Thursday, 12 November 2015





ಬಿಸಿಯುಸಿರು ತಾಗೀತೆಂದು
ನಾನು ಉಸಿರಾಡಲು ನಿಲ್ಲಿಸುತ್ತೇನೆಯೇ... 
ಯಾರದೋ ಒಡಲ ಕಿಚ್ಚಿಗೆ
ನಾನು ಬೆವರಿ ನಿಲ್ಲುತ್ತೇನೆಯೇ... 
ಮಳೆಯಿದೆ ಚಳಿಯೂ 
ಛತ್ರಿ ಹಿಡಿದು ನಡೆವೆ
ಹೀಗೆ ಮೋಡಗಳ ಕೆಳಗೆ...

******

ನಾವು ಪ್ರೀತಿಸುವುದು
ನೋವುಗಳನ್ನೆ
ಯಾರನ್ನು ಹೆಚ್ಚು ಪ್ರೀತಿಸುತ್ತೇವೆ 
ಅವರಿಂದಲೇ ತಿರಸ್ಕಾರ ಪುರಸ್ಕಾರ
ಎಲ್ಲವೂ ಆಗಿ.. 
ಮಾತು ಮೌನವೂ ಕಾರಣವಾಗಿ
ನೊಯುತ್ತೇವೆ ನಲಿಯುತ್ತೇವೆ
ಖುಷಿಗಳನ್ನು ಸುಮ್ಮನೆ ಬಿಟ್ಟು
ತಬ್ಬುವುದಾದರೂ ಅವರಿಂದಾದ ನೋವುಗಳನು
ನಾವು ಅವರನ್ನೇ ಪ್ರೀತಿಸುತ್ತೇವೆ
ನೋವುಗಳನ್ನೇ ನಾವು ಪ್ರೀತಿಸಿರುವುದು
ಪ್ರೀತಿಸುತ್ತಿರುವುದು....

******

ಮಳೆಯಲಿ ಜೊತೆಯಲಿ 
ಛತ್ರಿ ಹಿಡಿದು ನೀ ನಡೆವಾಗ 
ಮನವರಳಿ ಮೊಗ ಮಿಂಚಿ 
ಸಿಡಿಲ ಸದ್ದು ಎದೆಯೊಳಗೆ 
ಗೊತ್ತಿಲ್ಲವೇ ಹುಡುಗ 
ಆ ಸದ್ದಡಗಿಸಲೇ ನನ್ನದು ಮಾತು ಹೆಚ್ಚು...

ಅದರೊಳೂ ಛತ್ರಿ ಇಳಸಿ 
ನಡೆಯೋಣವೇ
ಎಂದು ಕೇಳಲು ನೀ
ನನ್ನೊಳಗೆ ಡವ ಡವ ದಾಂದಲೆ
ಗೊತ್ತಿಲ್ಲವೇ ಹುಡುಗ 
ನಾನು ಸಿನೆಮಾ ನಟಿಯಲ್ಲವೋ
ವಾಟರ್ ಪ್ರೂಫ್ ಮೇಕಪ್ ನನ್ನದಲ್ಲವೋ.. !!

19/08/2015

*****

ಎಷ್ಟೇ ವೇಗದಿ 
ಓಡಿದರೂ 
ಗಾಳಿ ತಾ 
ಉಸಿರಾಗಿ ಒಳಗೂಡಲು
ಅದೇಕೋ 
ಯೋಚಿಸಿದಂತೆ;
ನಾ ಉಸಿರುಕಟ್ಟಿದಂತೆ 
ಈ ಹೊತ್ತು ನಿಂತೆ..

18/08/2015


*****

ಹೆಚ್ಚು ಪ್ರೀತಿಸಿಕೊಳ್ಳುವ
ಹೂವು 
ಮುದುಡಿದ್ದೇ ಹೆಚ್ಚು
ಇಲ್ಲದಿದ್ದರೂ 
ಉದುರಿ ಹೋದೀತೆಂಬ ಭಯವು
ಮರುಗಟ್ಟಿ ಜೀವ ಪಕಳೆಗಳು


*****

ಚಿನ್ನವೇ ಆದರೂ 
ಮತ್ತಷ್ಟು ಕುದಿಸಿ
ಕಲ್ಮಶವ ತೆಗೆವರು...!
ಸಹಿಸಬೇಕು ಕುದಿಗಳ
ಒಳಗುಣ ಮತ್ತಷ್ಟು ಹೊಮ್ಮಿ 
ಮೆರೆಯಲು...!

