Friday, 14 February 2014

ಮನದ ಮಾತು

ಕೊಬ್ಬು ಅಂದುಕೊಂಡರೂ ಸರಿಯೇ ಜನ ಆದರೆ ಮಬ್ಬು ಅಂದುಕೊಳ್ಳುವ ಹಾಗೆ ಆಗಬಾರದು...
ಎನ್ನುವುದು ನನ್ನನಿಸಿಕೆ,,,

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಹೀಗೆ ನಮ್ಮ ಟಿ.ಸಿ.ಹೆಚ್ ಕಾಲೇಜಿನಲ್ಲಿ ನಮ್ಮ ಬ್ಯಾಚ್ನ ವಿಧ್ಯಾರ್ಥಿಗಳು ಸೇರಿ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಮ್ಮ ಕಾಲದಲ್ಲಿದ್ದ ಎಲ್ಲಾ ಉಪನ್ಯಾಸಕರನ್ನೊಡಗೂಡಿ ರೂಪಿಸಿದಂತಹ ಕಾರ್ಯಕ್ರಮವದು. ಸರಿ ಕಾರ್ಯಕ್ರಮವೆಲ್ಲಾ ಚೆನ್ನಾಗಿಯೇ ಆಯಿತು ನಾನೂ ನನ್ನ ಗೆಳತಿ ಮತ್ತೊಮ್ಮೆ ವಿಧ್ಯಾರ್ಥಿಗಳಾಗಿ ಆ ಅದೇ ಪ್ರಾರ್ಥನೆಯನ್ನು ಹಾಡಿದೆವು. ಅನಿಸಿಕೆಗಳನ್ನು ಹಂಚಿಕೊಂಡೆವು. ಯಾರ್ಯಾರು ಏನೇನೋ ಆಗಿದ್ದಾರೆ ಈ ಹತ್ತು ವರ್ಷಗಳಲ್ಲಿ ಕೆಲವರಂತೂ ಗುರುತೇ ಸಿಗದಂತಾಗಿದ್ದಾರೆ, ಗುರ್ತಿಸುವುದು ತಡವಾಯ್ತು,,, ನಾನೂನೂ!! 
ಎಲ್ಲರೂ ಸಾಕಷ್ಟು ಬದಲಾಗಿದ್ದಾರೆ ನಡೆ-ನುಡಿ, ಎಲ್ಲವೂ ಧನಾತ್ಮಕವಾಗಿಯೇ ಅನ್ನಿ....,

ಗೆಳತಿಯರೊಂದಿಗೆ ಮಾತನಾಡುತ್ತಾ ನಿಂತಿದ್ದ ನನ್ನನು ಗೆಳೆಯನೊಬ್ಬ ''ದಿವ್ಯ'', ''ದಿವ್ಯ'' ಎಂದು ಕರೆಯುತ್ತಿದ್ದ, ನಾ ಬೇಕಂತಲೇ ತಿರುಗಿ ನೋಡಲಿಲ್ಲ ಕಾರಣವಿಷ್ಟೇ, ಆಗೆಲ್ಲಾ ಕಾಲೇಜಿನಲ್ಲಿ ಭಾವಿ ಶಿಕ್ಷಕರಾದ ನಾವು ಪರಸ್ಪರ ಗೌರವಿಸುತ್ತಾ ನೆಡೆದು ಹಾಗೂ ಮುಂದೆ ನಾವೆಲ್ಲರೂ ಶಿಕ್ಷಕರಾಗಿ ಎದುರುಗೊಳ್ಳುವುದರಿಂದ ಒಬ್ಬ ಶಿಕ್ಷಕನನ್ನು ಹೇಗೆ ಗೌರವಿಸುತ್ತೇವೋ ಹಾಗೆ ನಮ್ಮ ಸಹಪಾಠಿಗಳನ್ನೂ ಗೌರವಿಸಬೇಕೆಂದು ಬೋದಿಸಲಾಗಿತ್ತು ಮತ್ತು ನಾವೂ ಕೂಡ ಅದನ್ನೇ ಪಾಲಿಸುತ್ತಿದ್ದೆವು. ಹೀಗಿರುವಾಗ ನನ್ನನ್ನು ಬರೀ ದಿವ್ಯ ಅಂತ ಕರೆದನಲ್ಲಾ ''ಮೇಡಂ'' ಅನ್ನೊ ಪದವಿಲ್ಲದೆ ಅನ್ನೊ ಕೋಪ. ಯಾರು ಯಾರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೋ ಅವರನ್ನೂ ಹಾಗೆಯೇ ಮನವೂ ಬಯಸುವುದು. ದಿಢೀರನೆ ಸಲುಗೆಯೂ ಬೆಳೆಯದು ಹಾಗೆಯೇ ಸೆಡವೂ,, ಎನ್ನುವುದು ನನ್ನನಿಸಿಕೆ. ಆತ ಒಂದು ನಾಲ್ಕೈದು ಬಾರಿ ಕರೆದ ನಂತರ ನಾನೂ ಕೇಳಿದೆ, ''ಏನೋ?'', ಅವನೋ ವ್ಯಂಗ್ಯವಾಗೇ ಅಂದ ''ಆಗಿನ ನಿನ್ನ ಧಿಮಾಕು ಇನ್ನೂ ಕಡಿಮೆಯಾಗಿಲ್ಲ ಬಿಡು'' ಅಂದ. ''ಕಡಿಮೆ ಆಗಲ್ಲ ನೀ ಹೇಳು'' ಅಂದೆ. ಅವನ ವ್ಯಂಗ್ಯಕ್ಕೆ ನನಗೇನು ಬೇಜಾರಾಗಲಿಲ್ಲ ಬದಲಿಗೆ ಹೆಚ್ಚು ಖುಷಿಯಾಯಿತು ನಾ ಬದಲಾಗಿಲ್ಲವೆಂದು.

