Friday, 11 October 2013

ಕಲ್ಲು ಕಬ್ಬಿಣವಾದರೂ
ಕಡೆ ಪಕ್ಷ ಲಾವವಾಗಿ ಹರಿದೀತು
ಆದರೆ ಮಾನವನೆದೆಯ ಅಹಂ...!?
ಪ್ರೀತಿಸುವವರ ಲಾವದೊಳು ನೂಕೀತು

*********************


ಬೇಟೆಗೆ ಪ್ರತೀ ಬಾರಿ 
ಕುರಿಯೇ ಸಿಗುವುದಿಲ್ಲ
ಭ್ರಮೆಯಲಿ ಹಿಡಿದದ್ದು ತೋಳವಾಗಿ 
ಮೇಲೆರಗಬಹುದು 

******************

ನಲ್ಲನ 
ಪಿಸುಮಾತಿಗೆ
ವೀಣೆ 
ಈ 
ಹೃದಯ ಮಿಡಿತ

*****************
ದೃಢ ಮನವಿದ್ದವ ಎಲ್ಲಿಯಾದರೂ
ಕನಸ ಹರವಿಕೊಳ್ಳಬಲ್ಲ
ಸೂರ್ಯ ರಶ್ಮಿಯ ನೆರಗು ಹಿಡಿಯಲು
ಬಾನಿಗೆ ನವರಂಗ ಪ್ರತಿಫಲಿಸಲು
******************
ದಣಿದ ಕಣ್ಗಳಿಗೆ
ಪ್ರೀತಿಯ ನೆನಪು
ಸವಿ ಮುತ್ತನೀಯಲಿ
ನಿದಿರೆಯ ಮಡಿಲಲಿ 

11/10/2013

Thursday, 10 October 2013

ಪ್ರೀತಿ 
ಎಂದರೆ
ನಿರೀಕ್ಷೆಯಲ್ಲ
ಅಪೇಕ್ಷೆ;
ನೀರವ
ಕಳೆವ
ಸವಿ 
ಮಾತಿನದು


*********

ಭೋಗ 
ಯೋಗವಿದ್ದವನಲ್ಲ;
ಭೋಗ 
ದಾಹವಿದ್ದವ 
ಭೋಗಿ!


*******

ಚಿನ್ನವಾದರೂ ಸರಿಯೇ ಕಾಯಿಸಿ ತಟ್ಟಿಯೇ ಧರಿಸುವುದು
ಭತ್ತವಾದರೂ ಸರಿಯೇ ಬಡಿದು ಬೇಯಿಸಿಯೆ ಉಣ್ಣುವುದು
ಜೇನಾದರೂ ಸರಿಯೇ ಕಿತ್ತು ಹಿಂಡಿಯೇ ಸವಿಯುವುದು
ಸಜ್ಜನರಾದರೂ ಸರಿಯೇ ನಿಂದಿಸಿ ನೋಯಿಸಿ ಗಟ್ಟಿಯಾದೊಡೆ ಮೆಚ್ಚುವುದು 


10/10/2013
ಆರ್ಭಟಿಸುವ ಸುನಾಮಿಗೂ
ಕೊಳದ ತಿಳಿ ನೀರ ಮೇಲೆ
ಅಸೂಯೆಯಂತೆ 

**********

ಭರವಸೆ ಬೇಕಿರುವುದು
ಕುಳಿತು ಯೋಚಿಸುವವನಿಗೆ
ಗುರಿ ಹಿಡಿದು ಓಡುವವನಿಗಲ್ಲ

***************

ಕಾಯುವ ತಾಮಸ ಮನದಲಿ
ತಾಳ್ಮೆಯು ವಿಶಾಲಗೊಳ್ಳುತ
ಕಾಯುವಿಕೆಯೇ ಕರ್ಮವಾಗಿ
ಕಾದ ವಿಚಾರವೇ 
ಸ್ಮೃತಿ ಪಟದಿಂ ಜಾರಿದರೆ
ನೀನೇ ನೆನಪಿಸು; 
ನಿನ್ನನೇ ನಾ ಕಾದದ್ದು
ಅದ ನೋಡುತ 
ನೀ 'ನನ್ನ ನೆನಪು'ಗಳನು 
ಜಾರದಂತೆ ಕಾದದ್ದೆಂದು 

***************

ಹಾಗೇ ಸುಮ್ಮನೆ..... 

