಡರೂ ಕ್ಷೋಭೆಯಾಗಿ ಗುರಿಯೇನು ದಿಕ್ಕೆಡದು;
ದಾರಿ ನಡುವಿನ ಚಿಕ್ಕ ಕಲ್ಲು ಬಾಧಿಸಿದರೂ ನೋವು ಕ್ಷಣಿಕವೇ
ಮುಂದಿರುವ ಹಾದಿ ಸವೆಯಲು ಮುನ್ನೆಚ್ಚರಿಕೆಯ ಸೂಚನೆ
ತೊಡಕುಗಳು ಬೇಸರಿಸದೇ ಹಾದಿ ಹಾಯಲಿರುವ ರೋಚಕದಾಟಗಳು
ಆಟದೊಳು ನಲಿವಿರಲಿ ಗೆಲುವು ಸೋಲುಗಳ ಮೀರಿದ ಸಂಭ್ರಮವಿರಲಿ 


*******************************************

ಪ್ರೀತಿ ಪ್ರೇಮ ಪ್ರಣಯ 
ಮೆಚ್ಚದ ವಯಸ್ಸಿಲ್ಲ
ವಯಸ್ಸು ಮೀರಿದ
ಅತಿರೇಕವಾದರೆ 
ಉಳಿವ ಸುಳಿವಿಲ್ಲ


14/10/2013

ಆಸ್ತೆವಹಿಸಿದ ಕಾರ್ಯವೊಂದು
ಕಣ್ಣೆದುರೇ ಕಡೆಯಾದರೆ
ಅದಕ್ಕಿಂತ ನೋವು ಮತ್ತ್ಯಾವುದು
ತನ್ನ ಮಗುವೇ ತನ್ನೆದುರು
ಎಡವಿದಂತೆ!


***********************

ತನ್ನ ಶ್ರಮದಲಿ ಬೆಂದವ
ಇನ್ನೊರ್ವನ ಶ್ರಮಕೆ
ಮನಸಾ ದನಿಯಾಗುವ 


*******************

ಪ್ರೀತಿ 
ತಲೆಗೇರಿದಾಗ
ಕಣ್ಣಿಗೆ ಕಾಣದು
ಕಿವಿಗೆ ಕೇಳದು
ಮೌನ 
ಭ್ರಮೆಯಲಿ
ಬಡಬಡಿಸಿತು 
ಪ್ರೀತಿ ಹುಡುಕುತ 


14/10/2013

Saturday, 12 October 2013

ನಾಳೆಗಳಲಿ ಜೀವಿಸುವ ನಾವು
ಇಂದನ್ನು ನೆನ್ನೆಯೇ ಕಳೆದೆವೆನೋ

*******************

ನಮ್ಮ ಬದುಕಿಗೂ 
ಅಲ್ಲಲ್ಲಿ ಕನ್ನಡಿಗಳು ಕಂಡರೂ
ನೋಡುವ ಸಾಹಸವಿಲ್ಲದೆ 
ಮುಖವೇ ಬಿಳಿಪೇರುವುದು 
ಗುರುತಿಸಿಕೊಳ್ಳದೆ

*****************

ಕೆಲವೊಂದು ಸಮಯದ ಭಾವಕೆ ಪದಗಳಿಲ್ಲ
ನೀರವತೆ ಆವರಿಸಿದ ಅನುಭವ
ಸಮಯವೇ ಮುಂದೋಗದು
ಅದರೊಳು ನಿಲ್ಲಲೂ ಆಗದು
ಏನಿದು ಬರಿದು ಭಾವ

************************

ಗೂಬೆ ನನಗಿಷ್ಟ
ರಾತ್ರಿಯ ಗಾಂಭೀರ್ಯ
ಅದಕೂ ಅಂಟಿರುವುದರಿಂದ

*************************

ಮನದ ಕಲ್ಪನೆಗಳನೂ
ಕಸಿದುಕೊಂಡರೆ ಬದುಕು;
ಹತಾಶೆಯ ಜೀವ
ಮತ್ತಿನ್ನೆಲ್ಲಿ ಬದುಕೀತು


12/10/2013
ನನ್ನ ಕವನದ ಹುಡುಗ 
ಮೌನಿಯೇ; ಕಾರಣ 
ಕವನ ನನ್ನ ಕಲ್ಪನೆ 
ಕಲ್ಪನೆ ಭಾವದ ಸ್ಫೂರ್ತಿಯಾದೀತು
ಕವನದ ಹುಡುಗ 
ಮಾತಿಲ್ಲದ ನನ್ನೊಳ ದನಿ 
ನನಗೆ ನಾನೇ ಪ್ರತಿಧ್ವನಿ 


12/10/2013

Friday, 11 October 2013

ಹಾಗೆ ಸುಮ್ಮನೆ.......... 

