Monday, 5 January 2015

ಜೇನು ಗೂಡಲಿ 
ಜೇನು ಸೇರಿಸಿದಂತೆ
ಈ ಮನವ 
ಕೂಡಿಡುವುದು

ಒಮ್ಮೆ ಚದುರಿದರೆ 
ಕಲ್ಲೇಟಿಗೆ
ಎಷ್ಟು ಕಷ್ಟವೋ 
ಮತ್ತೆ ಒಗ್ಗೂಡುವುದು!

ಮನದೊಳು ಮನವಿಲ್ಲ;
ಜೇನು ಗೂಡು ಖಾಲಿ ಖಾಲಿ
ಕಲ್ಲೇಟದು ಮನಗಳಿಗೆ
ಈ ನಡುವಿನ ಮೌನವು!

^^^^^^

ಅಗತ್ಯಕ್ಕಿಂತ ಹೆಚ್ಚು 
ತಲೆ ಕೆಡಿಸಿಕೊಂಡಾಗ
ಮನಸ್ಸು ಅಲ್ಲೇ ನಿಲ್ಲುತ್ತದೆ
ಸಿಕ್ಕಾಪಟ್ಟೆ ಕಾಯುತ್ತದೆ
ಏನು ಪಡೆದುಕೊಳ್ಳುವುದೋ
ಇಲ್ಲ ಕಳೆವುದೋ
ಒಂದು ರೀತಿಯ ಹಟ
ಮಗುವಿನಂತ ಮನದು!
ಸುಲಭಕೆ ಜಗ್ಗದು 
ನಿಂತ ದಾರಿಯಿಂದ..

04/01/2015

ಕವನ

"ಕದ್ದು ನೋಡದಿರು"


ನಿನ್ನ ಕನಸೊಳು
ನಗು ತೇಲಲು
ಕದ್ದು ನೀ ನೋಡದಿರು!

ಕೆಲವಾದರು
ನನ್ನ ಸ್ವಂತವಾಗುಳಿಯಲಿ
ಅಮಲು ಉನ್ಮಾದ...
ಕದ್ದು ನೋಡದಿರು

ಗೊತ್ತು ನೀನಿಲ್ಲಿಲ್ಲ
ಆದರೂ ನೀ 
ಕದ್ದು ನೋಡಿದಂತೆ
ಇಲ್ಲೆಲ್ಲಾ ನಾಚಿಕೆ ಹರಿದಾಡಿದೆ

ಇಷ್ಟಾದರೂ
ಸಾಲದೆ?!
ಕದ್ದು ನೋಡದಿರು
ಈ ನಸುಕಿನ ನಗುವನು! 

04/01/2015




ಎರಡು ಹೆಜ್ಜೆ ತಪ್ಪಿಸಿ
ಮುಗ್ಗರಿಸಿ ನಿಂತು
ಮುನ್ನೆಡೆಯುವಿಕೆಗೆ
ಇಂದು ಉದಾಹರಣೆ!

04/01/2015

^^^^^

ಸಾಲು ಪೋಣಿಸುವಾಗ
ಮಡಿಲೊಳು ಉದುರಿದ
ಮೊಗ್ಗುಗಳು
ನಿನ್ನ ನಗು!

03/01/2015

ಕವನ


ಈ ಬಂಧಗಳು
ಬಹು ಪ್ರಶ್ನೆಗಳು
ಉತ್ತರಗಳು
ಬಿರೀ ಮೌನಗಳು

ಮಾತುಗಳು
ಮನದ ಪರದೆಗಳು
ಮೌನ ಅರಿತಾಗ
ಉದುರೋ ಮುತ್ತುಗಳು

ಈಗೀಗ ಹೆಚ್ಚು ಈ ತೊದಲುಗಳು
ಮಾತುಗಳ ಮರೆತು.
ಗುನುಗುಗಳು, ಕಲ್ಪನೆಗಳು
ಮಾತ್ರವೇ ಸೊಗಸುಗಳು

ಏಕಪಾತ್ರಾಭಿನಯವೇ
ಮನದ ಪ್ರತಿಭೆಗಳು
ಅದ ನೋಡಿದ ಕಣ್ಗಳು
ಕಾಂತಿ ಹೊತ್ತ ಸೋಜಿಗಗಳು!

