Monday, 16 March 2015

ಕವನ

ಸಕ್ಕರೆ


ಆ ಎರಡು ಕಣ್ಗಳೆದುರು
ಒಂದು ಉಂಡೆ ಸಕ್ಕರೆಯಚ್ಚಿತ್ತು
ಕಣ್ಗಳು ನೋಡಿತು
ತನಗೆ ಬೇಡವೆಂದೆಣಿಸಿ ಸುಮ್ಮನಿದ್ದುಬಿಟ್ಟಿತ್ತು
ಬೇಡವೆಂದದ್ದು ಉಳಿದುಕೊಳ್ಳಬಾರದಿತ್ತು

ದಾರಿ ಸವಿಯ ಹುಡುಕಿ
ಇರುವೆಯೊಂದು ಹರಿದು ಬಂದಿತ್ತು 
ಸಕ್ಕರೆಯಚ್ಚಿನ ಸವಿಯ ಸವಿದಿತ್ತು
ಕಣ್ಣು ಸುಮ್ಮನೆಯೇ ನೋಡಿತ್ತು

ಕೆಲ ಹೊತ್ತಿನಲ್ಲಿ ಮತ್ತೆರಡು ಇರುವೆಗಳು
ಜಾಡ ಹಿಡಿದು ಬಂದಿತ್ತು
ಅಚ್ಚಿಗೀಗ ಮೂರೆಡೆ ಸವೆತ
ಕಣ್ಣೂ ಈಗಲೂ ನೋಡುತ್ತಲೇ ಇತ್ತು

ದಂಡಿನಂತೆ ಮತ್ತಷ್ಟು ಇರುವೆಗಳು
ಕಪ್ಪನೆಯ ಹೊಳೆಯಂತೆ ಮೂಡಿ ಬಂದಿತ್ತು
ಕಣ್ಣಿಗೆ ತಣ್ಣನೆಯ ಜೊಂಪು ಹತ್ತಿತ್ತು
ಮತ್ತು ಮಲಗಿಬಿಟ್ಟಿತ್ತು
ಸವಿದ ಸವಿಗೆ ಬಾಯೆಲ್ಲಾ ಬೆಲ್ಲವಾಗಿತ್ತು 
ಈಗ ಇರುವೆ ಕಣ್ಣಿಗೂ ದಾಳಿಯಿಟ್ಟಿತ್ತು

ಕಣ್ಣುಗೋ ನಿದ್ದೆ 
ಎಚ್ಚರಗೊಂಡಾಗ
ಕಣ್ಣ ಸುತ್ತಾ ಕಪ್ಪು ಹಾವಳಿ, ತುರಿಕೆ, ಚುಚ್ಚುವಿಕೆ
ಸವಿಯಾದ ಸಕ್ಕರೆಯೂ ಮೆತ್ತುಕೊಂಡಿತ್ತು
ಬೇಡವೆಂದೆಣಿಸಿದ ಸಕ್ಕರೆ 
ಅಂಗಳದಲ್ಲುಳಿದ 'ಒಂದು ತಪ್ಪು'

ಹೆದರದಿದ್ದರೂ ಸಕ್ಕರೆಯ ಸಿಹಿಗೆ
ಹೆದರಬೇಕು ಅದರ ಸೆಳೆತಕೆ
ನಮ್ಮ ದೌರ್ಬಲ್ಯವೆಂಬ ಸಕ್ಕರೆಗೆ
ಮುತ್ತುಗೆಗಳು ಜೋರೆ!

ದೌರ್ಬಲ್ಯಗಳ ಕಡೆಗಣಿಸಬಾರದು
ಸರಿಯಾದ ಸ್ಥಳದೊಳಿಟ್ಟು ಸರಿಯಬೇಕು
ಇಲ್ಲವೇ ಕಳೆದುಬಿಡಬೇಕು
ಜೊತೆಯಲ್ಲಿಟ್ಟುಕೊಳ್ಳದೆ ಈ ಸಾಂಕ್ರಾಮಿಕ ಸವಿಯ!


16/03/2015

ಕವನ

@ ಹಾಸ್ಯ ಲಾಸ್ಯ

ಪುಟ್ಟ ಹುಡುಗಿಯಾದ ಅಕ್ಕನ ಮಗಳನು 
ಕೇಳಿದಳಿವಳು
ಅವನ ಚಿತ್ರ ತೋರಿಸಿ

"ಚೆನ್ನಾಗಿದ್ದಾರಲ್ಲ ಈ ಅಂಕಲ್ಲು?"
"ಹ್ಮೂ,, ಅಚ್ಚಾ ಹೈ,
ಪರ್ ಆಂಕಲ್ ಕಿ ತರಹ್ ನಹೀ ದಿಕ್ತಾ
ಲಡಕಾ ದಿಕ್ತಾ"...

"ಅರೇ ವಾಹ್! ಮೈ ಕ್ಯಾ ಆಂಟೀ ದಿಕ್ತೀ,
ಫಿರ್ಬೀ ಆಂಟೀ ಬುಲಾತಿ ತುಮ್?!!
ಹ್ಹ ಹ್ಹ ಹ್ಹ... 
ಮುದ್ದಿಟ್ಟಳು ಮಗಳು

16/03/2015

ಕವನಗಳು




ಮನದೊಳಗೆ 
ಮಂದಾಗ್ನಿ ದಹಿಸಿ
ಉಸಿರೊಳು ಉಸುರಿದ 
ಹೊಗೆಯಂತೆ
ಹಾಳಾದ ಈ ಅಹಂ
ನರಳಿಸಿ ಕೊರೆದು 
ಮತ್ತೂ ಹೂತುಬಿಟ್ಟಂತೆ
ನಗುವೆಲ್ಲಾ 
ಅದ್ಯಾವುದೋ ಪಾತಾಳಕೆ
ಮೇಲೆ ತೇಲಿದ 
ಜಿಗುಟು ಒರಟು 
ಅದು ನಾನು!..

****

ಮೌನದ ಆಲಾಪನೆ
ಹೆಚ್ಚಿದಂತೆ
ಗದ್ದಲ ಹೆಚ್ಚು
ಒಳಮನೆಯಲಿ
ಅಂಗಳವೆಲ್ಲಾ
ಅದ್ಯಾವುದೊ ಬಣ್ಣಗಳ ಹೊತ್ತು
ಸುಮ್ಮನಷ್ಟು ರಂಗವಲ್ಲಿ
ಇನ್ನೂ ತಿಳಿಯಲೇ ಇಲ್ಲ
ಮೌನ ಮನದ 
ಬೇಡಿಕೆಗಳು...
ಅಥವಾ ಇನ್ನೂ ಇವೆಯೇನೋ
ಬಾಕಿಯುಳಿದ 
ಸಣ್ಣತನಗಳು...

15/03/2015

ಕವನ

ಅಪವಾದಗಳು

ಕಾಡಿಸಿ ರೂಢಿಯೇ ಇರಲಿಲ್ಲ
ಕಾಡಿಸಬೇಕೆಂದೂ ಇರಲಿಲ್ಲ
ಸುಮ್ಮನಿದ್ದೆ ಅಷ್ಟೆ

ನೋಡಿದವರೆಲ್ಲಾ 
ಅವರವರ ಕಾಡಿಕೊಂಡರು
ನನಗೋ ಈಗ ಅಪವಾದಗಳು

ಯಾರನು ಕಾಡಿದೆ ನಾನು
ನನಗೀಗ ಕಾಡುವ ಪ್ರಶ್ನೆ
ಈ ಕಣ್ಣ ಕಾಡಿಗೆಯಡಿ ಒದ್ದೆಗೊಂಡು

15/03/2015
ಅತಿಯಾದ ನಿರೀಕ್ಷೆಗಳೇನು 
ಇಲ್ಲವೆನಿಸಿದಾಗ
ಸಮರ್ಪಿತ ಭಾವವೇ ಆದರೂ
ಹಾಗೆಯೇ ಬಿಗಿಯಾಗಿ 
ಮುಚ್ಚಿಟ್ಟುಕೊಳ್ಳುವಂತೆಯೂ
ಎನಿಸುವುದು ಈ ಭಾವ
ಯಾರಿಗೂ ಸುಮ್ಮನೆ ಹಟವಾಗದೆ!

14/03/2014

ಕವನ

ಉಬ್ಬಿದ ಬಲೂನು

ಸುಮ್ಮನೆ ಎಲ್ಲರೂ ಅಂದುಕೊಳ್ಳುತ್ತಾರೆ
ಉಬ್ಬಿದ ಬಲೂನಿಗೆ ಬಲು ಜಂಭದಿ
ಕುಣಿವ ಕಾತುರವೆಂದು

ಅದರ ಪಾಡದು ಅದಕ್ಕೇ ಗೊತ್ತು
ಎಲ್ಲಿ ಯಾವ ಮೊನೆಯು ಚಿಗುರುವುದೊ
ತನ್ನೆಡೆಗೆ ಕುದಿಗೊಂಡು ಭಾವ ಛೇದಿಸಲೆಂದು

ಬಲೂನಿನಂತಾಗಬಾರದು ಈ ಮನಸ್ಸು
ಉಬ್ಬಬೇಕು ಆಗಾಗ ತಗ್ಗಬೇಕು
ಕಾದು ಬೆಂದು ಗಟ್ಟಿಗೊಳ್ಳಬೇಕು!

ಕುದಿ ಉರಿ ಚೂರಿಗಳಿಗೂ 
ಮೂತಿ ಸೊಟ್ಟಾಗುವಂತೆ ತಡೆದು ನಿಲ್ಲಬೇಕು
ಉಳಿಯಬೇಕು ಮತ್ತೂ ಬದುಕಬೇಕು!...

14/03/2015



ಕಡಲು,ದೊರೆ
ಇವೆಲ್ಲವೂ ಕದ್ದ ಮಾಲು
ನಿನಗೆಂದು ಹೊಸದು
ಹೆಸರಿಡುವೆ
ಕರೆದರೆ ನೀನಷ್ಟೇ
ನೋಡಬೇಕು!

****

ಮನದ ಮೌನಕ್ಕೆ
ಏನೋ ಒಂದು
ಹುಡುಕಾಟವಿರುತ್ತದೆ
ಪದಗಳದೋ
ಭಾವಗಳದೊ
ಇಲ್ಲ ನಿನ್ನದೊ!
ಸಿಕ್ಕ ಮೇಲೆ ಒಂದೇ
ಜಗಳ ಗದ್ದಲ
ನೀನೇ ಮುದ್ದು,ನೀನೇ ಸ್ವೀಟು!
ಅಂತೆಲ್ಲಾ... !

***

ತಿರುಗಿ ಬಂದ ಬಾಣವೇ
ಹೇಳಿದ್ದು
ಗುರಿ ಮುಟ್ಟಿದೆ
ಎಂದು! 

14/03/2015

ಕವನ

ಈ ಹುಡುಗಿಯರೇ,,,


ಈ ಹುಡುಗಿಯರ ಮನಸ್ಸೇ
ಅರ್ಥವಾಗೊಲ್ಲ ಗುರು

ಅರಳಿ ಕಟ್ಟೇಲಿ ಕೂತು
ಕಾಳು ಹಾಕಿದರೆ
ಎಡಗಣ್ಣಲ್ಲೂ ನೋಡೊಲ್ಲ
ನಮಗೆ ಸಿಕ್ಕಾಪಟ್ಟೆ ಟೈಮಿರುತ್ತೆ
ಅವರಿಗದು ಬೇಕಿರೊಲ್ಲ

ಹುಡುಗ ಏನೋ ಚೂರ್ ಓದ್ಕೊಂಡು
ಕೆಲ್ಸ ಹಿಡಿದಿದ್ದಾನೆ ಅಂದ್ರೆ
ಓರೆ ನೋಟನಾದ್ರೂ ದಕ್ಕೀತು
ಆದರೆ ಆ ಹುಡುಗನಿಗೋ ಟೈಮೇ ಇರೋಲ್ಲ
ಇವು ಒಂದೇ ಒದ್ದಾಡ್ತವೆ ನಮ್ಗೆ ಟೈಮೇ ಕೊಡೊಲ್ಲಾಂತ

ನಾವ್ ಫ್ರೀ ಇದ್ವಿ
ಬೇಡಂದ್ರು...
ಈಗ 
ಅವ ಫ್ರೀಯಿಲ್ಲ
ಆದರೂ ನಮ್ ಕಡೆ ನೋಡಂಗಿಲ್ಲ

ಈ ಹುಡುಗೀರೇ ಅರ್ಥವಾಗೊಲ್ಲ ಗುರು
ನಮ್ ಟೈಮೇ ಸರಿ ಇಲ್ಲ ಬಿಡು.. !