17/08/2015

ಪದ್ಯ

ಮಚ್ಚೆ


ಮಚ್ಚೆ ಹುಡುಕುತ್ತಿದ್ದೆ
ಅದು ನನ್ನ ಹುಟ್ಟು ಮಚ್ಚೆ
ಕಣ್ಣಿಗೆ ಕಾಣದ್ದು ಕನ್ನಡಿಗೂ ಸಿಗದ್ದು
ಅಪ್ಪ ಅಮ್ಮಂದಿರಿಗೆ ನೋಡಿದ ನೆನಪೇ ಇಲ್ಲ
ಇತ್ತು ಒಂದು ಹುಟ್ಟು ಮಚ್ಚೆ
ಅಜ್ಜಿ ಹೇಳಿದ್ದ ಗುಟ್ಟು
ಹಾದಿ ಬೀದಿಯಲ್ಲೆಲ್ಲಾ ಗುರುತಿಸಿ ಹೇಳುತ್ತಿದ್ದರು
ಅಂದಿಗೂ ಅಜ್ಜಿ ತಾತನಿಗೂ
ಅವರದ್ದೇ ಹುಟ್ಟು ಈ ನನ್ನ ಮಚ್ಚೆ
ಹುಡುಕುತ್ತಿದ್ದೇನೆ ಇನ್ನೂ ಕಂಡಿಲ್ಲ
ಅವರ್ಯಾರೋ ಒಬ್ಬರು ಗುರುತಿಸಿ ಹೇಳುತ್ತಾರೆ
ನಾನು ಕಪ್ಪು ಮಚ್ಚೆಯವಳಂತೆ... !... 
ಹುಡುಕುತ್ತಿದ್ದೇನೆ... 
ಹುಡುಕುತ್ತಿದ್ದೇನಷ್ಟೇ... !

17/08/2015
ಹೂವಿನ ದಳಗಳ
ದುಂಬಿ ಮೈಸವರಿ
ಝೇಂಕರಿಸಿ ರಮಿಸಿ
ಮುತ್ತಿಟ್ಟು ಬಚ್ಚಿಟ್ಟು
ಕೊಟ್ಟ ಪ್ರೀತಿ
ಒಳಗೊಳಗೇ ಕಾಯಿ ಹಣ್ಣಾಗಿ
ಮಾಗಿ ತೂಗಿದೆ ಓಲಾಡಿ
ಈ 
ತಂಗಾಳಿಗೆ ... !

*****


ತುಟಿಗಳ ಜೀವತಂತುಗಳು
ಬಿಗಿ ಹಿಡಿದು ಸೆಳೆದುಕೊಂಡಂತೆ
ನಿನ್ನ ತುಟಿಗಳಲ್ಲಿ ಬೆಸೆದುಕೊಂಡಂತೆ
ತುದಿಗಾಲಲ್ಲಿ ನಿಂತ ಆತುರ 
ಲಜ್ಜೆ ಮರೆತು ಗೆಜ್ಜೆ ಚೆಲ್ಲಿ ಹೆಜ್ಜೆ ಇಟ್ಟಂತೆ
ಪ್ರೀತಿ ನೀ 
ಹೀಗೆ ಹಗುರಾಗಿ ಹತ್ತಿರತ್ತಿರವಾದಾಗ...

******


ಕೈಗೆ ಸಿಗದ ಕಾಮನಬಿಲ್ಲಿಗೆ
ಆಸೆಪಟ್ಟು ಕೊರಗುವ ಬದಲು
ಕೈಗೆಟುಕೊ ಬಣ್ಣದ ಗಾಳಿಪಟ ಹಿಡಿದು
ಆಗಸಕೆ ಹಾರಿಸಿ ನೋಡುವ ಚಂದ
ಒಪ್ಪಬಹುದೇನೋ; ಸೂತ್ರವೂ ಕೈಲಿರಲು
ಮಾಯವಾಗೋ ಗೊಂದಲವಿಲ್ಲ,,
ಆದರೂ ಸೂತ್ರ ಗಟ್ಟಿ ಇರಬೇಕಷ್ಟೆ
ತುಂಡಾಗಿಸೋ ಹುನ್ನಾರಗಳೆದುರು...

*****

ಯಾರನ್ನೂ ಒಲಿಸಿಕೊಳ್ಳುವ
ಅಗತ್ಯವೇ ಕಾಣಲಿಲ್ಲ
ಒಮ್ಮೆಲೆ ಮೆಚ್ಚುಕೊಂಡೆನಷ್ಟೇ ಅವನ....!

*****


ನಾನು ನನ್ನ ಮನಸ್ಸು
ಬಹುಶಃ
ಯಾರ ಅರ್ಥಕ್ಕೂ ನಿಲುಕದ್ದು
ಹಾಗಾಗಿಯೇ ಏನೊ
ಆಗಾಗ ಹೊಸದಾಗಿ
ಸಜ್ಜುಗೊಳ್ಳುವೆ

ಮತ್ತೆ ಎಲ್ಲರ ಕಾರಣವಿಲ್ಲದೆ
ಪ್ರೀತಿಸಲು... !
ಕಾರಣವಿದ್ದರೂ ಯಾರನೂ ದ್ವೇಷಿಸದೇ
ತನ್ನೊಂದಿಗೆ ಹೋಲಿಸುವ ಅಕಾರಣಕ್ಕೆ
ಯಾರೆಡೆಗೂ ಅಸೂಯೆಯಿಲ್ಲದೆ.... 
ಸಜ್ಜುಗೊಳ್ಳುತ್ತಲೇ ಉಳಿವೆ...

15/08/2015

*****

ಹಾಲಂತ ಮನವು
ಉಕ್ಕೇರಿ ಹರಿಯಲು
ಬಿಸಿ ತಾಗಿಯೇ ಇರಬೇಕು.. !