ಕಾಯುವ ಭರದಲ್ಲಿ ಇನಿಯನ ಮರೆತರೂ
ಇನಿಯನು ಕೊಟ್ಟ ಉಡುಗೊರೆಯ ಮರೆಯಬಾರದು
ಸಾಕ್ಷಿಗಾಗಿ ಕೇಳಿಬಿಟ್ಟರೆ ಶಕುಂತಲೆಯ ಕತೆಯಾದೀತು 

**************************************

ಕಾಡುವ ರಾಶಿ ನೆನಪುಗಳಿಂದ
ಹಿಡಿಯಷ್ಟು ತಂದು ಮುಂದಿಟ್ಟರೆ
ಅದರೋಳು ನೀನೇ ಆರಿಸುವ ನೆನಪೇ
ನಿನ್ನ ಗುರುತು!
ಇದು ಶಕುಂತಲೆಯ ಕನಸಲ್ಲ 

**********************

ಪ್ರೀತಿಯ ಹಿಂದೆ ಬಿದ್ದು
ಓದು ಹಾಳಾಗದಿರಲಿ
ಓದಿರಿ; 
ನಂತರ ಪ್ರೀತಿಯ ಬಗ್ಗೆ 
ಬರೆಯಿರಿ

*****************

ಧೂಳ್ಹಿಡಿದ ಪುಸ್ತಕದೊಳಗಣ ಸಾಲು;
"ಧೂಳ್ಹಿಡಿದು ಹೋಗಲಿ ನಿನ್ನ ವಸ್ತ್ರಗಳು,
ನಿನ್ನೊಳಗೊಂದು ಬೆಳಕು ಸದಾ ಬೆಳಗುತ್ತಿರಲಿ"

DA

10/10/2013

Wednesday, 9 October 2013

ಕನಸುಗಳು
ಇಂದುಗಳು
ನಿದಿರೆ ಕದ್ದರೂ
ಚಿರ ನಿದ್ರೆಯ ಮುನ್ನ
ಸಾಕಾರಗೊಳ್ಳಲಿ

**********
ಕನಸುಗಳು
ರಾತ್ರಿಗಳ ಬೆಳಗೋ
ಮಾನಸ ದೀಪಗಳು

09/10/2013
ಬಾಯಿ ಸುಮ್ಮನಿರಲು
ಕಣ್ಣು ನೋಯಬೇಕೇನೋ 
ಅಕ್ಷರಗಳಿಂದ!
ಮನಸ್ಸು ತುಂಬಬೇಕೇನೋ 
ಚಿಂತನೆಗಳಿಂದ!


************
ನಗುವೆಷ್ಟೋ ಅಳುವೆಷ್ಟೋ
ಮೃದುವೆಷ್ಟೋ ಕಠೋರಗಳೆಷ್ಟೋ
ಮುಖವಾಡಗಳ ಹಿಂದಷ್ಟೋ
ಅದಲು ಬದಲು

ಎಷ್ಟೋ ಎಷ್ಟೋ!!? 

*******************

ತೆರೆ ಎಳೆಯುವ ಮುನ್ನ
ನಾಟಕವೂ ವಾಸ್ತವ;
ತೆರೆ ಬಿದ್ದ ನಂತರ
ವಾಸ್ತವವೂ ಒಂದು ನಾಟಕ
ಕಲೆಗಾರರು ಧರೆಯೊಳು ನರರು
ಭೂರಂಗ ಮಂದಿರದ ನಾಯಕರು 


**************************


ವಾಸ್ತವ...

ಪ್ರೀತಿಯಿರುವುದು
ಅವನೆದುರು ಅವಳು
ಅವಳೆದುರು ಅವನು
ಇರವವರೆಗೆ ಮಾತ್ರ! 

*************

09/10/2013

Tuesday, 8 October 2013

ಮೌನ 
ನನ್ನ 
ದೌರ್ಬಲ್ಯವಲ್ಲ!