ಸುಮ್ಮನೇ ಕೂತವಳಿಗೆ
ಅವನು ಸಿಕ್ಕ;
ಸುಮ್ಮನೇಕಿರುವೆ ಎನಾದರೂ ಕಟ್ಟೆಂದ
ವಿಚಾರ ಕಟ್ಟಿದೆ ಸರಿಯೆಂದ
ಕವನ ಕಟ್ಟಿದೆ ಮಣ್ಣಂಗಟ್ಟೀ ಎಂದ
ಸದ್ದಿಲ್ಲದೆ ಕನಸ ಕಟ್ಟಿದೆ
ನೋಡಿ ಈಗ ಮಾತೇ ಇಲ್ಲ 


*********************

ಆ ಹೆಣ್ಣಿನ 
ಪಾದದಲ್ಲಿನ ಬಿರುಕುಗಳು
ಅವಳ ದಾರಿಗಳ 
ನುಣುಪು ಹೇಳಿತು


*********************

ಅವಮಾನಗಳ 
ಅನುಭವ 
ಮೌನ;
ಮುರಿದಾಗ 
ಅದು ಮಾತಲ್ಲ
ಪ್ರತಿಭಟನೆ!


********************

ಮಾತಾಡದ ಮೌನಿಯೊಬ್ಬ
ಸಂಭಾಷಣೆಕಾರ ಚಿತ್ರವೊಂದಕ್ಕೆ

ಚಿತ್ರ; ಮೌನ 


12/10/2013
ನನ್ನ ನೋಡುತ್ತಲೇ
ಓಡುವ ಅವಳಿಗೆ
ನಾಚಿಕೆಯೇ?!
ಇಲ್ಲ ಇಣಚಿಗೂ ಬೇಸರವೇ
ನನ್ನ ಕಂಡರೆ 

************

ಇದ್ದುದರಲ್ಲಿ ಸುಖವಿರಲಿ
ಎನ್ನುವುದು ತಿಳುವಳಿಕೆಗಲ್ಲ


**********************

ಒಳಗೊಂದು ಕಚಗುಳಿ
ಕಾಣದೇ ಮುಲುಗಿರಲು
ನಗುವರು ಎಲ್ಲಾ ಹಲ್ಕಿರಿದು
ಏನಿಲ್ಲ, ಏನಿಲ್ಲ
ಹಾಗೇ ಸುಮ್ಮನೆ 

********************

ಹಿಂದೆ ಬಿದ್ದಾಗ 'ದನ'ವೆನ್ನುವ ಜನ
ಮುಂದೆ ಓಡುವಾಗ ಗೆದ್ದೆತ್ತಿನ ಬಾಲ ಹಿಡಿವರು
ದನವೆಂದಾಗ ಮುಲುಗಿ ದನಿವಡಗದಿರಲಿ
ಸಾಧನೆಯೊಳ ಗದ್ದಲವಡಗದಿರಲಿ 


12/10/2013
ಕಲ್ಲು ಕಬ್ಬಿಣವಾದರೂ
ಕಡೆ ಪಕ್ಷ ಲಾವವಾಗಿ ಹರಿದೀತು
ಆದರೆ ಮಾನವನೆದೆಯ ಅಹಂ...!?
ಪ್ರೀತಿಸುವವರ ಲಾವದೊಳು ನೂಕೀತು

*********************


ಬೇಟೆಗೆ ಪ್ರತೀ ಬಾರಿ 
ಕುರಿಯೇ ಸಿಗುವುದಿಲ್ಲ
ಭ್ರಮೆಯಲಿ ಹಿಡಿದದ್ದು ತೋಳವಾಗಿ 
ಮೇಲೆರಗಬಹುದು 

******************

ನಲ್ಲನ 
ಪಿಸುಮಾತಿಗೆ
ವೀಣೆ 
ಈ 
ಹೃದಯ ಮಿಡಿತ

*****************
ದೃಢ ಮನವಿದ್ದವ ಎಲ್ಲಿಯಾದರೂ
ಕನಸ ಹರವಿಕೊಳ್ಳಬಲ್ಲ
ಸೂರ್ಯ ರಶ್ಮಿಯ ನೆರಗು ಹಿಡಿಯಲು
ಬಾನಿಗೆ ನವರಂಗ ಪ್ರತಿಫಲಿಸಲು
******************
ದಣಿದ ಕಣ್ಗಳಿಗೆ
ಪ್ರೀತಿಯ ನೆನಪು
ಸವಿ ಮುತ್ತನೀಯಲಿ
ನಿದಿರೆಯ ಮಡಿಲಲಿ 