03/01/2015

ಕವನ

ಹೆಜ್ಜೆ ಗೆಜ್ಜೆಗಳ ಪರಿವಿಲ್ಲದೆ
ನಲಿದಿದ್ದೆ
ಪುಳಕದೊಳು ಕುಣಿದ
ನವಿಲಂತೆ
ಕೆದರಿ ಉದುರಿ ಹೋದ ಗರಿಗಳ
ಯಾರೋ ಹೆಕ್ಕಿ ತಂದಂತೆ
ನಾ ಸಾಗಿದ ದಾರಿ ಕಂಡು ಹಿಡಿದ
ಆ ಮನಕೆ ನಾ ಬೆಚ್ಚಿ ನಾಚಿದಂತೆ

ಈ ಕ್ಷಣಗಳ
ಸಂತಸದ ಮಜಲುಗಳ
ಬಿಚ್ಚಿಡಲಾರದ
ಬಿಂಕ
ಕಳೆದು ಹೋದ ಹೊತ್ತು
ಕೂಡಿ ಕಳೆಯಲಾರದ
ಒಡೆದ ಮುತ್ತು

ಮನಸಿದೆ ; ಮಸಣವೂ
ನಡುದಾರಿಯ ಉಸಿರೂ
ಮುಚ್ಚಿಟ್ಟ ಕನಸೊಳು
ಯಾರೋ ಇಣುಕಿ ನೋಡಿದಂತೆ
ಒಂದೇ ಮುಜುಗರ!

03/01/2015




ದುಃಖವನ್ನು ಹಂಚಿದಷ್ಟು
ಮತ್ತೂ ದುಃಖಿತಳಾದೆ
ಹುಸಿ ನಗೆಯ ಸಹವಾಸ 
ಒಪ್ಪದಾದೆ
ಹಸಿ ಇರಲಿ, ಬಿಸಿ ಇರಲಿ
ನಿಜದಿ ನಕ್ಕಾಗ ನಾನನ್ನೇ ಮರೆತೆ
ಪ್ರೀತಿಯ ಕಣ್ಮುಂದೆ! 

02/01/2015

^^^^^

ಹೊಸತನಗಳಿಗೆ 
ತೆರೆದುಕೊಳ್ಳದ
ಹೊರತು
ಹಳತುಗಳಲಿ 
ನೆನಪುಗಳು
ನಿಲ್ಲದು!

01/01/2015

ಕವನ

ನಾನು ಲೇಖನ ಚಿನ್ಹೆಗಳನ್ನು
ಗೌರವಿಸುತ್ತೇನೆ!
ಉದ್ಗಾರದಿ ಓಡಿ 
ಅಲ್ಲೆಲ್ಲೊ ಅರೆ ಹೊತ್ತು ನಿಂತು
ಮತ್ತೆ ಮುನ್ನಡೆಯುತ್ತೇನೆ

ಅದೂ ಇದೂ ಎಲ್ಲವೂ ಆಗಿ
ಕುಂಟುತ್ತಾ ಸಾಗುತ್ತೇನೆ
ಮತ್ತು ಕೊನೆಗೊಂಡು ನಿಲ್ಲುತ್ತೇನೆ

ಒಮ್ಮೆ ಪ್ರಶ್ನಾರ್ಥಕವಾಗಿ ನಿಂತು
ಮರು ಘಳಿಗೆ
ಛಂಗನೇ ಚಕಿತಳಾಗಿ 
ಚಿಮ್ಮುತ್ತೇನೆ

ನಾನು ನಿಮ್ಮವಳು
ಲೇಖನ ಚಿನ್ಹೆಗಳಂತೆ 
ನಿಮ್ಮ ಭಾವವಾಗುವವಳು
ನಿಮ್ಮ 'ನಯನಗಳು'.. 

