Friday, 24 July 2015

ಕವನ

ಮತ್ತೆ ನನಗೆ ಕಣ್ಪಟ್ಟಿಗಳು ಬೇಕಾಗಿವೆ..

ಮತ್ತೆ ನನಗೆ ಕಣ್ಪಟ್ಟಿಗಳು
ಬೇಕಾಗಿವೆ...!
ಕಾರಣವಿಷ್ಟೆ
ತಡ ಮಾಡದೆ ನಾ
ದಾರಿ ಸಾಗಿ ಹೋಗಬೇಕಿದೆ..!

ಮತ್ತೆ ನನಗೆ ಲಾಳುವೂ
ಬೇಕಾಗಿವೆ
ಹೆಜ್ಜೆಯೂರಿ ಗುರುತುಬಿಟ್ಟು
ವೇಗವಾಗಿ ಓಡಬೇಕಾಗಿದೆ..!

ಮತ್ತೆ ನನಗೆ ಆ ಅದೇ ಹುರುಳಿ
ಬೂಸವಾಗಿ ಬೇಕಾಗಿದೆ
ರುಚಿಕಟ್ಟು ಸಮಯವಲ್ಲ
ಹೊಟ್ಟೆ ಹೊರೆದು ಗಡಿದಾಟಬೇಕಿದೆ ..!

ನನಗೆ ಮೊದಲ ನಾನು
ಈಗ ಬೇಕಾಗಿದೆ
ಬದುಕು ಬಂಡಿ ಹೊಡೆಯುವಷ್ಟೇ
ಧ್ಯಾನ ಶಕ್ತಿ ತುಂಬಿಕೊಳ್ಳಬೇಕಿದೆ..!

13/07/2015



ತುಳುಕಾಡಿ ಹೆಣಗಾಡಿ 
ಹುಗುರಾಗಿ ತಿಳುಗೊಂಡ ನೀರು
ಅದರ ಹೊಳೆವು ಪಾರದರ್ಶಕತೆಯ ಸೆಳೆತಕೆ
ಹುಟ್ಟಿಕೊಳ್ಳೊ ಅಭಿಮಾನವೊಮ್ಮೆ ಕುತೂಹಲಕೆ ತಿರುಗಿ
ಕಲ್ಲೆಸೆದು ನೋಡುವ ಮೋಜು
ಕಣ್ಣಿರುವ ಮನುಜನಿಗಷ್ಟೇ ಸಾಧ್ಯ... 
ಈ ಸೃಷ್ಟಿಯಲಿ... 
ಮನುಷ್ಯ ಮನುಷ್ಯನೇ... !

*****

ಪಕ್ಕಾ ಕಚ್ಚಾವಸ್ತುವೇ
ಆಗಿ ಹೋಗಿರುವೆ
ಇನ್ನು ನಾಚೂಕಾಗುವ
ಪ್ರಮೇಯ ನೀನೇ...!

13/07/2015
ಬಿಳಿ ಹಾಳೆಯ ಮೇಲೆ
ಎಷ್ಟೊಂದು ಕಪ್ಪು ಚುಕ್ಕಿಗಳು
ಇರುವೆಗಳ ಸಾಲು
ನನ್ನ ಪದ್ಯಕ್ಕಂಟಿದೆ 
ಸವಿ ಜೇನ ಹುಡುಗನಿದ್ದಾನಲ್ಲಿ... !
ತುಂಟ

ಹುಡುಗ ತುಂಟನಾದರೂ
ಒಳ್ಳೆಯವನೆನ್ನಲು
ನನಗೋ ಸುತ್ತಲಿನ ಗೆಳತಿಯರ
ಆತಂಕವು..

ಅವನ ಪ್ರೇಮ ಪರಿಯ
ಅನುಭವದಲಿ ಪ್ರಪುಲ್ಲ ನನ್ನ ಮನವನೂ
ಬಚ್ಚಿಡುವ ಪ್ರಯತ್ನ ನನ್ನದು
ತೋರಿಕೊಂಡಷ್ಟು ...