11/10/2013

Thursday, 10 October 2013

ಪ್ರೀತಿ 
ಎಂದರೆ
ನಿರೀಕ್ಷೆಯಲ್ಲ
ಅಪೇಕ್ಷೆ;
ನೀರವ
ಕಳೆವ
ಸವಿ 
ಮಾತಿನದು


*********

ಭೋಗ 
ಯೋಗವಿದ್ದವನಲ್ಲ;
ಭೋಗ 
ದಾಹವಿದ್ದವ 
ಭೋಗಿ!


*******

ಚಿನ್ನವಾದರೂ ಸರಿಯೇ ಕಾಯಿಸಿ ತಟ್ಟಿಯೇ ಧರಿಸುವುದು
ಭತ್ತವಾದರೂ ಸರಿಯೇ ಬಡಿದು ಬೇಯಿಸಿಯೆ ಉಣ್ಣುವುದು
ಜೇನಾದರೂ ಸರಿಯೇ ಕಿತ್ತು ಹಿಂಡಿಯೇ ಸವಿಯುವುದು
ಸಜ್ಜನರಾದರೂ ಸರಿಯೇ ನಿಂದಿಸಿ ನೋಯಿಸಿ ಗಟ್ಟಿಯಾದೊಡೆ ಮೆಚ್ಚುವುದು 


10/10/2013
ಆರ್ಭಟಿಸುವ ಸುನಾಮಿಗೂ
ಕೊಳದ ತಿಳಿ ನೀರ ಮೇಲೆ
ಅಸೂಯೆಯಂತೆ 

**********

ಭರವಸೆ ಬೇಕಿರುವುದು
ಕುಳಿತು ಯೋಚಿಸುವವನಿಗೆ
ಗುರಿ ಹಿಡಿದು ಓಡುವವನಿಗಲ್ಲ

***************

ಕಾಯುವ ತಾಮಸ ಮನದಲಿ
ತಾಳ್ಮೆಯು ವಿಶಾಲಗೊಳ್ಳುತ
ಕಾಯುವಿಕೆಯೇ ಕರ್ಮವಾಗಿ
ಕಾದ ವಿಚಾರವೇ 
ಸ್ಮೃತಿ ಪಟದಿಂ ಜಾರಿದರೆ
ನೀನೇ ನೆನಪಿಸು; 
ನಿನ್ನನೇ ನಾ ಕಾದದ್ದು
ಅದ ನೋಡುತ 
ನೀ 'ನನ್ನ ನೆನಪು'ಗಳನು 
ಜಾರದಂತೆ ಕಾದದ್ದೆಂದು 

***************

ಹಾಗೇ ಸುಮ್ಮನೆ..... 

ಕಾಯುವ ಭರದಲ್ಲಿ ಇನಿಯನ ಮರೆತರೂ
ಇನಿಯನು ಕೊಟ್ಟ ಉಡುಗೊರೆಯ ಮರೆಯಬಾರದು
ಸಾಕ್ಷಿಗಾಗಿ ಕೇಳಿಬಿಟ್ಟರೆ ಶಕುಂತಲೆಯ ಕತೆಯಾದೀತು 

**************************************

ಕಾಡುವ ರಾಶಿ ನೆನಪುಗಳಿಂದ
ಹಿಡಿಯಷ್ಟು ತಂದು ಮುಂದಿಟ್ಟರೆ
ಅದರೋಳು ನೀನೇ ಆರಿಸುವ ನೆನಪೇ
ನಿನ್ನ ಗುರುತು!
ಇದು ಶಕುಂತಲೆಯ ಕನಸಲ್ಲ 

**********************

ಪ್ರೀತಿಯ ಹಿಂದೆ ಬಿದ್ದು
ಓದು ಹಾಳಾಗದಿರಲಿ
ಓದಿರಿ; 
ನಂತರ ಪ್ರೀತಿಯ ಬಗ್ಗೆ 
ಬರೆಯಿರಿ

*****************

ಧೂಳ್ಹಿಡಿದ ಪುಸ್ತಕದೊಳಗಣ ಸಾಲು;
"ಧೂಳ್ಹಿಡಿದು ಹೋಗಲಿ ನಿನ್ನ ವಸ್ತ್ರಗಳು,
ನಿನ್ನೊಳಗೊಂದು ಬೆಳಕು ಸದಾ ಬೆಳಗುತ್ತಿರಲಿ"