ಇದನ್ನು ಆಗಾಗ ನೆನೆದು ಖುಷಿಗೊಳ್ಳುತ್ತೇನೆ. ನನ್ನ ಧಿಮಾಕಿಗೆ!!!!!!! 


09/02/2014

Sunday, 9 February 2014


ಸಡಿಲವಾದ ಸ್ನಾಯುಗಳಿನ್ನು ಬಿಗಿಗೊಳ್ಳಬೇಕಿದೆ
ನಗುವಲಿ ಮೈಮರೆತು ಕೂಡಿಟ್ಟ ಮನಸನು ಛಿದ್ರಗೊಳಿಸಿದ್ದಾಗಿಗೆ
ಮತ್ತೊಮ್ಮೆ ಹೆಣೆಯಲು ಹೆಣಗುತ್ತಿರುವೆ ಈ ಸೋರುತಿರುವ ಛಾವಣಿಯ
ಬದುಕೆಂದರೆ ನಿಂತು ಕೂತು ತೆವಳುವುದಲ್ಲವೆನ್ನುತ್ತಲೇ
ಹೂತಿಹುದು ಕಾಲು ಬುರುದೆಯೊಳು
ಎಚ್ಚೆರಗೊಳ್ಳಬೇಕಿದೆ ನಡೆವ ಹಾದಿಯೊಳ ನಡೆವ ಕಾಲ್ಗಳ ಕಾಯಲು
ಇನ್ನಾದರೂ ವಿಲಾಸಿಯಾಗದೆ ನೆಡಬೇಕಿದೆ ದೃಷ್ಠಿ ಧ್ಯೇಯದೆಡೆಗೆ
ಕಳೆದ ಕಾಲವು ಮತ್ತೊಮ್ಮೆ ಕಾಲೆಯದಂತೆ ಕಣ್ಗಾವಲೊಳು
ಮುನ್ನ ಹಾದಿ ಹಾಯಬೇಕಿದೆ ವೇಗದೊಳು
ತಿಳಿದು ನಾನೊಂದು ಹಿಂದೆಬಿದ್ದ ಮೃಗವು, ಈ ಗೊಂಡಾರಣ್ಯದೊಳು!


09/02/2014

ಬೇಸರಗಳಿಗೆಲ್ಲಾ ಬೇಸರವಂತೆ ನನ್ನೊಡನಿದ್ದು
ಹೊರಟಿವೆ ದೂರದೂರಿಗೆ ಮತ್ತೆ ಬರಲಾರೆನೆಂದು... 



***


ಎಷ್ಟೋ ವಿಷಾದಗಳ 
ಸವಿದ ನಂತರವೂ 
ತೇಲುವುದು ಬದುಕು 
ಭರವಸೆಗಳ ತೊರೆಯ 
ತಾನೇ ಹುಟ್ಟು ಹಾಕಿ...