30/12/2014

ಕವನ

''ಗೊತ್ತಿಲ್ಲೆನಗೆ ಬುದ್ಧ!''

ಅವರು ಕೇಳಿದರು ಎನ್ನೆಡೆಗೆ ಬಾಗಿ;
ಬುದ್ಧ ಗೊತ್ತೇ?!
ಅರಳಿದ ಕಣ್ಗಳೊಡನೆ ನನ್ನೊಳಗು
ಇಲ್ಲ, ಓದಿದ್ದ ನೆನಪೆನ್ನುತ್ತಿತ್ತು
ಗೊತ್ತಿಲ್ಲೆನಗೆ ಆ ಬುದ್ಧ
ಪರಿಚಯವಿಷ್ಟೇ 'ಮುಗ್ಧ ಯುವಕ',
ತಂದೆಯಾಗಿ ರಾಹುಲನೆಂಬ ಕನಸ ತೊರೆದು;
ಯಶೋಧರೆಯ ನಿರೀಕ್ಷೆಗಳ ಗೆದ್ದ ಗೌತಮ
ಹೌದೆನಗೆ ಗೊತ್ತಿಲ್ಲ ಆ 'ಬುದ್ಧ'
ಗೊತ್ತಿಲ್ಲವೋ ಬುದ್ಧ
ಎನ್ನಪ್ಪ ಹೇಳಲಿಲ್ಲ ಎನಗೆ
ಅವ ತೋರಿದ ಇಣುಕು, 
'ಅಂಬೇಡ್ಕರನೆಂಬ ಧೀರ ಮೇಟಿ'ಯ ಹೆದ್ದಾರಿ 
ಬುದ್ಧನ ಸುಳಿವಿಲ್ಲವೋ ಈ ಮನಕೆ
ಆ ದಿನವೊಂದು ಇನ್ನೂ ನೆಪ್ಪು
ಕಂಡರಿತ ಹಳ್ಳಿಯ ದಾರಿ; ಬಸ್ಸೊಳ ಸೂಟುಧಾರಿ ನನ್ನಪ್ಪ
ಎದುರು ಕೂತ ಮುದಕನೊಬ್ಬ ಉನ್ಮಾದದಿ ಉಲಿದಿದ್ದ,
ಕಂಡಿರೇ ನೀವು ಅಂಬೇಡ್ಕರನಂತೆ....
..................................
ಅಪ್ಪನೊಳ ನೂರು ಪುಳಕಗಳು
ಅದರೊಳ ತೆರೆದುಕೊಂಡ ಅವನಪ್ಪ, ದೊಡ್ಡಪ್ಪನ 
ಚೀರಿದ ನೋವುಗಳು; ಚಿವುಟಿದ ತೊಡೆಗಳ ವೇದನೆಗಳು
ಸಾವಿರ ಹೆಪ್ಪುಗಟ್ಟಿದ ಕೂಗುಗಳು!
ಹೌದು ನನ್ನೂರಿನ ಅಜ್ಜನಿಗೂ ಬುದ್ಧ ಗೊತ್ತಿಲ್ಲ
ಅಂಬೇಡ್ಕರನೆಂಬೊ ಸ್ತಂಭವ ಬಿಟ್ಟು!
ನಡುವಲಿ ಎಚ್ಚೆಂತ್ತಂತೆ
ಎನಪ್ಪ ಹೇಳಿದನೊಂದು ದಿನ
'ಅಂಬೇಡ್ಕರ ದಾರಿ ಕಂಡ ಬುದ್ಧನ ಹೆಜ್ಜೆಗಳ'
ಅದ ಕೇಳಿದ ಕ್ಷಣಗಳಿಂದ ಹೆಜ್ಜೆ ಗುರುತಿಗಾಗಿ 
ದಾರಿಯಲ್ಲುಳಿದೆ;
ಗೊತ್ತಿಲ್ಲ ನನಗಿನ್ನೂ ಬುದ್ಧ ಸಿಕ್ಕಿಲ್ಲ
-ದಿವ್ಯ ಆಂಜನಪ್ಪ
೨೫/೧೨/೨೦೧೪
ಗತ!