ನನ್ನೆಲ್ಲಾ ಆತಂಕಗಳ ಇಳಿಸುವ
ಅವನ ಪ್ರೀತಿಯನು 
ತುಂಬಿಕೊಂಡಷ್ಟೂ ಹಗುರಾಗಿ 
ಮತ್ತೆ ಮತ್ತೆ ಅವನೆದೆಗೆ 
ನಾ ತೇಲಲು...

ಪ್ರೀತಿಯಲಿ ಮನ ತಣಿದು
ಕ್ಲೀಷೆಗಳ ಸರಿಸುತ್ತ ಕಾಂತಿ ಎಂದನವನು 
ಸೂರ್ಯನಾಗಿ
ತಿರುತಿರುಗಿ ನಾ ನಿಂತೆ
ಬಾಗದೆ ಒಲವಿನೆಡೆಗೆ ಹಿಗ್ಗಿ ಮೊಗವು..

12/07/2015

ಕವನ

ಸೆಳೆವ ಹೆಣ್ಣಿನ ಮಾದಕತೆಯೇ
ಶ್ರೇಷ್ಠವಾದರೆ
ಶ್ರೇಷ್ಠವಾದ ಸಾಲುಗಳಲಿ
ಮಾದಕತೆಯ ಭಾರಿ ಕೊರತೆ

ಸೆಳೆತವೊಂದು ಹಂತಕ್ಕೆ 
ಅಂತ್ಯವಾದರೆ
ಬಂಧವೂ ಸಡಿಲ
ಸೆಳತವಷ್ಟೇ ಸ್ವಂತ

ಕಣ್ಣಿಗಷ್ಟು ಸೊಂಪು 
ಕನವರಿಸುವ ಹುರುಪು
ತಂದಕೊಡಬೇಕು ಅವಳು; 
ಅವುಗಳೇ ವ್ಯಸನವಾಗಿ
ಕದಡಿಕೋಳ್ಳಬಾರದು ಬಿಂಬ..

ಎಲ್ಲಾ ಹೇಳಿದರು ಅವರೇ
ಎಲ್ಲಾ ತೋರಿದರೂ ಅವರೇ
ಮತ್ತೆ ನಾವೇಕೆ ಹೇಳಿ ಬರಿದೇ ತೋರುವ
ಮರುಕವಿದೆ ಅವರೆಡೆಗೆ 
ಅವರೇ ಗುರುತಿಸಲಾರರು
ಅವರವರ ಕದಡಿದ ಬಿಂಬಗಳ...

12/07/2015

ಕವನ

ಎಲ್ಲವನ್ನೂ ಜಯಿಸಿ ನಿಗ್ರಹಿಸಿ ನಿಂತ ಮೇಲೆ
ನೀನು ಕಂಡೆ
ಪುಸ್ತಕದ ಮೊದಲ ಪುಟದ ಅರ್ಥಕ್ಕಾಗಿ ಶಬ್ದಕೋಶವನ್ನು ಹಿಡಿದೆ
ಎಲ್ಲರಿಗೂ ಈಗ ನಗುವಂತೆ
ನಾನೋ ನಿನ್ನೆದುರು ಮಗುವಂತೆ.. !...

ಹುಟ್ಟಿ ಬೆಳೆಯಬೇಕು
ಮೊಗ್ಗು ಅರಳಬೇಕು
ಗಂಧ ಸುಗಂಧವನ್ನೇ ಮೆರೆಯಬೇಕು
ಚಿಟ್ಟೆ ಹೂ ಬಾನಾಡಿಯಾಗಿ ಉಳಿಯಬೇಕು
ಅಳಬೇಕು ನಗಬೇಕು ಆಸರೆಯ ಬೇಡಬೇಕು
ಎಷ್ಟ ಹೊಸ ಹೊಸ ಬೇಕುಗಳನು ಹೊಂದಿಕೊಂಡು
ಹೊಸದಾಗಿ ಮೂಡಬೇಕು
ಆಗೆಲ್ಲಾ ಜೊತೆಗೆ ನೀನಿರಬೇಕು...!