*****

ಖುಷಿಯಲಿ ಹೂ ಮಾಲೆಯ
ಹೆಣಿಯಲೆಣಿಸಿದೆ 
ಅದೇನೋ ಇರುಸು ಮುರುಸು 
ಕೈಗತ್ತಿದ ಸುಗಂಧ 
ಈ ಸುತ್ತಲ ಗಾಳಿಗೆ...

ಖುಷಿಗೆ ಬೆಲೆಯಿಲ್ಲವೇ
ಕಟ್ಟಲೂ ಆಗಲಿಲ್ಲವೇ..?!
ನಡುವೆ ಸುಳಿವ ಉಸಿರಿಗೆ
ಹಾರಿ ಹೋಗೋ ಹೂವಿಗೂ ಗಂಧಕೂ
ಹೆಣೆಯಲಾರದ ನಂಟು ಉಳಿದು...

14/08/2015

Thursday, 5 November 2015

ಪದ್ಯ

ವ್ಯಂಗ್ಯ..


ವ್ಯಂಗ್ಯವಾಡಬೇಕೆಂದಾಗಲೆಲ್ಲಾ
ಕತ್ತಲ ಕೋಣೆ ಸೇರಿಬಿಡುತ್ತೇನೆ
ನೇರ ನುಡಿದು ನಿಲ್ಲಬಯಸಿದಾಗ
ಕನ್ನಡಿ ಎದುರು ಭಾಷಣ ಮಾಡುತ್ತೇನೆ

ಏನನ್ನೂ ಹೇಳಲಾರದೆ ಉಳಿವಾಗ
ಸುಮ್ಮನೆ ನಡೆದುಬಿಡುತ್ತೇನೆ
ತುಂಬಾ ಮಾತುಗಳಿದ್ದಾಗ
ನನ್ನ ಕಣ್ಣಿನ ಶಕ್ತಿಗೆ ಬೆರಗಾಗುತ್ತೇನೆ
ನೆಲದಾಳಕೆ ಹೂತು ಹೋಗೋ ದೃಷ್ಟಿಗೆ
ಎಂದಿಗೂ ಹೆದರಿ ಮತ್ತೆ ಮತ್ತೆ ರೆಪ್ಪೆಗಳ ಹೊಡೆಯುತ್ತೇನೆ

ಕತ್ತಲಿಗೆ ಹೆದರುತ್ತೇನೆ
ಹುದುಗಿದ ಆತಂಕದ ಕೈಗಳಿಗೆ
ಕತ್ತಲಲೇ ಹುದುಗುತ್ತೇನೆ
ಕಳೆದು ಹೋಗದ ಕನಸ ಕಟ್ಟುವ ಸಲುವಾಗಿ

ನನ್ನ ದೃಷ್ಟಿಗೆ ನಾನೇ ಸಿಲುಕಿ
ಅವರ ಉತ್ತರಕ್ಕಾಗಿ ಪ್ರಶ್ನಿಸಿಕೊಳ್ಳುತ್ತೇನೆ
ಇದು ನಾನಾ? ಇಲ್ಲ ಅವರಾ?!
ಮತ್ತೆ ವ್ಯಂಗ್ಯವಾಡುತ್ತೇನೆ
ಕತ್ತಲಿಗೆ ದೋಷವಾಗಬಾರದೆಂದು
ಹಗಲಲೇ ಎದುರಿನ ಆ ಕಣ್ಗಳಲಿ 
ದೃಷ್ಟಿನೆಟ್ಟು
ಹಲವು ಬಾರಿ ಕನ್ನಡಿಯ ಎದುರೇ... !

11/08/2015
ನಮಗಾಗಿಯೇ ಎಲ್ಲರೂ ಬೇಕೆನ್ನುತ್ತೇವೆ
ಯಾರಿಗಾಗಿಯೂ ನಾವು ಬದುಕದೇ...

*****

ನನ್ನ 
ಅತೀ ಪ್ರೀತಿ ಕಾರಣ
ಕಾಡುವ ದೂರುವ ಅವರುಗಳನ್ನೆಲ್ಲಾ
ಯಾರನ್ನೂ ದ್ವೇಷಿಸದ ನಾನು 
ದೂರವೇ ಇಟ್ಟೆ 
ಯಾವ ಕಾರಣಕ್ಕೂ ಪ್ರೀತಿಸದೆ;
ವಿಪರ್ಯಾಸ ...
ನನ್ನ ಹೃದಯವು 
ಅವರ ಕಂಡೊಡನೆಯೇ ಹತ್ತಿರ ಓಡುವುದು ನಲಿವುದು
ನನ್ನನೇ ಮೆರೆತು 
ಅಪಮಾನಿಸಿದ ಅವರನೇ ಹುಡುಕಿ..
ಪ್ರೀತಿ .......
ಹುಚ್ಚು.. !

