Sunday, 16 February 2014

ಮನದ ಮಾತು

ಇಂದಿನ ಜೀನ್ಸ್ ಟಾಕ್ನಲ್ಲಿ ಅಂಜಲಿ ರಾಮಣ್ಣನವರ ಲೇಖನವನ್ನು ಓದುತ್ತಿದಂತೆಯೇ ಅದರಲ್ಲಿ ಹೆಣ್ಣೊಬ್ಬಳು ತನ್ನ ಗಂಡ ಹೊಡೆದರೂ ಬಡಿದರೂ ಅದನ್ನು ಸಹಿಸುವುದು ಸರಿಯೇ, ಏಕೆಂದರೇ ಅಸ್ತಮವಿದ್ದರೂ ಮದುವೆಯಾಗಿ ಬಾಳನ್ನು ಕೊಟ್ಟಿದ್ದಾನೆಂಬ ಮಾತು ಏಕೋ ನನ್ನನು ಒಮ್ಮೆಲೇ ರೇಗಿಸಿ ಬಹುವಾಗಿ ಕಾಡಿಬಿಟ್ಟಿತು. 

ನಿಟ್ಟುಸಿರಿನೊಂದಿಗೆ ಯೋಚಿಸಿದ್ದೂ ಇದೆ. ಹೆಣ್ಣಿನ ಈ ಅಸಹಾಯಕತೆಗೆ ಕಾರಣವೇನು? ಹೆಣ್ಣಷ್ಟೇಯೇ?, ತಂದೆ ತಾಯಿಯರೇ?, ಈ ಸಮಾಜವೇ? ಅಥವಾ ಅವಳ ದೈಹಿಕ ದೌರ್ಬಲ್ಯವೇ? ಭಾವುಕ ಮನಸ್ಸೇ? ಹೌದು ಇವೆಲ್ಲವೂ ಕಾರಣವೇ ಸರಿ. ಒಂದನ್ನು ಬಿಟ್ಟು; ಹೆಣ್ಣು ಎನ್ನುವ ಕಾರಣ. ಹೆಣ್ಣೊಬ್ಬಳು ಎಷ್ಟೇ ಓದಿದ್ದರೂ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಆಕೆಯನ್ನು ಮನೆಯವರು ಮತ್ತು ಸಮಾಜವು ಒಬ್ಬ ಸಂಸಾರಸ್ಥೆಯಾಗಿಯೇ ನೋಡಲು ಬಯಸುತ್ತದೆ. ಏನೂ ನಷ್ಟವಿಲ್ಲದೆ ತನ್ನ ದುಡಿಮೆಯಲ್ಲಿಯೇ ಬದುಕಿದರೂ ತನ್ನದೇ ತವರಿನಲ್ಲಿ ಆಕೆ ಉಳಿವಂತಿಲ್ಲ. ಯಾರನ್ನಾದರೂ ಮದುವೆಯಾಗಲೇ ಬೇಕು, ಸಂಸಾರ ಹೂಡಲೇಬೇಕು. ಆ ಗಂಡು ಇಷ್ಟವಾಗಲಿ ಅಸಮರ್ಥನಾಗಿರಲಿ ಇನ್ಯಾವುದೇ ನ್ಯೂನತೆಯಿರಲಿ ಲೆಕ್ಕಿಸದೇ ಪ್ರಶ್ನಿಸದೇ ಮದುವೆಯಾಗಬೇಕು. ಅದೇ ಗಂಡು ಮದುವೆಗೆಂದು ಹುಡುಗಿ ನೋಡುವಾಗ ಎಲ್ಲವನ್ನೂ ಕೂಲಂಕುಷವಾಗಿ ಪರೀಕ್ಷಿಸಿ ಯೋಗ್ಯಳೇ ಎಂದಳೆದು, ಸರಿಯಾಗಿ ತೂಗಿ ಇಂತಹುದೇ ರೀತಿಯಲ್ಲಿ ಮದುವೆ ಮಾಡಿಕೊಡಬೇಕಾಗಿ ಅಪೇಕ್ಷೆನನ್ನಿಡುತ್ತಾನೆ. 