09/02/2014
ತೆರೆ ಮರೆಯಲ್ಲೊಂದು ಹುನ್ನಾರ 
ಸಂತಸವದು ಒಂದು ತಪ್ಪಿದರೆ
ನಾ ಸಾವಿರ ಸಂತಸವ 
ಹುಡುಕಿ ಗೆಲ್ಲಲದು ಪ್ರೇರಣೆ .....

****

ಈ ಮನಸೇ ಹೀಗೆ 
ಜಾಗರೂಕವಾಗಿ 
ನೀರ ಸೋಕದೆ ನಡೆಯುತಲಿದೆ 
ಎನುತಿರುವಾಗ
ಅದ್ಯಾವ ಮಾಯೆಯೊಳು 
ಸುಳಿಯೊಳು ಸೆಳೆದುಕೊಂಡಿತೋ 
ಮನವಿಲ್ಲ ಮನದೊಳಗೆ 
ಸುಳಿಯೊಳು ಕರಗಿದಂತೆ..

08/02/2014

Saturday, 8 February 2014


ಸುಮ್ಮನೆ ಹಾರುತ್ತಿದ್ದೆ
ಗುರಿಯಿಲ್ಲದೆ ಗರಿಕಟ್ಟಿಕೊಂಡು
ನಲಿವಷ್ಟೇ ಸುತ್ತಲೂ
ಯಾರಿಲ್ಲ ಮನಸನ್ನಾಲಿಸಲು
ಮೂಡಿದ್ದೇ ಭಾವ ಹಾಡಿದ್ದೇ ರಾಗ
ತಾಗಿತೇನೋ ಮೋಡದ ಕೋಟೆ
ಗಿರಕಿ ಹೊಡೆಯಲೀಗ ಶುರುವಿಟ್ಟೆ
ಕನಸು ಮನಸನು ಹರವಿಟ್ಟು
ಗುಡುಗಿದರೂ ಕರಗಿದರೂ
ಅದರಡಿ ನೆನೆಯುತ ನಡುಗುತ....

08/02/2014
ಪ್ರೀತಿ, 
ನೀ ಹೃದಯದೊಳು ಕಾಲಿಟ್ಟ ಘಳಿಗೆಯೋ ಏನೋ
ಈಗ ನೋಡು ಪ್ರೀತಿ ನಿವೇದನೆಗಳು,
ಹೇಳು,, 
ನನ್ನೊಳು ನೀನಿರುವಾಗ
ನನಗೀಗೆಲ್ಲಾ ಕಿವುಡು, ಕುರುಡು,,
ಅಲ್ಲವೇನೇ?!..... 


08/02/2014
ಕಲ್ಪನೆಗಳೀಗ ನಡೆದಾಡಿವೆ
ನೋಡಲು ನಾನೊಮ್ಮೆ ಇಣಿಕಿದೆ
ಅಲ್ಲಿ ನಾನೇ ಕಂಡು ನನ್ನೇ ಕರೆದಂತೆ
ಸೊಗಸೇ ಇಲ್ಲೆಲ್ಲಾ ನೀನೂ ಬಂದು ಬಿಡು ಎಂಬಂತೆ!!


*******

ಈಗೀಗ ಎದುರುಗೊಂಡ ಎಲ್ಲಾ ಜೀವಿಯೂ
ನನ್ನಲ್ಲಿ ವಿಶ್ವಾಸ ಕಂಡಂತೆ 
ತೋರುತ್ತದೆ;
ಹಿಂದೆಲ್ಲಾ 
ನಾ ಗುಂಪಿಗೆ ವಿಮುಖಳಾಗಿ ನಿಂತದ್ದು
ಈಗ ಗತವಾಗಿ 
ನಾನೂ ಜೀವಿಯೊಳ ಭಾವದಂತೆ 
ಭಾಸವಾಗಿದೆ..


***********

ಯಾರು ಯಾರನ್ನು ಯಾವ ಹಿತಕ್ಕಾಗಿ
ಯಾವ ಯಾವ ರೀತಿಯಲಿ 
ಯಾವ ಬಲೆಗೆ ಹೇಗೆ ಬೀಳಿಸುವರೋ!
ನೆನೆನೆನೆದು....
ಬಲೆಯಿಂದೆದ್ದ ಮರಿ ಮೀನಿಗೆ
ಒಳಗೊಳಗೇ ಮುಸಿಮುಸಿ ನಗು.... 