DA

10/10/2013

Wednesday, 9 October 2013

ಕನಸುಗಳು
ಇಂದುಗಳು
ನಿದಿರೆ ಕದ್ದರೂ
ಚಿರ ನಿದ್ರೆಯ ಮುನ್ನ
ಸಾಕಾರಗೊಳ್ಳಲಿ

**********
ಕನಸುಗಳು
ರಾತ್ರಿಗಳ ಬೆಳಗೋ
ಮಾನಸ ದೀಪಗಳು

09/10/2013
ಬಾಯಿ ಸುಮ್ಮನಿರಲು
ಕಣ್ಣು ನೋಯಬೇಕೇನೋ 
ಅಕ್ಷರಗಳಿಂದ!
ಮನಸ್ಸು ತುಂಬಬೇಕೇನೋ 
ಚಿಂತನೆಗಳಿಂದ!


************
ನಗುವೆಷ್ಟೋ ಅಳುವೆಷ್ಟೋ
ಮೃದುವೆಷ್ಟೋ ಕಠೋರಗಳೆಷ್ಟೋ
ಮುಖವಾಡಗಳ ಹಿಂದಷ್ಟೋ
ಅದಲು ಬದಲು

ಎಷ್ಟೋ ಎಷ್ಟೋ!!? 

*******************

ತೆರೆ ಎಳೆಯುವ ಮುನ್ನ
ನಾಟಕವೂ ವಾಸ್ತವ;
ತೆರೆ ಬಿದ್ದ ನಂತರ
ವಾಸ್ತವವೂ ಒಂದು ನಾಟಕ
ಕಲೆಗಾರರು ಧರೆಯೊಳು ನರರು
ಭೂರಂಗ ಮಂದಿರದ ನಾಯಕರು 


**************************


ವಾಸ್ತವ...

ಪ್ರೀತಿಯಿರುವುದು
ಅವನೆದುರು ಅವಳು
ಅವಳೆದುರು ಅವನು
ಇರವವರೆಗೆ ಮಾತ್ರ! 

*************

09/10/2013

Tuesday, 8 October 2013

ಮೌನ 
ನನ್ನ 
ದೌರ್ಬಲ್ಯವಲ್ಲ!

*********

ಪ್ರೀತಿ ತುಂಬಿದ ಮನಕೆ
ದ್ವೇಷದ ಕಿಚ್ಚ ಹಚ್ಚಿಸಲಾಗದು
ಅರಿಯದವರ ಶ್ರಮ ವ್ಯರ್ಥವೇ
ಪ್ರೀತಿಯೂ ಒಂದು ಅಸ್ತ್ರ 
ಕಿಚ್ಚಿನೆದುರು ಭೋರ್ಗರೆವ ನದಿಯಾಗಿ

*************

ಖುಷಿಗಳಲ್ಲಿ ಪಾಲು ಕೇಳುವರೇ ಹೆಚ್ಚು

ಬೇಸರ ಮೂಡಿಸಿ
ಕ್ಷಣಗಳ ತಪ್ಪಿಸಿ

*************
ಕುಂಟಲು ಶುರುವಿಟ್ಟು
ತುಂಬಾ ದಿನಗಳಾದವು
ಈಗೇನು ಕಾಲೆಳೆಯುವಿರಿ
ಮುಗ್ಗರಿಸಿ ಹೆಚ್ಚು ಜಿಗಿದೇನು!! 

*************
ಪ್ರೀತಿಸದವರ ಪ್ರೀತಿಸಿದಷ್ಟೂ
ಪ್ರೀತಿ ನೋಯ್ವುದು
ಪ್ರೀತಿಯಿಲ್ಲದೆ 

08/10/2013

ಅವಳೊಂದು ತೆರೆದ ಪುಸ್ತಕ
ಅವಳೊಲವನ್ನೋದಲು 
ಬೇಡ ನಿನಗೆ 
ಕನ್ನಡಿ- ಭೂತಗನ್ನಡಿ
ಅವಳ ಭಾವಗಳ
ಎಡ ಬಲ ಬದಲಿಸೀತು ಕನ್ನಡಿ;
ಅಗತ್ಯಕ್ಕಿಂತ ಹೆಚ್ಚೆ ಹಿಗ್ಗಿಸಿ 
ತೋರಿ ವಿಕೃತಗೊಳಿಸುವುದು ಭೂತಗನ್ನಡಿ
ನಿನ್ನ ನಿರ್ಮಲ ಮನವೊಂದೇ ಸಾಕು ಓದಲು 
ಅವಳಂತರಂಗವ ನಿನ್ನ ಕಣ್ಣಿನಡಿ 