ಯಾಕೆ ಹೀಗೆ?, ಗಂಡಿಗೇಕೆ ಅಷ್ಟು ಪ್ರಾಮುಖ್ಯತೆ ಹೆಣ್ಣಿಗಿಲ್ಲದ್ದು? ಹೆಣ್ಣೊಬ್ಬಳ "ಒಬ್ಬ ಬಾಳು ಕೊಟ್ಟ" ಎನ್ನುವ ಮಾತು ಏಕೋ ಕರುಳು ಕಿವುಚಿದ ಅನುಭವವಾಗುತ್ತದೆ ನನಗೆ. ಸಮಾಜ ಎಂತಹ ಸ್ಥಿತಿಗೆ ಹೆಣ್ಣನ್ನು ತಂದು ನಿಲ್ಲಿಸಿದೆ. ಹುಟ್ಟಿನಿಂದಲೂ ಅಷ್ಟೇ ಏನೇ ಕೇಳಲಿ ಏನೇ ಬೇಡಿಕೆಯನ್ನಿಡಲಿ ತಂದೆತಾಯಿಯರು ಎಲ್ಲವನ್ನೂ ಅವಳ ಮದುವೆಗೇ ತಾಗಿಸಿ ನಿಲ್ಲುಸುತ್ತಾರೆ. ನಾನು ಹೈಸ್ಕೂಲ್ ಕಾಲೇಜು ದಿನಗಳಲ್ಲಿ ಅಪ್ಪನನ್ನು ಏನೇ ಒಡವೆ ವಸ್ತ್ರ ವಿಶೇಷವಾಗಿ ಬೇಡಿಕೆಯನ್ನಿಟ್ಟರೂ ಅವೆಲ್ಲವೂ ನಿನ್ನ ಮದುವೆಗೆ ಕೊಡುವೆ ಅನ್ನುತ್ತಿದ್ದರು. ನನಗೋ ಕೋಪ ಉರಿದು ಹೋಗುತ್ತಿತ್ತು. ಎಲ್ಲದಕ್ಕೂ ಹೀಗೆ ಹೇಳುವಾಗ ಏಕೋ ನನಗೆ ಮದುವೆಯೇ ಬೇಡವೆನಿಸಿದ್ದು ನಿಜವೇ. ಕೊನೆಗೆ ಸರ್ಕಾರಿ ಶಾಲೆಗೆ ನೇಮಕವಾದೆ. ಮನೆಯ ಹತ್ತಿರವೇ ವಿದ್ಯಾಭ್ಯಾಸ ಮುಗಿಸಿದ ನಾನು ಶಾಲೆಗೆಂದೇ ನಾ ಬಸ್ ಹತ್ತಿದ್ದು. ದಿನವೂ ಎರಡೆರಡು ಗಂಟೆ ಪ್ರಯಾಣ ಮಾಡಿ ದಣಿಯುತ್ತಿರುವಾಗ ಅಪ್ಪನ ಮಾತು, ''ನೋಡು ನೀ ಮದುವೆ ಆದ್ರೆ ಈ ಕಷ್ಟವೆಲ್ಲಾ ತಪ್ಪುತ್ತಪ್ಪ, ಗಂಡ ಅನ್ನೊವ್ನು ನಿನ್ನ ಕರ್ಕೊಂಡ್ ಹೋಗಿ ಕರ್ಕೊಂಡ್ ಬರ್ತಾನೆ ನಿನ್ ಕಷ್ಟಕ್ಕೆಲ್ಲಾ ಆಗ್ತಾನೆ....." ಇನ್ನೂ ಏನೇನೋ ಒಂದೇ ಸಮನೆ ಒದರುತ್ತಿದ್ದರು. ಕೇಳಿ ಕೇಳಿ ನನಗೂ ಹಿಂಸೆ. ಈಗಲೂ ಅದೇ ರಾಗ ಏನೂ ಬದಲಾಗಿಲ್ಲ ಅನ್ನಬಹುದು. ಅಪ್ಪನದು ತಪ್ಪು ಎನ್ನುವುದಕ್ಕಿಂತ ಸುತ್ತ ಸಮಾಜವೇ ಹಾಗಿದೆ. ಸಮಾಜದಲ್ಲಿ ಇರುವಂತ್ತಿದ್ದರೆ ಅದರಂತಿರು ಎನ್ನುವ ಸೂತ್ರ ಬೇರೆ. ಬೇಸತ್ತು ಹೋಗಿದೆ ಈ ವ್ಯವಸ್ಥೆಗೆ.