ಆದಿಯಿಂದಂತ್ಯದವರೆಗೂ ಬೇಗೆಯಂತೆ ಚಿಂತೆ
ಕಾಡಿದವೋ ಕಾಡಿಕೊಂಡವೋ ನನ್ನದೇ ಭ್ರಾಂತೆ?
ಗೊಜಲಾಗಿ ಅಡಗಿ ಸ್ಫುಟವಾಗಿ ಚಿಮ್ಮುವ ನೀನೊಂದು ಹಣತೆ
ಹೊತ್ತಿಸಿ ಹೊಸ ಭಾಷೆ ಹರಿಸಿ ಹೊಸ ಕಾಂತಿ ಅಚಲವಾಗಿ ನಿಂತೆ

ದಿಬ್ಬದೊಳು ಆಕಸ್ಮಿಕದ ಕಬ್ಬದಂತೆ 
ಜೀವದೊಳು ಹೇಗೋ ನಿನ್ನುಸಿರಂತೆ
ಮಿಳಿತ ಪುಳಕವಾಗಿಹ
ಈ ವಿಸ್ಮಯ ನಡೆದು
ಜಯಿಸಿ, ನಿಗ್ರಹಿಸಿದ ಕಲೆಗಳ ಹೊತ್ತಿಗೆ
ತೆರೆದುಕೊಳ್ಳಲಿ ಕಲಿತುಕೊಳ್ಳುವ ಕಾತುರತೆಗಲಿ
ಬೇಡಿಕೆಯಿದೆ ನಿನ್ನದೇ ; ಈ ಹಸಿರು ಮರೆತ ಕಾನನದಲಿ..

12/07/2015
ಮೋಡದ ಮರೆಯಲಿ
ಸೂರ್ಯನುದಯಿಸಿ
ಕರೆದ, ಕೊಂಡೊಯ್ದ
ಕಣ್ ಹೊಡೆದು ಚಿತ್ರ ಬಿಡಿಸಿದ
ಮತ್ತೆ ತಂದು ಜಗದೆದುರು
ನೀರು ಚಿಮುಕಿಸಿ ನಿಲ್ಲಿಸಿದ...
ನಾನಲ್ಲ; ನನ್ನದಲ್ಲ
ಈ ಬಣ್ಣಗಳು....

*****

ಈಚಲ ಮರದ 
ಬುಡದೊಳು ಕುಳಿತು
ಸೊರ್ರನೆಳೆವ ಮಜ್ಜಿಗೆಯ ಸದ್ದಿನಲ್ಲೂ
ಅದೇನೋ ಅಮಲ ಘಮಲು
ಜಗದ ಕಣ್ಣದು ಮರಳು ಜಾತ್ರೆ
ಮಾಯೆಯೆಂಬುದು 
ಒಂದು ಜಾದುವೇ ಆಗಲು
ಒಂದಷ್ಟು ಹೊತ್ತು 
ಮನರಂಜಿಸುವ ಬದುಕು..

*******

ಇಡೀ ರಾತ್ರಿ 
ನಿನ್ನ ಕನಸುಗಳನ್ನೇ
ಹೊದ್ದು ಮಲಗಿದ್ದೆ
ಬೆಳಗಾಗೆ ಮೈಕೊಡವಿ 
ಎದ್ದೇಳಲು
ನಾ..
ಈ ಬಿಂಬು ಹಾಸಿಗೆ 
ಎಲ್ಲವೂ 
ನೀನೇ ಆಗಿ
ಮತ್ತೂ 
ನಿನ್ನ ಕನಸಿಗೆ ಬಿದ್ದೆ
ಎದ್ದೇಳದೆ....

****

ವ್ಯತ್ಯಾಸ...

'ಅವರು' ಪ್ರೀತಿಸುವುದಕ್ಕಾಗಿ
ಯಾವ ಹಂತವನ್ನಾದರೂ ಮೀರುತ್ತಾರೆ
ಮತ್ತೆ 'ಇವರು' ದ್ವೇಷಿಸುವುದಕ್ಕಾಗಿ
ಯಾವ ಹಂತಕ್ಕಾದರೂ ಇಳಿಯುತ್ತಾರೆ...
ಅವರು-ಇವರುಗಳ ನಡುವಿನ ವ್ಯತ್ಯಾಸದಲಿ
ಉಳಿದು ಲೆಕ್ಕವಿಡದಂತೆ 'ನಾವು' ನಾವಾಗುವ
ತಕ್ಕದನ್ನು ಪ್ರೀತಿಸಿ ಮಿಕ್ಕದನ್ನು ನಿರ್ಲಕ್ಷಿಸುವ... 
ಬೆಳಗು ಬೈಗಿನೊಂದಿಗೆ ಬೆರೆತು ಹಮ್ಮು ಬಿಮ್ಮಿಲ್ಲದೆ ನಿತ್ಯ ಸತ್ಯವಾಗುವ...
ಅವರೇ ನಾವಾಗುವ ಪ್ರೀತಿಸಿ ನೂರಾಗುವ..

