ಮಲ್ಲಿಗೆ
ಮಲ್ಲಿಗೆ ಮೊಗ್ಗು
ಅಜ್ಜಿಯ ಹಿತ್ತಲ್ಲಲ್ಲಿ ಅರಳಿತ್ತು
ತಾಕೀತು ಮಾಡಿ
ಬೇಲಿ ಮೈಮೇಲೆಳೆದಿದ್ದಳು
ಮಲ್ಲಿಗೆಯ ಕಂಪಿಗೆ
ನಾಲ್ಕು ಮನೆ ದೂರದ ಸಂಪಿಗೆ
ಅಸೂಯೆ ಹೊದ್ದು ಮೊಲ್ಲೆಯ ಕೊಂಡಾಡಿದಳು
ನಾಲಿಗೆಗೆ ಮುಳ್ಳು ಚುಚ್ಚಿಕೊಂಡು!
ಹಿತ್ತಲ ದಾರಿಯಲ್ಲಿ ಬಂದ ಬಾಲೆ
ಮುಂಬಾಗಿಲಿ ಮಲ್ಲಿಗೆಯ ಕಂಪು
ಬಲು ಹಿತವೆಂದು ಹೇಳಿದಾಗ
ತುಸು ಸಮಾಧಾನ
ಬೇಲಿಯೊಳಗೆ ಕಮರಿ ಹೋಗುತ್ತಿದ್ದವಳ
ಆಗೊಮ್ಮೆ ಈಗೊಮ್ಮೆ ಹೂ ಮಾಲೆ ಮಾಡಿ
ದೇವರ ತೆಲೆಗೆ ; ಹೆಣ್ಮಕ್ಕಳ ಮುಡಿಗೆ
ಏರಿಸಿ ನಲಿವ ಅಜ್ಜಿ ಮಲ್ಲಿಗೆಗೆ ಆಪ್ತಳು
ಅವಳೊಮ್ಮೆ ಗೊತ್ತಿದ್ದೂ
ಏಕೋ ಏನೋ ಚುಚ್ಚಾಡುತ್ತಾಳೆ,
"ತಾನು ಹೊರಗೆ ಹೋಗಲೆಂದೇ ಕಾದಿದ್ದಾಳೆ ಮಲ್ಲಿಗೆ
ಬೇಲಿ ಬೇಧಿಸಿ ಕಂಪಿನೊಂದಿಗೆ ಹಾರಿ ಹೋಗಲೆಂದು"...
ಆಪಾದನೆ ಮಲ್ಲಿಗೆಗೆ
ಇದ್ದದ್ದೇ...
ಹೆಚ್ಚು ಅವಕಾಶಗಳ ಹೊಂದಿದವರು
ಅವಕಾಶಗಳಿಗೆ ಕುರುಡಾದವರನ್ನು
ಹೀಗೆಯೇ ಪ್ರಚೋದಿಸುತ್ತಾರೆ...
ಎಂದೋ ಒಮ್ಮೆ ಬರ ಬಿಸಿಲಿಗೆ ಬಾಡಿ
ಬಿರು ಮಳೆಗೆ ಬೆದರಿ ಬಿದ್ದು
ಮಣ್ಣಾಗುವ ಮಲ್ಲಿಗೆ
ಮತ್ತೆ ನಗುವಳು ಮೊಗ್ಗೊಡೆದು ಮೆಲ್ಲಗೆ
ಧನ್ಯವಾದಗಳೊಂದಿಗೆ
ದಿವ್ಯ ಆಂಜನಪ್ಪ