ತಂದೆ ತಾಯಿಯರು ಹೆಣ್ಣು ಮಕ್ಕಳನ್ನು ತಮ್ಮೊಂದಿಗೆ ಇರಿಸಿಕೊಳ್ಳಲಾರರು; ಕಾರಣಗಳೇನೇ ಇರಲಿ ಸಾವಿರ, ಒಬ್ಬಳೇ ಮಹಿಳೆ ಮನೆಯೊಂದರಲ್ಲಿರಲು ಮತ್ತೂ ಭಯ; ಹೀಗಿರಲು ಇದೊಂದೇ ದೊಡ್ಡ ದೌರ್ಬಲ್ಯವಾಗಿ ಹೆಣ್ಣು ಸೋಲುತ್ತಾಳೆ. ಮತ್ತದೆ, ತನಗೇ ಬಾಳನ್ನು ಕೊಟ್ಟ ಗಂಡೆಂದು ಕೊಂಡಾಡುವ ಪರೀಸ್ಥಿತಿ!! ತನ್ನಂತೆಯೇ ಜನಿಸಿದ ಗಂಡು ಒಮ್ಮೆಲೆ ದೇವನಾಗಬೇಕು, ದೇವನಾಗಿಸಬೇಕು..... 


16/02/2014

Saturday, 15 February 2014

ಕೆಲವೊಮ್ಮೆ ನಮಗೆ ಬೇಕಿರುವುದೇ ಕಳೆದಿರುತ್ತೇವೆ
ಮತ್ತೆನೆಲ್ಲಾ ಪಡೆದಿರುತ್ತೇವೆ
ಸಿಗದಿದ್ದನ್ನೇ ಹೆಚ್ಚು ಅರಸುತ್ತೇವೆ
ಅರಸುವುದಕೇ ನಾ ಅರಸಿಯೆಂಬಂತೆ
ನಿರಂತರವಾಗಿ ಏನನ್ನಾದರೂ ಅರಸದಿದ್ದರೆ
ನಿಂತಬಿಡುತ್ತೇವೇನೋ?
ನಮ್ಮ ಬಿಂದುವೊಳು ನಾವೇ ಬಂಧಿಯಾಗಿ 
 — feeling lonely.


16/02/2014

ಕವನ


ಪ್ರೀತಿ

ಬದುಕಿನ ಅಡುಗೆ ಮನೆಯಲೊಮ್ಮೆ
ಆಕಸ್ಮಿಕವೆಂಬಂತೆ ಒಲವಾಯಿತು
ಬೆಂಕಿಗೂ, ಬೆಣ್ಣೆಗೂ ಹೇಗೋ..

ಉರಿವ ಬೆಂಕಿಗೆ ಬೆಣ್ಣೆಯ ಬಳಿಸಾರುವ ಬಯಕೆ
ಬೆಣ್ಣೆಗೋ ಬೆಂಕಿಯೊಳು ನಲಿದಾಡುವ ತವಕ,
ಇಬ್ಬರಿಗೂ ಅರಿವಿದೆ ಹತ್ತಿರವಾದರದೇ ಅಂತ್ಯ.

ತಮ್ಮನ್ನು ತಾವೇ ಬಹುವಾಗಿ ಬೇಡಿಕೊಂಡು
ವಿರಹದಿ ಬೆಂದ ಭಾವ ಜೀವಿಗಳೆರಡೂ ನಿರ್ಧರಿಸಿಬಿಟ್ಟವು,
ಕಣ್ಣೋಟಗಳೊಂದೇ ಸೇತುವೆ, ಮೌನವೇ ಮಾತು,

ಉರಿವ ಬೆಂಕಿ ಉಳಿದರೂ, ಬಿಸಿ ತಾಗಿ ಬೆಣ್ಣೆಯು 
ಇಲ್ಲವಾಗುವುದು; ಆದರೇನಂತೆ?
ನಮ್ಮಿಬ್ಬರ ಮಿಲನದಾಹುತಿ
ಆಗಬಹುದು ದೇವನ ತುಪ್ಪದಾರತಿ.

ಸಾವಿರ ಕಾಲ ಉಳಿದು ಕೊಳೆವುದಕ್ಕಿಂತ
ನಿನ್ನೊಲವೊಳು ಅರೆಕ್ಷಣ ಮುಳುಗಿ ಕರಗಿದರೂ
ನನ್ನ ಬಾಳದು ಲೇಸೆನುತ, ಬೆಣ್ಣೆ ಜಾರಿದಳು ಬೆಂಕಿಗೆ!!!

16/02/2014

ಪ್ರೀತಿಯ ಮೊರೆ ಹೋಗಿ
ಭಾವಗಳ ತೊರೆ ಹೊಕ್ಕಿ
ಈಜಿದ್ದೇ ಜೀವನವಾಗಿ
ದಡವಿಲ್ಲದ ಧರೆಯೊಳು
ಸೋಲದ ಪಟು ನಾ
ನಿರಂತರ ಮುಳುಗುತ, ತೇಲುತ
ಕರಗುತ ಮತ್ತೂ ಗಟ್ಟಿಗೊಳ್ಳುತ
ಹರಿವ ನದಿಯೊಳು ನನ್ನೇ ನಾ ಕಳೆದು ಹುಡುಕುತ...