11/03/2015

Wednesday, 11 March 2015

ಕವನ

ಸ್ವರ್ಗ ಸುಖ


ಹುಟ್ಟಿ ಹಾಕಿಕೊಳ್ಳುವ
ಪ್ರವೃತ್ತಿಗೆ
ಕಳೆದುಕೊಳ್ಳುವ
ಆತಂಕವೇ ಇಲ್ಲ

ಇದನ್ನು ಎಷ್ಟೋ ಬಾರಿ
ತರ ತರದಲಿ ಗುನುಗಿರುವೆ
ಅಷ್ಟು ಸಲವೂ
ನನ್ನೊಳು ಮಿಡಿತ ಸ್ಪಂದಿಸುತ್ತಿತ್ತು

ಸಂತಸವೆಂಬುದು
ಇರುವುದು ನಿಜವೇ ಆದರೆ
ಹೌದು ನಮ್ಮೊಳಗೇ ಇದೆ
ಇದೇ ಸುಖ, ಇದೇ ಸ್ವರ್ಗ!

11/03/2015

ಕವನ

ನನಗಾಗಿ ನೀನು


ಪ್ರಪಂಚ ವಿಶಾಲವಾಗಿದೆ
ಹೌದು
ಆದರೇನು
ಕಣ್ಣಿನ ದೃಷ್ಟಿ ಸಣ್ಣದು!

ದಕ್ಕಿದಷ್ಟೇ ಸ್ವರ್ಗ
ಪ್ರಪಂಚವೆಲ್ಲಾ
ಏಕೆ ಬೇಕು!

ಇದ ತಿಳಿದು
ಸಮಯವಿಟ್ಟುಕೊ
ನನಗಾಗಿ ನೀನು! 

11/03/2015

ಕವನ

ಸ್ವರ ಸೇರಿಸು


ಬಿಸಿಯೇರಿ ತಂಪಾಗುವ ಹೊತ್ತು
ನವೋಲ್ಲಾಸ
ಈ ಬಿರು ಬಿಸಿಲಿನಲಿ
ಕಣ್ತಂಪ್ಪಿಗೆ ನಿನ್ನ ನೆನಪಿನ ಚಿತ್ರ!

ಸುಮ್ಮನೆ ಹೊಗಳೆನು ನಾನು
ಏನೇ ಹೇಳು 
ನನ್ನ ಮೇಲೆಯೇ ನನಗೆ
ಹಿರಿಮೆ
ಗರಿಮೆಯ ನೀನು 
ಒಂದಷ್ಟು ತಿರುವು ಕೊಟ್ಟೆ
ಅಕ್ಷರಾಭ್ಯಾಸಕೆ!

ನನ್ನದೋ ಇನ್ನೂ ಧಾಟಿ ಬದಲಾಗಿಲ್ಲ
ಚೂರು ಹಾಡಿ ತೋರಿಸಲಾರೆಯಾ
ಕೆಲ ಸ್ವರಗಳು ನಿನ್ನೊಳಗಿವೆ
ದಕ್ಕಿಸಿಕೊಳ್ಳಬೇಕು ಎಂದು ಸಿಗುವೆ?! 
ಏಕಾಂತದಿ ಕಾಂತನೇ...

11/03/2015

ಕವನ

ಮನದ ತುಣುಕು ಇಟ್ಟಿಗೆಗಳು


ಗೂಡು ಕಟ್ಟಿಕೊಂಡು
ತನ್ನೊಳಗೆ ಬೆಂದದ್ದಾದರೂ ಏಕೆ
ಕಂಬಳಿ ಹುಳುವು
ನಾಳೆಗೆ ರೆಕ್ಕೆ ಬಿಚ್ಚಿ ಹಾರಲೆಂದೆ

ಆಗಾಗ ಗೂಡಿಟ್ಟು
ಸುಟ್ಟಿಕೊಳ್ಳಬೇಕು 
ಮನದ ತುಣುಕು ಇಟ್ಟಿಗೆಗಳನು
ಮುಂದಣ
ವೈಭವದರಮನೆಯ ನಿರ್ಮಾಣಕ್ಕೆಂದು

ಅಮಾವಾಸ್ಯೆ ಪೌರ್ಣಮಿಗಳು
ಭಾವಗಳೇರಿಳಿತಗಳು
ಮುದುಡಬೇಕು ಮರುಗಬೇಕು
ತನ್ನೊಳಗೆ ತಾ ಬೆಳೆದು ಹೊಮ್ಮಬೇಕು

11/03/2015
ತಟಸ್ಥತೆಯ ಆರಾಧಕಳಾಗಿ
ಉಳಿದುಕೊಳ್ಳುವ ಎಂದುಕೊಳ್ಳುತ್ತೇನೆ
ಸುಟ್ಟರೂ ಹೋಗದ ಗುಣವದು 
ಚಿತೆಯಲೂ ಸಿಡಿದು ಹೊರಳುವ ಬುರುಡೆ!

11/03/2015

ಕವನ

ಕಡಲಾಳ



ದಡದ ಅಲೆಗಳದು

ಹೆಚ್ಚು ಅಬ್ಬರ

ಆಳದ ಶಾಂತತೆಯ

ಮುಚ್ಚಿಡಲೋ ಏನೋ


ಕಲಕಿದರೆ ತಳದಿ ಸಣ್ಣಗೆ

ಉಕ್ಕುವುದು ಶರಧಿ

ತಡೆಯಲಾರದು ಜಗ

ಶರಣಾಗದೆ ಉಳಿದು


ಈ ಶಾಂತತೆ, ಉಗ್ರತೆ

ಅವಳಿಗಳಂತೆ

ಒಂದತ್ತರೆ ಮತ್ತೊಂದಕೆ

ಎಚ್ಚರಿಕೆ ಕನವರಿಕೆ



10/03/2015

ಕವನ

ಹೇಳೇ ನವಿಲೇ....

ಬರೆದು ಹರಿದು ಹಾಕುವುದು
ನೋವುಗಳಾದರೆ
ಬರೆಯದೆ ಎದೆಯಲ್ಲುಳಿವುದು
ನಲಿವೇ ?!
ಹೇಳೇ ನವಿಲೆ..

ಬರೆಯಲಾಗದ ಅವನ
ಏನೆಂದು ಕರೆದುಬಿಡಲಿ
ನಲಿವ ನವಿಲು!
ಸರಿಯೇ ನವಿಲೇ..

11/03/2015


ತೆರೆ ಮರೆಯ ಗೂಡಿಗೆ
ಅದೆಷ್ಟೋ ಕಾದಿದ್ದ ಕಣ್ಣುಗಳು
ದಾಳಿಯಲ್ಲ ದಯೆಯಿತ್ತು
ಮರದ ಕೊಂಬೆಯು ಮುರಿದಿತ್ತು!

09/03/2015

ಕವನ

ಸಂಭ್ರಮ


ಒಂದರ ನಂತರ ಒಂದರಂತೆ 
ಸಂತಸ ಸಂಭ್ರಮಗಳು
ಈ ನಡುವೆ ಸುತ್ತ ಹರಿದಾಡಿ
ಗಟ್ಟಿಗೊಳಿಸಿವೆ ಹೊಸ ಆಸೆಗಳನ್ನು

ಆದರೆ ಅಷ್ಟೆ ಸತ್ಯ
ಸಣ್ಣಗೆ ಹರಿದಂತೆ ಎದೆಯೊಳಗೆ 
ಆತಂಕಗಳ ಹರಿವು
ನೆಲದಾಳದಲಿ ನೀರು ನಡೆದಂತೆ!

ಆಸೆಗಳೂ ಇರಲಿ
ಆತಂಕಗಳ ಸಾಲು ಸಾಲು 
ಭರವಸೆಗಳು ಬತ್ತದಿರಲಿ
ಸೋತರು ಹಲವು ನಿರೀಕ್ಷೆಗಳು!

09/03/2015
ನಿಂತು ಕಾದಿದ್ದು ತಪ್ಪಾಯ್ತು
ನಡೆಯುತ್ತಾ ನಿರೀಕ್ಷಿಸಬೇಕಿತ್ತು
ದೂರವಾದರೂ ಕ್ರಮಿಸುತ್ತಲಿದ್ದೆ
ಒಂದೆಡೆ ಕಾಲ ಕಳೆದು 
ಹೆಚ್ಚು ಕಣ್ಗಳಿಗೆ ಗುರಿಯಾಗದೆ
ಹ್ಮೂ ಇನ್ನು ಓಡಬೇಕು ನಿಲ್ಲದೆ...

09/03/2015

******

ಈ ನಿಶ್ಶಬ್ದ ರಾತ್ರಿಗಳ
ಪ್ರಶ್ನೆಗಳು ಅನೇಕ
ಉತ್ತರಿಸಲಾಗದೆ
ನಾ ಕನಸಿಗೆ ಜಾರಿದೆ
ಉಳಿದಂತೆ ಹಗಲು
ಹೆಚ್ಚು ಪ್ರಶ್ನಿಸದು!

08/03/2015

Saturday, 7 March 2015

ಕವನ

ಕನಸು

ಏಕಾಂತದೊಳು
ಕತ್ತಲನ್ನೇ ಹೆಚ್ಚು ಪ್ರೀತಿಸುವ
ಹೊತ್ತಿದು

ಕನಸು ಕಾಣುತ್ತಿರುವೆ
ಅದೇನೋ ಮಿಂಚಿದಂತಾಯ್ತು
ಮಿಂಚು ಹುಳುವೇ

ಸರಿ 
ಮುಂದುವರೆದ ಕನಸಿದು
ಈಗ ನೀನೂ ಜೊತೆಗಿರುವೆ

ಕನಸು ಸ್ಪಷ್ಟವಾಗಬೇಕಿದೆ
ಇನ್ನಷ್ಟು ಕತ್ತಲು ಮಾಡು
ಕಣ್ರೆಪ್ಪೆ ತೆರೆಯದಂತೆ ಮುತ್ತಿಟ್ಟು!
........

ಕಣ್ಬಿಟ್ಟರೆ ಕೊರೈಸೊ ಬೆಳಕು
ಕನಸಿನ ಕತ್ತಲೆ ಏನಾಯ್ತು
ನೀನು? ಮಿಂಚುಹುಳುವು? 
...ಅರೇ ಹಗಲೋ?!

ಹೋ
ಮುಂದೆ ಹಗಲುಗನಸೇ ಕಾಣಬೇಕು
ಬೆಳಕಿಗೆ ನೀನು ಹೊಂದಿಕೊಳ್ಳುವೆ
ನಾನೂ ನಿನ್ನೊಂದಿಗೆ!

07/03/2015
ತಣ್ಣನೆಯ ಅರವಿಯೊಳು
ಗಬೆಗೊಂಡ ಇರುವೆ
ಈಜುತಲಿದೆ ಗಿರಕಿ ಹೊಡೆದು
ಸುತ್ತಲೂ ನುಣುಪೇ
ಎತ್ತ ಸಾಗಿ ಎತ್ತರಕ್ಕೇರಬೇಕಿದೆಯೋ
ಬದುಕುಳಿಯಲಷ್ಟೆ ಅದರ ಪಾಡದು ನಂಬಿರೋ!

07/03/2015

ಕವನ

"ಹೆಣ್ಣು"

ಹೆಣ್ಣು
ನೇರ, ದಿಟ್ಟ ನಿರಂತರ
ಕಾರಣ
ಎಲ್ಲಾ ನಿರ್ಬಂಧಗಳು
ಅವಳಿಗೆ ಮಾತ್ರ

'ಮೆರೆದರೂ ಎಡವಿದರೂ'
ದೋಷಗಳು ಅವಳಿಗಷ್ಟೆ
ಅವುಗಳಾದರೂ ಅವಳಿಗೆ
ಅಪರೂಪ!