ಆ ಕಣ್ಣ ಕೊಳಗಳಲಿ
ಮುಳುಗೇಳಬೇಕೆಂದಿದ್ದೆ
ಧುಮುಕೋ ರಭಸಕ್ಕೆ
ಕಾಲು ಜಾರಿ ಬಿದ್ದೆ
ಕೊಳದ ತಳಕ್ಕೇನೋ ಇಳಿದೆ
ಮೈ ಪರಚಿದ ಗಾಯಗಳೊಡನೆ!
ಕಣ್ಣ ಬಿಂಬಕ್ಕೆ ಗುರಿಯಾಗಿ 
ಪ್ರತಿಬಿಂಬ ಕೊಳಕಾಗಿದೆ!
ಆ ಗತದ ಕೊಳಗಳಲ್ಲೀಗ ನೀರೇ ಇಲ್ಲ!

31/12/2014

***

ಸರಕಿತ್ತು 
ಭರವಸೆಯೂ
ಆದರೂ ತೊಳಲಾಟ
ನಾದುವ 
ಹದಕೆ!

***

ಎಲ್ಲೋ ಕಳೆದು ಹೋದವರ
ಯಾರೋ ಹುಡುಕಿ ತರಲಾಗದು,
ಅವರವರೇ ಎದ್ದು ಬರಬೇಕು
ಅವರವರ ಗೋರಿಗಳಿಂದ!!
30/12/2014

***

ನೆನಪುಗಳ 
ಕೂಡಿಟ್ಟುಕೊಳ್ಳುವ ಅಭ್ಯಾಸ 
ನನಗಿಲ್ಲ
ಹಾಗಾಗಿ ಬರೆದಿಡುತ್ತೇನೆ
ತೆರೆದು ನೋಡಬೇಕಷ್ಟೇ 
ನೆನಪೊಳು ನೆನೆಯಲು
ಬೇಡದಿದ್ದರೆ 
ಮುಚ್ಚಿಟ್ಟು ಅಕ್ಷರವಾಗಿ ಪುಟದೊಳು

29/12/2014

ಮನದ ಮಾತು

ಸಂಗಾತಿ

ನಮ್ಮ ಲೈಫ್ ಅನ್ನೋದು ಮೇನ್ ಶೀಟ್ ಇದ್ದ ಹಾಗೆ. ಅದೊಂದರಲ್ಲೇ ಪಾಸ್ ಆಗ್ಬೋದು. ಅಡಿಶನಲ್ ಶೀಟ್ಸ್ ಅನ್ನೋದು ಈ 'ಸಂಗಾತಿ' ಇದ್ದ ಹಾಗೆ. ಅಗತ್ಯ ಬರಬಹುದು ಅನಿವಾರ್ಯವಲ್ಲವಲ್ಲ.. 
ಅಡಿಶನಲ್ ಶೀಟ್ಸ್ ಏನಿದ್ದರೂ ನಮ್ಮ ಹೆಚ್ಚಿನ ಪ್ರತಿಭೆಯನ್ನು ತೋರಿಸೋಕೆ, ನನ್ನ ಪ್ರಕಾರ.
ಕೊಟ್ಟಷ್ಟರಲ್ಲೇ ಬರೆದು ಮುಗಿಸಬಹುದು ಆದರೂ ನಾವೆಲ್ಲಾ ಕೊರೆದು ಪೇಪರ್ ತುಂಬಿಸ್ತೀವಿ. ಒವರ್ ಸ್ಮಾರ್ಟ್ನೆಸ್!
ನಮ್ಮ ಈ ಓವರ್- ಅತಿಶಯೋಕ್ತಿ ಎನ್ನುವ ಪ್ರತಿಭೆಯನ್ನು ಹತ್ತಿರದಿಂದ ನೋಡಿ ಮೆಚ್ಚಿಕೊಳ್ಳಲು ಅಡಿಶನಲ್ ಶೀಟ್ ಬೇಕು ಅಷ್ಟೇ ಅನಿಸುತ್ತದೆ.. 
ಆದ್ರೂ ಅಡಿಶನಲ್ ಶೀಟ್ ತಗೋಳ್ದೆ ಎಗ್ಸಾಮ್ ಬರೆದು ಬಂದವನ ಮುಖ ಏಕೋ ಹರಳೆಣ್ಣೆ ಕುಡಿದ ಹಾಗಿರುತ್ತದೆ...
ಮತ್ತು ಅಡೀಶನಲ್ಸ್ ಇಲ್ಲದೆ ಪಾಸಾದ ಎಷ್ಟೋ ಮೇನ್ ಶೀಟ್ಸ್ ನಮ್ಮ ನಡುವೆಯೇ ಹಾದು ಹೋಗಿವೆ... 
ಇವೆಲ್ಲದರ ನಡುವೆ ನನಗೇಕೋ 'ಪಾಸ್(pass)' ಆಗೋದು ಮುಖ್ಯ ಅನಿಸುತ್ತೆ.. 
ದ್ರಾಕ್ಷಿ ಹುಳಿ ಗಿಳಿ ಅನ್ನೊದೆಲ್ಲಾ ಸುಳ್ಳು! 