15/02/2014

ಕವನ


ಕೆಲವು ಪ್ರಶ್ನೆಗಳಿಗೆ ಉತ್ತರವಿಲ್ಲ
ಉತ್ತರವಿರುವ ಪ್ರಶ್ನೆಗಳಾವುವು?
ಅವುಗಳನ್ನೇ ಕೇಳಿದರಾಯ್ತು
ಕೇಳಲೇಬೇಕಾದಲ್ಲಿ... 
ಸುಮ್ಮನೆ
ಕೇಳುವ ಚಟಕ್ಕೆ,,,
ಪ್ರಶ್ನೆಗಳೇ ಹೀಗೆ ಉದ್ಭವಿಸುವವು
ಹೆಚ್ಚು ಗುಮಾನಿಗಳಲೇ,,
ತಿಳಿಯುವ ಹಂಬಲಕ್ಕಿಂತ
ಕೆಣಕುವ ಕುಹುಕವೇ ಹೆಚ್ಚು
ಜೀವನ ಬಂದಂತೆ ಜೀವಿಸಲು
ನಾ ಸಿದ್ಧಳಾಗಿರಲು
ಜೀವನದೆದುರು ನನಗೇಕೋ
ಈಗ ಪ್ರಶ್ನೆಗಳಿಲ್ಲ
ಏನಿದ್ದರೂ ಅದು ನನ್ನೊಳು
ಸ್ವಾಗತಾರ್ಹ!
ನಿಭಾಯಿಸುವ ಛಲ ನನ್ನ
ಬೆನ್ನಿಗಂಟಿದಂತೆನಿಸಿ
ಬಂಡತನ ಬಾಳಲೆದ್ದು!!

15/02/2014

Friday, 14 February 2014

ಕವನ


ನನಗೂ ಗೊತ್ತಿದೆ,
ನನ್ನದು ಉಸಿರುಗಟ್ಟಿಸೋ ಪ್ರೀತಿಯೆಂದು
ನನ್ನ ಪ್ರೀತಿಯ ಮುದ್ದಿಗೆ
ಚಿಕ್ಕ ಮಕ್ಕಳಾಗಿದ್ದರೆ
ಓ,, ಎಂದು ಅಳುತ್ತಿದ್ದವು!,,
ಇವನೋ 
ಓಹೋ! ಎಂದು ಮರೆಯಾದ
ಕಣ್ಮರೆಯಾದ,
ನಾನಲ್ಲದ ನನ್ನವೇ ಕೆಲ ಸಂಭ್ರಮಗಳಿಗೆ
ಸುಮ್ಮನೆ ಬೆರಗಾಗಿ,,,

ಅನಿಸತೊಡಗಿದೆ ನನಗೀಗ
ನೋವುಗಳನು ಮುಚ್ಚಿಡುವುದೂ ತಪ್ಪೇ
ಸುಳ್ಳೇ ಸಂಭ್ರಮಗಳಡಿಗಳಲಿ,,
ಅವ ಹೊರಟ ಸುಳಿವಿತ್ತು
ಬೇಸರಕೆ ನಾನೇ ಬಂಧ ಸಡಿಲಿಸಿದೆನೋ
ಅವನೇ ಜಗ್ಗಿ ಬಿಸುಟುಕೊಂಡನೋ
ಕಣ್ಗಳು ಕಲ್ಪನೆಗಳಲ್ಲೇ ಹೂತಿವೆ,,
ಅವನಿಲ್ಲ ಎದುರಲಿ,,, 


DA
14/02/2014
ನೀ ಚುಂಬಿಸೋ ಅಧರಗಳಲಿ
ಭಾವವಿದೆ ಬಣ್ಣ ಗೌಣ,
ನೀ ಸೋಲಿಸಿದ ಈ ಹೃದಯದಲಿ 
ಬರೀ ಮಿಡಿತವಲ್ಲ, 
ಬಡಿತವ ಹೆಚ್ಚಿಸುವ ತುಡಿತವಿದೆ
ನೀ ದೂರುವ ಮಾತುಗಳಲಿ
ಒಲುಮೆಯಿದೆ, 
ಬಿರುನುಡಿಯ ಕಠೋರತೆಯ ನೀಗಿಸುವ
ಮೋಹವೂ,
ನೀ ನಿನ್ನೊಳು ಇಲ್ಲವೇ ಇಲ್ಲ
ಇಲ್ಲಿರುವೆ ನನ್ನ ಮನಸಲಿ,
ಮಾಯದಂತ ಕನಸುಗಳ ಸರಪಳಿಯೊಳು
ಇರುವೆ ಬಂಧಿಯಾಗಿ!!!