ದೋಷಮುಕ್ತ ಹೆಣ್ಣು
ಇನ್ನೂ ಹುಟ್ಟೇ ಇಲ್ಲ
ಹುಟ್ಟಿದರೂ ಮುಕ್ತಿಯಿಲ್ಲ
ಗಂಡಿನ ಬಗ್ಗೆ ಮಾತುಗಳಿಲ್ಲ
ಗಂಡಿಗೆ ದೋಷಗಳೇ ಇಲ್ಲ

ಸುಟ್ಟುಬಿಡಬೇಕು
ಒಮ್ಮೆ ಮನಸ್ಸುಗಳನ್ನು
ಹಿಂಡಿ ಹೃದಯವನು
ಬಸಿದುಕೊಳ್ಳಲಿ ಎಲ್ಲಾ ದೋಷಗಳನು
ಬೂದಿ ಬಿಡಲಿ ಮನಸ್ಸುಗಳು!

ಸಾವಿರ ನೋವಲ್ಲೂ
ನಗುವವಳೆ ಮಾನಿನಿ
ಸಾವಿರ ಕನಸಲೂ
ಹೊಸದಾಗಿಯೇ 
ಹುಟ್ಟಿ ಅಳುವವಳು!

07/03/2015

ಕವನ

ಈ ಸಂಜೆ

ಈ ಸಂಜೆ ಭಾರಿ ಸಂಭ್ರಮ
ತಂಪಾದ ಗಾಳಿಯಿತ್ತು
ಮಳೆ ಬರುವ ಸೂಚನೆಯೂ
ಖುಷಿಗಳಿಗೆ ಎಷ್ಟೊಂದು ಕಾರಣಗಳು

ಸಣ್ಣ ಸಂತಸಗಳನ್ನು 
ಹೆಚ್ಚು ಸಂಭ್ರಮಿಸುವ ಹುಮ್ಮಸ್ಸು
ಅದೇಕೋ ಈಗ ಮುಚ್ಚಿಡುವ ಮನಸ್ಸು
ನಿರೀಕ್ಷೆಗೂ ಮೀರಿದ ಸಾಕಾರಗಳನ್ನು

ಸ್ವರ್ಗಕ್ಕೆ ಕಿಚ್ಚು ಹತ್ತಿಸಿದಂತೆ
ತೇಲಾಡುತ್ತಿರುವ ಅನುಭವ
ಪ್ರಕೃತಿಯೂ ಕೈ ಜೋಡಿಸಿ
ನನ್ನೊಂದಿಗೆ ಹಾಡಿದೆ ಈ ಭಾವ!

06/03/2015

ಕವನ

ಕೀಳರಿಮೆ


ಕಾಡಿದ ಕೀಳರಿಮೆಯ 
ಹೊರಗೋಡಿಸಲು
ಮತ್ತೆ ಮತ್ತೆ ಅದೇ ತಾಣಗಳನ್ನೇ 
ಸುತ್ತಿ ಬಂದೆ
ನಡುಗೆ ಬಿರುಸುಗೊಂಡು
ಹೆಜ್ಜೆ ಮೆದುವಾಗಿ 
ಮನಸ್ಸು ಹದಗೊಳ್ಳುತ್ತಿತ್ತು

ವೇಗ ಹೆಚ್ಚಾಗಿದೆ ಈಗ
ಆವೇಗಗಳೂ
ಕೀಳರಿಮೆಯ ಕೊಳಗಳಲಿ
ನಿಲ್ಲಲಾರೆ ಹೆಚ್ಚು ಹೊತ್ತು
ನಡೆಯಬೇಕಿದೆ ಮುಂದೆ
ಕೊಳಗಳ ಬತ್ತಿಸಿ

ಬಯಸಿ ನೀರು ತುಂಬಿಸಿಟ್ಟೆ
ಬಳಕೆಯಾಗದೆ ಕೊಳಕಾಯಿತು
ಹೆಸರಿಟ್ಟ ಕಾರಣಕೆ 
ಕೊಳಗಳನು ಬರಿದು ಮಾಡಲಾಗಲೇ ಇಲ್ಲ

ಕೊಳದ ತೇವವ ಇಂಗಿಸಬೇಕಿತ್ತು
ಅದಕೆ ಬೆಂಕಿಯು ಬೇಕಿತ್ತು;
ಆ ಸೂರ್ಯನನ್ನೇ ನಂಬಿರುವೆ
ಸುಟ್ಟುಬಿಡುವನೆಂದು 
ಜಗಕ್ಕೆಲ್ಲಾ ಅಗ್ನಿಯೇ ಶ್ರೇಷ್ಟವಲ್ಲವೆ?!

ಸುಡುವ ಭಸ್ಮಗೊಳಿಸುವ
ಪ್ರವೃತ್ತಿಯೇ ಉತ್ತಮೊತ್ತಮವೆನಿಸಿರಲು
ಕೀಳರಿಮೆಗಳು ಅದೇಕೋ ಇನ್ನೂ ಹಸಿಯಾಗಿವೆ
ಒಮ್ಮೆಲೆ ಸೂರ್ಯನಾಳಕೆ ಜಿಗಿಯಲಾರೆ 
ಅವನ ನೆರಳಲಿ ನಿಧಾನದಿ ಆವಿಯಾಗುವೆ
ಭಾಸ್ಕರನು ಅನುಮತಿಸಲಿ.

04/03/2015



'ಅನಿಸಿಕೆ'
ಹೆಣ್ಣಿಗೆ ಯೌವ್ವನದಲ್ಲಿ
ತಂದೆಯಂತಹ ಗಂಡನು 
ಗಂಡಿಗೆ ಮುಪ್ಪಿನಲ್ಲಿ 
ತಾಯಿಯಂತಹ ಹೆಂಡತಿಯು
ಇದ್ದೊಡೆ
ಜೀವನವದು ಸಂಪೂರ್ಣ!

06/03/2015

*****

ಭಗವಂತ ಝಾಡಿಸಿ ಒದ್ದ
ಬಿದ್ದೆ ಹೌದು ನಿಜ
ಎಲ್ಲರೂ ತಿಳಿದರು ಊರಾಚೆ ಬಿದ್ದೆನೆಂದು
ನಾನೋ ಸಮುದ್ರ ದಡದೊಳಿದ್ದೆ
ಮುತ್ತಾರಿಸುತಲಿದ್ದೆ!

*****

ಈ ನೆನಪಿನ ಕತೆಗಳೆ
ಜೊತೆಯಾಯ್ತು..
ಜೊತೆಗಿದ್ದು ಬರೆಸಿಕೊಳ್ಳೊ
ಹೊಸ ಕತೆಗೆ ನೀಲಿ ಖಾಲಿಯಾಯ್ತು!
ಹೇಗೋ ಇದ್ದು ಏನೋ ಆಯ್ತು
ಇನ್ನು ಗೊತ್ತಿಲ್ಲ ಎಲ್ಲಿ, ಏನು
ಬರೆದು ಬರೆದು ಅನ್ವೇಷಿಸಬೇಕಿದೆ
ಚುಕ್ಕಿ ಇಟ್ಟು ಬಿಟ್ಟ ಗೆರೆಗಳನು ಕೂಡಿಸಲು!

*****

ಪೈಪೋಟಿಗಳೇನೂ ಇಲ್ಲ
ಹಾಗಾಗಿ ವೇಗ-ಆವೇಗವೂ..!
ಬದುಕಿನೊಟ್ಟಿಗೆ ಹಟಗಳೇನೂ ಇಲ್ಲ
ಹಾಗಾಗಿ ನೀನಿದ್ದಂತೆ ನೀನಿಟ್ಟಂತೆ!
ಆತಂಕಗಳೂ ಇಲ್ಲ
ಹಾಗಾಗಿ ಆಸೆ ಆಕಾಂಕ್ಷೆಗಳು ಹರಿದಂತೆ!

*****

ಒಂದಷ್ಟು ಜನಬೆಂಬಲ
ಬೇಕಿದ್ದರೆ
ಹೇಗೋ ಸಂಪಾದಿಸಿಬಿಡಬಹುದು
ಮನಗಳನ್ನು ಗೆಲ್ಲಬೇಕು
ಇದ್ದಂತೆ ನಾವಿದ್ದು

****

ಗಾಳಿಯೊಳಗೆಲ್ಲಾ
ಬಣ್ಣ ಹಾರಾಡಿ
ಹುಡುಕಿದೆ ನನ್ನ, ನಿನ್ನ
ಕೃಷ್ಣ! ...

*****

ಜಾತಿಯನ್ನು ತಮ್ಮ ಕಣ್ಣುಗಳಿಗೆ
ಅಂಟಿಸಿಕೊಂಡು ನಿಂತವರ ನೋಡಿ
ನನಗೊಂದೇ ಮೋಜು
ಪಾಪ ಪ್ರಪಂಚದ ಯಾವುದೇ ಅತ್ಯಮೂಲ್ಯವೂ
ಅವರ ಸುಖಕ್ಕೆ ದೊರಕದು!
ಸಹಜವಾದ ಕಣ್ಣುಗಳಾಗಲಿ ಎಲ್ಲರವೂ
ಒಬ್ಬರ ಕಣ್ಣನ್ನೊಬ್ಬರು ನೇರ ದಿಟ್ಟಿಸಿ ನೋಡುವಂತೆ!

05/03/2015


****

ದೃಷ್ಟಿ ತಾಗಿ
ಕಡ್ಡಿ ಸುಟ್ಟಿಸಿಕೊಳ್ಳುತ್ತಿದೆ
ನನ್ನ ಕನಸು! 

****

ಜೀವ ವೀಣೆ
ನರಗಳನ್ನೆಳೆದು
ಮೀಟುತಿದೆ

ನೋವಿದೆ ನಿಜ,
ನಂತರ
ಸುಶ್ರಾವ್ಯ ಸಂಗೀತವೂ!

04/03/2015

ಕವನ

ಮಳೆ ರಾತ್ರಿ ಕನಸುಗಳಲಿ


ಹುಡುಗ ಭೆಟ್ಟಿಯಾದ
ಮುಂದಿನ ಸಾಲುಗಳ
ನುಂಗಿಬಿಟ್ಟ! 
ಕವಿತೆ ಕಟ್ಟೆಂದರೆ
ಹೇಗೆ ಕಟ್ಟಲಿ
ಹಳೆಯ ಸಾಲುಗಳಲ್ಲೇ
ಹೊಡೆದಿದೆ ಗಿರಕಿ!

ಮರಳಿ ಬೇಕೆಂದು
ಕೇಳಬೇಕೆಂದಿರುವೆನು
ಸಿಗದೆ ಸತಾಯಿಸುವನು
ಸಿಕ್ಕಿಬಿಟ್ಟರೆ ಬಡ್ಡಿಯೂ
ವಸೂಲಿಯಾಗಲಿದೆ

ಅದ ತಿಳಿದೋ
ಏನೋ
ಕಾಣೆಯಾದನೊ
ಈ ಮಳೆ ರಾತ್ರಿ ಕನಸುಗಳಲಿ..

03/03/2015
ಪ್ರೀತಿಸುತ್ತೇನೆ
ಸ್ನೇಹವೇ,
ನನ್ನ ಪಾದಗಳ ಮೆಟ್ಟಿ ನಿಲ್ಲು
ನಗುವೇ ನಿನ್ನ ತುಂಟತನಕೆ
ಕೈ ಜಗ್ಗಿ ನೋಡ
ಆಟವೇ? ರಂಜಿಸುವೆ
ಆಡುತ್ತಾ ಆಡುತ್ತಾ ಮಗುವಾಗುವೆ
ನನಗೆ ನೀನಿನ್ನೂ ಇಷ್ಟ
ತಲೆ ಏರಿ ನಿಲ್ಲು
ಹೆಮ್ಮೆಪಡುವೆ
ತಲೆ ಮಿಟ್ಟಿ ನಿಲ್ಲುವೆಯೋ
ಕೊಡವಿಕೊಳ್ಳೊ ಸಮಯ
ಪ್ರೀತಿ ಉಳಿಸಿಕೊ
ಸ್ನೇಹವೇ....ನನ್ನ
ಗೆಳತಿಯೇ

Tuesday, 3 March 2015

ಕವನ

"ಪ್ರೇಮಿ"


ಹಾದಿ ಬೀದಿಯಲ್ಲೆಲ್ಲಾ
ರಂಗೇ ರಂಗು
ಹಸುರು ಹಳದಿ ಕಂದೆಲೆಗಳು
ಕೆಂಪು ಕೇಸರಿ ಸಣ್ಣ ಹೂಗಳು

ಬರುವನು ಅವನೊಬ್ಬ
ನಡೆಮುಡಿ ಹಾಸಿ ಕರೆದನು
ವರುಣ; ಜೊತೆಗಾರರಂತೆ
ವಸಂತನೂ ಮನ್ಮಥನೂ

ತಿಳಿಗೊಳ್ಳುತಿಹ ಬಾನೆಲ್ಲಾ
ಮಂಜು ಮುಸುಕು
ಸಂಜೆಗತ್ತಲು; ಕಾದಿದೆ
ಸುಂದರ ಕಾವ್ಯಸೃಷ್ಟಿಗೆ 
ರಂಗಾಗಿ ಅವನ ಆಗಮನಕೆ!