12/07/2015

*******

ನಮ್ಮಿಬ್ಬರ ನಡುವೆ
ಗಾಳಿ ತಾ 
ಹಾದು ಹೋಗುವುದೇ ಆದರೆ
ಮಿಶ್ರಿತ ಗಾಳಿ 
ಧೂಳು ಮಣ್ಣನ್ನೂ ಹೊತ್ತೊಯ್ಯುವುದು
ಎಚ್ಚರ ತಪ್ಪಿ 
ಕಣ್ಣಿಗೂ ಬೀಳಬಹುದು
ಆಗೆಲ್ಲಾ ದೂರ ಸರಿಯದೆ 
ಮತ್ತಷ್ಟು ಹತ್ತಿರಾಗು
ಗಲ್ಲ ಹಿಡಿದು ತುಟಿ ಸವರಿ 
ಕಣ್ಣಿಗಷ್ಟು ನಿನ್ನುಸಿರ ಊದಿಬಿಡು
ಇದ್ದ ಹೋದ 
ರಜವೆಲ್ಲಾ ಹಾರಿ ಹೋಗಲು 
ನಾ ಮತ್ತೂ ಹಗುರ
ನಿನ್ನ ತೋಳ ತೆಕ್ಕೆಯಲಿ...

*****

ಕತ್ತಲು ಹೆಚ್ಚಿದಂತೆ 
ಈ ಹೊತ್ತು
ಅವನ ಚಿತ್ರಣ ಸ್ಪಷ್ಟ 
ಈ ತಾರಸಿಯಲ್ಲಿ
ಬೆಳಕಿನ ಬುಗ್ಗೆಗಳ 
ಕಣ್ಗಳಲ್ಲಿ ತಂದು ದಿಟ್ಟಿಸುವನು
ಮತ್ತೂ ನಶೆಯೆಂದು 
ನಿಶೆಯಲಿ ಕಳ್ಳನಾಗುವನು..!
09/07/2015
ಗಟ್ಟಲೊತ್ತಿ ಬರುವಾಗ

ಯಾರಿಗಾಗಿ ಬದುಕು ಎನಿಸುವಾಗ

ಕಣ್ಣೀರು ಹರಿದರೆ

ಅದು ಕರುಣೆ

ನಾವು ನಮ್ಮ ಮೇಲಿಟ್ಟದ್ದೇ..

ನೋವೇ ಆದರೂ ನೋಯದ ರೀತಿ

ಬಹುಶಃ ನಮ್ಮ ಆತ್ಮಬಲ

ಸಿದ್ಧಿಸಲಿ ವೃದ್ಧಿಸಲಿ

ಇಂತಹದೇ ಹಲವು ಬಾರಿಗಳಲಿ ಎನುವಾಗಲೂ

ಹೊಟ್ಟೆ ಹಿಸುಕಿದಂತೆ ಎಂತದ್ದೊ ಯಾತನೆ

ಈ ಬಾರಿ ಕ್ಷಮಿಸಿ

ಮುಂದಿನ ಬಾರಿ ಪ್ರಯತ್ನಿಸುವೆ


ಬಹುಶಃ ಗೆಲ್ಲುವೆ....


09/07/2015


******

ಬಡಿಯಲಿಲ್ಲ ಬೈಯ್ಯಲಿಲ್ಲ

ಅತ್ತು ಕರೆದು ರೋದನೆ

ನಡುರಾತ್ರಿ ದಿಢೀರನೆ ಸೂರ್ಯಬೇಕೆಂದಂತೆ

ಬಯಸಿ ಸಿಗದೆ 

ಬರುವ ತನಕ ನಿದ್ದೆಗೆಟ್ಟು ಕಣ್ಣೀರಿಟ್ಟು 


ಬೆಳಕು ಹರಿವಾಗ ಗಾಢನಿದ್ದೆಗೆ....