08/08/2015

****

ಎಷ್ಟೆಂದು ಓಡಲಿ 
ಈ ಮಾಯಾ ಜಿಂಕೆಯ ಹಿಂದೆ
ಹಿಂದಾಕಿ ಓಡಿದ್ದೇ ಓಟ 
ಕೊರೆದು ಕಿಂಡಿ ಬೇರಿನೊಳು
ಕರುಳು ಹಿಂಡಿದ ಶಾಪವೋ 
ಮಾಯಾ ಜಿಂಕೆಗೆ ವೇಗ ಹೆಚ್ಚು
ಸೋಮಾರಿಯಾಗಿ 
ಹಿಂದುಳಿದುಬಿಡುವ ಎನಿಸುತ್ತಿತ್ತು
ಹಾಳದ್ದ ಮರೆವು 
ಮತ್ತೆ ಕಾಲಿಗೆ ಲಾಳ ಹೊಡೆದು ನಿಂತೆ
ಓಡದಿದ್ದರೆ ಕಣ್ಣೀರಿಗೆ ಬೆಲೆಯಿಲ್ಲ 
ಓಡುತ್ತಲಿದ್ದಂತೆ ಜಿಂಕೆ ಮರೀಚಿಕೆ
ಎತ್ತ ಸಾಗುವುದೋ 
ಈ ದಾರಿ ಆಸೆಗಳ ಮೀರಿ ವೇಗವಾಗಿ...ಅದೆತ್ತೊ..

*****

ಯಾರನ್ನೂ 
ದ್ವೇಷಿಸಲಾಗದ ಸ್ಥಿತಿಗೆ
ಎಲ್ಲವನ್ನೂ 
ಒಪ್ಪಿಕೊಳ್ಳುವಂತಹ 
ಅನಿವಾರ್ಯತೆಯೂ 
ಮೊದಲಾಗಿ ಇಲ್ಲ
ಈಜಲಾರೆ ನೀರಿನೊಳಷ್ಟೆ
ಕುಡಿಯದೆ ಉಳಿದೆನೆ
ದೂರಿ ನೀರನು ದೇಹದಿಂದ..?!
ಕೊಳಕು ನೀರ ಚೆಲ್ಲಿ
ತುಂಬಿಸಿಡುವೆ ಅಡಿಗಡಿಗೂ
ಸಿಹಿ ನೀರನ್ನಷ್ಟೇ ಬದುಕಿನ ಅಡುಗೆಗೆ..



*****

ಕರ್ಣನಿಗೆ 
ಒಡೆತನದ ಗುರಿಯಿರಲಿಲ್ಲ
ದಾನ ಕೇಳುವವರಿಗೆ 
ಹೆದರಲಿಲ್ಲ
ಶಿವನೂ ಒಮ್ಮೆ 
ಪಾರ್ವತಿಯನು ವರವಾಗಿ 
ಕರುಣಿಸಿಬಿಟ್ಟಿದ್ದನಂತೆ ರಾವಣಗೆ
ಕರ್ಣನಾಗಲಾರೆ 
ಸ್ವಾರ್ಥದ ಜನರೆದುರು
ಶಿವನಾಗಲಾರೆ 
ರಾವಣನೆದುರು...! 

*****

ಹೊಟ್ಟೆಯುಬ್ಬರಿಸಿದಂತೆ 
ತುಂಬಿಕೊಂಡ ಒತ್ತಡಗಳು
ಇಳಿಯಲು ನಕ್ಕು 
ಬಿಗಿದಿಟ್ಟ ಉಸಿರ ಸಡಲಿಸಬೇಕು
ಇಲ್ಲವೆ ಚೆನ್ನಾಗಿ ತಿಂದುಂಡು 
ಮತ್ತು ತರಿಸಿಕೊಳ್ಳಬೇಕು
ಅದೂ ಇಲ್ಲವೇ ಮುತ್ತಿನರಸನ 
ಮತ್ತಿನ ಮಾತ ಮುತ್ತಿಕೊಳ್ಳಬೇಕು.. ! 

06/08/2015

Wednesday, 5 August 2015

ಕವನ

ಕೆಂಪು ಕುಂಡ

ದನಿಯೆತ್ತದ ಹೊರತು
ಉಸಿರಿದ್ದ ಪರಿವೆಯೇ ಇಲ್ಲದಂತೆ
ಉಸಿರಾಡಿದ ಕ್ರೂರತೆ
ತಗ್ಗಬೇಕಾಗಿ ಏದುಸಿರ ಕೂಗು

ಇದು ಇಂದು ನೆನ್ನೆಯದಲ್ಲ
ಉಸಿರಿದ್ದ ಕಾರಣ
ಉಸಿರು ತಾಗಿ ಹೋದ ಕಾರಣ
ಕಿಚ್ಚು ಹೊತ್ತಿ ಹಬ್ಬುತ 
ಸದ್ದಡಗಲಿ ಏರಿ ನಿಂತ ಅಮಾನವೀಯತೆ...!

ಕಾಯ್ವ ಕೈ ಕಾಡುವ ಕೈ
ಹೊತ್ತಿನ ತುತ್ತ ನೆಚ್ಚಿ ಗೆಯ್ವ ಕೈ
ಕತ್ತರಿಸಿದ ಬೆರಳುಗಳು
ಒಂದಾಗಿ ಬಿತ್ತಿದ ನೆಲವದು
ಕೊಯ್ಲಿನೊಳು ಕೊಂದುಬಿಟ್ಟ 
ಬದುಕು ನಂಬಿಕೆ ವಿಶ್ವಾಸಗಳು
ಆ ಮಣ್ಣಿನ ಗದ್ದೆ ಈಗ ಕೆಂಪು ಕುಂಡ... !