DA
14/20/2014

ಅವನು: ಪ್ರೀತಿಸುವೆಯಾ?
ಅವಳು: ಪ್ರೀತಿಸುವೆ...... :-)

ಅವನು: ಎಲ್ಲಿಯವರೆಗೂ?
ಅವಳು: ನನ್ನೊಳು ನೀ ನಿನ್ನೇ ಕಾಣುವವರೆಗು..
ನಿನ್ನ ಮಡಿಲೊಳು ನಾ ಮಡಿಯುವವರೆಗೂ...

[ಹಿನ್ನೆಲೆ ಗಾನ: ತುಜ್ಮೇ ರಬ್ ದಿಕ್ತಾಹೆ,
ಯಾರಾ ಮೇ ಕ್ಯಾ ಕರೂ....  ]


14/02/2014

ಚಿತ್ರ ಕೃಪೆ; ಅಂತರ್ಜಾಲ






ಕಣ್ಣೋಟ ಬೆಸುಗೆಯೋ
ಭಾವ ಬೆಸುಗೆಯೋ
ಕೈ ಬೆರಳ ಬೆಸುಗೆಯೋ
ಬಯಕೆಯು ಈಡೇರಲಿ
ಬೆಸೆದದ್ದೇ ಬ್ರಹ್ಮ ಗಂಟಾಗಲಿ
ಪ್ರೀತಿ ಸುಧೆ ಹರಿಯಲಿ..... 




ಸ್ನೇಹಿತರೇ ,
ಪ್ರೀತಿ ತುಂಬಿರಲಿ ನಿಮ್ಮಯ ಬಾಳಲಿ.... 
ಪ್ರೇಮಿಗಳ ದಿನದ ಶುಭಾಶಯಗಳು :-)


14/02/2014

ಭಾವನೆಗಳೊಂದಿಗೆ ಆಡುವ ಆಟ;
ಬಹುಶಃ ಇದಕ್ಕಿಂತ ಇರಿತ
ಇನ್ನೊಂದಿಲ್ಲ....

14/02/2014

ಕವನ


ಈ ಚಂದಿರನೋ,,,
ಒಮ್ಮೆಲೇ ಪೂರ್ಣನಾಗಿ ಕಾಡಿಬಿಡುವನು
ಎನ್ನ ವಿರಹದುರಿಯ ಆರಿಸಿ ತೀರಿಸಿಬಿಡುವನು
ತಂಪನ್ನೆರದು ಮೊಗೆ ಮೊಗೆದು 
ತನ್ನ ಬೆಳದಿಂಗಳ ಸುರಿದು
ಸುಖವೆಂಬುದಕೆ ಪಾರವೇ ಇಲ್ಲವೇನೋ 
ಎಂದೆನಿಸುವಂತೆ
ಎನ್ನ ಅದರೊಳು ಕರಗಿಸಿ 
ಮುಳುಗಿಸಿಬಿಡುವನು,

ಸಾವೇ ಬಂದೆರಗಿ ಶವವಾಗಿದ್ದರೂ 
ಮನದೊಳು ಪ್ರೀತಿ;
ಅವನ ಸೆಳೆತವೆಂಬ ಸಂಜೀವಿನಿ
ಎಚ್ಚರಿಸಿ ಬಡಿದೆಬ್ಬಿಸುವುದು 
ಮತ್ತೆ ಮತ್ತೆ ಪ್ರೀತಿಸುವಂತೆ 
ನಾ ಅವನ,
ಎಷ್ಟು ಜನ್ಮಗಳ ಅನುಬಂಧವೋ
ಅವನಲಿ ಪ್ರೀತಿಯಿದೆ ಎನಗಾಗಿ;
ಋಣವಿದೆ ನನ್ನೊಳು ಅವನಿಗಾಗಿ,

ನಾ ಅವನ ತುಂಬಿಕೊಂಡಂತೆ ಕರಗುತಾ
ದೂರವಾಗಿ ನಾ ಕೊರಗುತಿರೆ ಹಿಗ್ಗುತಾ
ಪೂರ್ಣಚಂದಿರ ಚೆಲ್ಲಾಟವಾಡಿಹನು,
ಈ ಎನ್ನ ಕನಸು ಮನಸಿಗೆ, ಪ್ರೀತಿ ಭಾವಲೋಕಕೆ
ಇವನದೇ ದೊಡ್ಡ ಕೊಡುಗೆ 
ಈ ಎನ್ನ ಜೀವನದೊಳು,
ಅವನಿಲ್ಲದಿದ್ದರೆ ನಾನಿರುತ್ತಿರಲಿಲ್ಲವೆನೋ
ಅವ ಗಿರಕಿ ಹೊಡಿವ ಈ ಧರೆಯೊಳು,,, 