07/02/2014
**********

ನಿನ್ನಿಂದ ನನ್ನ ಮನಸ ಮುಚ್ಚಿಡಬಲ್ಲೆ
ಆದರೆ ನನ್ನ ಕನಸನ್ನಲ್ಲ
ನನಗೂ ಗೊತ್ತು ನೀ ಹೆಚ್ಚು ಕಾಲ 
ಕನ್ನಡಿಯ ಮುಂದೆ ಗಾಳಿಯೊಳು 
ತೇಲುತ್ತಿರುವೆಯೆಂದು!!


02/06/2014

Thursday, 6 February 2014


ನೀಲ ಶುಭ್ರ ಆಕಾಶದೊಳೆನ್ನ 
ಬೆಳ್ಳೆ ರೇಖೆಯೇ ನೀನು
ಇದ್ದಂತೆ ಹೊಳೆಹೊಳೆದು
ಮಾಯವಾಗುವ ಆತಂಕದೊಳೆನ್ನ ಇರಿಸಿ
ನಸುನಗುವಂತೆ ಮತ್ತಷ್ಟು ಹೊಳೆವೆ
ಮೊನಚಾಗಿ ಮೌನದಿ ಕಣ್ಣ ಕೊರೆವೆ
ನೀ ಕಂಡಷ್ಟೂ ಹೊತ್ತು ನಲಿವೆ
ನೀ ಮರೆಯಾದ ಮೇಲೂ ಮೆರೆವೆ
ನನ್ನೊಳ ನಾನೊಂದು ಕವನ
ಬಾನ ಮೇಲೇರಿ ಹಾರುತ 
ನಿನ್ನ ಮತ್ತೊಮ್ಮೆ ಅದರೊಳು ಅರಸುತ..
ಶುಭ್ರ ನೀಲಿ ಬಾಂದಳದೊಳು 
ಬಂದ ನೀನೂ ಅಚ್ಚಾಗಿರುವೆ ಚಿತ್ರವಾಗಿ
ಎನ್ನ ಕಣ್ಣೆವೆಗಳಲಿ ಕವನಗಳಲಿ.. :-)



ಚಿತ್ರ ಕೃಪೆ; ಉಪೆಂದ್ರ ಪ್ರಭು 



ದಿವ್ಯ ಆಂಜನಪ್ಪ
06/02/2014

ನಿನ್ನಿಂದ ನನ್ನ ಮನಸ ಮುಚ್ಚಿಡಬಲ್ಲೆ

ಆದರೆ ನನ್ನ ಕನಸನ್ನಲ್ಲ


ನನಗೂ ಗೊತ್ತು ನೀ ಹೆಚ್ಚು ಕಾಲ 


ಕನ್ನಡಿಯ ಮುಂದೆ ಗಾಳಿಯೊಳು 


ತೇಲುತ್ತಿರುವೆಯೆಂದು!!


06/02/2014

ನಮ್ಮ ನಿರೀಕ್ಷೆಯಂತೆ ನಾವು ಪ್ರೀತಿಸುವವರೆಗೂ
ಯಾರು ನಮ್ಮನ್ನು ನಮ್ಮ ನಿರೀಕ್ಷೆಯಂತೆ
ಪ್ರೀತಿಸಲಾರರು...


*****


ನನ್ನೊಳ ಬೆಳಗೊ ಭಾವದೀಪ್ತಿಗೆ
ನನ್ನ ಕಲ್ಪನೆಗಳೇ ಇಂಧನ 
ತುಪ್ಪ ಸುರಿಯಲು 
ಉಫ್ ಎಂದೂದಿ ಹುರಿದುಂಬಿಸಲು
ಇದ್ದಾರೆ ಆಗೊಮ್ಮೆ ಈಗೊಮ್ಮೆ
ನನ್ನವೇ ಪ್ರತಿಬಿಂಬಗಳು
ನನ್ನೂಳ ಹಲವು.......


****


ಎನ್ನ 
ಬೊಗಸೆಯೊಳ ಪ್ರೀತಿ 
ಹರಡಿತ್ತು 
ನಿನ್ನೆದೆ ಹರವಿನಲಿ
ಕಾರಣ ನಾನಲ್ಲ
ಕೈ ಹಿಡಿದು 
ಹಚ್ಚಿಸಿಕೊಂಡವ
ನೀನು
ಅಪರಾಧ ಎನಗಿಲ್ಲ!! 