29/12/2014




ಮನಸ್ಸು ಮೊದಲೇ ಮುದುಡಿತ್ತು
ಅದಕೂ ಬೇಲಿ ತಾಕಿದೆ!
ಸೋರಿದ್ದು ಭಾವವೋ
ಚೀರಿದ್ದು ಹೂವೋ; ಹರಿದಿದೆ ಪಕಳೆ!
ಮಾರು ಮೊಳದ ಕನಸಿಗೆ
ಹೂವೊಂದು ಕಡಿಮೆ!
ಹರಿದ ಹೂವು
ಹಾರದ ಹೊರಗೆ!

28/12/2014

Saturday, 27 December 2014

ಪ್ರತೀ ಬಾರಿಯೂ 
ಪ್ರೀತಿ ನೀ 
ತೊಟ್ಟು ಕಳಿಚಿದ ಹೂ ಬೀಳುವಂತೆ
ದೂರವಾಗುವೆಯಲ್ಲೇ
ಹೀಗೆ ನಿಧಾನದಿ...
ಏಕೆ?!
ನೀ ಕಾಣದೆ
ಗಾಳಿಯಲೇ ಕೈ ಉಳಿದು ಬಿಟ್ಟಿದೆ...

27/12/2014

****

"ಕಲ್ಪನೆ"
ಮುದವಾಗಿ ಹರಿವ ನೀರಿನ ಮೇಲೆ
ಗೆರೆ ಮೂಡಿಸಿ ಸಂಭ್ರಮಿಸಲು
ನಿನ್ನ ತೋರು ಬೆರಳನು ಹಿಡಿದೆ
ಹೂಗಳಂತೆ ಹೊಮ್ಮುತಾ 
ರೇಖೆಗಳು
ಪುಳಕಗಳು ನಮ್ಮೊಳ
ಅದ್ಯಾವ ಲೆಕ್ಕಾಚಾರ ತಪ್ಪಿಸಿ
ಬಂಧಿಸಿದೆ ನೀ 
ಐದೂ ಬೆರಳುಗಳ
ಹತ್ತು ಬೆರಳುಗಳಂತೆ!

26/12/2014

****

ಬಾಣಕ್ಕೆ ಎದೆಯೊಡ್ಡಿ ಚೀರಿಕೊಂಡ ಮಾತ್ರಕ್ಕೆ
ಗುರಿಯೇ ಅವರಾಗಿರಲಾರರು
ಹಿಂದಣ ಒರಟು ಹಲಸೂ ಆಗಿರಬಹುದು!
ತಿರುಗಿ ನೋಡಬೇಕಿತ್ತು; ಅರಿತು ಎದುರುಗೊಳ್ಳಬೇಕಿತ್ತು!