ಸೂರ್ಯ ಮುಳುಗಿ
ಬಂದಾತ ಚಂದ್ರನಲ್ಲ
ಅವಳ ಹುಡುಕಿ ಬಂದ
ಕವಿ; 
ಅವಳ ಒಲವೊಳು ಸಿಕ್ಕ ಪ್ರೇಮಿ!

03/03/2015

ಕವನ

"ಕಪ್ಪು ಕೀಟ"



ಓ ಕಪ್ಪು ಕೀಟವೇ
ಅದೇನು ಮೋಜಿತ್ತೆ
ಎದುರು ಬೀಸಿ ಬಂದು
ಕಪ್ಪು ಕಣ್ಗಳೊಳು ಬಿದ್ದೆ
ಹೀಗೆ ದಿಢೀರನೆ 
ಆತ್ಮಹತ್ಯೆ ಮಾಡಿಕೊಂಡೆ

ಕಷ್ಟಪಟ್ಟು ನಿನ್ನ 
ಹುಡುಕಿ ತೆಗೆದೆ
ಕಣ್ಣಿಂದ..

ಎಡಗಣ್ಣು ಒಂದೇ ಸಮನೆ 
ನೀರುಕ್ಕಿ
ಚುಮು ಚುಮನೆಂದು 
ಚುಚ್ಚಿತ್ತಿದೆ 
ತೂರಿಬಿಟ್ಟ
ನಿನ್ನ ನೆನೆದು.. !

ಊದಲೂ 
ಯಾರೂ ಇಲ್ಲ ಸುತ್ತಲು..
ನೋಡಿ ಬರಬಾರದಿತ್ತೆ
ಇನ್ನಷ್ಟು ಹೊತ್ತು ಕಳೆದು...

ಕಣ್ಣಾದರೂ 
ರಮಿಸಿಕೊಳ್ಳುತ್ತಿತ್ತು
ಆಗಲೂ 
ನಿನ್ನನೇ ನೆನೆದು! 

03/03/2015

ಕವನ

"ತಾವರೆ ಕೈಯೊಳು"


ಕೆಸರ ತುಳಿದು 
ಹೆಜ್ಜೆಯಿಟ್ಟೊಡೆ
ನೇರ ದಳದ ಮೃದುವು 
ಮುಖಕ್ಕೆ ಬಡಿವುದೇ
ಅದೇನು 
ನಿನ್ನ ಹೃದಯವೋ
ನನ್ನದೇ ಕಲ್ಪನೆಯೋ
ಎಚ್ಚೆತ್ತಾಗ 
ನೀನೂ ಇದ್ದೆ ನಾನೂ ಇದ್ದೆ
ನದಿಯ ದಡದಲಿ 
ತಾವರೆ ಕೈಯಲ್ಲಿ..

02/03/2015

ಕವನ

ವ್ಯತ್ಯಾಸ


ಅನಿಸಿಕೆಗಳಿಗೂ
ಅನುಭವಕೂ
ಎಷ್ಟೊಂದು ವ್ಯತ್ಯಾಸ!

ನೂರಾರು ಮುಳ್ಳುಗಳು
ಎದ್ದು ಕಂಡವು
ದೂರಕ್ಕೆ
ಹತ್ತಿರ ನಿಂತಾಗ ಘಮ್ಮೆಂದಿತ್ತು
ಹಲಸು
ಬಿಡಿಸಲು ಹುಲುಸೊ ಹುಲುಸು
ಸವಿಯಲು ಸೊಗಸು!

ಸದಾ ಕಾಲವೂ
ದೂರದ ಬೆಟ್ಟವು
ನುಣ್ಣಗೆ ಕಾಣದು
ಭೀಕರ ಕೊರಕಲುಗಳೆ
ಕಂಡರೂ
ದಾಟಿ ದಾರಿ ಸವೆಯಬಹುದು
ಕಾಡ ಹಾದಿಯೊಳು
ಜುಮ್ಮನೆ ಝರಿ ಹರಿದು!

02/03/2015

ಕವನ

"ಬಂದೂಕು"



ಬಂದೂಕು ಹಿಡಿದರೆ 
ಸಾಲದು ಬೇಟೆಗಾರನೇ,
ಗುರಿಯಿಡಲು ಬರಬೇಕು
ಅದಕೂ ಮುನ್ನ ನಾ ಹಾರಬೇಕು!

ಬಂದೂಕು ಹಿಡಿದರೂ ಹಿಡಿ
ನಿನಗಾಗಿ ನಿನ್ನವರಿಗಾಗಿ
ಸ್ವೇಚ್ಛೆಗಾಗಿ ಹಿಡಿದಿದ್ದರೆ
ಅಗೋ ನಿನ್ನವರೂ ಅಲ್ಲಿ ಗೋಳು

ಪುಟ್ಟ ನೀಲಿ ಹಕ್ಕಿ ನಾ ಬೇಟೆಗಾರ,
ಬಂದೂಕು ಬೇಡವೋ
ಗುಂಡು ಹಾರಿದರೂ ಸಾಕು
ಪ್ರಾಣ ಹಾರುವುದು ಅದರ ವ್ಯಾಘ್ರ ಶಬ್ದಕೆ

ಬಂದೂಕ ಹಿಡಿದದ್ದಾದರೂ ಏಕೋ
ಒಂದೊತ್ತಿನ ಹಸಿವೆಗೋ?
ಹಾಗಾದರೆ ನನ್ನದೂ 
ನೂರು ಹೊತ್ತುಗಳ ಬದುಕು
ಈ ಓಟ, ಹಾರಾಟ!

ಬಂದೂಕು ಬಿಡೋ ಮನುಜನೇ
ಹಿಡಿ ಕೈಯೊಳು ಕೈ
ಉಳು; ಹೊಡೆ ಬದುಕ ಬಂಡಿ
ನಿನ್ನವರಾಗಿ ನಾನೂ ಎದೆಯುಬ್ಬಿ ನಿಲ್ಲುವೆ
ನಿನ್ನ ಜೋಡಿ ಎತ್ತಿನ ಜೋಡಿ ಕೋಡುಗಳಲಿ
ನೀಲಿ ಹೂಗಳಂತೆ!

02/03/2015

ಕವನ

ಜೀವಂತ ಪುತ್ಥಳಿ



ಈ ದಿನವೆಲ್ಲಾ ಮಂಪರು ಮದಿರೆ
ಸುರುಳಿ ಗುಂಗಲಿ ಕಳೆದೆ ನನ್ನನೇ
ಸೆಳೆವ ಬೆಳಕ ಬಿಟ್ಟು ಇನ್ನೆಷ್ಟು ಓಡಲಿ
ಸುತ್ತಿ ಬರುವುದು ನಿನ್ನದೇ ಛಾಯೆ!

ಮಾತುಗಳೆಲ್ಲಾ ಮಾರ್ದನಿಯಾಗಿ
ಮೌನಗಳಾಗಲೇ ಮಾತುಗಳಾಗಿ
ದಿನ ಕಳೆದಿದೆ ಈ ಮನವೂ ಕಳೆದು
ಸುತ್ತಿ ಬರುವಾಗೊಮ್ಮೆ 
ನೀ ತಂದು ಬಿಡು ಹೀಗೆ!

ಏನೇ ಹೇಳು ಈ ವಯಸ್ಸೇ ಹಾಗೆ
ಕನಸು ಹೆಚ್ಚು ಕನವರಿಕೆಯ ಹುಚ್ಚು
ಆದರೂ ನೆನಪಿದೆ ನಾ ಯಾರೆಂದು
ಶಾಪಗಳೊಳಗಿಹ ಸುಂದರ 'ಕಲ್ಪನೆ'
ಈಗದು ನಿನ್ನದೇ ಆಗಿದೆ..!

ಸೋಜಿಗ, ಕಾತುರತೆಗಳ ಸಂಕಲನವು
ನಿನ್ನ ಕಲ್ಪನೆಯು ಅಮೋಘವೆ ಸರಿಯೇ
ಅಗತ್ಯವಾಗಿ ಅರಿತು ನೋಡು
ಮತ್ತಷ್ಟು ಆಳದ ವಿಸ್ಮಯಗಳು

ವಿಷಾದವಿದೆ, ಆಕಾಂಕ್ಷೆಗಳೂ
ಕಲ್ಪನೆಯ ಈ ಜೀವಂತ ಪುತ್ಥಳಿಗೆ
ಕಲ್ಪನೆಗಳ ಕೊನೆಯೇ ಕಾಣಿಸಿಲ್ಲ
ಕಾಣದ ಆ ದೇವನೂ ಸೋತು

02/03/2015
ನಿನ್ನ ಸತಾಯಿಸಬೇಕೆಂದು
ನನ್ನ ಕವನಗಳು ಮೌನವಹಿಸಿವೆ! 

02/03/2015
ಮಳೆಯ ವಾಸನೆ
ಮಣ್ಣ ಮೈಯೆಲ್ಲಾ
ಕಂಪಿಸುತ್ತಿದೆ 
ಮೋಡದ ಅಂತರಾಳ
ಯಾವ ಘಳಿಗೆಯಲೋ 
ಸೋಬಾನೆ
ಗಾಳಿ ನಶೆಯಲಿ
ಜೋಲಿ ಹೊಡೆದಿದೆ
ಸುದ್ದಿ ಮುಟ್ಟಿಸಲೆಂದೆ
ಅವರಿವರಿಗೆ!

********

ಹಾಲು ಹಾದಿಯ ತುಂಬೆಲ್ಲಾ 
ಹಾಲೇ ಇಲ್ಲ
ಮರುಳೆ
ಹಾಲ ಹಬೆಯಂತೆ ಕಾಣೋ 
ಬೆಂಕಿಯ ಉಗಿ
ಸಾಸಿರ ಸೂರ್ಯರ ನಿಟ್ಟುಸಿರು
ಒಂದೇ ಸಮನೆ ಬೇಯ್ದು

28/02/2015

ಮನದ ಮಾತು

ಗೋಧೂಳಿ ಸಮಯ


ಗೋಧೂಳಿ ಸಮಯ; ಈ ಸುಂದರ ಸಂಜೆಯಲಿ ದೂರದಲ್ಲೆಲ್ಲೋ ಓಡುವ ಗೋವುಗಳ ಘಲ್ ಘಲ್ ಗೆಜ್ಜೆ ನಾದದ ಹಿಂದೆಯೇ ಮನವು ಓಡುವುದು. ಸುತ್ತ ಹಸಿರ ವನದ ನಡುವೆ ದಿನವೆಲ್ಲಾ ಮೇಯ್ದ ದನ ಕರುಗಳು ಮೈ ತುಂಬಿಕೊಂಡು ಓಡಿ, ನೆಗೆದು ಬರುವಾಗ ಎದೆಯುಬ್ಬಿಸಿ ನೋಡುವಂತಹ ನಮ್ಮ ಗೌರವದ ಸೂಚಕಗಳಂತೆ ಕಾಣುವ ನಮ್ಮ ಗೋವುಗಳು; ಆಕಳ ಮುಖವೇ ಅದರ ಸಮೃದ್ಧಿಯ ಸಂಕೇತವೆನ್ನುವಂತೆ ನಮ್ಮ ಪೂರ್ವಿಕರಲ್ಲಿ ಪೂಜನೀಯ ಭಾವವಿತ್ತು. ಇಂದಿಗೂ ಪ್ರಸ್ತುತ. 