*****


ಸೂರ್ಯನೂ 
ದಿಕ್ಕು ಬದಲಿಸುತ್ತಿರುವ...
ಇನ್ನು ಈ ಹುಲು ಮಾನವ 
ದಾರಿಯೇ ಬದಲಿಸಿದರೆ
ತಪ್ಪೇನು!? 

ಧ್ಯೇಯವೊಂದು ಶುಭ್ರವಾಗಿದ್ದೂಡೆ
ನಡೆವ ಎಂತ ಹೀನ ಹಾದಿಯೂ ತಂತಾನೆ ಹದ....


06/02/2014

ಇಲ್ಲದಿದ್ದಾಗ ಇನ್ನಿಲ್ಲದಂತೆ ಹುಡುಕಿ
ಸಿಕ್ಕಾಗ ಸಿಕ್ಕು ಸಿಕ್ಕಾಗಿ ಹೆಣೆದು
ಸುತ್ತು ಹೊಡಿಯೋ ನಾನು
ಅರಸಿದ್ದು ಪ್ರೀತಿಯೇ ಆದರೂ
ಭೀತಿಗೊಂಡಿರುವೆ
ಅದರ ತೀವ್ರತೆಗೆ!!


*****


ಮನದೊಳು ಸುಮ್ಮನೆ 
ಏನೇನೋ ಗೀಚಿ ಹೋಗುವ 
ಸಂಚಾರಿ,, ನೀ ಭಾವ,,
ಒಮ್ಮೆಲೆ ಎಲ್ಲಾ ದೋಚಿ 
ಹೋಗಬಾರದೇ?
ನನಗೇ ನಾ ಸಿಗದಂತೆ!


*******

ನನಗೆ ನಾನೇ ಎಲ್ಲವೂ
ಎನ್ನುವಾಗಲೂ 
ನಿನ್ನ ಅನುಭವದ ಕೊರತೆ ಕಾಣುವುದು 
ನನ್ನ ಚಿಂತನೆಯಲಿ ತಂದೆ,,
ಅದಕ್ಕೆ ನಾನಿನ್ನೂ ನಿನ್ನ ಕಂದ
ಕೋಪಗೊಂಡರೂ...!


05/02/2014
ಪಾಳು ಬಿದ್ದ ಮಂಟಪದೊಳೂ ಒಂದು ಕನಸುಂಟು
ಪಾಳು ಬಿದ್ದ ಕನಸು ಬಾಳದಿದ್ದರೂ ಬಾಳು ಕನಸಿತ್ತು
ಗತವಾದರೂ ಬಾಳುಗಳು ಕನಸಿಗೆ ಸಾವಿಲ್ಲ..
ಉಸಿರಾಡೀತು ಎಂದಾದರೊಮ್ಮೆ ಕನಸ ಜಾಡು ಹಿಡಿದ ಬಾಳೊಳು!! 


ಚಿತ್ರ ಕೃಪೆ; ಅಂತರ್ಜಾಲ



04/02/2014
-DA

ಉತ್ತರಿಸಬಹುದಿತ್ತು 
ಆ ಎಲ್ಲಾ,, 
ಕೊಳಕು ಮನಸುಗಳಿಗೆ;
ನಿರ್ಲಿಪ್ತಳಾದೆ ಬಯಸಿಯೇ,
ನೆನೆದಾಗ ಸಿಡಿದೇಳುವ ಮನದ ಕಂಪನಕೆ


ಎನ್ನ ಮಾತುಗಳು ಕಠೋರತೆಗೆ 
ನಾನೇ ಹೆದರುತ್ತೇನಾದ್ದರಿಂದ
ಸುಮ್ಮನೆ ಸಹಿಸಿ ಮುನ್ನೆಡೆದೆ!


****


ಎನ್ನ ಸಾಲೊಳು ಹಿಡಿದಿಟ್ಟ ಮೌನ
ನಿಜವಲ್ಲವೆಂಬಂತೆ ತೋರಗೊಡಲೆಂದು
ಪ್ರೇಮಿಯಾಗಿ,,, 
ಈಗ ಮೌನಿಯಾಗಿದ್ದಾನೆ!

ಮನಸ್ಸಿಗೆ ತಡೆಯಿಲ್ಲ ಪ್ರವಹಿಸಲು,
ಜಾತಿ, ಲಿಂಗ, ಸಿರಿತನ, ಬಡತನವ ಮೀರಿ
ಜಿಗಿವಂತೆ..
ಆದರೆ ಮನಸದು ಇರುವುದೇ 
ಈ ಎಲ್ಲಾ ಕಟ್ಟುಪಾಡುಗಳ ಆಜನ್ಮ ಬಂದಿಯೊಳಗೆ!!