05/08/2015

Wednesday, 29 July 2015

ತುಂಬಿದ ಕೊಡದಿಂದ 
ತುಳುಕಿ ಚೆಲ್ಲೋ ನೀರು
ಚಂಚಲ ಚೆಲ್ಲು ಚೆಲ್ಲು
ದಾರಿಯುದ್ದಕ್ಕೂ ತೇವ
ಹುಟ್ಟಲಿಲ್ಲ ಒಂದು ಗಿರಿಕೆಯೂ
ತುಂಬಿಕೊಂಡದ್ದೂ ವ್ಯರ್ಥ
ಚೆಲ್ಲಿ ಹೋದದ್ದು ವ್ಯರ್ಥ
ಮನಸು ಖಾಲಿ ಖಾಲಿ 
ಆರ್ದ್ರತೆ ಆರಿ ಬಾರಿ ಬಾರಿ...

29/07/2015

Friday, 24 July 2015




ಚಿಕ್ಕಪುಟ್ಟ ಆಸೆಗಳಲ್ಲೇ
ಎತ್ತರದ ನಿರೀಕ್ಷೆಗಳಿಟ್ಟದ್ದು
ನನ್ನದೇ ತಪ್ಪೇನೋ
ಈಗ ನೋಡು ಸಣ್ಣ ಸಣ್ಣ ವಿಷಯಕ್ಕೆಲ್ಲಾ 
ತೀವ್ರ ಯಾತನೆ
ದೊಡ್ಡದನ್ನೇ ಕೇಳಿ ನೋಡುವ
ಈ ಬಾರಿ
ಯಾತನೆಗಾದರೂ ಬೆಲೆಯಿರಲಿ..!

24/07/2015

ಕವನ

ಮತ್ತೆ ಸಿಬಿರು

ಕವಲೊಡೆದ ದಾರಿಗೆ
ಬಲೇ ಸಿಬಿರು
ಕಾಲಿಗೆ ತಾಗಿದಲ್ಲ
ಮನದೊಳುಳಿದದ್ದು

ಅಳಿದ ಮೇಲೂ ಉಳಿವುದೆಂದರೆ
ಕೊಳೆಯುವುದು 
ಅದು ಮಣ್ಣೊಳಗಾಗಿದ್ದರೆ ಲೇಸಿತ್ತು
ಹೇಳಿಕೊಂಡಿದ್ದೆ ನಾನಂದೆ

ಇಂದಿಗೂ ಹೀಗೆಯೇ ಉಳಿದೆ
ಅನುಭವಗಳ ನೆನಪು ತಾಳೆ
ಗೊತ್ತಿಲ್ಲದ ಹೆಜ್ಜೆಗಳಲಿ
ಸಿಬಿರು ಮತ್ತೆ ತಾಗಿ ಅಳಲು... !

24/07/2015

ಕವನ

ಕಪ್ಪು...


ಕನಸು ಕಲ್ಪನೆಗಳೊಂದಿಗೆ
ಮಾತು ನಿಲ್ಲಿಸಿರುವೆ
ಅದಕ್ಕಾಗಿಯೇ ಏನೋ
ಕಣ್ಸುತ್ತ ಕಪ್ಪು

ಕಾಡುವ ಚಂದ್ರಮ
ಕಾಡಿಗೆ ಇಡಲು ರಾತ್ರಿ ಬಂದರೆ
ನನಗೋ ಗಾಢ ನಿದ್ದೆ..
ಹಚ್ಚಿ ಹೋದನೇನೋ ಜರಿದು
ಅದಕ್ಕೆ ಕಣ್ಸುತ್ತ ಕಪ್ಪು

ಇರುಳು ನಿದ್ದೆಯಲಿ ಕಳೆದು
ಸೂರ್ಯನನ್ನೇ ಹುಡುಕಿ
ಅವನ ಹಿಂದೆಯೇ ಬಿದ್ದು
ಅವನನೇ ದಿಟ್ಟಿಸುತ್ತ ಕೂತು
ಹೊಟ್ಟೆಗೆ ಹಸಿವಿಲ್ಲ
ಅದಕ್ಕೆ ಏನೋ ಕಣ್ಸುತ್ತ ಕಪ್ಪು

ಕನಸು ಕಾಣುವುದ ಮರೆತು
ಕನಸನೇ ಹಚ್ಚಿಕೊಂಡುಬಿಟ್ಟೆ
ನಗಿಸಿದ ಕಲ್ಪನೆಗಳ ಸರಿಸಿ
ಕಾಡುವ ಕನಸ ಕೈ ಹಿಡಿದು
ದಿನದಿನಕೂ ಉಷ್ಣವೇರಿ
ಈಗ ಕಣ್ಸುತ್ತ ಕಪ್ಪು...