*********

ಪ್ರೀತಿ ತುಂಬಿದ ಮನಕೆ
ದ್ವೇಷದ ಕಿಚ್ಚ ಹಚ್ಚಿಸಲಾಗದು
ಅರಿಯದವರ ಶ್ರಮ ವ್ಯರ್ಥವೇ
ಪ್ರೀತಿಯೂ ಒಂದು ಅಸ್ತ್ರ 
ಕಿಚ್ಚಿನೆದುರು ಭೋರ್ಗರೆವ ನದಿಯಾಗಿ

*************

ಖುಷಿಗಳಲ್ಲಿ ಪಾಲು ಕೇಳುವರೇ ಹೆಚ್ಚು

ಬೇಸರ ಮೂಡಿಸಿ
ಕ್ಷಣಗಳ ತಪ್ಪಿಸಿ

*************
ಕುಂಟಲು ಶುರುವಿಟ್ಟು
ತುಂಬಾ ದಿನಗಳಾದವು
ಈಗೇನು ಕಾಲೆಳೆಯುವಿರಿ
ಮುಗ್ಗರಿಸಿ ಹೆಚ್ಚು ಜಿಗಿದೇನು!! 

*************
ಪ್ರೀತಿಸದವರ ಪ್ರೀತಿಸಿದಷ್ಟೂ
ಪ್ರೀತಿ ನೋಯ್ವುದು
ಪ್ರೀತಿಯಿಲ್ಲದೆ 

08/10/2013

ಅವಳೊಂದು ತೆರೆದ ಪುಸ್ತಕ
ಅವಳೊಲವನ್ನೋದಲು 
ಬೇಡ ನಿನಗೆ 
ಕನ್ನಡಿ- ಭೂತಗನ್ನಡಿ
ಅವಳ ಭಾವಗಳ
ಎಡ ಬಲ ಬದಲಿಸೀತು ಕನ್ನಡಿ;
ಅಗತ್ಯಕ್ಕಿಂತ ಹೆಚ್ಚೆ ಹಿಗ್ಗಿಸಿ 
ತೋರಿ ವಿಕೃತಗೊಳಿಸುವುದು ಭೂತಗನ್ನಡಿ
ನಿನ್ನ ನಿರ್ಮಲ ಮನವೊಂದೇ ಸಾಕು ಓದಲು 
ಅವಳಂತರಂಗವ ನಿನ್ನ ಕಣ್ಣಿನಡಿ 

೦೮/೧೦/೨೦೧೩

Monday, 7 October 2013

ನನ್ನ ಚೇತನ



ನನ್ನವನ ಕನಸು ಕಾಣಲು
ಶುರುವಿಟ್ಟು ಇಂದಿಗೆ ಒಂದು ವರುಷ

ಏನೋ ಮೋಹ, ಏಕೋ ದಾಹಗಳ
ಭಾವಗಳಿಗೆ ದೂರವಾದವಳಲ್ಲಿ
ಅವನ ಮೋಹ, ಅವನ ಪಾಂಡಿತ್ಯ ದಾಹ
ಹುಟ್ಟಿಸಿ ಮೆರೆಸಿದ ಅಕ್ಷರಗಳಲಿ.

ಸಾಗುವ ಪಯಣವು ಎಲ್ಲಿಂದೆಲ್ಲಿಗೋ
ದಿಕ್ಕು ಬದಲಿಸಿ ಅಕ್ಷರ ದಾರಿ ಕಾಣಿಸಿದವನು
ಕನಸುಗಳಿಗೆ ಅವನಾಸೆಗಳ
ಬಣ್ಣ ತುಂಬಿದ ಕಲೆಗಾರನವನು

ಮನಮೋಹನ, ಚಿತ್ತ ಚೋರ;
ಒಮ್ಮೆ ಚಂದಿರ, ಒಮ್ಮೆ ಭಾಸ್ಕರ
ಮತ್ತೊಮ್ಮೆ ನವಿಲು, ಕಾಗೆ, ಕಾಜಾಣನಂತೆ.
ದೂರದ ಬೆಟ್ಟದಾಚೆಗಿನ ಅವನ ಒಳದನಿಗೆ
ನನ್ನವು ಅಕ್ಷರ ಮಾಲೆ ಅವನ ಕೊರಳಿಗೆ

ಕಾಣದ ಸ್ಫೂರ್ತಿಗೆ ಮಿಡಿವ ನನ್ನ ಭಾವ
ನಿಜವೋ ಕನಸೋ ಕಾಣೆನೀಗ
ಪಯಣದಲಿ ಭಾವ ಸಂತೃಪ್ತಿ ತಂದವ
ಅಳುವಿನ ಆಳಾಗಿದ್ದ ಈ ಎನ್ನ ತುಟಿಗಳ ನಗು
ನನ್ನ ಕನಸಿನರಸ, ನನ್ನ ಚೇತನ