*****

ಇನಿಯನ ಮಾತುಗಳು

ಎದೆ ಕೊಳದೊಳು 

ಮೀನಿನಂತೆ ಈಜಾಡಿ

ತನು ಮನವೆಲ್ಲಾ ಚಂಚಲ !..


08/07/2015

Wednesday, 22 July 2015

ಕವನ

ಹಗಲಲಿ ಹಟ ಮಾಡಿ
ಹರಿದುಕೊಂಡು ಬಟ್ಟೆ
ಇರುಳಲಿ ಸೂಜಿ ದಾರಕ್ಕೆ
ಪರಿತಪಿಸಿ ಹೆಣಗಾಡಿತು

ಮತ್ತೆ ಬೆಳಗ್ಗೆ ಅದೇ ಧಿರಿಸು
ಅದೇ ಮುಖವಾಡ
ದಾರದ ಹೆಣಿಗೆ ಕೊಂಚ ಎಳೆತ
ಮತ್ತೆ ಹಿಂಜಿ ಮತ್ತೆ ಕಿಂಡಿ

ಹಟ ಮಾಡಬಾರದಿತ್ತು
ಪಡೆದುಕೊಳ್ಳದ ಹೊರತು
ಹೆಣಗಾಡಬಾರದಿತ್ತು
ಬಯಸುವ ಬರಿದೇ ಆಸೆಗೆ

09/07/2015

Tuesday, 7 July 2015

ಕವನ



ಎದುರಾಗೊ 
ಬೀಸು ಗಾಳಿಗೂ
ಜಗ್ಗದ ಹಾರಾಟ 
ನಿನ್ನದು ಕಣೆ ಗೆಳತಿ
ಅದ ಅರಿತು 
ಹಾರು ನೀ ಗರಿ ಬಿಚ್ಚಿ

ಉಸಿರ ಮರೆತರೂ 
ರೆಕ್ಕೆಗಳ ಮರೆಯದೆ
ಹಾರಿಬಿಡು ಹರಿದುಬಿಡು
ಕಠಿಣತೆಯಲಿ
ತಟಸ್ಥತೆಯ ತುಕ್ಕು ಬಿಟ್ಟ 
ಬಿರಿಸು ಕಬ್ಬಿಣವಾಗಿ
ಮಮತೆ ಪ್ರೀತಿಯಲಿ
ಹೂ ಹಕ್ಕಿಯಾಗಿ...
ಈ ಬಾನು ಈ ಬಯಲು ನಿನ್ನದೆ
ಎಂದೆಂದೂ ..

ಚಿತ್ರ ಕೃಪೆ; ಅಂತರ್ಜಾಲ



07/07/2015





ಇಟ್ಟಲ್ಲಿಯೇ ವಸ್ತು
ಸಿಗದಿದ್ದಾಗ
ಇನ್ನೆಲ್ಲೆಲ್ಲೋ
ಹುಡುಕಿ ತಡಕುವುದುಂಟು!
ಮನವು ಇಟ್ಟಲ್ಲಿಯೇ
ಅವರವರದು ಸಿಕ್ಕಿಬಿಡಲಿ
ಎಂಬುದೇ 
ಈ ಮನದ ತೀವ್ರ ಬಯಕೆ!
ಇನ್ನೆಲ್ಲೋ ಅಲೆದಾಡದೆ....

07/07/2015

Monday, 6 July 2015

ಕವನ

ಅವನು

ಅವನನು ಈ ಸಾಲುಗಳಲ್ಲಿ
ಹಿಡಿದು ತೋರಬೇಕೆಂದುಕೊಂಡೆ
ನಾಚಿದಂತೆ ಹುಡುಗ ಉಲಿದರೂ
ಬಿಚ್ಚೆದೆಯಲಿ ಕವನ ಬರೆದ
ಇನ್ನೂ ಅರಗಿಸಿಕೊಳ್ಳುತ್ತಲಿರುವೆ
ಅವರ ಪ್ರೇಮ ಕಾವ್ಯ
ಕವಿಯೆದುರು ಸೋತಿಹವು
ನನ್ನ ಮಾತು ಮತ್ತು ಮೌನ
ಪದಗಳು ಹುಡುಕಾಟಕ್ಕೆ ಬಿದ್ದಿವೆ
ತೋರಿದಷ್ಟೂ ಅವನ!