****

ಸಂತೆಯಲ್ಲಿದ್ದರೂ 
ಏಕಾಂಗಿ ಎನಿಸಲು
ಬಹುಶಃ ಅದು ನೀನಿಲ್ಲದ
ಖಾಲಿತನವೊ ಎಂದು
ಮತ್ತೆ ಭ್ರಮೆಯಾಗಿದೆ..

25/12/2014

Wednesday, 24 December 2014

ಕವನ

ಜಾತಿ ಗ್ರಹ-ನಕ್ಷತ್ರ



ಆಹಾರಗಳ ಹಿಂದೆ ಜಾತಿಯನ್ನು ಹುಡುತಲಿದ್ದರು
ಈಗ ಅಕ್ಷರಗಳ ಹಿಂದೆಯೂ
ಜಾತಿಯನೇ ಜಪಿಸೋ ಮನಗಳು
ಎಲ್ಲಿ ಹೋದರೂ 
ಜಾತಿಗೇ ಅಂಟಿಕೊಳ್ಳುವವು!

ಕೊನೆಗಾಲಕೂ ನೀರ ನೀಡಲು ಬಂದ
ಜೀವಕೆ ಜಾತಿಕಟ್ಟಿ
ದೂಡಿ ನೀರಿಲ್ಲದೆ
ಜೀವ ಬಿಡುವಂತಾಗದಿರಲಿ;
ಆಶಯಗಳಿವೆ ಅವಕಾಶಗಳ ಕೊಟ್ಟು!

ಜಾತಿಗಳಿಂದೇ ಉಸಿರಾಡಿ
ಜಾತಿಗಳಿಂದೇ ನೀರು ಕುಡಿದು
ಸುಡುವ ಸೂರ್ಯನಿಗೊಂದು ಜಾತಿಯಿಟ್ಟು
ಭೂತಾಯಿಗೂ ಕೊಟ್ಟು ಜಿಗಿದುಬಿಡಲಿ ಹೊರಗೆ
ಜಾತಿ ಗ್ರಹ-ನಕ್ಷತ್ರಗಳನ್ನು ಹುಡುಕಿಕೊಂಡು!

25/12/2014

ಕವನ

ಬೆಳಗು


ಬೆಳಗಿನ ಭರವಸೆಯೇ 
ಬದುಕು
ಮತ್ತೆ ಮತ್ತೆ ಹೊತ್ತು ತರುವ 
ಕನಸಿನ ತೇರು
ಪ್ರೀತಿ ಕಾಮನೆಗಳ ಹುಟ್ಟು ಹಾಕಿದ 
ಬೇರು
ಇದು ಬೆಳಗು!
ಬರಿ ಹೆದ್ದಾರಿಗಳಿಗಲ್ಲ
ಕೊರಕಲು ಕಣಿವೆಯ ಒಳಗೂ
ಹಬೆಯ ಪ್ರಭೆ ಹರಡುವ ಒಲವು!

ಸ್ನೇಹಿತರೇ, ಬೆಳಗಿನ ಶುಭಾಶಯಗಳು, ಶುಭದಿನ! 


25012/2014



ದುಃಖವನ್ನು ಯಾರೂ ಪ್ರೀತಿಸುವುದಿಲ್ಲ
ಹಾಗಾಗಿ ನಾನು ದುಃಖಿಸುವುದಿಲ್ಲ!

***


ಎದೆಯಿಲ್ಲದವರು ಬಡಿತವನ್ನರಿಯುವರೇ
ದಿಟ್ಟತನವಿಲ್ಲದವರು ಜೊತೆಗಿದ್ದು ನಡೆವರೇ
ಭಯಪಡಿಸೇನು ವಿವರಿಸಿ ಮಿಡಿತವ
ಇದ್ದಂತಿರಲಿ ಹಾಯಾಗಿ ಈ ದಾರಿಹೋಕರು!