ಕಣ್ಣ ಸುತ್ತಲ ಕಪ್ಪು
ಕಪ್ಪಲ್ಲದ ಮನಸ್ಸಿನದು
ಕಾಡಿಗೆಯ ಗುರುತು 
ಕನಸಿಗೆ ಮೆತ್ತಿ 
ದೃಷ್ಟಿ ತಾಗದಿರಲೆಂದು ಕೊರಗಿ
ಕ್ಷಣ ಕ್ಷಣವೂ ಕಾದು
ಮತ್ತೆ
ಕಣ್ಸುತ್ತ ಕಪ್ಪು.... 

24/07/2015

ಕವನ

ಗಾಳಿ ತಂಪು
ಸುರಿದು ಮಂಜು
ಬೆಟ್ಟದ ಹಾದಿ
ನಾವಿಬ್ಬರೇ ಎಲ್ಲಾ
ಒಮ್ಮೆ ನಾನು ಒಮ್ಮೆ ನೀನು
ಬಿಡುವಿಲ್ಲದೆ ತುಟಿಯ ತುಂಬಿ
ಮನಸೆಲ್ಲಾ ಹಣ್ಣು
ಹೊಮ್ಮಿ ಒಡಲ ಜೇನು
ಏರಿದ ತುದಿಯಲಿ
ಪದೆ ಪದೆ ನಿನ್ನ ಹೆಸರು ನಾನು
ನನ್ನ ಹೆಸರು ನೀನು
ಕೂಗಿ ಕೂಗಿ ಹೃದಯವೆಲ್ಲಾ ಪ್ರತಿಧ್ವನಿ
ಬೆಟ್ಟವದು ಮೌನ
ಹೋಗೋಣವೇ? 
ಆ ಬೆಟ್ಟದ 
ಬೆಳಗು- ಬೆಳದಿಂಗಳಿಗೆ ಹೀಗೊಮ್ಮೆ..?!

ಕವನ

ನಿನ್ನೊಳು ಕಲೆತು..

ತುಟಿಯಂಚಿನ ಮಿಂಚನ್ನೊಮ್ಮೆ ಹಿಡಿಯೋ ಹುಡುಗ
ನಾಚಿಕೆಯನೇ ಗೆದ್ದು ನಿಲ್ಲುವ ಮನಸ್ಸಾಗಲಿ ನಿನ್ನ ಕೆನ್ನೆ ಸವರಿ

ಗಲ್ಲದ ಬಿಗಿಯನ್ನೊಮ್ಮೆ ಜಗ್ಗಿ ಸೆಳೆಯೋ ಹುಡುಗ 
ಬೆರಳ ಹಿಡಿದು ಮುಷ್ಠಿಯಾಗುವ ಎದೆಗಾನಿಸಿ ಕನಸ

ಕಿವಿ ಲೋಲಕವನ್ನೊಮ್ಮೆ ಹಿಡಿದು ನಿಲ್ಲಿಸೋ ಹುಡುಗ
ಕಾಲದ ಗಡಿಯಾರ ನಿಲ್ಲಲಿ ನಮ್ಮ ಕಾದು

ಹಣೆರೇಖೆಗಳನ್ನೊಮ್ಮೆ ಚುಂಬಿಸೋ ನೀ ಹುಡುಗ
ಇಲ್ಲಸಲ್ಲದ ನನ್ನದೇ ಭ್ರಮೆಯ ಬರಹಗಳ ತೂರಿ

ಬೊಗಸೆಯೊಡ್ಡಿ ತುಂಬಿಕೊಳ್ಳೊ ನೀ ಚೆನ್ನ
ಅರಳಿ ಮುದುಡಿ ಪನ್ನೀರ ಅದುರಲಿ ತುಂಬಿ ಕಣ್ಗಳು

ನಿನ್ನ ನೀ ಮರೆತು ಒಮ್ಮೆ ಅಪ್ಪಿಕೊಳ್ಳೊ ಹುಡುಗ
ನಾ ನನ್ನೇ ಮರೆವಂತೆ ನಿನ್ನೊಳು ಕಲೆತು..

23/07/2015


ಅರಳಿ ಹೂವಾಗುವ ಮೊಗ್ಗಿಗೆ
ತಡೆ ಹಿಡಿದು ಅರಳಾಗದೆ ನಿಲ್ಲಿಸಲಾಗದು
ಇಚ್ಛೆಯಿದ್ದರೆ ಗಿಡದ ಬೇರನ್ನೇ ಕೊಯ್ಯಬೇಕು
ಇಡೀ ಹಸಿರೇ ಇಲ್ಲವಾಗಲು.. !

*****

ಕುತೂಹಲವನ್ನೇ ಕಳೆದುಕೊಂಡವರೆದುರು
ಸುಮ್ಮನೆ ಪುಳಕಗಳ ಹೊತ್ತು ಕುಣಿದರೆ
ನಿದ್ದೆ ಜೊಂಪು ನಿರಂತರ...! 

****

ಭಾವನೆಗಳು ಸರಿ ಇದ್ದರೆ
ಅಭಿವ್ಯಕ್ತಿಗೇಕೆ ಹಿಂಜರಿಕೆ ....
ಪ್ರಶ್ನೆಗಳಿದ್ದರೆ ಉತ್ತರಿಸುವ
ಇದ್ದರೆ ; ಎದುರೇ ಇಟ್ಟರೆ ..!..