DA
13/02/2014



ಫಳಫಳನೆಂದು ಹೊಳೆದ
ಕನಸುಗಳೆಲ್ಲಾ
ಫಳಫಳನೆಂದೇ ಒಡೆದದ್ದು
ಕನ್ನಡಿಗಳಂತೆ 
ನಿನ್ನನ್ನೊಮ್ಮೆ ತೋರಿ..... 


***

ನಿನ್ನ ಮರೆತಂತೆ
ಎಷ್ಟು ನಟಿಸಿದರೂ
ಮತ್ತೆ ಮತ್ತೆ ಪ್ರೀತಿಸುತ್ತಿವೆ
ನಿನ್ನ ಸವಿ ನೆನಪುಗಳು
ನನ್ನನು ನಿನ್ನಂತೆ
ನಾ ಜಡವಾಗುವುದಾದರೂ 
ಹೇಗೆ ..... ??


***

ನನ್ನೊಳು ಕ್ರೌರ್ಯವನ್ನೇ
ತುಂಬಿಕೊಳ್ಳುವುದಾಗಿದ್ದರೆ
ನಿನ್ನನ್ನೇಕೆ ತುಂಬಿಕೊಳ್ಳಬೇಕಿತ್ತು?!!


13/02/2014

***

ಸೂರ್ಯಾಸ್ತದೊಂದಿಗೆ
ಭುಗಿಲೆದಿದ್ದ
ಭಾವಾವೇಶಗಳೆಲ್ಲಾ
ತಾಮಸ

ಹಾಗೆಯೇ 
ಈ ನಿಟ್ಟುಸಿರುಗಳೂ
ಉಸಿರಾಡದೆ
ಸ್ತಭ್ದವಾಗಿದ್ದರೆ
ಲೇಸಿತ್ತು.... 


12/02/2014
ಈ ಜೀವದ ಭಾವಗಳ
ಅಲ್ಲಗಳೆದವರೆಷ್ಟೋ,,,?!
ಬೆಲೆಯಿಲ್ಲದೆ, ನೆಲೆ ಕಾಣದೆ
ಅಲೆದ ಭಾವಗಳೋ ನನ್ನವು
ನನ್ನೊಳಗೇ ಒಂದು ಭದ್ರ ಕೋಟೆ!

ಬೆಲ್ಲದಂತಹ ಅಲಂಕಾರವನಿಟ್ಟು
ಅಕ್ಷರದೊಳು ಬಂಧಿಸುವ ಸಂಭ್ರಮ 
ನನ್ನದಾಗಿರಲು,
ಮನಕೆಷ್ಟು ಆಹ್ಲಾದವೋ,,

ಭಾವಗಳವು ನನ್ನವು ನನ್ನೆದುರೇ
ನಿಂತು ನಗುವಾಗ
ವಾತ್ಸಲ್ಯವ ಉಕ್ಕಿಸೋ
ನನ್ನ ಕಂದನೇ ನಕ್ಕಂತೆ!!!


12/02/2014
ಇಂದು ಬೆಳಗಾಗೆದ್ದು
ಹೊರಟಿದ್ದೆ ಶಾಲೆಗೆಂದು,
ಕಲ್ಲಿಲ್ಲದ ದಾರಿಯೊಳು 
ಯಾವ ಮಾಯೆಯೊಳು ಎಡವಿದೆನೋ
ಬಿದ್ದಿದ್ದೆ ನೆಲ ಮೇಲೆ, 
ಹಾಗೆಯೇ ಚಿಂತನೆಯಿಂದಲೂ,,,

ಕ್ಷಣಾರ್ಧದೊಳು ಎಷ್ಟು ವ್ಯತ್ಯಾಸ!!
ತುಸು ಮುಜುಗರ, ಹೆಚ್ಚು ಅವಮಾನ,
ಕೊಂಚ ಬಿಗುಮಾನ ಹಾಗೂ ಮೊಂಡತನ
ಮನದೊಳಗೆ ತಾಂಡವ,,,

ಹಾಗೆಯೇ ಮಲಗಿರುವಾಗಲೇ
ಆಶ್ಚರ್ಯವೆಂಬಂತೆ ತೇಲಿದ ಮುಗುಳ್ನಗೆ!!
"ಬಿಡು ಮೀಸೆ ಮಣ್ಣಾಗಲಿಲ್ಲ" ಎಂಬ ಧೋರಣೆಯೋ?!
ಸರಿ ಎದ್ದು ನಿಂತೆ
ಒಮ್ಮೆಲೆ ಉನ್ಮಾದದಂತೆ ನಗು,,
"ಅಯ್ಯೋ ನನಗೆ ಮೀಸೆಯೇ ಇಲ್ಲ!!!"...... 