ಮಾನವನು ಎಷ್ಟೇ ಬುದ್ದಿವಂತನಾಗಿ ತನ್ನ ಬದುಕನ್ನು ಯಾಂತ್ರಿಕವನ್ನಾಗಿಸಿಕೊಂಡಿದ್ದರೂ ಅವನಲ್ಲಿ ಇನ್ನೂ ಸ್ನೇಹ, ಪ್ರೇಮ, ಮೋಹವೆಂಬ ಅನುಭೂತಿಯು ಇನ್ನೂ ಉಳಿದುಕೊಂಡಿದೆ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುತ್ತಾನೆ. ನಮ್ಮ ಅಗತ್ಯಗಳನ್ನು ಪೂರೈಸಿಕೊಂಡ ನಂತರವೂ ಅವುಗಳನ್ನು ಮುದ್ದಿಸಿ ಅದರೊಟ್ಟಿಗೆ ಅವನೂ ಬಾಳುವುದಿದೆ. 
ಹೀಗೆಯೇ ನೆನೆವಾಗ ನಮ್ಮ ಬಾಲ್ಯದ ಆ ದಿನಗಳು ನೆನಪಾಗುತ್ತವೆ. ಹುಟ್ಟಿದಾಗಿನಿಂದಲೂ ಪೇಟೆಯಲ್ಲಿಯೇ ಬೆಳೆದ ನಾನು, ನನ್ನ ಬಾಲ್ಯವನ್ನು ಅರೆ ಪಟ್ಟಣ ಇಲ್ಲವೇ ಅರೆ ಹಳ್ಳಿಯಂತಿದ್ದ ಬೆಂಗಳೂರಿನಲ್ಲಿ ಕಳೆದದ್ದು. ಈಗಿನಂತೆ ’ನಂದಿನಿ’ ಹಾಲಿನ ಸರಬರಾಜಿದ್ದರೂ ಆಗೆಲ್ಲಾ ಹಸುವಿನ ಕರೆದ ಹಾಲನ್ನೇ ನಾವು ಬಳಸುತ್ತಿದ್ದೆವು. ನಮ್ಮ ಮನೆಯ ಪಕ್ಕದ ಕಟ್ಟಡದಲ್ಲಿಯೇ ಹಾಲು ಮಾರವವರಿದ್ದರು. ಆದರೆ ಮನೆಯ ಸುತ್ತಾ ಮುತ್ತಾ ಆಕಳ ಸುಳಿವಿಲ್ಲದಿದ್ದರೂ ದೂರದಲ್ಲೆಲ್ಲೋ ಶೆಡ್ಡುಗಳಂತೆ ದನದ ಕೊಟ್ಟಿಗೆಗಳನ್ನು ಮಾಡಿಕೊಂಡು ಅಲ್ಲಿಯೇ  ಹಾಲನ್ನು ಕರೆದು ಮನೆಮನೆಗೆ ಸರಬರಾಜು ಮಾಡಿತ್ತಿದ್ದರು. ನಾನು ಹೋಗುತ್ತಿದ್ದ ಶಾಲೆಯ ಸುತ್ತಲೂ ಅನೇಕರು ಇಪ್ಪತ್ತು ಮೂವತ್ತು ಸಂಖ್ಯೆಗಳಲ್ಲಿ ದನಗಳನ್ನು ಕಟ್ಟಿ ಬೆಳಗಾಗೆದ್ದು ಹಾಲು ಕರೆಯಲು ನಿಲ್ಲುತ್ತಿದ್ದರು. ನಮಗೋ ಹೀಗೆ ಮಂದೆ ಮಂದೆಯಾಗಿ ಹಸುಗಳನ್ನು ನೋಡಲು ಬಹಳ ಸಂಭ್ರಮವೆನಿಸುತ್ತಿತ್ತು!. ಆಗ ನಾವು ನಾಲ್ಕೈದನೇ ತರಗತಿಯ ಮಕ್ಕಳು. ಆಗೊಂದು ದಿನ ನಮ್ಮ ಮನೆಯಲ್ಲೊಂದು ಪೂಜಾ ಕಾರ್ಯಕ್ರಮವಿತ್ತು. ಸಣ್ಣವಳು ನಾನಿರುವೆನೆಂದು ಒಂದು ಬಾಟಲಿ ಕೊಟ್ಟು ”ಹೋಗು ನಿಮ್ಮ ಸ್ಕೂಲ್ ಹತ್ರ ಎಷ್ಟೊಂದ್ ಹಸುಗಳಿವೆ ಅಲ್ವಾ? ಅಲ್ಲಿಂದ ’ಗಂಜಲ’ (ಗೋ ಮೂತ್ರ)  ತಗೊಂಡ್ ಬಾ” ಅಂತ ಅಕ್ಕ ಹೇಳಿ ಕಳಿಸಿಬಿಟ್ಟಳು. ನಾನೋ ಅದೇನ್ ಮಹಾ ದಿನಾ ನೋಡ್ತೀನಿ ಈಗ ಹಿಡಿದು ತರ್ತೀನಿ ಅಂದುಕೊಂಡು ಹೊರಟೆ. ಸರಿ; ಶಾಲೆಯ ಹತ್ತಿರ ಬಂದೆ, ಶಾಲೆಯನ್ನು ಅರ್ಧ ಸುತ್ತು ಹಾಕಿದೆ. ಹೌದು ಸುತ್ತಲೂ ಎಷ್ಟೊಂದು ಹಸುಗಳಿವೆ, ಎಲ್ಲವೂ ನಿಶ್ಶಬ್ಧ! ಹಾಗೆಯೇ ನಾನೂ!. ಕೆಲವು ನಿಂತಿವೆ, ಕೆಲವು ಕೂತಿವೆ. ನೋಡಿದೆ ಎಲ್ಲಿ ಗಂಜಲ?!. ಓ ಸುಲಭ, ಏನ್ ನಲ್ಲಿ ನೀರು ತರುವವಳಂತೆ ಬೀಗಿ ಬಂದಿದ್ದೆ.  ಈಗ ನೋಡಿದರೆ ಹಸುಗಳು ನನ್ನ ಮನದ ಇಂಗಿತವನ್ನು ಅರಿಯದೆ ನಿಂತಿವೆ ಅದರದೇ ಕಲಾಪಗಳಲ್ಲಿ. ನನಗೀಗ ಆತಂಕ ಶುರುವಾಯಿತು. ಬಂದು ಇನ್ನೂ ಐದು ನಿಮಿಷವೂ ಆಗಿಲ್ಲ ಆದರೆ ನನಗೋ ಕಾಯುವುದು ಭಯವಲ್ಲ, ಕಾದರೂ ಸಿಗದಿದ್ದರೆ?! ಇನ್ನರ್ಧ ಗಂಟೆಯಲ್ಲಂತು ನಾನು ಮನೆಯಲ್ಲಿರಬೇಕು; ಏನು ಮಾಡುವುದು ಎನ್ನುವಷ್ಟರಲ್ಲಿ ಮುನ್ನಡೆಯುತ್ತಿದ್ದವಳಿಗೆ ಎದುರಿನ ಕೆಂಚು ಬಣ್ಣದ ಹಸುವು ಮುಖ ತಿರುಗಿಸಿ ನನ್ನ ನೋಡಲು, ನಾನೂ ಅದನ್ನು ಬೇಡುವವಳಂತೆ ದೀನಳಾಗಿ ನೋಡಲು,,,, ಅರೇ?!!!! ಹಸುವು ತನ್ನ ಬಾಲವನ್ನು ಎತ್ತಿ ನಾ ಬೇಡಿದ್ದ ಸುರಿಯಲು ಪ್ರಾರಂಭ!. ನಾ ಖುಷಿಯಿಂದ ಮುಂದೋಡಿ ತಂದಿದ್ದ ಬಾಟಲಿಯ ತುಂಬಾ ತುಂಬಿಸಿಕೊಂಡೆ ನಿರ್ಭಯವಾಗಿ!. ನನಗಾಗ ಎಷ್ಟು ಖುಷಿಯೆಂದರೇ, ನಾನೇನೋ ಸಾಧಿಸಿಬಿಟ್ಟಷ್ಟು ಹರ್ಷವಾಗಿತ್ತು. ಆ ಸ್ಥಳಕ್ಕೆ ಧಾವಿಸಿ ಕೇವಲ ಐದು ನಿಮಿಷದ ಒಳಗೆ ನಾ ಬಂದ ಕೆಲಸವು ಕೈಗೂಡಿದ್ದರೂ ಗಂಜಲದ ನಿರೀಕ್ಷೆಯಲ್ಲಿ ನನ್ನ ಮನವು ಓಡಿದ್ದ ಆ ಆತಂಕಗಳ ಬೀದಿಗಳು ಹಲವು ಕಿಲೋ ಮೀಟರುಗಳಾಗಿದ್ದವು. ಅಂತೂ ಅಂದಿನ ನಮ್ಮ ಮನೆಯ ಪೂಜಾ ಕಾರ್ಯಕ್ರಮವು ಸಾಂಗವಾಗಿಯೇ ನೆರವೇರಿತ್ತು.  ಆ ದಿನದ ನೆನಪು ನನ್ನಲಿ ಎಂದೂ ಮರೆಯದ ಒಂದು ಸುಂದರ ನೆನಪು!

ಹಾಗೆಯೇ ಒಂದು ಸಂಕ್ರಾಂತಿಯ ಹಿಂದಿನ ದಿನ,  ಪಕ್ಕದ ಮನೆಯ ಹಾಲಿನ ವ್ಯಾಪಾರಿಗಳು ನಮ್ಮ ಮನೆಯ ಪಕ್ಕದಲ್ಲಿನ ಪಾರ್ಕಿನಲ್ಲಿ ತಮ್ಮ ಹಸುಗಳನ್ನು ಸಾಲಾಗಿ ಕಟ್ಟಿದ್ದರು. ಸುಮಾರು ಮೂವತ್ತು ಹಸಗಳಿದ್ದಿರಬಹುದು. ಎಲ್ಲವಕ್ಕೂ ಮೈ ತೊಳೆದು ಕರೆತಂದಿದ್ದರು. ಆದಿನ ನಮಗೆಲ್ಲಾ ಬಹಳ ಸಂಭ್ರಮ ಹಳ್ಳಿಯ ವಾತಾವರಣದಿಂದ ವಂಚಿತರಾಗಿದ್ದ ಕಾರಣ ಈ ಆಚರಣೆಗಳೆಲ್ಲಾ ಈ ಹಬ್ಬದ ಕಲ್ಪನೆಗಳಿಗೆ ರಂಗು ತುಂಬುತ್ತಿದ್ದವು. ಕೊಂಬುಗಳಿಗೆ ಬಣ್ಣ ಬಣ್ಣದ ಟೇಪು ಕಟ್ಟಿ, ಅರಿಶಿನ ಕುಂಕುಮಗಳಿಂದ ಸಿಂಗರಿಸಿ ಆ ಮನೆಯ ಹಿರಿ ಸೊಸೆ ಆ ಎಲ್ಲಾ ರಾಸುಗಳಿಗೆ ಪೂಜೆಯನ್ನು ಮಾಡಿತ್ತಿದ್ದರು. ಅವರ ಮಕ್ಕಳು ನನ್ನೊಂದಿಗಾಡುವ ನನ್ನ ಸ್ನೇಹಿತರು. ಅವರೆಲ್ಲಾ ನನಗೆ ಈ ಪೂಜೆಯ ಬಗ್ಗೆ ವಿವರಿಸುತ್ತಿದ್ದರು. ಮುದ್ದು ಮಕ್ಕಳ ಮುದ್ದು ಮುದ್ದು ಸಂಭಾಷಣೆಗಳು. ” ನೋಡು ನಮ್ಮಮ್ಮ ಪೂಜೆ ಮಾಡ್ತಾ ಇದ್ದಾರೆ,, ಎಷ್ಟೊಂದು ಹಸುಗಳಿವೆ ನಮ್ಮಲ್ಲಿ, ನಮ್ಮ ಊರಿನಲ್ಲೂ ಇವೆ ಗೊತ್ತಾ?”. ”ಹೌದೇನೋ ಎಲ್ಲಾ ಹಸೂಗು ಪೂಜೆ ಮಾಡ್ತೀರಾ ಇವತ್ತು? ಊರಲ್ಲೂ ಮಾಡ್ತೀರಾ?!” ನನಗೋ ಬೆರಗು!, ಸ್ನೇಹಿತನನ್ನು ಕೇಳಿ ತಿಳಿಯುತ್ತಲಿದ್ದೆ. ಈ ಬೆರಗೋ, ಮನಸಿನ ಭಾವಗಳಿಗೆ ರೆಕ್ಕೆ-ಪುಕ್ಕ ಹಚ್ಚುವ ಬಣ್ಣದ ಹೂಗಳಂತೆ. ಎಲ್ಲಿ ಯಾವ ಗಿಡದ ಕುರುಹೋ ಏನೋ ಮತ್ತೆಲ್ಲೋ ಕಂಪಾಗಿ ತೇಲಿ ಸೇರುವ ತಂಗಾಳಿ!. ಎಷ್ಟು ಕಂಡರೂ ಸೂಗಸೇ ಈ ಬಾಲ್ಯದ ಕನಸು. ಬೆಚ್ಚಿದ್ದು, ಚೀರಿದ್ದು, ಎದ್ದು-ಬಿದ್ದು ಆಡಿದ್ದು ಎಲ್ಲವೂ ಮುದ ನೀಡುವ ಸುಂದರ ಹಿನ್ನೊಟವೇ ಅಲ್ಲವೇ?!