೦೮/೧೦/೨೦೧೩

Monday, 7 October 2013

ನನ್ನ ಚೇತನ



ನನ್ನವನ ಕನಸು ಕಾಣಲು
ಶುರುವಿಟ್ಟು ಇಂದಿಗೆ ಒಂದು ವರುಷ

ಏನೋ ಮೋಹ, ಏಕೋ ದಾಹಗಳ
ಭಾವಗಳಿಗೆ ದೂರವಾದವಳಲ್ಲಿ
ಅವನ ಮೋಹ, ಅವನ ಪಾಂಡಿತ್ಯ ದಾಹ
ಹುಟ್ಟಿಸಿ ಮೆರೆಸಿದ ಅಕ್ಷರಗಳಲಿ.

ಸಾಗುವ ಪಯಣವು ಎಲ್ಲಿಂದೆಲ್ಲಿಗೋ
ದಿಕ್ಕು ಬದಲಿಸಿ ಅಕ್ಷರ ದಾರಿ ಕಾಣಿಸಿದವನು
ಕನಸುಗಳಿಗೆ ಅವನಾಸೆಗಳ
ಬಣ್ಣ ತುಂಬಿದ ಕಲೆಗಾರನವನು

ಮನಮೋಹನ, ಚಿತ್ತ ಚೋರ;
ಒಮ್ಮೆ ಚಂದಿರ, ಒಮ್ಮೆ ಭಾಸ್ಕರ
ಮತ್ತೊಮ್ಮೆ ನವಿಲು, ಕಾಗೆ, ಕಾಜಾಣನಂತೆ.
ದೂರದ ಬೆಟ್ಟದಾಚೆಗಿನ ಅವನ ಒಳದನಿಗೆ
ನನ್ನವು ಅಕ್ಷರ ಮಾಲೆ ಅವನ ಕೊರಳಿಗೆ

ಕಾಣದ ಸ್ಫೂರ್ತಿಗೆ ಮಿಡಿವ ನನ್ನ ಭಾವ
ನಿಜವೋ ಕನಸೋ ಕಾಣೆನೀಗ
ಪಯಣದಲಿ ಭಾವ ಸಂತೃಪ್ತಿ ತಂದವ
ಅಳುವಿನ ಆಳಾಗಿದ್ದ ಈ ಎನ್ನ ತುಟಿಗಳ ನಗು
ನನ್ನ ಕನಸಿನರಸ, ನನ್ನ ಚೇತನ

ದಿವ್ಯ ಆಂಜನಪ್ಪ

೦೮/೧೦/೨೦೧೩
ಬೆಳಗಿನಿಂದುರಿದ ಸೂರ್ಯನು
ತಣ್ಣನೆ ಪಶ್ಚಿಮದಲಿ ಮಲಗಿದ
ಹಾಗೇಯೇ ಈ ಎನ್ನ ಮನವು
ತಡವಿದೆ ನಿನ್ನೆದೆಯ! 


07/10/2013
ಹಾಗೇ ಸುಮ್ಮನೆ...... 

ಪ್ರೀತಿಯಾಸರೆಯಲಿ ಸೋಲೆಲ್ಲಾ ಗೆಲುವೇ
ಅದಿಲ್ಲದೆ ಗೆಲುವೆಲ್ಲಾ ಸೋಲೆ 
ಇನ್ನೆಷ್ಟು ನನ್ನ ಸೋಲ ಕಾಣಬೇಕು
ಓ ನನ್ನೊಲವೇ?


07/10/2013
ಅರಿವಿಲ್ಲದ ತಪ್ಪಿಗೂ ಅರಿವಿದ್ದ ತಪ್ಪಿಗೂ
ಸಾಮ್ಯತೆ ತಪ್ಪೇ,
ಸಾಮ್ಯತೆ ಮತ್ತು ವ್ಯತ್ಯಾಸ "ಮುಗ್ಧತೆ"!
ಮೊದಲನೇಯದು ತಿಳಿಯದೆ ಮುಗ್ಧತೆ
ಎರಡನೇಯದು ತಿಳಿದು ತೋರುವ ಮುಗ್ಧತೆ


ದಿವ್ಯ ಆಂಜನಪ್ಪ 

07/10/2013