12/02/2014

ತೂರಿ ತೂರಿ ಬರುವ ಗಾಳಿ
ರಭಸದಿ ಬಂದಾಗಲೇ
ತಿಳಿಯಬೇಕಿತ್ತು,
ಇದು ನಿಲ್ಲುವ ಗಾಳಿಯಲ್ಲವೆಂದು!!


***


ಅನುಭವ-ಅನುಭಾವಗಳೂ
ಕೈ ಹಿಡಿವವು ಗತವಾದರು
ಸವೆದ ದಾರಿಯೊಳು 
ದಿಟದ ಹೆಚ್ಚೆಗಳನ್ನೇ 
ಇಟ್ಟು ನಡೆದಿದ್ದರೆ...!


***


ಅವಳ ಹಣೆಯ ಮೇಲೆಲ್ಲಾ 
ಮೊಡವೆ ಇಟ್ಟ ಚುಕ್ಕಿಗಳು
ಬೇಸರಿಸದೆ ಪ್ರಿಯನೊಂದು
ಹೂಮುತ್ತನಿಟ್ಟರೆ
ಹುಡುಕಲನುಮತಿಯನ್ನೀಯುತ್ತಾಳಂತೆ
ಅವಳೊಡ ಹುಟ್ಟಿದ 
ಕರಿ ಮಚ್ಚೆಯ........!!


***


ಕಳೆದ ಮೇಲೂ 
ಉಳಿವುದೆಂದರೆ
ಕೊಳೆಯುವುದು;
ಅದು ಮಣ್ಣೊಳಾಗಿದ್ದರೆ
ಲೇಸಿತ್ತು......
 
12/02/2014


ಈಗೀಗ 
ನನಗೆ ನಾ 
ತುಂಬಾ ಮುದ್ದಾಗಿ 
ಕಾಣುತಲಿರುವೆ
ಕಾರಣ;
ನಾ ನಿನ್ನ 
ಕಣ್ಗಳಿಂದ 
ನೋಡುತಲಿರುವೆ..


***

ತಪ್ಪಿಸಿಕೊಳ್ಳಬೇಕೆಂದರೂ ತಪ್ಪಿಸಿಕೊಳ್ಳಲಾರೆ
ತಪ್ಪಿ ಮತ್ತೆ ಸಿಕ್ಕಿಬಿಡುವೆ ಕದ್ದು ನೋಡುತ ಈಗಿನಂತೆ!


11/02/2014

ಕೆಟ್ಟ ಕುತೂಹಲವೊಂದಿದೆ
ಯಾವ ಯಾವುದೋ ಕಾಲಗಳಲಿ
ಭೀಕರವಾಗಿ ಎನ್ನ ಕಾಡಿದ
ಆ ಎಲ್ಲಾ ಸನ್ನಿವೇಶಗಳು ವೇಷಸಮೇತ
ಎನ್ನನು ಒಟ್ಟಿಗೆ ಎದುರುಗೊಳ್ಳಲೆಂದು

ಆ ಕ್ಷಣದ ರೋಮಾಂಚನಕೆ
ಕಣ್ಮನಗಳಿಗೆ ಕಾಯುವುದೇ ಕಾಯಕ 
ಎದುರಿದ್ದವರ ಇದಿರಿನಲ್ಲೇ
ಈ ಗತ ದೀವಿಗೆವೊಂದು
ಕಣ್ಕೊರೆವ ಹೊಳಪಿನೊಂದಿದೆ
ಹರಿದಾಡಿದ್ದೇ ಆದರದು ಸಾರ್ಥಕ
ಸುಮ್ಮನೆ ಸಹಿಸಿದ ವೇದನೆಗೂ ಧನ್ಯತೆ!!


11/02/2014


ಪ್ರೀತಿಯ ಭ್ರಮೆಯಾಗಿಸಲು ಅದೆಷ್ಟು ನಮೂನೆಗಳು?!!
ನನ್ನದೂ ಹಟವೇ ಭರ್ತಿ ನಿಜವಾಗಿಸಲು..!