ದಿವ್ಯ ಆಂಜನಪ್ಪ

೦೮/೧೦/೨೦೧೩
ಬೆಳಗಿನಿಂದುರಿದ ಸೂರ್ಯನು
ತಣ್ಣನೆ ಪಶ್ಚಿಮದಲಿ ಮಲಗಿದ
ಹಾಗೇಯೇ ಈ ಎನ್ನ ಮನವು
ತಡವಿದೆ ನಿನ್ನೆದೆಯ! 


07/10/2013
ಹಾಗೇ ಸುಮ್ಮನೆ...... 

ಪ್ರೀತಿಯಾಸರೆಯಲಿ ಸೋಲೆಲ್ಲಾ ಗೆಲುವೇ
ಅದಿಲ್ಲದೆ ಗೆಲುವೆಲ್ಲಾ ಸೋಲೆ 
ಇನ್ನೆಷ್ಟು ನನ್ನ ಸೋಲ ಕಾಣಬೇಕು
ಓ ನನ್ನೊಲವೇ?


07/10/2013
ಅರಿವಿಲ್ಲದ ತಪ್ಪಿಗೂ ಅರಿವಿದ್ದ ತಪ್ಪಿಗೂ
ಸಾಮ್ಯತೆ ತಪ್ಪೇ,
ಸಾಮ್ಯತೆ ಮತ್ತು ವ್ಯತ್ಯಾಸ "ಮುಗ್ಧತೆ"!
ಮೊದಲನೇಯದು ತಿಳಿಯದೆ ಮುಗ್ಧತೆ
ಎರಡನೇಯದು ತಿಳಿದು ತೋರುವ ಮುಗ್ಧತೆ


ದಿವ್ಯ ಆಂಜನಪ್ಪ 

07/10/2013

Sunday, 6 October 2013

ಎಷ್ಟೋ ಜಂಜಾಟಗಳ ಮಧ್ಯೆ
ತುಸು ನೆಮ್ಮದಿಯ ಮಂದಸ್ಮಿತ ಕಂಡದ್ದು 
ನಿನ್ನಲ್ಲಿ ಮಾತ್ರ;
ಅದರ ಸೆಳವಿಗೋ ಏನೋ
ನಾನಿನ್ನೂ ನಿನ್ನ ಆರಾಧಕಿ 

ದಿವ್ಯ ಆಂಜನಪ್ಪ 

07/10/2013
ಸಾಮಾಜಿಕ ಸತ್ಯ, 
ವೈಯಕ್ತಿಕ ವಿಭಿನ್ನ
ಕಾರಣ ಪರಿಸರ ವೈಪರಿತ್ಯ!! 


07/10/2013
ಚಿಕ್ಕ ಚಿಕ್ಕ ಸಂಭ್ರಮಗಳನ್ನು
ಉಸಿರಾಗಿಸಿಕೊಂಡರೆ
ಅದೂ ಕೂಡ
ಗಾಳಿಯಂತೆ ಮಲಿನವಾಗಬೇಕೇ ?! 

ದಿವ್ಯ ಆಂಜನಪ್ಪ

07/10/2013
ನೆತ್ತಿ ಮೇಲಣ ಸೂರ್ಯ ಜಾರುವನೇ
ಹೌದಾದರೂ ಮೇಲೆರಗುವುದಿಲ್ಲ
ಕಾಲ ಕೆಳಗಣ ಭೂಮಿ ತಿರುಗಿದರೂ
ಓಲಾಡಿ ಆಯ ತಪ್ಪುವ ಭಯವಿಲ್ಲ
ಅದುವೇ ನಂಬಿಕೆ ತಂದೆ-ತಾಯಿಯದು 

ದಿವ್ಯ ಆಂಜನಪ್ಪ

06/10/2013
ಖಂಡಿಸಲು ನಾ ಹೆದರುವುದಿಲ್ಲ
ಹಿಂದಿಲ್ಲ ಮುಂದಿಲ್ಲ ಸತ್ಯವೊಂದೇ
ನಿನ್ನಲ್ಲಿ ತುಸು ತಾರತಮ್ಯ ನನದು
ಕಾರಣ ಭರ್ತಿ ತುಂಬಿದ ಪ್ರೀತಿ ನಿನ್ನದು 