19/07/2015

ಕವನ

ಕನಸುಗಳು..

ನಿದ್ದೆಯನೇ ಹತ್ತಿರ ಬರಗೊಡದು
ಈ ಕನಸುಗಳು
ದಿನವಿಡೀ ಹೊತ್ತಿ ಉರಿದು
ರಾತ್ರಿ ಸಣ್ಣಗೆ ಮಿಣುಕು
ಎಂದಿಗೂ ತಂಪಾಗದ ಮಳೆಯ ಮಿಂಚು

ಸಂಜೆಯ ಮಂದ ಮುಂಬೆಳಕು
ತಂಗಾಳಿ ಬೆನ್ನತ್ತಿ
ಜೊತೆ ನೀ ಬೆಂಕಿ ಚಳಿ
ದಿಗ್ಗನೆ ದೇದೀಪ್ಯಮಾನ
ನನ್ನ ಬಲಗೈ ಹಿಡಿದು
ನೀ ತುಟಿಯೊತ್ತಿ ಕೊಟ್ಟ ಹೂ ಮುತ್ತು..!

ಕಾಮನಬಿಲ್ಲಿನ ಬಾವಿಯೊಳು
ಬಾಗಿ ಬಾಗಿ ನಾ ನೋಡಿ ಹಿಡಿದು
ಅನೇಕ ಚಿತ್ರ ಚರಿತ್ರೆಗಳು
ಹಾರುವ ಹಕ್ಕಿಗಳು
ತಲೆಗೂದೋ ಹಸಿರುಗೊಂಚಲು
ಕರೆವ ಮೋಡವ ಕಂಡೆ ಆ ಕ್ಷಣ ನಿನ್ನ ಕಣ್ಣೊಳು..!

19/07/2015


ಮಳೆಯ ಸಂಜೆ
ಹತ್ತಿರದಲ್ಲೇ ಮೇಣದ ದೀಪವಾರಿದ ಘಮಲು
ತಂಪಾದ ಗಾಳಿ
ಆಗಾಗ ಏರಿಳಿಸೋ ಅದರ ಅಮಲು
ಅವಳು ನಕ್ಕ ಸದ್ದು
ಎಲ್ಲೆಲ್ಲೂ ಜೀರುಂಬೆ ಮಿಂಚುಹುಳುವಿದೇ ಹಾರಾಟ
ಸ್ಪಷ್ಟವಾಗುತ್ತಾ ಹೋಯಿತು
ಕತ್ತಲಲ್ಲಿ ಸದ್ದೂ ಕರಗಿತು...

18/07/2015

ಕವನ

ನಾನು ಅವನೇ...

ಅವನು ಮೌನ ನಾನು ಮಾತು
ತುಟಿಗಳು ಭಾಷೆ ಕಲಿತಿದ್ದವು...

ಅವನು ಶಬ್ದ ನಾನು ಗದ್ದಲ
ಗೆಜ್ಜೆಗಳು ಸಂಗೀತ ಕಲಿತವು

ಅವನು ಮನಸು ನಾನು ಕನಸು
ನಿದ್ದೆ ಜಪಕ್ಕೆ ಬಿದ್ದವು

ಅವನು ಚಿಗುರು ನಾನು ಹೂವು
ಆಸೆ ಕಾಯಾಗಿ ಹಣ್ಣಾಗಲು..

ಅವನು ನನ್ನವನು ನಾನು ಅವನೇ
ತನು ಮನದೊಳು ಜೀವವೊಂದಾಗಲು....

16/07/2015
ಅಲೆ ಬಂದು ಕೊಚ್ಚಿ ಹೋದ ಮೇಲೆ
ಏನಿದ್ದರೂ ಕಪ್ಪೇಚಿಪ್ಪುಗಳನ್ನಾಯುವ ಹೊಸ ಕೆಲಸ... 
ನೆನಪು ನೆನಪು...


******

ಹಲವು ಉದ್ದೇಶಗಳ
ಈ ಬದುಕು 
ಒಮ್ಮೊಮ್ಮೆ 
ಒಂದೇ ಉದ್ದೇಶಕ್ಕಾಗಿಯೇ
ಎಂಬಂತೆ ಭ್ರಮಿಸಿ
ರೋಧನೆ ಕೊಡುವುದು

ಹಲವುಗಳಲಿ ಕೆಲವಾದರೂ
ತೀರಿಸುವ
ಇನ್ನಷ್ಟು ಹುರುಪುಗೊಂಡು
ಪ್ರೀತಿ ತೀರದಲಿ
ನಲಿವಿನ ಹೂ ಬನದಲಿ... 
ಮಮತೆಯ ಕೈಸೆರೆಯಲಿ...

*****

ಒಮ್ಮೋಮ್ಮೆ ನನಗೂ ಅಳು ಬರುವುದು
ಕರುಣೆ ಬೇಡಿ ಅಲ್ಲ
ಕಣ್ಣು ಕಳೆದು ನಿಂತಾಗ 
ಬದುಕಿರುವುದಾಗಿ ಪ್ರತಿಕ್ರಿಯೆ..!