*****


ಒಂದೊಂದು ಕೋನದಲ್ಲೂ 
ಒಂದೊಂದು ರೀತಿ ತೋರಿಸುವ
ನನ್ನ ಭಾವ ಚಿತ್ರಗಳು 
ಮೋಸಗೊಳಿಸಿವೆ ನನ್ನೇ;
ನನ್ನ ಹುಚ್ಚು ಭಾವಗಳಂತೆ!


*****


ನಡೆದರೂ ದೂರುವ ಕುಳಿತರೂ ಜರಿಯುವ
ಓಡುತಿರೆ ಕಾಲೆಳೆಯುವ ಜನರಿಗೆ
ನಾ ಋಣಿ;
ನಿಲ್ಲಲ್ಲೂ ಅವಕಾಶ ನೀಡದೆ 
ನಿರಂತರ ಓಡಿಸುತ್ತಿರುವ ಅವರ ಮನಸಿಗೂ..... 



*******


ಬಹಳಷ್ಟು ಬಾರಿ ಇಲ್ಲವೇ ಪ್ರತೀ ಬಾರಿ
ನನ್ನ ಹಿಂಬಾಲಿಸಿದ ಮನಸಿಗೆ
ಸಿಗುವುದು ನಾನಲ್ಲ, ನನ್ನ ಮನಸೂ ಅಲ್ಲ
ನನ್ನ ಕಲ್ಪನೆಗಳ ರಾಶಿ ಆಯಾ ಕಾಲದವು!!


03/02/2014

ನಿರೀಕ್ಷೆಯ ಕಣ್ಗಳು
ಎದುರಲಿ ಸುಳಿದಾಡಿದವು

ಪ್ರೀತಿ ಸೂಸುವಾಗ
ಕಣ್ತಪ್ಪಿಸಿ ಮರೆಯಾದೆ!

ಎದುರುಗೊಳ್ಳಲೆಂದು ಬಯಸಿದಾಗ
ಆ ಕಣ್ಗಳ ಕನಸದು ವಿಚಲಿತ

ಈಗ ಬಹು ಕಾಲದ ನಂತರ 
ಎದುರಾದ ಆ ಅದೇ ನಿರೀಕ್ಷೆಯ ಕಣ್ಗಳವು

ದಿಟ್ಟಿಸಲೀಗ ಮನಸ್ಸಿಲ್ಲ,
ತಪ್ಪುಗಳಿಲ್ಲ ಇಬ್ಬರಲೂ, ಆದರೆ
ಕಾಲ ತಪ್ಪಿದೆ ಇಬ್ಬರಲೂ....! 

DA
03/02/2014

ವಿರಹದುರಿಯೊಳು 
ಹಾಲಂತಹ ಪ್ರೀತಿಯು 
ಉಕ್ಕಿ ಬರಲೆಂದು ಆಶಿಸಿ 
ಹೆಚ್ಚಿಸಿದ್ದೆ ನಾ ಉರಿಯನ್ನು
ಅತಿಯಾಸೆ ಮಿತಿಮೀರಿ
ತಳ ಹತ್ತಿದ ವಾಸನೆಯೂ ಸುಳಿದಿಲ್ಲ
ಈ ನಡುವೆ ನೆಗಡಿಯಂತಾಗಿ....


****


ಬೆಳಗಾಗೆದ್ದ ತುಂಟ ಅಕ್ಕನ ಮಗನೆಂದ 
ಆಂಟೀ, "ನಿನ್ ಕಂಣ್ಗಳು ಎಷ್ಟು ಬೆಳ್ಳಗಿವೆ!"
ನಾನೆಂದೆ ಬೀಗುತ, "ಹೌದು ನನ್ನವು ತಿಳಿಗೊಳಗಳಂತೆ",,,,
ಮನವು ಮತ್ತೊಂದು ಸಾಲು ಸೇರಿಸಿತು,
"ಅದರೊಳು ರಾಡಿ ಕದಲದೆ ತಟಸ್ಥವಂತೆ"
ಒಮ್ಮೆಲೆ ನಗೆ ಉಕ್ಕಿ ಬಂದಿತು
ಪದ ಕಟ್ಟುವ ನನ್ನೊಳ ಮಿತಿಮೀರಿದ
ತವಕಕ್ಕೆ!!