25/12/2014


ದೂರದಲ್ಲಿದ್ದವರೆಲ್ಲಾ ಹತ್ತಿರಾಗಿ ಕಂಡರು
ದೂರದಲ್ಲಿದ್ದ ಸಾವು ತುಸು ಹತ್ತಿರವೆನಿಸಿದಾಗ,
ಕಿಸೆಯೊಳ ಅಷ್ಟೂ ಕನಸುಗಳು ಗಳಗಳನೆ ಅತ್ತಂತೆ
ತಿದ್ದಿಕೊಳ್ಳುವ ಅಷ್ಟೂ ತಪ್ಪುಗಳು ನೆನಪಾದಂತೆ
ಮತ್ತೆ ಬದುಕಿಬಿಟ್ಟರೆ ಸಾಕು ಯಾರ ಸುದ್ದಿಗೂ ಹೋಗದೆ
ಯಾರಿಗೂ ಹೊರೆಯಾಗದೆ ಇದ್ದುಬಿಡುವಂತೆ
ಆಲಾಪನೆಗಳು ಒಂದೇ ಸಮನೆ
ಎಚ್ಚರಿದ್ದಾಗ ಅನಿಸದ ಭಾವ 
ಕಳೆದುಕೊಳ್ಳುವಾಗ ಉಕ್ಕುವ ಮೋಹ!
ಸಾವಿದು ಸಾಯಿಸದು
ಬದುಕಿದ್ದ ಭಾವಗಳ ನೆನಪಿಸುವುದು....

***

ಖುಷಿಗಳಿಗಷ್ಟು ಅವಸರಗಳು 
ಬೇಕಿತ್ತು;
ಸರಸರನೇ ಹುಟ್ಟಿದ ನೆನ್ನೆಯ
ನಿನ್ನ ಕನಸಿತ್ತು! 

***


ಅಲ್ಲೆಲ್ಲೋ ನಿಂತು ಕೊಸರಾಡುವ
ಜನರ ನೋಡಿ 
ನನಗೆ ಎಲ್ಲಿಲ್ಲದ ಭಯ ಆವರಿಸಿ
ಓಡುತ್ತೇನೆ ಮತ್ತೂ ಓಡುತ್ತೇನೆ,
ಎಷ್ಟು ಎಡತಾಕಿದ ಕಲ್ಲುಗಳೋ
ಎದೆಗೇ ಬಂದಪ್ಪಳಿಸುವ ಕಾತುರ
ಆಗದ ಸ್ಥಿತಿಗೆ ಅಲ್ಲಲ್ಲೇ ಅದರಷ್ಟಕೇ ಸಿಡಿದು ನಿಂತವು!
ನಾನು ಕಾರಣವಲ್ಲ; ಅವುಗಳ ಗುಣಕೆ!

***

ತಲುಪದ ದಾರಿಯೇ ಹಿಡಿದರು
ನಮ್ಮೊಂದಿಗೆ ನಾವು ಉಳಿಯುವ
ಮಿಕ್ಕಂತೆ ಅವರಿವರು ಸೇರಿಕೊಂಡಾರು
ನಮ್ಮ ವೇಗ- ಆವೇಗಕ್ಕಾಗಿ ಮರುಳು! 

25/12/2014

ಕವನ

ಸುಮ್ಮನಿದ್ದು ಹೊರಡೋಣ ಬಿಡು


ಸುಮ್ಮನಿದ್ದು ಹೊರಡೋಣ ಬಿಡು
ನೀನು ಮಾತನಾಡಬೇಡ; ನಾನೂ,,

ಇಲ್ಲೆಲ್ಲೋ ಹೊರಳಿಕೊಂಡು
ದಾರಿ ಗುಡ್ಡ ಹತ್ತಿಕೊಂಡು
ನಡೆದುಬಿಡೋಣ ಬಿಡು
ನೀನು ಮಾತನಾಬೇಡ; ನಾನೂ,,

ಇದ್ದ ಕಾಲವೆಲ್ಲ ಹೀಗೆ ಕೊರಗಿ
ಕಳೆದ ಕಾಲದೊಳು ಹುಡುಕುತ ಅಡಗಿ
ಕನಸ ಕೂಸುಗಳ ತೊರೆದು
ಇದ್ದು ಬಿಡೋಣ ಬಿಡು ಸಿಗದಂತೆ