ನನ್ನಲ್ಲಿ ಈ ನೆನಪುಗಳು, ಗೋವು ಮತ್ತು ಸಂಕ್ರಾಂತಿ ಹೇಗೋ ಒಂದಕ್ಕೊಂದು ಬೆಸೆದುಕೊಂಡುಬಿಟ್ಟಿವೆ. ಸಂಕ್ರಾಂತಿ ಎನುವಾಗ ನನಗೇಕೋ ಮೊದಲು ನೆನಪಾಗುವುದೇ ಹಸುಗಳು!. “ಇಟ್ಟರೆ ಸಗಣಿಯಾದೆ ತಟ್ಟಿದರೆ..........., ಹಚ್ಚಿದರೆ ಒಸಲಿಗೆ ವಿಭೂತಿಯಾದೆ,,, ನೀನ್ಯಾರಿಗಾದೆಯೋ?.... ಎಲೆ ಮಾನವ......... ಹರಿ ಹರಿ ಗೋವು ನಾನು!”......, ಎನುವ ’ಗೋವಿನ ಬಾಳು’ ನಮಗೆ ಆದರ್ಶವಾಗಬೇಕು. ಹಳ್ಳಿಗಾಡಿನ ಬದುಕಿನಲಿ ವರ್ಷಪೂರ್ತಿ ಹೊಲಗದ್ದೆಗಳಲ್ಲಿ ಎತ್ತುಗಳೊಂದಿಗೆ ದುಡಿವ ರೈತ; ಚಳಿಗಾಲ ನಂತರ ಬರುವು ಸೂರ್ಯನು ಹೊರಳುವ ಸಮಯದಿ ತನ್ನ ಗೌರಿ ಮುಖದ ಹಸುಗಳ ಪ್ರೀತಿಸಿ ಪೂಜಿಸಿ ನಲಿಯುವ ಸಂಭ್ರಮಕೆ ಸಂಕ್ರಾಂತಿ ಎಂಬ ಹೆಸರು ಎಂದರೆ ಬಹುವಾಗಿ ಸರಿಯೇ ಎನಿಸುತ್ತದೆ. ಹಬ್ಬದ ಆಚರಣೆಯಲಿ ಕಿಚ್ಚು ಹಾಯಿಸಿ ದನಕರುಗಳ ತುರಿಕೆ ಇತ್ಯಾದಿ ಬಾದೆಗಳಿಂದ ದೂರ ಮಾಡುವನು. ಆಚರಣೆಗಳನ್ನೂ ನಮ್ಮ ಪೂರ್ವಿಕರು ಒಂದು ವೈಙ್ಙಾನಿಕ ಮನೋಭಾವದಿಂದ ರೂಪಿಸಿರುವುದು ಒಂದು ಸೋಜಿಗವೇ ಸರಿ. ಈ ಪರಿಸರದಲ್ಲಿ ಸಹಜವಾಗಿ ಜೀವಿಸೋ ಜೀವಿಗಳ ಸಂಕಷ್ಟಗಳಿಗೆ ಪರಿಸರವೇ ಪರಿಹಾರಗಳಾಗಿವೆ. ಎಷ್ಟೊ ಬಾರಿ ನಮ್ಮನುಭವಗಳಿಗೂ ಬರುವುದುಂಟು. ಗ್ರಹಣ ಕಾಲದ ಉಪವಾಸದ ಹಿನ್ನೆಲೆ, ಈ ಸಮಯದಿ ಸೂರ್ಯನ ನೋಡಬಾರದೆಂಬ ನಿರ್ಬಂಧಗಳು. ಚಳಿಗಾಲದಲ್ಲಿಯೇ ಎಳ್ಳು ತಿನ್ನುವ ಈ ಸುಗ್ಗಿ ಹಬ್ಬ. ಎಳ್ಳಿನಲ್ಲಿ ಎಣ್ಣೆಯ ಅಂಶವಿದ್ದು ಚರ್ಮ ಬಿರುಕು ಬೀಳುವ ಈ ಸಂದರ್ಭದಲ್ಲಿ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇರುವುದು, ಹೀಗೆಯೇ ಅನೇಕ. 

ನಮ್ಮೆಲ್ಲಾ ಹಬ್ಬಗಳ ಹೂರಣವೇ ನಮ್ಮ ಭಾವಗಳು. ಸೋಲು-ಗೆಲುವು, ನಲಿವು-ನೋವುಗಳಿಗೆ ಸೂಚಕವಾಗಿ ನಮ್ಮ ಈ ಆಚರಣೆಗಳು. ಮಾನವ ತನ್ನ ಸ್ವಾರ್ಥಗಳಲ್ಲಿಯೇ ಮುಳುಗಿ ಹೋದ ಈ ಕಾಲದಲಿ ಆಚರಣೆಗಳು ಎಲ್ಲೋ ಒಂದು ಮಾನವೀಯತೆಯ ಜಾಗೃತಿ ಕಾರ್ಯವನ್ನು ಮಾಡುತ್ತಲಿವೆ ಎಂದರೆ ತಪ್ಪಾಗಲಾರದು. ದಾನ-ಧರ್ಮವೆಂಬುದು ಮಾನವನ ನಡೆಯೇ ಹೊರತು ಪುಸ್ತಕದ ಗಂಟಲ್ಲ. ಎಲ್ಲಾ ಧರ್ಮಗಳು ಸಾರುವ ಸಾರವೇ ವಿಶ್ವ ಮಾನವತೆ. ಅದನ್ನು ಹೊರತುಪಡಿಸಿ ಮೌಢ್ಯತೆಗೆ ಧರ್ಮ ಜಾತಿಗಳ ಹೆಸರ ಕಟ್ಟುವುದು ಸೂಚ್ಯವಲ್ಲ. ದೇಶ ಸುತ್ತಿ ಕೋಶ ಓದಿದ ಮೇಲೂ ಈ ಜಾತಿ ಧರ್ಮಗಳ ಹೆಸರಿನಲಿ ಇನ್ನೂ ಹೆಚ್ಚೆಚ್ಚು ಅನಾಚಾರಗಳನ್ನು ಹುಟ್ಟಿಕೊಂಡಿರುವುದು ಒಂದು ದುರಂತವೇ ಸರಿ. ಆದರೂ ಧನಾತ್ಮಕ ಚಿಂತನೆಯುಳ್ಳ ಸಮಾಜ ಮುಖಿ ಪ್ರೇರಣೆಗಳು ಎಲ್ಲಾ ಧರ್ಮಗಳಿಂದಾಚೆ ಜೀವಿಸುವಂತಹ ಬದುಕ ಕಟ್ಟಿಕೊಳ್ಳವ ಹುಮ್ಮಸ್ಸನ್ನು ನೀಡಬೇಕು. ಮನಸ್ಸೊಂದು ಪರಿವರ್ತನೆಯಾದರೆ, ಅದರ ಪ್ರಭಾವದಿ ಹಲವು ಮನಗಳು ಪ್ರಜ್ವಲಿಸುವವು. ದೀಪದಿಂದ ದೀಪದ ಬೆಳಕು ಹರಿವಂತೆ!. ಈ ನಿಟ್ಟಿನಲ್ಲಿ ನಮ್ಮೆಲ್ಲರ ಮನಗಳೂ ಹರಿಯುವಂತಾಗಬೇಕಿದೆ.
*************

ಸಂಜೆಯ ಮಣ್ಣ ಘಮವ ಹೊತ್ತು ತರುವ ಈ ಗೋವುಗಳ ಗೆಜ್ಜೆಯು ಎಚ್ಚರಿಸುತ್ತಲಿವೆ ಶಿವನ ಆಗಮನವ!. ನಂದೀಶ, ರುದ್ರ ಭೂಮಿ ನಾಯಕ, ಸತ್ಯವನೇ ಪ್ರೀತಿಸುವ ಪ್ರೇರಕ. ಸೂರ್ಯರೂಪಿ ಹಗಲೊಳು ಕಾವ್ಯಪ್ರಿಯ ಮನದೊಳು, ರಾತ್ರಿ ಕಾಯೋ ಜಗ ಹೃದಯ!. ಕಾವ್ಯದ ಆತ್ಮ ಹೀಗೆಲ್ಲಾ ಮನವ ತುಂಬೋ ಶಿವನು ಸೂರ್ಯ ಸದನದ ರಾಜನೆಂಬ ಭಾವಕೆ ಮನವು ಮಿಡಿಯದೇ ಉಳಿವುದೆ?!. ಸೂರ್ಯನು ದಿಕ್ಕು ಬದಲಿಸುವ ಸೊಗಸೇ ಈ ಸಂಕ್ರಾಂತಿ ಎನುವಾಗ. ಮಾನಸ ಶಿವನ ನೆನೆಯದೆ ಮುನ್ನಡಿಯಿಡಲಾರೆನೋ ಹರನೇ... 

“ಗೋಧೂಳಿ ಸಮಯ”- 

ಆಗಸದ ರಂಗೆಲ್ಲಾ ಸೂರ್ಯನೋಕುಳಿಯಂತೆ
ತಂಪಾದ ಗಾಳಿಯ ನವಿರು ಸುಳಿವಂತೆ
ಗೆಜ್ಜೆಗೆ ಹೆಜ್ಜೆ ಹಾಕಿ ಜಿಗಿದು ಬರುವ ಸಾರಥಿಯಂತೆ
ಸಿಡಿದು ಎದ್ದೇಳುವ ಭೂತಾಯಿಯ ಮೈ ಧೂಳಿನಂತೆ
ಕಣ್ಮಂಜಾದರೂ ಕೇಳುವ ಕಿವಿಗೆ ಕಂಪಿನ ಮಣ್ಣಿಗೆ ನಾಸಿಕ
ಕಣ್ಣಾರತಿಯಂತೆ;
ಎಷ್ಟು ವರ್ಣಿಸಲೋ ಪ್ರಭುವೆ ನೀ ತೆರಳುವ ಈ ಹೊತ್ತು
ನಮ್ಮನೆ ಗಂಗೆ ತುಂಗೆಯರು
ನಮ್ಮ ತೆಕ್ಕೆಯೊಳು
ನಿನ್ನನೇ ಮತ್ತೆ ಮತ್ತೆ ನೆನೆದಿಹರು ನಿರೀಕ್ಷೆಯಲಿ!
ಸುಂದರವೀ ಗೋಧೂಳಿ!
ಸುಂದರ ನೀ ರವಿ ಮುಖ ಶಿವನೇ!