****


ಓಟವಷ್ಟೇ ಆಸಕ್ತಿ ನನಗೆ
ಎತ್ತ ಕಡೆ ಅನ್ನುವುದು
ಒಮ್ಮೊಮ್ಮೆ ಗೌಣ
ನಿಂತು ನಿಂದನೆಗೊಳಗಾಗದಿರುವ
ಹಂಬಲವಷ್ಟೇ

ವ್ಯರ್ಥದ ಓಟವೂ
ಅರ್ಥ ನೀಡುವುದು ಬದುಕಿಗೆ
ಹಟಬಿಡದ ಪರಿವರ್ತನೆಯ ಕಲಿಸಿ 
ನಿಲ್ಲಿಸುವುದು ಒಂದೇ ತೆರನಾಗಿ
ಸೋಲು ಗೆಲುವೆಂಬ ತಿರುವುಗಳಲಿ...


02/02/2014

ಸ್ವಾಭಿಮಾನ ಹೆಚ್ಚು ಮಾತನಾಡಿಸುವುದು
ಸೋಲಿನಲಿ,
ಪ್ರೀತಿಯು ಅಷ್ಟೇ ಮೌನವಾಗಿಸುವುದು
ಗೆಲುವಿನಲಿ....


******


ಸುಲಭಕ್ಕೆ ಸಿಕ್ಕ ಮಾತ್ರಕ್ಕೆ ನಕಲಿಯಲ್ಲ
ನಕಲಿಯೇ ಆದರೂ ಸುಮ್ಮನೆ ಬೀಗದೆ ಸಿಗುವುದಿಲ್ಲ !!!! 



*****

ಕನಸಾಗುವ ಮುನ್ನ 
ಕವನದೊಳು ಬಂದು ಹೋಗು
ಕವನವಾಗುವ ಮುನ್ನ 
ಕನಸಲಿ ಬಂದು ಹೋಗು

ಎಲ್ಲಿ ಸುಳಿದರೂ ಮರಳಲಾರೆ ನೀ ಮತ್ತೆ 
ಜಾಲವದು ನನ್ನದು ನೀ ಬಂದಿಯಾದ ಮೇಲೆ
ಜೋಕೆ ಗೆಳೆಯ ಕವನವಾಗಿರುವೆ
ಕನಸಾಗದಿರು ಇನ್ನು 

01/02/2014

ಬಂಗಾರದೆಲೆಯ ಬಯಕೆಯಿತ್ತು ಬದುಕಲಿ
ಬಂಗಾರ ಸಿಂಗಾರವಾಗಿದ್ದೇನೋ ನಿಜ,
ಹಸಿರೆಲೆ ಚಿಗುರು ತಡವಾಯಿತು
ನನ್ನೀ ಕಾತುರತೆಗೆ ಕರಗಿದ ಚಂದಿರ
ಚಿಗುರೆಲೆಯಾಗಿ ಹೃದಯವೇ ಆಗಿದ್ದಾನೆ
ಏನ ಹೇಳಲಿ ಇವನೊಲವ!
ನಮ್ಮೀ ಪ್ರೀತಿಗೆ ನನ್ನದೇ ದೃಷ್ಟಿ ಹೆಚ್ಚು!

ಚಿತ್ರ ಕೃಪೆ; ಅಂತರ್ಜಾಲ
01/02/2014




ಈ ನಡುವಿನ ಮೌನ ಗೊಡೆಗಳ ಭೇದಿಸಲು
ಮೌನದಿ ಕಿವಿ ಆನಿಸಿರುವೆ ಗೊಡೆಗಳಿಗೆ
ಅಸ್ಪಷ್ಟ ನಿನ್ನ ಪಿಸುಮಾತುಗಳಲಿ
ಕಂಡ ನಲಿವೆಷ್ಟೋ, ಕಾಣದ ನೋವೆಷ್ಟೋ
ಮೀರಿದ ಒಲವೆಷ್ಟೋ,,
ಅರಿತಷ್ಟೂ ನಾನೂ ಮೌನಿ, ಮತ್ತೊಮ್ಮೆ ದ್ಯಾನಿ
ನಿನ್ನಂತೆ ಶಬ್ದಗಳಲಿ ಹಿಡಿದಿಡಲಾರೆ
ನನ್ನೆಲ್ಲಾ ಭಾವಗಳು,
ನೀನೇ ಅರ್ಥೈಸಿಕೊಳ್ಳಬೇಕಿದೆ ನನ್ನೆಲ್ಲಾ ಆಡದ ಮಾತುಗಳ....