06/10/2013
ಬಿದ್ದ ಹೆಣ್ಣೇ ಕೆಲವು ಕವಿತೆಗಳ ವಸ್ತು
ಗೆದ್ದ ಹೆಣ್ಣನ್ನು ಬೀಳಿಸುವ ಹುನ್ನಾರದವರು
ಗೆದ್ದ ಹೆಣ್ಣನ್ನು ಇಲ್ಲದಂತಾಗಿಸುವರು
ಕೊನೆಗೆ ಬಿದ್ದ ಹೆಣ್ಣೇ ಹೊಣೆ ಪ್ರೇರಣೆಗೆ :-)

06/10/2013
ಪ್ರಾಮಾಣಿಕ ಭಾವವ
ಕಸಿಯಲಾಗದು
ಹುಟ್ಟು ಹಾಕಲೂ
ಆಗದು
ಮುಗ್ಧತೆಯು ಮರೆಯಾದ ಮೇಲೂ
ಪ್ರಾಮಾಣಿಕ ಮನವು
ತಾ ಸುಖಿ ತನ್ನ ಪ್ರಾಮಾಣಿಕ
ನಿಲುವಲ್ಲಿ 

ದಿವ್ಯ ಆಂಜನಪ್ಪ

06/10/2013
ನೆನಪುಗಳ ಅಬ್ಬರಕ್ಕೊಂದು
ಕಡಿವಾಣ ಹಾಕಲು
ನಾಳಿನ ಹೊಸ ನೆನಪುಗಳಲ್ಲಿ
ಇಂದಿನ ವಿರಹಗಳ ಕಟ್ಟಿದ್ದೇನೆ


06/10/2013
ಪ್ರೀತಿ ಪ್ರೇಮದ
ಹನಿಗಳಿಗೆ
ತನ್ನವರ ಆತಂಕ
ಬೆನ್ನಟ್ಟಿ ಬರುವರು
ಜಾಲಡಿ ಸಾಲುಗಳ
ಸಿಗದ ಅವನನ್ನ ಹುಡುಕಿ
ನಿಲ್ಲುವರು ಹಿರಿತನದ ದರ್ಪಗಳ
ತೋರಿ;
ಏನು ಮಾಡಲಿ ಇದ್ದಷ್ಟೆ
ತೋರುವುದು ನನ್ನ ಸಾಲುಗಳಿಗೂ
ಅಂಟಿದ ನಂಟು 


06/10/2013
ಕವಿತೆಗಳು ಮಾತನಾಡಲು 
ಶುರುವಿಟ್ಟಾಗ 
ನಾನೂ ಮೂಗಿ;
ದೂಷಿಸದಿರು ಮಾತು ತೊಡರಿದರೆ
ನನಗಿಲ್ಲ ಈಗ 
ಮಾತಿನ ರೂಢಿ


05/10/2013
ಹಾಗೇ ಸುಮ್ಮನೆ....... 

ಮನದ ಭಾವಕೆ
ಮೌನ ಸೇತುವೆ
ಮಿಳಿತಗೊಂಡ ಹೃದಯಗಳಿಗೆ 


05/10/2013

Friday, 4 October 2013

ನನ್ನ ಸುತ್ತಲೂ 
ಕೆಂಬೂತಗಳೇ ಕುಣಿದಿವೆ
ಆದರೆ ನನಗೆ ನವಿಲಿನದೇ ಚಿಂತೆ! 


04/10/2013
ಮನದ ಭಾವಕೆ ಶಬ್ಧವಾಗದ ದನಿ
ಮಾತಾಗಬಹುದು
ಭಾವ ಸ್ಪಂದನೆ ಹೆಚ್ಚಿ ಕಂಪಿಸುವಾಗ,
ಒಳಗಿನ ಆರ್ಭಟ
ಹೊರಗಿನ ಮೌನ!