ಧನ್ಯವಾದಗಳೊಂದಿಗೆ,
ದಿವ್ಯ ಆಂಜನಪ್ಪ,

15/12/2014

ಲೇಖನ

‘ಎಲ್ಲಾ ನ್ಯೂನತೆಗಳಾಚೆ ಮನಸ್ಸು ಜೀವಿಸಲಿ’


ಆ ತಾಯಿ ದಿನವೂ ತನ್ನ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದಳು. ಮಗುವಿಗೆ ಇನ್ನೂ ಮೂರುವರೆ ವರುಷಗಳು. ಒಂದೇ ಬಸ್ಸಿನ ಪ್ರಯಾಣಿಕಳಾಗಿ ನಾನು ಸಹ ಆಗಾಗ ಇವರನ್ನು ಗಮನಿಸುತ್ತಿದ್ದೆನು. ಮಗುವಿಗೆ ಇನ್ನೂ ಸರಿಯಾಗಿ ನಾಲಿಗೆ ಹೊರಳದು, ಕಿವಿಯೂ ತುಸು ಮಂದವೇ. ಹಾಗಾಗಿ ಆಕೆ ಒಂದು ವಿಶೇಷ ಅಗತ್ಯಯುಳ್ಳ ಶಾಲೆಗೆ ಸೇರಿಸಿದ್ದರು. ಮಗು ಮುದ್ದು ಮುದ್ದುಗಿದ್ದು ಬಸ್ಸಿನ ಎಲ್ಲರ ಗಮನವನ್ನು ಸೆಳೆದಿತ್ತು. ಹಾಗೆಯೇ ಅಕ್ಕಪಕ್ಕದವರನ್ನು ಮುಟ್ಟಿ ಮುಟ್ಟಿ ಮಾತನಾಡಿಸಿ ನಕ್ಕು ಮನ ಗೆದ್ದಿತ್ತು. ಮಗುವಿನ ಮುಗ್ಧತೆಯು ಅದರ ನ್ಯೂನತೆಯನ್ನು ನಮ್ಮೆಲ್ಲರ ಮನಗಳಿಂದ ಮರೆಮಾಚಿಬಿಟ್ಟಿತ್ತು. ಒಂದಷ್ಟು ಹೊತ್ತು ಸುಮ್ಮನೆ ಆ ತಾಯಿ ಮತ್ತು ಮಗುವನ್ನು ನೋಡುತ್ತಾ ಕುಳಿತೆ, ಆ ತಾಯಿ ತನ್ನ ಸುತ್ತಲಿನ ಜಗವನ್ನೇ ಮರೆತು ತನ್ನ ಮಗುವನ್ನು ಮುದ್ದಿಸುತ್ತ್ಳಿದ್ದಳು. ಎಷ್ಟು ಪ್ರೀತಿ?! ಏನೇನೋ ತುಂಟತನದಿ ಮಾತನಾಡಿಸುತ್ತ ಮಗುವನ್ನು ನಗಿಸುತ್ತಿದ್ದಳು. ಮಗುವಿನ ಸ್ವಚ್ಛಂದ ನಗುವಿನಲ್ಲಿ ತನ್ನೆಲ್ಲಾ ನೋವನ್ನು ಮರೆಯುತ್ತಿದ್ದಳೋ ಏನೋ ಆ ತಾಯಿ; ಮನಸ್ಸಿಗೆ ತುಸು ಘಾಸಿ ಎನಿಸಿತು. ತನ್ನ ಮಗುವು ಎಲ್ಲರಂತೆ ಮಾತನಾಡಿ, ಕೇಳುವಂತ್ತಿದ್ದರೆ ಎಷ್ಟು ಚಂದವಿತ್ತೋ ಆ ತಾಯಿಗೆ. ಮುಂದೆ ಅವರ ನಿಲ್ದಾಣದಲ್ಲಿ ಇಳಿದು ಹೋದರು. ಇದಾದ ಎಷ್ಟೊ  ತಿಂಗಳುಗಳ ನಂತರ ಮತ್ತೆ ಕಂಡಾಗ; ಸೌಮ್ಯವಾಗಿದ್ದ ಮಗುವು ಈಗ ಹೆಚ್ಚು ಹಟಮಾರಿಯಾಗಿದೆ. ಕಿವಿಗೆ ಅಳವಡಿಸಿದ ಹಿಯರಿಂಗ್ ಏಡ್ನಿಂದ ಚೆನ್ನಾಗಿ ಕೇಳುತ್ತಿದ್ದು ಮಾತನ್ನು ಆಡುತ್ತಲಿದೆ ಆದರೆ ಏನೋ ತುಸು ಒರಟುತನವಿದ್ದಂತೆ ಭಾಸವಾಯಿತು. ತಾಯಿಯ ಮಾತನ್ನು ಈಗ ಕೇಳುತ್ತಿಲ್ಲ; ಆ ಅಮ್ಮನಿಗೋ ಬಹಳ ಆತುರವಾಗಿದೆ. ಬೇಗ ಬೇಗನೆ ಎಲ್ಲವನ್ನೂ ಮಗುವು ಕಲಿತುಬಿಡಬೇಕು. ಈಗ ಮುದ್ದಿಗೆ ಸಮಯವಿಲ್ಲ. ಬಸ್ ಪ್ರಯಾಣದ ದಾರಿಯುದ್ದಕ್ಕೂ ಈಗ ಅವರದು ಬರೀ ಪಾಠವೇ ಆಗಿದೆ. ಅವರು ಬಸ್ ಹತ್ತಿದಾಗಿನಿಂದ ಇಳಿವವರೆಗೂ ಒಂದೇ ಏರು ದ್ವನಿ!. ಅವರ ಮಾತನ್ನು ಮಗುವು ಕೇಳುತ್ತಿಲ್ಲ; ಅವರ ಜೋರು ಮಾತುಗಳಿಗೆ ಬಸ್ಸಿನ ಜನರೆಲ್ಲರೂ ಕಿರಿಕಿರಿಗೊಳ್ಳುತ್ತಿದ್ದರು. ಅವರು ಇಳಿದು ಹೋದ ನಂತರ ಬಸ್ಸಿನ ಚಾಲಕರು ಹೇಳಿದ ಮಾತಿಗೆ ನನಗೋ ಎದೆ ಝಲ್ಲೆಂದು ಹೋಯ್ತು. ''ಆ ಮಗುಗೆ ಕಿವಿ ಕೇಳಿ ಮಾತಾಡುತ್ತೋ ಇಲ್ವೋ ಆದರೆ ಆಯಮ್ಮ ಹೀಗ್ ಹೊಡ್ಕೊಂಡ್ ಹೊಡ್ಕೊಂಡ್ ಇವರೇ ಬೇಗ ಹೋಗ್ಬಿಡ್ತಾರೆ"!… ಮನಸ್ಸಿಗೇಕೋ ಬಹಳ ಬೇಸರವೆನಿಸಿತು. 

ಅಂಗವಿಕಲತೆ ಎಂಬುದು ಹುಟ್ಟಿನಿಂದಲೋ ಇಲ್ಲವೆ ಕೆಲವು ಆಕಸ್ಮಿಕ, ಅಪಘಾತಗಳಿಂದಲೋ ಬರುವುದುಂಟು. ವಿಕಲತೆಗಳನ್ನು ಹೀಗೆ ಹೇಳಬಹುದು; ದೃಷ್ಠಿ ದೋಷ, ಶ್ರವಣ ದೋಷ, ವಾಕ್ ದೋಷ (ಮಾತು ಬಾರದಿರುವುದು), ಬುದ್ದಿ ವಿಕಲತೆ ಇಲ್ಲವೆ ಮಂದ ಬುದ್ದಿ, ದೈಹಿಕ ವಿಕಲತೆ (ಮೂಳೆ ವಕ್ರತೆ ಇತ್ಯಾದಿ), ಬಹುವಿಕಲತೆ, ಕಲಿಕೆಯಲ್ಲಿ ಹಿಂದುಳಿದವರು ಎಂದು ಗುರ್ತಿಸಲಾಗಿದೆ. ಮಗುವೊಂದು ಒಂಭತ್ತು-ಹತ್ತು ತಿಂಗಳಿನಲ್ಲಿ ಶಬ್ದವಾದಲ್ಲಿ ತಿರುಗಿ ನೋಡದೆ ಉಳಿವುದು ಮುಂದುವರೆದರೆ ಅದಕ್ಕೆ 'ಶ್ರವಣ ದೋಷ'ವಿರುವ ಸಂಭವವಿದೆ. ಜಾಗೃತರಾಗಿ ಚಕಿತ್ಸೆಯನ್ನು ಪ್ರಾರಂಭಿಸಿದ್ದಲಿ ಮಗುವು ಶೀಘ್ರದಲ್ಲಿ ಗುಣಮುಖವಾಗಲೂ ಬಹುದು. ವಯಸ್ಕರಾದಾಗ ಎಲ್ಲರಂತೆಯೇ ಜೀವನವನ್ನೂ ಸಾಗಿಸಬಹುದಾಗಿದೆ. ಕಿವಿ ಕೇಳುವುದು ನಿಂತಲ್ಲಿ ಅಲ್ಲಿ ಮಾತನ್ನು ಆಲಿಸುವ ಸಾಮರ್ಥ್ಯವಿಲ್ಲದೆ 'ಮಾತು' ಕಲಿಯಲೂ ಸಹ ಮಗುವಿಗೆ ಸಾಧ್ಯವಾಗುವುದಿಲ್ಲ. 'ದೃಷ್ಠಿ ದೋಷ' ತದನಂತರದ ವಯಸ್ಸಿನಲ್ಲಿ ಮಾತ್ರ ಕಂಡಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಶಾಲೆಗೆ ಹೋಗುವಂತಹ ಇಲ್ಲವೆ ಮಾತನಾಡುವಂತಹ ಮಕ್ಕಳಲ್ಲಿ ಈ ದೋಷವನ್ನು ಕಂಡುಕೊಳ್ಳವರು. ಉಳಿದಂತೆ ಹಿರಿಯರ ಗಮನಕ್ಕೆ ಬರುವುದು ತೀರಾ ವಿರಳ. 'ಬುದ್ದಿ ವಿಕಲ್ಯ'ವು ಆರಂಭಿಕ ಎರಡು ಮೂರನೇ ವಯಸ್ಸಿನಲ್ಲಿ ಅರಿವಿಗೆ ಬರುವಂತಹುದು. ಇತರೆ ಮಕ್ಕಳಂತೆ ಮಾನಸಿಕ ಬೆಳವಣಿಗೆಯನ್ನು ತೋರದಿದ್ದ ಸಂದರ್ಭದಲ್ಲಿ ಶಂಕಿಸಬಹುದಾಗಿದೆ. ಎಲ್ಲರಿಗೂ ತಮ್ಮ ಮಕ್ಕಳು ಸ್ವಸ್ಥರಾಗಿದ್ದಾರೆಂಬ ಭಾವವಿರುತ್ತದೆ. ಆಕಸ್ಮಿಕವಾಗಿ ಗಮನಕ್ಕೆ ಬಂದಾಗಲೇ ಅವರು ಎಚ್ಚೆತ್ತುಕ್ಕೊಳ್ಳುವರು. ಅದಲ್ಲದೆ ಸ್ವಯಂ ಇಚ್ಛೆಯಿಂದಲೂ ಮಕ್ಕಳಿಗೆ ಈ ಕುರಿತು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಹುಟ್ಟಿನಿಂದಲೇ ಬೆಳವಣಿಗೆಯಲ್ಲಿ ದೋಷವಿದ್ದು; ಮೂಳೆಗಳು ವಕ್ರವಾಗಿ ಬಾಗಿ 'ದೈಹಿಕ ಅಂಗವಿಕಲತೆ'ಯು ಉಂಟಾಗಬಹುದು. ಇನ್ನು ಕಲಿಕೆಯಲ್ಲಿ ಹಿಂದುಳಿದವರು ಎಂದಾಗ; ಎಷ್ಟೇ ಕಷ್ಟಪಟ್ಟು ತಮ್ಮ ಮಗುವು ಓದಿದರೂ, ಇನ್ನಿಲ್ಲದೆ ಶ್ರಮಪಟ್ಟರೂ ಅದೇಕೋ ಪರೀಕ್ಷೆಗಳಲ್ಲಿ ಏನೂ ಬರೆಯದೆ ಬರುತ್ತಾನೆ/ತ್ತಾಳೆ ಎನ್ನುವ ಪೋಷಕರ ಆತಂಕ್ಕಕ್ಕೆ ಮಗುವಿನ ಪರಿಸ್ಥಿತಿಯ ಅಂದಾಜಿರುವುದಿಲ್ಲ. ಇದನ್ನೇ ನಾವು ಕಲಿಕೆಯಲ್ಲಿ ಹಿಂದುಳಿಯುವಿಕೆಗಳೆಂದು ಶಾಲಾ ಹಂತಗಳಲ್ಲಿ ಗುರ್ತಿಸಲಾಗುತ್ತದೆ. ಮತ್ತೆ ಮತ್ತೆ ಆಲಿಸುವುದು, ಓದುವುದು ಮತ್ತು ಬರೆಯುವುದು. ವಸ್ತಗಳನ್ನು ಮುಟ್ಟಿ ನೋಡಿ ಕಲಿವುದು, ಚಿತ್ರ-ಚಲನ ಚಿತ್ರಗಳನ್ನು ವೀಕ್ಷಿಸಿ ಅರ್ಥ ಮಾಡಿಕೊಳ್ಳುವುದು, ಹೆಚ್ಚಿನ ಪುನರಾವರ್ತನೆಯೇ ಇದಕ್ಕೆ ಪರಿಹಾರ. ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಮೇಲೆ ಕಂಡ ಎರಡಕ್ಕೂ ಹೆಚ್ಚಿನ ನ್ಯೂನತೆಗಳು ಒಬ್ಬರಲ್ಲೇ ಕಂಡುಬಂದಲ್ಲಿ ಅದನ್ನು 'ಬಹುವಿಕಲತೆ'ಯೆಂದು ಹೇಳಲಾಗುವುದು.