****


ಯಾವುದನ್ನು ಎದುರುಗೊಳ್ಳಲು
ಹೆದರುತ್ತೇವೊ
ಅದನ್ನೇ ಅರಸಿ
ಹೆದರಿಸುವಂತಾಗುತ್ತದೆ 
ಬಯಸಿ ತುಸು, ಬಯಸದೆ ಹೆಚ್ಚು 


01/02/2014
*****************


ನಿನ್ನ ರಮಿಸಲು ನನ್ನಲ್ಲಿ ಪದಗಳಿಲ್ಲ
ಮೂಕ ಪ್ರಾಣಿಯಂತೆ ಮುದ್ದಿಸಿಬಿಡಲೇ?!
ಕೇಳಿದಳು ಸೂರ್ಯಕಾಂತಿ ತನ್ನ ಸೂರ್ಯನನು
ದೂರವಿದ್ದರೂ ಪ್ರೀತಿಗೆ ಅಂಕೆಯಿಲ್ಲದೆ 
ಭಾವಪರವಶಳಾದಂತೆ!


***


ನನ್ನ 
ಹುಚ್ಚು 
ಕನವರಿಕೆಗಳಿಗೆ 
ಕಡಿವಾಣ
ನಿನ್ನ 
ಮೌನ!


31/01/2014

ಸುಮ್ಮನೆ ಕಲ್ಪಿಸುತ್ತಿದ್ದೆ ನಿನ್ನನು
ಗೊತ್ತಿಲ್ಲದ ನಿನ್ನ ಆಕಾರ
ನನಗೊಂದು ನೆರಳಷ್ಟೇ,
ನನ್ನ ಜೊತೆಗಾರನಾಗಿ
ಹಾಗೇ ನೆನಸಿದಾಗೆಲ್ಲಾ
ಒಂದು ಹೊಸ ಕಲ್ಪನೆ ಗರಿ ಮೂಡುವುದು
ಮೈಮನವೆಲ್ಲಾ ಪುಳಕ,
ಸಂಭಾಷಣೆಗಳಿಗೇನು ಕಡಿಮೆಯಿಲ್ಲ 
ನನ್ನ ನಿನ್ನ ಪ್ರೇಮಕೆ,
ಈಗೀಗ ಭಯವಾಗಿದೆ ನನಗೆ
ನಿಸ್ಸಂಕೋಚದಿ ಕನವರಿಸಿದ
ನನ್ನ ಕನಸಿನ ಮಾತುಗಳ
ನೀ ಆಲಿಸಿ ಅರಿಯುತ್ತಿರುವೆಯೆಂದು
ಈಗಲಾದರೂ ಹೇಳಿಬಿಡು ಎಲ್ಲಿರುವೆಯೆಂದು
ಹುಡುಕಿಬಿಡುವೆ ಕ್ಷಣ ಮಾತ್ರದಿ ನಿನ್ನ ನಾನಿಂದು!! 

31/01/2014



ನನ್ನೊಂದು ರಾತ್ರಿಯ 
ನಿದಿರೆ ಕಳೆದ
ನಿನ್ನ ತಪ್ಪಿಗೆ
ಪಣತೊಟ್ಟಿರುವೆ;
ನಿನ್ನ ಸಾವಿರ ರಾತ್ರಿಗಳ ನಿದಿರೆ
ಹಾರಿಸಲು,
ಮುಂದದು ದುಪ್ಪಟ್ಟೂ ಆಗಬಹುದು
ತಿಳಿಸಿರುವೆ ಈಗಲೇ... 


****


ಮನಸ್ಸು ನೀರಿನಂತಾಗಬೇಕಂತೆ
ಎಂತಹುದೇ ಪರಿಸ್ಥಿತಿಗೆ ಸುರಿದರೂ
ಅದೇ ತನ್ನಾಕಾರದಂತೆ,
ಅದರಂತೆ ಅನುಸರಿಸಿದ ದಿನದಿಂದ 
ನನ್ನವೆಷ್ಟೋ ಛಾಯೆಗಳು
ನನ್ನನ್ನೇ ದಿಗ್ಬ್ರಮೆಗೊಳಿಸಿವೆ!!!!!


30/01/2014