ಎದುರಾದರೂ ಮಬ್ಬುಗತ್ತಲು
ನಿನ್ನ ನಾನು; ನನ್ನ ನೀನು ಕಾಣದಂತೆ
ಉಳಿದುಬಿಡೋಣ ಬಿಡು ಹೀಗೆಯೇ
ನನ್ನ ಕಲ್ಪನೆಗಳಾದರೂ ಉಸಿರಾಡಲಿ!

23/12/2014



ಬದುಕು ಅರ್ಥ ಕಳೆದುಕೊಂಡ ಮೇಲೆ
ಶಬ್ಧಗಳು ಅರ್ಥ ಪಡೆದವು!
ಜೀವನ ಸಾಗಿದೆ; ಅದರೊಟ್ಟಿಗೆ
ಮೌನ, ಕಲ್ಪನೆಗಳ ಕಸರತ್ತು!

23/12/2014

Monday, 22 December 2014

ಕವನ

ಬಿಂದಿಗೆಯಾಗಿ...


ಬೇಸರಕೆ ಆಟಿಕೆಯಂತೆ ಕಂದನಿಗೆ
ಹಾಗೆಯೇ 'ನೀನು' ಎನ್ನುವ ಒಂದು ಕಲ್ಪನೆ!
ಆಡುವೆಯಷ್ಟೆ ಖುಷಿಗಾಗಿ
ಕೆಲಕಾಲ ಕಳೆದು ಹೋಗುವ
ಹೀಗೆಯೇ ಮಗುವಾಗಿ
ಬಾವಿಯಲ್ಲಿ ಬಿದ್ದ ಚಂದ್ರ
ಎಳೆದು ಎತ್ತಿ ಏರಿಸಿದ ಮುಗ್ಧ ಮಗುವಾಗಿ!
''ನೀನು'' ಎನ್ನುವ ಹಗ್ಗವ ಹಿಡಿದು; ಚಂದದ ಚಂದ್ರಕೆ
ಆಗಾಗ ಬಾಯಿಯೊಳು ಜಿಗಿವ ಬಿಂದಿಗೆಯಾಗಿ!


22/12/2014
ನನ್ನ ಪದಗಳಿಗೆ 
ಅವರ ಬೆರಗು ಇವರ ಕೊರಗು
ಹಿಡಿಸಲಿಲ್ಲ ನನ್ನ ಪದಗಳು;
ಮಾತುಗಳಂತೆ ಬಿಟ್ಟುಬಿಡುವ 
ಈ ಪದಗಳನ್ನು ಎಂದುಕೊಂಡೆ;
ಇರಲಿ ಬಿಡು ಈ ಪದಗಳಾದರೂ 
ನನ್ನ ಹಿಡಿದಿಟ್ಟಿವೆ
ಶಕ್ತಿ-ಯುಕ್ತಿ ಇದ್ದ 
ಆ ಮನಗಳಿಂದಾಗದ್ದು!

****


ಎಲ್ಲಿ ಅಡಗಿದ್ದೋ ನೀ
ಮಾಯೆಯ ಮಡಿಲಿಂದಿಲ್ಲಿಗೆ 
ಬಂದು
ಜೊತೆ ನಡೆದಂತೆ ನವಿರು 
ನನ್ನೊಡಲು
ನಿಜ ಹೇಳು ಬಂದೆಯೋ ನೀನು.. !

****

ಮನದ ಮಾತಿಗೆ
'ಮೌನ' ಜಡಿದ ಬೀಗ;
ಕೈ ಕೀಲಿ ಕಳೆದಿದೆ
ನಕ್ಕುಬಿಡುವೆಯಾ?!

22/12/2014