ಹುಟ್ಟಿನಿಂದಲೂ ಆರೋಗ್ಯವಾಗಿದ್ದು ನಂತರದ ದಿನಗಳಲ್ಲಿ ಯಾವುದೋ ಒಂದು ಅಪಘಾತದಿಂದಲೂ ಈ ಮೇಲಿನ ಯಾವುದೇ ವಿಕಲತೆಯುಂಟಾಗಬಹುದು. ಅನುವಂಶೀಯತೆಯಿಂದಲೂ ಕೆಲವು ಬಾಧಿಸಬಹುದು. ಇವುಗಳಲ್ಲದೆ ರೋಗಗಳಿಗೆ ತುತ್ತಾಗಿಯೂ ವಿಕಲತೆಯುಂಟಾಗಬಹುದು. ಉದಾ; ಪೋಲಿಯೋ. ಉಚಿತ ಸಂದರ್ಭದಲ್ಲಿ ಔಚಿತ್ಯ ಚಿಕಿತ್ಸೆ/ಲಸಿಕೆಗಳನ್ನು ನೀಡದ ಕಾರಣ ಮಕ್ಕಳು ಮುಂದೆ ಅಸಾಮಾನ್ಯ ಸ್ಥಿತಿಗಳಿಂದ ಧೃತಿಗೆಡುವಂತಾಗುತ್ತದೆ. 

ನ್ಯೂನತೆಯುಳ್ಳ ಮಕ್ಕಳ ಇಂತಹ ಸ್ಥಿತಿಗೆ ತಂದೆ-ತಾಯಿಯರೂ ಸಹ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹತಾಶರಾದ ಪೋಷಕರೆದುರು ಮತ್ತೂ ಜರ್ಜರಿತರಾದ ಮಕ್ಕಳನ್ನು ಸಮಾಜದಲ್ಲಿ ಅಂದು 'ಕುರುಡ', 'ಕಿವುಡ', 'ಮೂಗ', 'ಕುಂಟ', 'ಹುಚ್ಚ/ಚ್ಚಿ' ಎಂದೋ ಕರೆಯುವ ಕುಹುಕವಿತ್ತು. ಅದೊಂದು ಗತ ಕಾಲ. ಆ ರೀತಿಯ ಮಾನಸಿಕವಾಗಿ ಹಿಂಸಿಸುವ ಯಾವ ಪರ್ಯಯ ಪದವನ್ನೂ ಕರೆಯುವಂತಿಲ್ಲ. ಇದು ಎಷ್ಟೊ ಜನರಿಗೆ ಇನ್ನೂ ಅರಿವಿಗೆ ಬಂದಿಲ್ಲವೇನೋ ಎಂದೆನಿಸುತ್ತದೆ. ಅಸಹಾಯಕರಿಗೆ ಸಹಾಯದ ಹಸ್ತ ಚಾಚೋಣ ಸಾಧ್ಯವಿದ್ದರೆ; ಇಲ್ಲದಿರೆ ಅವರಂತೆ ಅವರನ್ನು ಹಿಂಸಿಸದೆ ಬಿಟ್ಟುಬಿಡೋಣ. ಜರಿದು ನೋಯಿಸಿ ಅಮಾನವೀಯತೆಯ ಮೆರೆವುದು ಬೇಡ. 

ಸರ್ಕಾರದಿಂದ ಅನೇಕ ಸವಲತ್ತುಗಳಿವೆ ಎಂದು ನಾವು ಕೇಳಿರುವುದುಂಟು. ಮೀಸಲಾತಿಗಳಿವೆ ಎಂಬುದೂ ಕೂಡ ಗೊತ್ತು. ಆದರೂ ಅದನ್ನು ಪಡೆಯಲು ಅವರು ಅದೆಷ್ಟು ಪರದಾಡಬೇಕೆಂದು ಅವರಿಂದಲೇ ಕೇಳಿ ತಿಳಿಯಬೇಕು. ಕೆಲವೊಂದು ಸಂದರ್ಭದಲ್ಲಿ ಕೇಳಿ ಬಂದ ಆಕ್ರೋಶ; ''ನನಗೆ ಇಂತಹ ನ್ಯೂನತೆಯಿದೆ ಸರ್ಟಿಫೈ ಮಾಡಿಕೊಡಿ ಎಂದು ಹೋಗಿದ್ದೆ; ಪರೀಕ್ಷಿಸಿ ಅಂತಹ ಪರ್ಸೆಂಟೇಜಿನಲ್ಲಿ ಏನಿಲ್ಲ, ನಿಮಗೆ ಈ ಮೀಸಲಾತಿ/ಸೌಕರ್ಯ ದೊರಕದು, ಎಂದು ಹೇಳಿ ನಮ್ಮನ್ನು ಹೊರಗಟ್ಟಿದರು'' ಆಕಸ್ಮಿಕವಾಗಿ ಕಾಲ್ಬೆರಳುಗಳನ್ನು ಕಳೆದುಕೊಂಡ ವೃದ್ಧೆಯ ನೋವಿದು. ದೃಷ್ಟಿ ದೋಷವಿರುವ ಒಬ್ಬ ಹುಡುಗನನ್ನು ಆ ಪೋಸ್ಟಾಫೀಸಿನಲ್ಲಿ ಸಲಹೆಗಾರನಾಗಿ ಕೂರಿಸಲಾಗಿತ್ತು. ಅದರೊಟ್ಟಿಗೆ ಅವರು ಟೋಕನ್ ಮಿಶನ್ ಹತ್ತಿರ ಕುಳಿತು ಬಂದವರಿಗೆ ಸಂಬಂಧಪಟ್ಟ ಕೌಂಟರಿನ ಟೋಕನ್ ಕೂಡ ಕೊಡುತ್ತಿದ್ದರು. ಯುವಕರಿಗಲ್ಲದಿದ್ದರು ಬಹು ಸಂಖ್ಯೆಯಲ್ಲಿ ಬರುವ ವೃದ್ಧರಿಗೆ ಇದು ಬಹಳ ಸಹಕಾರಿಯೇ ಆಗಿತ್ತು. ಆದರೂ ಅದೇ ಪೋಸ್ಟಾಫೀಸಿನ ಯುವ ಕೆಲಸಗಾರ ಆತನ ಹಿಂದೆ ಮಾತನಾಡುತ್ತಾನೆ, ''ಈ ಕುರುಡನಿಗೊಂದು ಸಂಬಳ ವೇಸ್ಟು, ಒತ್ತುತ್ತಾನೆ ಟೋಕನ್ ಕೊಡ್ತಾನೆ, ಇಷ್ಟೇ ಅವನ ಕೆಲಸ,, ಹ್ಹ ಹ್ಹ ಹ್ಹ " ಎಂದು ಗ್ರಾಹಕರ ಮುಂದೆಯೇ ನಗುತ್ತಾನೆ. ವಿದ್ಯಾವಂತರಾಗಿ ಒಂದು ಇಲಾಖೆಯಲ್ಲಿ, ಒಂದು ಸಮೂಹದಲ್ಲಿ ಒಬ್ಬ ಮಾನವೀಯ ವ್ಯಕ್ತಿಯಾಗಿ ನೆಡೆದುಕೊಳ್ಳಲಾರದವರು ಅದು ಯಾವ ರೀತಿಯ ಓದಿದವರೋ?! ಎನಿಸಿಬಿಟ್ಟಿತು. ಹಾಗೆಯೇ ಮೊನ್ನೆ ಮೊನ್ನೆಯಷ್ಟೇ ದೂರದರ್ಶನದ ಖಾಸಗಿ ಚಾನಲ್ನೊಂದರಲ್ಲಿ ಪ್ರಸಾರವಾದ "ವೀಕೆಂಡ್ ವಿತ್ ರಮೇಶ್''ನಲ್ಲಿಯೂ ಒಂದಿಬ್ಬರು ತೀವ್ರ ಅಂಗವಿಕಲರ ಸಂದರ್ಶನ-ಸಂವಾದ ಕಾರ್ಯಕ್ರಮವು ''ನ್ಯೂನತೆಯು ಸಾಧನೆಗೆ ತೊಡಕೇ ಅಲ್ಲ'' ಎಂಬುದಕ್ಕೆ ಇಂಬು ನೀಡಿತ್ತು. ಅಂತಹವರನ್ನು ಗುರ್ತಿಸಿ ಗೌರವಿಸಿತ್ತು. ಇದೊಂದು ಸಮಾಜದ ಉತ್ತಮ ನಡೆ ಎನ್ನುವ ಹರ್ಷವಿದೆ. ಸವಲತ್ತುಗಳು ಏನೇ ಇರಲಿ ಆದರೆ ಅವರು ಕಳೆದುಕೊಂಡಿರುವ, ಕಳೆದುಕೊಳ್ಳುತ್ತಿರುವ ಜೀವನದ ಸುಂದರ ಕ್ಷಣಗಳನ್ನು ನಾವ್ಯಾರೂ ಅವರಿಗೆ ನೀಡಲಾರೆವು. ಅಂತಹವರನ್ನು ನೋಡಿ ಹೀಯಾಳಿಸುವುದು ಬೇಡ, ಅವರ ಸವಲತ್ತಿಗೆ  ಕರುಬುವುದೂ ಬೇಡ. ವಿದ್ಯೆ ಹೆಚ್ಚಿದಷ್ಟೂ ನಮ್ಮಲ್ಲಿ ಅಹಂ ಕರಗಿ ಸರಳತೆಯು ಮೆರೆಯಬೇಕು. ಅದುವೇ ಸಂಪೂರ್ಣ ಜೀವನ. 

ಪ್ರಕೃತಿಯಲ್ಲಿ ಹಲವು ಜೀವಿಗಳಿವೆ. ಕೆಲವು ಪ್ರಬಲವಾದರೆ ಮತ್ತೆ ಹಲವು ದುರ್ಬಲವು, ಒಂದನ್ನೊಂದು ತಿಂದು ಬದುಕುವ ರೀತಿಗೆ 'ಪ್ರಾಣಿಗಳು' ಎಂದು ಕರೆದುಬಿಟ್ಟೆವು. ತನ್ನ ಬುದ್ದಿವಂತಿಕೆಯಿಂದ, ಮಾತನಾಡುವ ಕಲೆಯಿಂದ, ಭಾವನೆಗಳಿಂದ ಉಳಿದ ಎಲ್ಲಾ ಪ್ರಾಣಿಗಳಿಗಿಂತ 'ಮಾನವ' ಶ್ರೇಷ್ಠನೆಂದು ಎನಿಸಿಕೊಂಡಿದ್ದಾನೆ. ಅದರಂತೆ ತನ್ನದೇ ಸಂಕುಲದಲ್ಲಿ ಹೀಗೆ ಹುಟ್ಟಿಕೊಂಡ ಬಲಹೀನರು, ಹಿಂದುಳಿದವರು, ವಿಶೇಷ ಅಗತ್ಯವುಳ್ಳವರನ್ನು ಹೇಗೆ ಮತ್ತು ಏಕೆ ದೂರವಿಟ್ಟು ತನ್ನಲ್ಲೇ ತಾ ಭೇದವೆಸಗುತ್ತಾನೆ. ಚಿಂತನಾಶಕ್ತಿಯುಳ್ಳ ಮನುಜನು ಮಾನವೀಯತೆಯನ್ನಪ್ಪಿಕೊಳ್ಳಲಿ…. 

 ಧನ್ಯವಾದಗಳೊಂದಿಗೆ,


ದಿವ್ಯ ಆಂಜನಪ್ಪ
೧೯/೧೨/೨೦೧೪