***


ಹೆಣ್ಮನದೊಳು
ಒಮ್ಮೆಲೆ
ಪ್ರೀತಿ ಒರತೆಯನ್ನುಕ್ಕಿಸುವ
ಗಂಡಿನ ಪ್ರಯತ್ನವದು
ಪ್ರೀತಿಯೋ
ಪಣವೋ
ಛಲವೋ....?!!!


***


ಕೆಲ ಸಾಲುಗಳು ಅವರವು,
ಕನ್ನಡಿ ಹಿಡಿದಂತಾಗಿ
ಅರಿವಿಲ್ಲದೆ ಹುಡುಕಿಕೊಳ್ಳುತ್ತೇವೆ
ನಮ್ಮನೇ ನಾವು,
ಅದಕ್ಕೆ ನಾ ಹೆದರುತ್ತೇನೆ
ಕನ್ನಡಿಗಳಿಗೆ...


***


ನೀನು ಬಯಸಿದಂತೆ
ನಾನೂ ಬಯಸಿದ್ದು
ನನ್ನ ಸ್ವಾರ್ಥವೆನ್ನುವೆಯಾದರೆ
ನಾ ಆಜನ್ಮ ಸ್ವಾರ್ಥಿಯಾಗಲು
ಬಯಸುತ್ತೇನೆ


***


ಯಾರೋ ತೂರುವರು
ಮತ್ಯಾರೋ ತುಳಿಯುವರು
ಸೆಳೆಯಲು ಬಂದು ಕಳೆಯುವರು
ಏನದು?,,,
ಹಾರುವ ಧೂಳೇ?!
ಮನಸದು ಮೃದುವು
ನಿನ್ನಚ್ಛೆಗೆ
ಆದರೆ ಆದೀತು ಮರಳ ರಾಶಿ
ತೂರುವೆಯಾ? ಕೇರುವೆಯಾ?
ರಾಶಿಯದು ಸುಲಭಕೆ ಕರಗದು....


11/02/2014
ರಾವಣ;
ಸತ್ತನೆಂದರೂ ಸಾಯದೆ
ಮತ್ತೆ ಮತ್ತೆ ಹುಟ್ಟಿ ಬರುವ
ಅವನ ಛಲ 
ಎನ್ನ ಕಾಡುವುದು
ಇಷ್ಟವಾಗುವುದು... 


***

ಈ ನಗುವಿನ ಹಿಂದಿನ ಶ್ರಮ
ಅಳುವಿನ ಮುಂದಿನ ನಗು!


***

ಛಾಯೆಯನ್ನೇ ಮೇಲೆಳೆದುಕೊಂಡಂತ ಕನಸು
ರಾತ್ರಿಯಾದ ಕಾರಣ ಕನಸ ಛಾಯೆಯೂ
ನಿಲುಕದಾಯ್ತು ಕಲ್ಪನೆಗೆ.... 


10/02/2014

ಆಕಸ್ಮಿಕವಾಗಿ 
ದಿನದ ಕೊನೆಯಲ್ಲಿ
ನನ್ನೀ ಹೃದಯ ಭಾರವೆನಿಸಿದರೆ,
ನೀ ನನಗಿಂತ ಮೊದಲೇ ಮಲಗಿ 
ನಿದಿರೆಗೆ ಜಾರಿರುವೆ
ಎಂದರ್ಥ!! 



***


ಕೆಲವರು ಹುಟ್ಟು ಹೋರಾಟಗಾರರು
ಕೆಲವರದು ಬದುಕೇ ಹೋರಾಟ!
ಮೊದಲಲ್ಲೆ ನಿನ್ನ ಕಂಡರೆ
ಎರಡನೇಯದರಲ್ಲಿ ನನ್ನೇ ಇಟ್ಟು ಬರೆದೆ...


***


ಪ್ರಾಸ ಹುಡುಕಿದೆ
ಪ್ರೀತಿ ಸಿಕ್ಕಿತು
ಛಂದಸ್ಸು ಅಲಂಕಾರಗಳ ಹಂಗಿಲ್ಲದೆ
ಲೇಖನ ನಾಣ್ನುಡಿಗಳೆಲ್ಲಾ
ಕವನಗಳಾದವು
ಒಲುಮೆಯೊಂದನ್ನೇ
ತುಂಬಿಕೊಂಡು..


***


ಕವಿ ಕಣ್ಣೀರಿಟ್ಟು ಬರೆದ ಕವಿತೆಯು
ಮೆಚ್ಚುಗೆಯ ಕಂಬನಿಯಾದರೂ
ಕವಿತೆಯ ಕಣ್ಗಳು ಕವಿಯೊಳು
ಗಹಗಹಿಸಿ ನಕ್ಕಿತ್ತು!


09/02/2014