06/07/2015

ಕವನ

ನಿನ್ನ ಕೈ ಹಿಡಿದು..


ಏಕೋ ಈ ದಿನ
ನಿನ್ನ ಕೈ ಹಿಡಿದು
ಕೂರಬೇಕೆನಿಸಿದೆ

ಮಾತು ಬೇಡ
ನಿನ್ನ 
ಬೆರಳೊಳಗಾಡಬೇಕೆನಿಸಿದೆ

ಮುತ್ತು ಬೇಡ
ಮುಷ್ಟಿಯೊಳು ಮುಚ್ಚಿಟ್ಟು
ಕೈರೇಖೆಗಳ ಓದಬೇಕಿದೆ

ಕಣ್ಣೊಂದಿಷ್ಟು ದೊಡ್ಡದು ಮಾಡಿಕೊ
ಕತ್ತಲೆಯೊಳು 
ನನ್ನೊಳು ನಿನ್ನ ನೀ ಕಾಣಬೇಕಿದೆ

ಮತ್ತಷ್ಟು ದೂರ ನಡೆದುಬಿಡು
ಹೀಗೆ ಕೈ ಹಿಡಿದು; 
ನಮ್ಮ ಹೆಜ್ಜೆಗಳೂ ಪ್ರೀತಿಸಬೇಕಿದೆ

ತಿರುವಲೊಮ್ಮೆ ತಿರುಗಿ ನೋಡಿ ಹೋಗದಿರು
ನಿನ್ನ ಬೆನ್ನಿಗೆ ನನ್ನ ಕೈಗಳಿವೆ 
ಮುಂದೆ ದೀಪದ ಬೆಳಕು ಕರೆದಿದೆ

06/07/2015

ಕವನ

ಮುತ್ತು!

ಒಮ್ಮೆ ನನ್ನಯ ಮುತ್ತೊಂದು
ಜಾರಿ ಬಿದ್ದಿತೋ ನೀರಿಗೆ
ಬಯಕೆಗಳ ಸರಮಾಲೆಯಿಂದ
ಅವಸರಿಸಿ ತಡವರಿಸಿ

ಆಸೆಯೆಂಬೊ ನೀರ ಗುಳ್ಳೆಗಳು
ಸುತ್ತವರೆದು ಮುತ್ತಿನ ಮಣಿಯ
ತೂಗಿಸಿತ್ತು ಸಾಂದ್ರತೆಯ ವಿಸ್ತರಿಸಿ
ಬಾರಿ ಬಾರಿಯೂ ತೇಲಿಸಿ, 
ಉಳಿಸಿ ಮತ್ತೆ ಮತ್ತೆ

ನೀರಿಗೂ ಉಂಟು ಮೇಲ್ಮುಖ ಪ್ರತಿಕ್ರಿಯೆ
ಭಾರದ ಮುತ್ತಿದು ಮುಳುಗುವ ಸೆಳೆತ
ನಡುವೆ ಏರಿಳಿವ ಆತಂಕ
ಆದರೂ ಒಟ್ಟುಗೂಡೋ ಆಸೆಯ ಗುಳ್ಳೆಗಳು
ಗಾಳಿ ಹಿಡಿದು ಉಬ್ಬಿಕೊಂಡು
ತಬ್ಬಿವೆ ಮುತ್ತಿನ ಮಣಿಯ...

ಕನಸುಗಳಲಿ ಉಸಿರಿರುವ ಕಾರಣ
ತೇಲುತ್ತಲಿವೆ
ಈ ದೇಹದೊಳು
ಆಸೆ-ಕಾಮಾದಿ ಬಯಕೆಗಳು
ಹೆಕ್ಕಿ ಹೆಕ್ಕಿ ಮುತ್ತುಗಳ..

06/07/2015

ಕವನ

ಬಳ್ಳಿ

ಬಳ್ಳಿ ತಾನಾಗುವ ಆಸೆಗೆ
ಹೂವೆಂದನು ನನ್ನನೆ
ಕಂಪು ಹಿಡಿದು ಹಬ್ಬಿದಂತೆ
ಹೂವು ಬಳ್ಳಿ ಸೆರೆಗೆ..!