ದಿವ್ಯ ಆಂಜನಪ್ಪ 

04/10/2013
ಕಣ್ಗಳು ನಿನ್ನವು
ನೋಡುತ ನನ್ನನು
ಮೂಡಿಸಿವೆ ಹೊಂಗನಸನು 


03/10/2013

Thursday, 3 October 2013

ಉತ್ತರ

ಕದಡಿದ ಕೊಳ 
ತಿಳಿಯಾಗುವ
ಬೆಳಕಿನಾಸೆಗೆ ಸೂರ್ಯಕಾಂತಿ 
ಹೊರಳುವ 
ಮಣ್ಣಲ್ಲಿ ಬೆರೆತು 
ಮಣ್ಣಾಗುವ
ನಿಸರ್ಗವೇ ಸೊಗಸಿನುತ್ತರ!
ಮನದ ಪ್ರಶ್ನೆಗಳಿಗೆ 

ದಿವ್ಯ ಆಂಜನಪ್ಪ 

03/10/2013

Wednesday, 2 October 2013

ಸುತ್ತುವರೆದು ಚುಚ್ಚುವ ಚಿಂತೆಗಳು
ಒಮ್ಮೆ ಮೇಲ್ಮುಖ ಮತ್ತೊಮ್ಮೆ ಕೆಳಮುಖ
ಅನೇಕ ಏರು ಪೇರುಗಳ ನಡುವೆ
ಬಸವಳಿದ ಮನ ;
ದಾರಿ ಕಾಣದೆ ಕಗ್ಗೆಟ್ಟಿದೆ
ಸುತ್ತಿ ಸುತ್ತಿ ಸೋತಿದೆ ಸೋಲಿನೆದುರು!


02/10/2013
ಸಮಸ್ಯೆಗಳಿಗೆ
ಬೆನ್ನು ಹಾಕಿ
ಹೊರಟವ
ತಿರು ತಿರುಗಿ
ಅಲ್ಲೇ ನಿಂತನಂತೆ

01/10/2013

Tuesday, 1 October 2013

ಮಾನವತೆಯ ಕಾಲ್ಗಡಲು ಹರಿದೊಡೆ
ಪ್ರೀತಿ ಹೆಪ್ಪುಗಟ್ಟಿ ತೇಲೀತು
ಬೆಣ್ಣೆಯೋಪಾದಿ ಒಲವು ಕರಗಿ
ಆಜ್ಯ ಬಂಧಗಳಲಿ ತುಂಬೀತು
ಬಿಗುವಾಗದೆ ಸಲೀಸಾಗಿ 
ಬಾಳ ಬಂಡಿ ಹೊಡೆದೀತು 

ದಿವ್ಯ ಆಂಜನಪ್ಪ

01/10/2013
ಹುಚ್ಚು ಪ್ರೀತಿಗೆ 
ಕಾರಣ ಕವನಗಳು
ಅವನದೊಂದು ಕವನಕೆ
ನನ್ನದು ನೂರು 

01/10/2013
ಪ್ರೀತಿ ಭಾವ ಮಧುರ
ಅನುಭವಿಸಿದಾಗ
ಪ್ರಿಯನಿದ್ದರೂ
ಇಲ್ಲದಿದ್ದರೂ
ಸನಿಹ! 


01/10/2013
ಚದುರಿದ ಮೋಡಗಳಂತೆ ನನ್ನ ಕನಸುಗಳು
ಒಟ್ಟುಗೂಡಿಸಿದಷ್ಟೂ ಚದುರಿ ವಿಸ್ತಾರಗೊಳ್ಳುವವು
ಅಳಿಸಲಾಗದು ಬಯಸಿದರೂ ಮನದ ಬಾಂದಳದ ಚಿತ್ತಾರವ
ಗಾಳಿ ಬೀಸಿದಂತೆ ಹರಡುವ, ಓಡುವ, ಭಾರವಾಗುವ ಮೋಡಗಳು
ನನ್ನಂಕೆ ಮೀರಿದ ನನ್ನವೇ ಬಿಂಬಗಳು
ಸೆಣಸಿ ಸೋತು ಕಟ್ಟಿಡಲಾಗದೆ ಬಿಟ್ಟಿರುವೆ
ವಿಶ್ವವದು ವಿಶಾಲವೆಂದು ಹಸಿರ ಸೆಳವು ಸಿಗುವಲ್ಲಿ ನಿಲ್ಲಲೆಂದು
ಕನಸುಗಳು ಭಾವದುಂಬಿ ಮಳೆಗರಿಯಲೆಂದು :-)

ದಿವ್ಯ ಆಂಜನಪ್ಪ :-)
01/10/2013