14/07/2015

ಕವನ

ಕಾಡುವ ಅದ್ಭುತ

ಒಳಗೆ ಉರಿದಷ್ಟೂ
ಹೊರಗೆ ಹಸಿರು ಹೊದ್ದು 
ನಗುವ ಭೂಮಿ
ಕಾಡುವ ಅದ್ಭುತ!

ಒಳಗೆ ನೊಂದಷ್ಟೂ
ಹೊರಗೆ ತೋರುವ
ನಿರ್ಮಲ ಪ್ರೀತಿ
ಅಮ್ಮನದು ಮಾತ್ರ!

ಕಳೆವ ಮುನ್ನ ಕಳೆದ ನಂತರವೂ
ನಿರಂತರ ಬಯಕೆ ಅವಳು
ತೀರದ ವಾತ್ಸಲ್ಯ ಎಲ್ಲರನೂ
ಅವಳಂತೆಯೇ ಬೇಡಿ ಹಟವು!

ಹೆಚ್ಚು ನೋಡದೆ
ಬರೀದೆ ಬರೆಯಲು
ತಾಪವಿಲ್ಲದಿದ್ದರೂ ಕೋಪವಿದೆ
ಸಹಿಸುವವರಾರಿಲ್ಲ ಮಗುವ ಮನವ..!

14/07/2015
ನೀ 
ಚಂದದ ಹೂ 
ನೀಡಲು
ಎನ್ನೆದೆ ಬಡಿಯುತ್ತಾ 
ನೆತ್ತಿಗೇ ಏರಿದಂತೆ
ಆವೇಗ ಉಕ್ಕಿ 
ಒಮ್ಮೆಲೆ ಇಳಿದೆ
ನಾನೇ ನಾಚಿಕೆಯಾಗಿ
ಬಲ್ಲೆಯಾ ನೀ 
ಗೆಳೆಯಾ....
ಅಂದು ಅಲ್ಲಿ 
ಹಾಗೆಲ್ಲಾ ಆಯ್ತುಬಿಡು..

*****

ಅವಸರದಿ ಚೆಲ್ಲಿಕೊಂಡ ಮುತ್ತುಗಳ
ಆರಿಸುವಾಗಿನ ಧ್ಯಾನ
ಮುಂದಿನ ಪೋಣಿಸಿದ ಸರದಲ್ಲೂ
ಅಂತದ್ದೇ ಎಚ್ಚರ; ಮಣಿ ಮಣಿ ಮುತ್ತಿಟ್ಟು!..
14/07/2015




ಸವೆದು ಹೋಗಲು
ನಷ್ಟವೆಂದು ಕುಳಿತರೆ
ಗಂಧಕ್ಕೆಲ್ಲಿ ಬೆಲೆ
ಯಾರನೂ ಮುಟ್ಟದೆ
ಮೂಲೆಯೊಳು ಗೆದ್ದಲಿಗೆ...!

*****

ಇಡೀ ಜನ್ಮ ಕಾದಳಂತೆ
ಆಳವಾದ ಸಾಗರ ಬೇಕೆಂದು
ಕೊನೆಗೊಂದು ಸಿಕ್ಕಿತ್ತು ವೃದ್ಧಾಪ್ಯದಲ್ಲಿ
ಸಾಗರ ಆಳವಾಗಿ ಶಾಂತವಾಗಿತ್ತು
ಲವಣಗಳ ತುಂಬಿಕೊಂಡು ವಿಶಾಲವೂ ಇತ್ತು
ಸಾಂದ್ರತೆಯ ಪ್ರಮಾಣವೆಷ್ಟೆಂದರೆ
ಕಾಲಿಟ್ಟರೂ ತೇಲಿದಂತೆ
ನಡೆದಾಡುವಂತಿತ್ತು ;ಅದ್ಭುತವಂತೆ
ಕೊನೆಗೂ ಮೊಣಕಾಲಿಗಿರಲಿ ಧುಮುಕಿದರೂ
ಮೇಲೆಯೇ ತೇಲಿಸಿತ್ತು 
ಸಾಗರ..
ಅಂತೂ ದಷ್ಟವಾಗಿ ನಿರಾಕರಿಸಿತ್ತು...

*****

ಕಣ್ಣೀರ ವ್ಯಸನಕ್ಕೆ
ನಗು ಒಂದು ಅಪಹಾಸ್ಯ
ಒಮ್ಮೊಮ್ಮೆ ಬದುಕಿನೊಳೂ ಆಗಿ... ! 

14/07/2015

******

ಗುರಿಯು ಸದಾ ದೂರವೇ ಉಳಿದಿರಬೇಕು
ಇಲ್ಲವೇ ಹೆಜ್ಜೆಗಳು ಸೋತುಬಿಡುವವು!

*****

ನಮ್ಮದು ಎಂಬುವುದು
ಎಲ್ಲಿಯೂ ಇಲ್ಲ
ನಾನೂ ಇಲ್ಲ ಇಲ್ಲಿ
ಅವರಿಗಾಗಿ ಇವರಿಗಾಗಿ
ನಾವು ಎಲ್ಲರೂ ಆಗಿ
ಯಾರೂ ನಾವಾಗಲೇ ಇಲ್ಲ... !

13/07/2015