ಹೊತ್ತು ಮುತ್ತು
ಜೇನು ಅಧರ
ಮಾತು ಮೌನ 
ಕನಸು ಭಾರ!

ಎವೆಯಿಕ್ಕದ ದಳಗಳಲಿ
ನಶೆಯೇರಿದ ಗುಂಗಿನೊಳು
ಬಿಟ್ಟು ಬಿಡದ ಬೆಸುಗೆಯಂತೆ
ಸುತ್ತುವರೆದನವನು ಬಳ್ಳಿಯಂತೆ!

05/07/2015


ಪ್ರೀತಿ ಎಂದರೆ
ಮುತ್ತಲ್ಲ 
ಅಪ್ಪುಗೆಯೂ ಅಲ್ಲ
ಮೌನ ಮೀಟುವ 
ಒಂದು ಮಾತು!
ಮಿಡಿಯುವಾಗ 
ಒಂದು ಮೌನ!
ಈಗೀಗ 
ಅವ ಹೇಳಿದ ಹೊಸ ಪಾಠ!

04/07/2015

ಕವನ

ಉತ್ತರಗಳ ಗುಲಾಮಳಲ್ಲ!



ಎಷ್ಟು ಕಾತುರ ಆತುರಗಳ ನಂತರವೂ
ಮತ್ತೂ ಉಳಿವ ಪ್ರಶ್ನೆಗಳು
ಎಷ್ಟೆಂದು ಉತ್ತರಿಸಿಕೊಳ್ಳಲಿ
ಪ್ರಶ್ನಿಸುವ ಹಕ್ಕೇ ಇಲ್ಲ
ನಾನು ಉತ್ತರಗಳ ಗುಲಾಮಳಲ್ಲ!

ಆರಿಸಿಕೊಂಡ ಉತ್ತರ 
ಬಹು ದಿನಗಳ ಬೇಡಿಕೊಂಡ ಅನೇಕ ಪ್ರಶ್ನೆಗಳ ಕೀಲಿ ಕೈ
ಉತ್ತರಗಳ ಹಿಂದೆ ಬಿದ್ದು
ಪ್ರಶ್ನೆಗಳ ಹುಟ್ಟು ಹಾಕಲಾರೆ
ಬದುಕು ಕೇಳೋ ಪ್ರಶ್ನೆಗಳಿಗೆ
ನಾನಿನ್ನೂ ಉತ್ತರವಿತ್ತಿಲ್ಲ
ಪ್ರಶ್ನೆಗಳನ್ನೇ ದಿನನಿತ್ಯ ಎದುರುಕೊಂಡು!

ಪಾಸಾದ ಅನೇಕ ಪರೀಕ್ಷೆಗಳಲೆಲ್ಲೂ
ಇರಲಿಲ್ಲ ನನ್ನ ಪ್ರಶ್ನೆಗಳ ಉತ್ತರ!
ಅಲ್ಲೆಲ್ಲಾ ಪ್ರಶ್ನೆಗಳೇ ಇದ್ದವು
ಉತ್ತರಿಸಿದ್ದು ಮಾತ್ರ ನನ್ನ ಪ್ರಶ್ನೆಗಳೇ
ಗೊಂದಲಗಳ ದಾರಿ ಹಿಡಿದು ಹೋದಂತೆ
ಮಾನಸಿಕ ಲೆಕ್ಕಾಚಾರ ಬಿಡಿಸುವ ಪ್ರೌಢಮೆ
ನನಗಿದು ಇನ್ನೂ ಆಶ್ಚರ್ಯ!

ಪ್ರಶ್ನಿಸುವ ಸಾಮರ್ಥ್ಯವೇ ಇಲ್ಲದಂತಾದೆ
ಉತ್ತರಗಳನ್ನೂ ಬಯಸದಾದೆ
ತೇಲಿಕೊಂಡು ಹೋದಂತೆ ದೋಣಿ
ಆಳದ ಅರಿವಿಲ್ಲದೆ; ಸಾಗಿದ ದೂರದ ಲೆಕ್ಕವಿಲ್ಲದೆ
ಮನಗಳಲೊಮ್ಮೆ ಉಳಿವ ಆಸೆಗಳಿಗೆ
ಉಳಿವೆ ನಾ ಪ್ರಶ್ನೆಗಳ ಮರೆತು 
ಯೋಚಿಸಿ ಬದುಕು ಕೇಳುವ ಪ್ರಶ್ನೆಗಳ ಕುರಿತು!

04/07/2015
ಕೆಲವು ಸ್ಪಷ್ಟ 
ಮತ್ತೆ 
ಕೆಲವು ಅಸ್ಪಷ್ಟವಾಗಿ
ಕಾಣುವ ವಸ್ತುಗಳು
ಅಸಲಿಗೆ ಅವುಗಳು 
ಮೂರ್ತವೂ ಸ್ಪಷ್ಟವೂ 
ಹೌದು;
ಹಾಗೆ
ಕಾಣುವುದು ಮಾತ್ರ 
ನಮ್ಮ ಕಣ್ಣುಗಳು

*****

ಮೊದಲೇ 
ಶಾಪಗಳ ಮುಳ್ಳುಗಳೆಸೆದ 
ಹಾದಿ
ಒಂದೆರಡು ಮುಳ್ಳು 
ಮರೆಯಾದವೆಂದರೆ
ಹಾದಿ ಏನು ಸುಗಮವಲ್ಲ....... !

*****

ತಪ್ಪು ಸರಿಗಳ ನಡುವೆ
ನಗು ಕರಗಿ 
ಮೌನ ಮೂರ್ತಿ ನನ್ನ ಹೆಸರು
ಗಾಳಿಗೊಡ್ಡಿದ ದವಸದಂತೆ
ತೂರಿ ನೆಲಕ್ಕಾದರೂ ಉದುರಲಿ
ಜೀವ ಬೆಳೆಗಳು...
ದನಿ ಮೂಡಲಿ
ಕಣ್ಬಿಟ್ಟ ಹಕ್ಕಿಗೆ
ಶೃತಿ ಸೇರಲಿ 
ದಿಟದ ತೀರಕೆ

03/07/2015

*****

ಮುಚ್ಚಿಟ್ಟುಕೊಂಡ ಚಿಟ್ಟೆ
ನನ್ನ ಕನಸು
ಮೂಸೆಯಿಂದಾಚೆ ಬಿಡಲು
ಹಿಡಿವ ಕೈಗಳ ಆತಂಕ
ಹೊರ ಬಿಡದಿದ್ದರೆ
ಒಳಗೆಯೇ ಮುದುಡಿ ಹೋಗುವ ಆಪತ್ತು
ಚಿಟ್ಟೆಗಳ ಮುಚ್ಚಿಟ್ಟುಕೊಂಡಿರುವೆ
ಕಾಯುವ ಕೈಗಳಿಗೆ
ಮುಚ್ಚಿಟ್ಟು ಬಿಚ್ಚಿ ಕೊಡಲು... !

01/07/2015

Wednesday, 1 July 2015

ಭೂಮಿಯಂತೆ ನೀ ತಳೆದು
ನದಿಯಾಗಿ ಎನ್ನ ಆಹ್ವಾನಿಸಿ
ಹಸಿರ ಕಂಪ ಪೂಸಿ; ಎದೆಯ ತಂಪ ಎರೆದು
ಜೀವ ತುಂಬುವ ನಿನ್ನ ಕಣ್ಣು
ಕರಗಿ ನಿಂತರೂ ನಗುವ ಮೊಗ; ಕೆಂಪು ಗಲ್ಲ
ನೀ ಹಿಡಿದ ಬೊಗಸೆಯೊಳಲ್ಲದೆ ಮತ್ತೇನು?

01/07/2015
ಎಷ್ಟೆಂದು ಕೊರಗಲಿ
ಇಲ್ಲಿರುವ ಯಾವುದೂ
ನಾ ತಂದದಲ್ಲ
ಕಳೆದುಕೊಳ್ಳುವುದು ಅಲ್ಲ
ಇದ್ದಷ್ಟು ಹೊತ್ತು ಕನಸ ಕಂಡು
ಹೊರಟು ಬಿಡುವುದು
ಜಗದ ಸೌಂದರ್ಯ ಅಮರವೆಂದು!

01/06/2015